ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎದೆಯೊಳಗೆ ಗಾಳಿಪಟ (ಚಿತ್ರ: ಯೇ ಖುಲಾ ಆಸ್ಮಾನ್ -ಹಿಂದಿ)

Last Updated 26 ಮೇ 2012, 19:30 IST
ಅಕ್ಷರ ಗಾತ್ರ

ಆಧುನಿಕ ಶೈಲಿಯ ಬದುಕಿಗೆ ಒಡ್ಡಿಕೊಳ್ಳುವ ಭರದಲ್ಲಿ ಮನುಷ್ಯ ಸಂಬಂಧಗಳು ಹೇಗೆ ಅರ್ಥ ಕಳೆದುಕೊಳ್ಳುತ್ತಿವೆ ಎಂಬ ವಾಸ್ತವದ ದುರಂತವನ್ನು ಬದಲಾವಣೆಯ ಆಶಯಗಳೊಂದಿಗೆ ನವಿರಾಗಿ ಬಿಂಬಿಸುವ ಚಿತ್ರ `ಯೇ ಖುಲಾ ಆಸ್ಮಾನ್~.

ಹುಟ್ಟಿನಿಂದ ಸಾಯುವವರೆಗೂ ಒತ್ತಡದಲ್ಲೇ ಬದುಕುವ ಮತ್ತು ಅದನ್ನೇ ಬದುಕೆಂದುಕೊಳ್ಳುವ ಇಂದಿನ ಪರಿಸ್ಥಿತಿಯನ್ನು ವ್ಯಂಗ್ಯವಾಡುವ ಚಿತ್ರ ಜೀವನ ಪ್ರೀತಿಯನ್ನು ಮತ್ತು ಅದರ ಒಳಗಣ್ಣನ್ನು ತೆರೆಸುತ್ತದೆ. ಅದರ ಮೂಲಕ ನಾಳಿನ ಭರವಸೆಗಳನ್ನೂ ಕೆದಕುತ್ತದೆ. ತೆರೆದುಕೊಂಡ ಆಗಸದಲ್ಲಿ ಹಾರಾಡುವ ಗಾಳಿಪಟದ ಚಿತ್ರಣ ಇಲ್ಲಿ ಬದುಕು, ಪ್ರೀತಿ ಮತ್ತು ಗೆಳೆತನದ ರೂಪಕ.

ನಿರ್ದೇಶಕಿ ಗೀತಾಂಜಲಿ ಸಿನ್ಹಾ ತಮ್ಮ ಮೊದಲ ಚಿತ್ರಕ್ಕೆ ಆಯ್ದುಕೊಂಡಿರುವ ಕಥೆ, ಅದನ್ನು ಪ್ರಸ್ತುತ ಪಡಿಸಿರುವ ಶೈಲಿ ಗಮನ ಸೆಳೆಯುತ್ತದೆ. ಆದರೆ ಅದನ್ನು ಪರಿಣಾಮಕಾರಿಯಾಗಿಸುವಲ್ಲಿ ಅನುಭವದ ಕೊರತೆ ಎದ್ದು ಕಾಣುತ್ತದೆ. ಚಿತ್ರಕಥೆಯನ್ನು ಇನ್ನಷ್ಟು ಹದವಾಗಿಸಿ, ಮಂದಗತಿಯ ನಿರೂಪಣೆಗೆ ಚುರುಕುತನ ನೀಡಿದ್ದರೆ `....

ಆಸ್ಮಾನ್~ ನೀಲಾಕಾಶದಲ್ಲಿ ಹಾರುವ ಗಾಳಿಪಟದ ಬೆರಗನ್ನು ಹೆಚ್ಚಿಸುತ್ತಿತ್ತು. ಚಿತ್ರಕಥೆಯ ಗಟ್ಟಿತನದ ಕೊರತೆಯಿಂದಾಗಿ ಮುಂದೇನಾಗುತ್ತದೆ ಎಂಬುದನ್ನು ಪ್ರೇಕ್ಷಕ ಸುಲಭವಾಗಿ ಊಹಿಸುತ್ತಾನೆ.

ತಂದೆತಾಯಿಗಳ ಒತ್ತಾಯಕ್ಕೆ ಸಿಲುಕಿ ಐಐಟಿಗೆ ಸೇರಲು ಪ್ರಯತ್ನಿಸುವ ಮಗ ಓದಿನಿಂದ ವಿಮುಖನಾಗುತ್ತಾನೆ. ತಮ್ಮದೇ ವ್ಯವಹಾರಗಳಲ್ಲಿ ಮುಳುಗಿರುವ ತಂದೆ ತಾಯಿಗಳಿಗೆ ಆತನ ಬದುಕಿನ ಬಗ್ಗೆ ಚಿಂತಿಸುವಷ್ಟು ಸಮಯವಿರುವುದಿಲ್ಲ. ಬದುಕಿನ ಬಗ್ಗೆ ನಿರಾಸಕ್ತಿ ತಾಳುವ ಮಗ ತೆರಳುವುದು ದೂರದಲ್ಲಿರುವ ತನ್ನ ಅಜ್ಜನ ಮನೆಗೆ.

ಗಾಳಿಪಟ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿದ್ದ ಅಜ್ಜ ಮೊಮ್ಮಗನಿಗೂ ಗಾಳಿಪಟದ ಮೂಲಕವೇ ಸ್ಫೂರ್ತಿ ತುಂಬುತ್ತಾನೆ. ತನ್ನಂತೆ ಗಾಳಿಪಟ ಹಾರಿಸುವ ಸಾಮರ್ಥ್ಯವಿಲ್ಲದೆಯೇ ಹೇಡಿಯಂತೆ ವಿದೇಶಕ್ಕೆ ಓಡಿದ್ದು ಎಂದು ತನ್ನ ಮಗನನ್ನು ಹೀಗೆಳೆಯುವ ಆತ, ಮೊಮ್ಮಗನಿಗೆ ತನ್ನ ಬದುಕಿನ ಪುಟಗಳ ಮೂಲಕ ಜೀವನ ಪಾಠ ಕಲಿಸುತ್ತಾನೆ. ಪೀಳಿಗೆಗಳ ನಡುವೆ ಉಂಟಾಗುತ್ತಿರುವ ಅಂತರದ ಬಗ್ಗೆ ವಿಷಾದಿಸುತ್ತಾ ಸಂಬಂಧಗಳಲ್ಲಿನ ನಂಬಿಕೆಯಲ್ಲೇ ಎಲ್ಲವೂ ಅಡಗಿದೆ ಎಂಬುದನ್ನು ಗೀತಾಂಜಲಿ ಸಿನ್ಹಾ ಭಾವನಾತ್ಮಕವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ.

ಮೊದಲ ಚಿತ್ರವಾದರೂ ರಾಜ್ ಟಂಡನ್ ನಟನೆಯಲ್ಲಿ ಪ್ರಬುದ್ಧತೆ ಇದೆ. ಆದರೆ ಸಂಭಾಷಣೆ ಒಪ್ಪಿಸುವಾಗ ಹೆಣಗಾಡುತ್ತಾರೆ. ರಘುವೀರ್ ಯಾದವ್ ರಕ್ತಸಂಬಂಧಗಳ ಸಾವಿನ ಕ್ಷಣಗಳಿಗೆ ಸಾಕ್ಷಿಯಾದರೂ ಬದುಕಿನ ಮೇಲೆ ಭರವಸೆ ಕಳೆದುಕೊಳ್ಳದ ಹಿರಿಯ ತಲೆಮಾರಿನ ಪ್ರತಿನಿಧಿಯಂತೆ ಕಾಣಿಸುತ್ತಾರೆ. ಅನ್ಯಾ ಆನಂದ್ ಮಿತ ಅವಕಾಶವನ್ನು ಉಪಯೋಗಿಸಿಕೊಂಡಿದ್ದಾರೆ.

ಆನಂದ್-ಮಿಲಿಂದ್ ಸಂಗೀತ ಮನದೊಳಗೆ ಗಾಳಿಪಟ ಹಾರಿಸುತ್ತದೆ. ಇಂಪಾದ ಹಾಡುಗಳು ತಣ್ಣನೆ ಅನುಭವ ನೀಡುತ್ತದೆ. ವಿವೇಕ್ ಶಾ ಕ್ಯಾಮೆರಾ ಭಾವುಕ ಸನ್ನಿವೇಶಗಳನ್ನು ಗಾಢವಾಗಿ ಚಿತ್ರಿಸುತ್ತದೆ. ಗಾಳಿಪಟಕ್ಕೆ ನೀಡುವ ಆದ್ಯತೆಯನ್ನು ಕಥೆ ಮತ್ತು ಪಾತ್ರ ಪೋಷಣೆಗೂ ನೀಡಿದ್ದರೆ ಚಿತ್ರ ಮತ್ತಷ್ಟು ಹೃದಯಸ್ಪರ್ಶಿಯಾಗುತ್ತಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT