ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡಕ್ಕೆ ಹೊರಳಿದ ಫ್ರಾನ್ಸ್: ಹೊರಳು ದಾರಿಯಲ್ಲಿ ಯೂರೋಪ್

Last Updated 12 ಮೇ 2012, 19:30 IST
ಅಕ್ಷರ ಗಾತ್ರ

ಫ್ರಾನ್ಸ್‌ನ ಹೊಸ ಅಧ್ಯಕ್ಷರಾಗಿ ಸೋಷಲಿಸ್ಟ್ ಪಾರ್ಟಿಯ ಫ್ರಾಂಕಾಯ್ಸ ಹಾಲನ್ ಅವರ ಆಯ್ಕೆಯೊಂದಿಗೆ ಯುರೋಪ್ ಮತ್ತೆ `ಎಡ~ಕ್ಕೆ ಹೊರಳಿದಂತೆ ಕಾಣುತ್ತಿದೆ. ಬಡವರನ್ನು ಶಿಕ್ಷಿಸಿ, ಶ್ರೀಮಂತರನ್ನು ಓಲೈಸುವ ಬಲಪಂಥೀಯ ಮಾರುಕಟ್ಟೆ ಆಧಾರಿತ ಆರ್ಥಿಕ ನೀತಿಗಳನ್ನು ಅನುಸರಿಸಿದ ನಿಕೊಲಸ್ ಸರ್ಕೋಜಿ ಅವರನ್ನು ದೇಶದ ಮತದಾರರು ಸೋಲಿಸಿದ್ದಾರೆ. ಜರ್ಮನಿಯ ಛಾನ್ಸಲರ್ ಏಂಜಲಾ ಮೆರ್ಕಲ್ ಮತ್ತು ಸರ್ಕೋಜಿ ತಂದ ಆರ್ಥಿಕ ನಿರ್ಬಂಧಗಳು ಮತ್ತು ವೆಚ್ಚಕಡಿತದ ಕಠಿಣ ಕ್ರಮಗಳ ವಿರುದ್ಧದ ಜನಾಭಿಪ್ರಾಯ ಇದಾಗಿದೆ. ಒಂದು ರೀತಿಯಲ್ಲಿ ಬಂಡವಾಳಶಾಹಿ ವ್ಯವಸ್ಥೆಯ ವಿಸ್ತರಣೆಯಾಗಿ ಪ್ರವರ್ಧಮಾನಕ್ಕೆ ಬಂದ ನವ ಉದಾರವಾದಿ ಆರ್ಥಿಕ ನೀತಿಗಳ ವೈಫಲ್ಯದ ಪರಿಣಾಮವನ್ನು ಈ ಚುನಾವಣಾ ಫಲಿತಾಂಶದಲ್ಲಿ ಕಾಣಬಹುದಾಗಿದೆ. ಯುರೋಪಿನಲ್ಲಿ ಮುಂದೆ ಕಾಣಬಹುದಾದ ಬದಲಾವಣೆಗೆ ಫ್ರಾನ್ಸ್‌ನ ಈ ಬೆಳವಣಿಗೆ ದಿಕ್ಸೂಚಿಯಂತಿದೆ. 

ತೀರಿಸಲಾಗದ ಸಾಲ, ಅಭಿವೃದ್ಧಿ ಕುಸಿತ, ನಿರುದ್ಯೋಗ, ಬೆಲೆ ಏರಿಕೆಯಿಂದಾಗಿ ಯುರೋಪ್ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಬಿಕ್ಕಟ್ಟು ನಿವಾರಣೆಗೆ ಯುರೋಪ್ ಒಕ್ಕೂಟ ತೆಗೆದುಕೊಂಡ ವೆಚ್ಚದ ಮೇಲಿನ ಕಡಿತ ಸೇರಿದಂತೆ ಆರ್ಥಿಕ ಸುಧಾರಣಾ ಕ್ರಮಗಳು ಪರಿಸ್ಥಿತಿಯನ್ನು ಸುಧಾರಿಸಲು ನೆರವಾಗಲಿಲ್ಲ. ಬದಲಾಗಿ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸಲು ಕಾರಣವಾಗಿವೆ. ಸಾಲದ ಬಿಕ್ಕಟ್ಟು ಸೇರಿದಂತೆ ಎಲ್ಲ ರೀತಿಯ ಬಿಕ್ಕಟ್ಟಿಗೆ ಒಂದೇ ಔಷಧವೆಂದು ಇಡೀ ಯುರೋಪ್ ಒಕ್ಕೂಟವನ್ನು ವೆಚ್ಚ ಕಡಿತ ಸೂತ್ರಕ್ಕೆ ಒಳಪಡಿಸುವಲ್ಲಿ ಏಂಜಲಾ ಮೆರ್ಕಲ್ ಯಶಸ್ವಿಯಾಗಿದ್ದರು. ಸರ್ಕೋಜಿ ಆ ಸೂತ್ರಕ್ಕೆ ತಲೆದೂಗಿದ್ದರು. ಈ ಕ್ರಮ ಇಡೀ ಯುರೋಪಿನಲ್ಲಿ ತಳಮಳ ಉಂಟುಮಾಡುತ್ತ ಬಂದಿದೆ. ಗ್ರೀಸ್, ಐರ‌್ಲೆಂಡ್ , ಪೋರ್ಚುಗಲ್ ದೇಶಗಳು ಈಗಾಗಲೇ ಆರ್ಥಿಕವಾಗಿ ಕುಸಿದಿವೆ. ಸ್ಪೇನ್, ಇಟಲಿ ಅದೇ ದಾರಿಯತ್ತ ಹೊರಳುತ್ತಿವೆ. ನೆದರ್‌ಲ್ಯಾಂಡ್ಸ್‌ನಲ್ಲಿ ಸರ್ಕಾರ ಕುಸಿದಿದೆ, ರೊಮೇನಿಯಾದಲ್ಲಿ ಸರ್ಕಾರ ವಿಶ್ವಾಸಮತ ಗಳಿಸುವಲ್ಲಿ  ವಿಫಲವಾದ ನಂತ ಸೋಷಲಿಸ್ಟ್ ಪಾರ್ಟಿಯ ನಾಯಕರು ಅಧಿಕಾರ ವಹಿಸಿಕೊಂಡಿದ್ದಾರೆ. ಸ್ಲೊವಕಿಯಾ, ಸ್ಲೊವೇನಿಯಾ ಮತ್ತು ಜೆಕ್ ದೇಶಗಳು ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿವೆ. ಮೆರ್ಕಲ್ ಸೂತ್ರದಂತೆ ಆರ್ಥಿಕ ಶಿಸ್ತು ಅನುಸರಿಸಲು ಹೋಗಿ ಸುಸ್ತಾಗಿವೆ. ವೆಚ್ಚ ಕಡಿತ ಎಂಬುದು ಈಗ ಯುರೋಪಿನಾದ್ಯಂತ  `ಕೆಟ್ಟ ಪದ~.  ಹಾಗೆ ನೋಡಿದರೆ ಆರ್ಥಿಕ ಬಿಕ್ಕಟ್ಟು ಮೂಲಭೂತವಾಗಿ ಅಮೆರಿಕದಿಂದ ಹಬ್ಬಿದ ರೋಗ. ಹೇಗೋ ಹಣ ಮಾಡಬೇಕೆಂಬ ಆಸೆ ಬುರುಕ ಮಾರುಕಟ್ಟೆ ಏಜೆಂಟರು, ವ್ಯಾಪಾರಿಗಳು ಸೃಷ್ಟಿಸಿದ ಕೂಪ ಇದು. ವಿಚಿತ್ರ ಎಂದರೆ ಆ ಸಾಲದ ಕೂಪದಿಂದ ರಕ್ಷಿಸಲು ಸರ್ಕಾರ ಘೋಷಿಸಿದ ರಿಯಾಯ್ತಿಗಳು ಮತ್ತು ಪ್ರೋತ್ಸಾಹದ ಕಾರ್ಯಕ್ರಮಗಳ ಲಾಭ ಪಡೆದವರು ಬ್ಯಾಂಕುಗಳನ್ನು ಮುಳುಗಿಸಿದವರೇ ಆಗಿದ್ದರು. ಅದು ತಿಳಿದ ಮೇಲೆ ಈಗ ಅದನ್ನು ಸರಿಪಡಿಸಲು ಪ್ರಯತ್ನಗಳು ನಡೆಯುತ್ತಿವೆ. ಜಾಗತೀಕರಣ ಜನರ ಗೋಳಿನ ಗೋಳೀಕರಣ ಮಾಡಿದೆ. ಮೊದಲ ಹಂತದ ಬಿಕ್ಕಟ್ಟನ್ನು ಯುರೋಪ್ ನಿಭಾಯಿಸಿತು. ಆದರೆ ಈಗ ತಲೆದೋರಿರುವ ಎರಡನೆಯ ಹಂತದ ಬಿಕ್ಕಟ್ಟು ಆರ್ಥಿಕ ನೀತಿಗಳನ್ನೇ ಪ್ರಶ್ನಿಸುವಂತೆ ಮಾಡಿದೆ. ಅಧಿಕಾರದಲ್ಲಿ ಇದ್ದವರನ್ನೇ ಜನರು ಬದಲಾವಣೆ ಮಾಡುತ್ತಿದ್ದಾರೆ! 

ಯುರೋಪಿನಲ್ಲಿ ಬದಲಾವಣೆಯ ಗಾಳಿ ಬೀಸುವಂತೆ ಮಾಡಿರುವ ಫ್ರಾನ್ಸ್ ಚುನಾವಣೆ ಫಲಿತಾಂಶ ಅನಿರೀಕ್ಷಿತವಾದುದೇನಲ್ಲ. ಸರ್ಕೋಜಿಯ ವಿರುದ್ಧ ಅಲೆಯೇಳುತ್ತಿರುವುದನ್ನು ಚುನಾವಣೆ ಸಂದರ್ಭದಲ್ಲಿ  ಗಮನಿಸಬಹುದಾಗಿತ್ತು. ಆದರೆ ಸೋಷಲಿಸ್ಟ್ ಪಕ್ಷದ ಅಭ್ಯರ್ಥಿ ಫ್ರಾಂಕಾಯ್ಸ ಹಾಲನ್ ಬದಲಾವಣೆ ತರಬಲ್ಲರು ಎಂಬ ವಿಶ್ವಾಸ ಜನರಲ್ಲಿ ಮೂಡಿದ್ದು ಮೊದಲ ಹಂತದ ಚುನಾವಣೆಯ ಕೊನೆಯಲ್ಲಿ. ಹಾಗೆ ನೋಡಿದರೆ ಹಾಲನ್ ಮೃದು ಸ್ವಭಾವದವರು. ಸೋಷಲಿಸ್ಟ್ ಪಕ್ಷದ ಜನಪ್ರಿಯ ನಾಯಕರಾಗಿದ್ದ ಫ್ರಾಂಕಾಯ್ಸ ಮಿತೆರಾ ಅವರ ನಂತರ ಆ ಸ್ಥಾನಕ್ಕೆ ಬರಬೇಕಿದ್ದವರು ಸೆಕ್ಸ್ ಹಗರಣದಲ್ಲಿ  ಸಿಕ್ಕಿಕೊಂಡಿರುವ ಸ್ಟ್ರಾಸ್ ಖಾನ್. ಹಗರಣದಿಂದಾಗಿ ಹಠಾತ್ತನೆ ಆ ಸ್ಥಾನ ಹಾಲನ್ ಅವರದಾಯಿತು. ಮಿತೆರಾ ಅವರ ಗರಡಿಯಲ್ಲಿ ಪಳಗಿದವರಾದರೂ ರಾಜಕೀಯಕ್ಕೆ ಬೇಕಾದ ಗಟ್ಟಿ ಮನೋಭಾವ ಹಾಲನ್ ಅವರಲ್ಲಿ ಇರಲಿಲ್ಲ. ಆದರೆ ಪ್ರಸ್ತತ ಸನ್ನಿವೇಶದಲ್ಲಿ ಸಿದ್ಧಾಂತಕ್ಕಿಂತ ಜನರ ಸಮಸ್ಯೆಗಳ ಅರಿವು ಮುಖ್ಯ ಎಂಬುದು ಮನವರಿಕೆಯಾದ ಮೇಲೆ ಅವರಲ್ಲಿ ಹಿಂಜರಿಕೆ ಮರೆಯಾಯಿತು. ಜನರು ಕೂಡಾ ಪಕ್ಷದ ಸಿದ್ಧಾಂತ ನೋಡಿ ಅವರಿಗೆ ಬೆಂಬಲ ಕೊಡಲಿಲ್ಲ. ತಮ್ಮ ಸಮಸ್ಯೆಗಳ ಕಡೆಗೆ ಗಮನಕೊಡುತ್ತಾರೆ ಎಂಬ ಒಂದೇ ಕಾರಣಕ್ಕೆ ಜನ ಅವರನ್ನು ಬೆಂಬಲಿಸಿದ್ದಾರೆ.

ಫ್ರಾನ್‌ನಲ್ಲಿ ಮದುವೆ, ಸಂಸಾರ ದೊಡ್ಡ ಮೌಲ್ಯವಾಗಿ ಉಳಿದಿಲ್ಲ. ಸರ್ಕೋಜಿ ಅಧ್ಯಕ್ಷರಾಗಿದ್ದಾಗ ಗಾಯಕಿಯೊಬ್ಬಳನ್ನು ಮದುವೆಯಾದರು. ಅದು ಅವರ ಮೂರನೆಯ ಮದುವೆಯಾಗಿತ್ತು. ಈಗ ಅಧ್ಯಕ್ಷರಾಗಿ ಆಯ್ಕೆಯಾಗಿರುವ 57 ವರ್ಷದ ಹಾಲನ್ ಕೂಡಾ ಮೊದಲನೆಯ ಹೆಂಡತಿಗೆ ವಿಚ್ಛೇದನ ನೀಡಿ ಈಗ ಪರ್ತಕರ್ತೆಯೊಬ್ಬರ ಜೊತೆ ವಾಸಿಸುತ್ತಿದ್ದಾರೆ. ಮೊದಲ ಹೆಂಡತಿ ಸರ್ಕೋಜಿ ವಿರುದ್ಧ ಸೋಷಲಿಸ್ಟ್ ಪಕ್ಷದ ಅಭ್ಯರ್ಥಿಯಾಗಿ 2007ರ ಚುನಾವಣೆಗಳಲ್ಲಿ ಸೋತಿದ್ದರು. ಅವರಿಗೆ ಹಾಲನ್ ಮೂರನೆಯ ಪತಿ. ಹಾಲನ್ ಮಧ್ಯಮವರ್ಗಕ್ಕೆ ಸೇರಿದವರು. ವೈದ್ಯರ ಮಗನಾಗಿ ಉತ್ತಮ ಶಿಕ್ಷಣ ಪಡೆದಿದ್ದಾರೆ. ಸೋಷಲಿಸ್ಟ್ ಪಕ್ಷದಲ್ಲಿ ಹಲವು ದಶಕಗಳ ಕಾಲ ಕೆಲಸಮಾಡಿದ್ದಾರೆ. ಆದರೆ ಆಡಳಿತದ ಅನುಭವ ಅವರಿಗಿಲ್ಲ ಎನ್ನುವುದು ನಿಜ.

 ಸೋಷಲಿಸ್ಟ್ ಪಕ್ಷ ಉದಾರವಾದಿ ಎಡ ಪಕ್ಷ. ಬಂಡವಾಳಶಾಹಿ ಮತ್ತು ಸಮಾಜವಾದಿ ವ್ಯವಸ್ಥೆಯ ಮಿಶ್ರಣವನ್ನು ಅದರ ನೀತಿಗಳಲ್ಲಿ ಕಾಣಬಹುದು. ಆದರೆ ದುಡಿಯುವ ಜನರ ಪರವಾದ ಮತ್ತು ಜನ ಕಲ್ಯಾಣಕ್ಕೆ ಒತ್ತು ನೀಡುವ ಕಡೆಗೆ ಪಕ್ಷದ ಗಮನ ಹೆಚ್ಚು.

ಜಾಗತೀಕರಣದ ಹಿನ್ನೆಲೆಯಲ್ಲಿ ಮಾರುಕಟ್ಟೆ ವ್ಯವಸ್ಥೆಯೇ ಮೇಲುಗೈ ಸಾಧಿಸಿದುದರಿಂದ ಸಮಾಜವಾದಿ ನೀತಿಗಳು ಜನರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದವು. ಸರ್ಕೋಜಿ ಜಾರಿಗೆ ತಂದ ನೀತಿಗಳು ಮತ್ತೆ ಜನರನ್ನು ಸಮಾಜವಾದಿ ಪಕ್ಷದ ಕಡೆಗೆ ಸೆಳೆದವು. ಸೋವಿಯತ್ ಒಕ್ಕೂಟ ಮತ್ತು ಕಮ್ಯುನಿಸ್ಟ್ ವ್ಯವಸ್ಥೆ ಅವಸಾನದ ನಂತರ ಯುರೋಪಿನ ಹಲವು ದೇಶಗಳಲ್ಲಿನ ಕಮ್ಯುನಿಸ್ಟ್ ಪಕ್ಷಗಳು ಸೋಷಲಿಸ್ಟ್ ಪಕ್ಷಗಳಾಗಿ ಪುನರ್‌ನಾಮಕರಣಗೊಂಡವು. ಆದರೆ ಫ್ರಾನ್ಸ್‌ನ ಸೋಷಲಿಸ್ಟ್ ಪಕ್ಷ ಹಾಗೆ ರೂಪುಗೊಂಡುದಲ್ಲ. ಮೊದಲಿನಿಂದಲೂ ಆ ಪಕ್ಷ ದೇಶದಲ್ಲಿ ಪ್ರಬಲವಾಗಿದೆ. ಪ್ರತ್ಯೇಕ ಕಮ್ಯುನಿಸ್ಟ್ ಪಕ್ಷವೂ ಅಲ್ಲಿ ಅಸ್ತಿತ್ವದಲ್ಲಿದೆ. ಹಲವು ವರ್ಷ ಜೊತೆಗೂಡಿ ಸರ್ಕಾರ ನಡೆಸಿದ್ದೂ ಇದೆ. ಸೋಷಲಿಸ್ಟರು ಕಟ್ಟಾ ಎಡಪಂಥೀಯರೇನಲ್ಲ. ಬಲಪಂಥೀಯರ ಜೊತೆ ಸೇರಿ ಸರ್ಕಾರ ರಚಿಸಿದ ಉದಾಹರಣೆಗಳೂ ಇವೆ. ಅದೇನೇ ಇದ್ದರೂ ಉದಾರವಾದಿ ಪಕ್ಷವಾಗಿ ದುಡಿಯುವ ಜನರ, ಬಡವರ ಪರ ಹೆಚ್ಚು ಒಲವು ಇರುವ ಪಕ್ಷ ಅದು. ಹೀಗಾಗಿಯೇ ಯುರೋಪಿನ ಬಡ ದೇಶಗಳು ಹಾಲನ್ ಬೆಂಬಲಕ್ಕೆ ನಿಂತಿವೆ. 

 ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ವೆಚ್ಚ ಕಡಿತ ಅನಿವಾರ್ಯವಲ್ಲ. ಹಾಗೆ ಮಾಡದೆಯೂ ಸಮಸ್ಯೆಯನ್ನು ನಿಭಾಯಿಸಬಹುದು ಎನ್ನುವುದು ಹಾಲನ್ ಅವರ ಖಚಿತವಾದ ನಿಲುವು. ಅವರ ಪ್ರಕಾರ ಅಭಿವೃದ್ಧಿ ಸಾಧಿಸದೆ ವೆಚ್ಚ ಕಡಿತ ಮಾಡುವುದು ಅರ್ಥವಿಲ್ಲದ ಕಸರತ್ತು.

ಅಭಿವೃದ್ಧಿ ಸಾಧಿಸಿದರೆ ಆ ಸಮಸ್ಯೆಯೇ ಇರುವುದಿಲ್ಲ. ಜನರ ಕಲ್ಯಾಣ ಕಾರ್ಯಕ್ರಮಗಳನ್ನು ಸರ್ಕಾರವೇ ಹಮ್ಮಿಕೊಂಡು ಜಾರಿಗೊಳಿಸಬೇಕು. ಅಭಿವೃದ್ಧಿಯಿಂದ ಬಂದ ಆದಾಯದ ಒಂದಿಷ್ಟು ಪಾಲನ್ನು ದುಡಿಯುವ ವರ್ಗಕ್ಕೆ ಕೊಡಬೇಕು ಎನ್ನುವುದು ಅವರ ಅಭಿಪ್ರಾಯ. ಮಾರುಕಟ್ಟೆ ಅರ್ಥ ವ್ಯವಸ್ಥೆಯಲ್ಲಿ ಮರೆತು ಹೋಗಿದ್ದ ದುಡಿಯುವ ವರ್ಗದ ಹಿತಾಸಕ್ತಿಯನ್ನು ಇದೇ ಮೊದಲ ಬಾರಿಗೆ ಹಾಲನ್ ಮುಂಚೂಣಿಗೆ ತಂದಿದ್ದಾರೆ. ಶ್ರೀಮಂತರ ಆದಾಯದ ಮೇಲೆ ಹೆಚ್ಚು ತೆರಿಗೆ ವಿಧಿಸುವ, ಹೆಚ್ಚು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಬಹುದಾದ ಯೋಜನೆಗಳಿಗೆ ಸರ್ಕಾರ ಹಣ ಹೂಡುವ ಭರವಸೆಯನ್ನು ಅವರು ನೀಡಿದ್ದಾರೆ. 

 ವೆಚ್ಚ ಕಡಿತ ಒಪ್ಪಂದವನ್ನು ಪುನರ್ ಪರಿಶೀಲಿಸಬೇಕೆಂದು ಯುರೋಪ್ ಒಕ್ಕೂಟವನ್ನು ಒತ್ತಾಯಿಸಿರುವ ಅವರ ಕಡೆಗೆ ಇದೀಗ ಎಲ್ಲರ ಕಣ್ಣು ನೆಟ್ಟಿದೆ. ಯುರೋಪಿನಲ್ಲಿ ಜರ್ಮನಿ ಮತ್ತು ಫ್ರಾನ್ಸ್ ಬಲಿಷ್ಠ ರಾಷ್ಟ್ರಗಳು. ಯುರೋಪ್ ಒಕ್ಕೂಟ ಬಲವಾಗಿರಬೇಕಾದರೆ ಈ ಎರಡೂ ದೇಶಗಳ ನಡುವೆ ಹೊಂದಾಣಿಕೆ ಅನಿವಾರ್ಯ. ಇದೀಗ ಒಕ್ಕೂಟದ ಆರ್ಥಿಕ ನೀತಿಗಳಿಗೆ ಸಂಬಂಧಿಸಿದಂತೆ ಹಾಲನ್ ಮತ್ತು ಏಂಜಲಾ ಮೆರ್ಕಲ್ ವಿರುದ್ಧ ಇದ್ದಂತಾಗಿದೆ.
ಹೊಸ ಅಧ್ಯಕ್ಷರಾದ ಹಾಲನ್‌ಗೆ ಮೆರ್ಕಲ್ ಶುಭಾಶಯ ಕೋರಿದ್ದಾರಾದರೂ ಹಾಲನ್ ಪ್ರಕಟಿಸಿರುವ ಆರ್ಥಿಕ ನೀತಿಗಳಿಗೆ ವಿರೋಧ ವ್ಯಕ್ತಮಾಡಿದ್ದಾರೆ. ತಾವು ಘೋಷಿಸಿರುವ ನೀತಿಗಳನ್ನು ಹಾಲನ್ ಹಿಂತೆಗೆದುಕೊಳ್ಳುವ ಸಾಧ್ಯತೆ ಇಲ್ಲ. ಏಕೆಂದರೆ ಅವುಗಳ ಅಧಾರದ ಮೇಲೆಯೇ ಅವರು ಆಯ್ಕೆಯಾಗಿ ಬಂದಿದ್ದಾರೆ.  ಮೆರ್ಕಲ್ ಪ್ರಣೀತ ಆರ್ಥಿಕ ನೀತಿಗಳನ್ನು ಯುರೋಪಿನ ಅನೇಕ ದೇಶಗಳು ವಿರೋಧಿಸುತ್ತವೆ. ಆ ದೇಶಗಳೆಲ್ಲಾ ಹಾಲನ್‌ಗೆ ಬೆಂಬಲ ನೀಡುವುದು ಖಚಿತ. ಹೀಗಾಗಿ ಮೆರ್ಕಲ್ ಅವರು ಹಾಲನ್ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ. ಅಂದರೆ ಒಕ್ಕೂಟದ ಆರ್ಥಿಕ ನೀತಿಗಳು ಮತ್ತು ಅದಕ್ಕೆ ಸಂಬಂಧಿಸಿದ ಒಪ್ಪಂದಗಳು ಬದಲಾವಣೆಗೆ ಒಳಗಾಗುವುದು ಖಚಿತ. ಆದರೆ ಈ ಬದಲಾವಣೆ ಯಾವಾಗ ಆಗುತ್ತದೆ ಎನ್ನುವುದು ಕುತೂಹಲಕಾರಿ. ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಅಮೆರಿಕದಂತಹ ಬಂಡವಾಳಶಾಹಿ ದೇಶವೂ ಸಮಾಜವಾದಿ ವ್ಯವಸ್ಥೆಯ ಕೆಲ ಅಂಶಗಳನ್ನು ಅಳವಡಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದೆ. ಇನ್ನು ಯುರೋಪ್ ಕೂಡಾ ಜನಮುಖಿ ಸಮಾಜವಾದಿ ವ್ಯವಸ್ಥೆಯತ್ತ ಹೊರಳಿದರೆ ಮಾರುಕಟ್ಟೆ ಆಧಾರಿತ ಆರ್ಥಿಕ ವ್ಯವಸ್ಥೆಯಲ್ಲಿ ಬದಲಾವಣೆಗಳು ಆಗಬಹುದು. ಮಾರುಕಟ್ಟೆ ಆರ್ಥಿಕತೆಯತ್ತ, ಜಾಗತೀಕರಣದತ್ತ ವೇಗವಾಗಿ ಹೆಜ್ಜೆ ಇಡಲು ಯೋಚಿಸುತ್ತಿರುವ ಭಾರತ ಈ ಬೆಳವಣಿಗೆಗಳನ್ನು ಗಂಭೀರವಾಗಿ ಅಧ್ಯಯನ ಮಾಡಬೇಕಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT