ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿಗೆ ಜಮೀನು ಸ್ವಾಧೀನ: ಅಧಿಕಾರಿಗಳೇ ಅಡ್ಡಿ

Last Updated 9 ಜುಲೈ 2012, 8:55 IST
ಅಕ್ಷರ ಗಾತ್ರ

ಕೋಲಾರ: ನಗರದ ಹೊರವಲಯದಲ್ಲಿರುವ ಎಪಿಎಂಸಿ ಮಾರುಕಟ್ಟೆಯನ್ನು ವಿಸ್ತರಿಸಲು ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ಅಧಿಕಾರಿಗಳೇ ಅಡ್ಡಿಯಾಗಿದ್ದಾರೆ ಎಂದು ಎಪಿಎಂಸಿ ಅಧ್ಯಕ್ಷ ಎಂ.ಈರಪ್ಪ ಆರೋಪಿಸಿದರು.

ಎಪಿಎಂಸಿ ಸಭಾಂಗಣದಲ್ಲಿ ಈಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರಕಟ್ಟೆಯನ್ನು ಈಗ 18 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಸ್ಥಳಾವಕಾಶದ ಕೊರತೆಯಿಂದ ಹೆಚ್ಚುವರಿಯಾಗಿ ಮಾರುಕಟ್ಟೆ ಪ್ರಾಂಗಣಕ್ಕೆ ಹೊಂದಿಕೊಂಡಂತೆ ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ 29 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡು ನೀಡಲು ಕಳೆದ ಆಗಸ್ಟ್‌ನಲ್ಲಿ ಮನವಿ ಸಲ್ಲಿಸಲಾಗಿತ್ತು. ಆದರೆ ಇನ್ನೂ ಸ್ವಾಧೀನ ಪ್ರಕ್ರಿಯೆ ನಡೆದಿಲ್ಲ ಎಂದು ವಿಷಾದಿಸಿದರು.

ಸ್ವಾಧೀನ ಪ್ರಕ್ರಿಯೆಗೆ ಅಧಿಕಾರಿಗಳೇ ಅಡ್ಡಿಯಾಗಿದ್ದಾರೆ. ಜಮೀನಿನ ಮಾಲೀಕರನ್ನು ಹುರಿದುಂಬಿಸಿ ಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸುವಂತೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಹಲವು ದಿನಗಳ ಹಿಂದೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಅವರೂ ಕೂಡ ಕ್ರಮ ಕೈಗೊಳ್ಳುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಜಮೀನನ್ನು ಸರ್ವೆ ಮಾಡಿ, ಸ್ಕೆಚ್ ಕೊಟ್ಟರೆ ಎಪಿಎಂಸಿ ಕೂಡಲೇ ಹಣ ಪಾವತಿಸಲು ಸಿದ್ಧವಿದೆ. ಪ್ರಸ್ತಾವಿತ ಸ್ಥಳದಲ್ಲಿ ನಿರ್ಮಾಣವಾಗಿರುವ ಕಲ್ಯಾಣ ಮಂಟಪ, ಮನೆಗಳು, ಸಮಾಧಿಗಳನ್ನು ಹೊರತುಪಡಿಸಿಯೇ ನಮಗೆ ಜಮೀನನ್ನು ನೀಡಲಿ. ಆದರೆ ನಮ್ಮ ಮನವಿಯನ್ನು ಯಾರೊಬ್ಬರೂ ಆಲಿಸುತ್ತಿಲ್ಲ,. ಸರ್ಕಾರಿ ಅಧಿಕಾರಿಗಳೇ ನಮಗೆ ಬೆದರಿಕೆ ಒಡ್ಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವುದಿರಲಿ, ನಮ್ಮ ದೂರನ್ನು ದಾಖಲಿಸಲೂ ಆಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಶುಲ್ಕ ಹೆಚ್ಚಳ: 2011-12ನೇ ಸಾಲಿನಲ್ಲಿ ರೂ. 1.09 ಕೋಟಿಯಷ್ಟು ಮಾರುಕಟ್ಟೆ ಶುಲ್ಕವನ್ನು ವಸೂಲು ಮಾಡಲಾಗಿದೆ. ಎಪಿಎಂಸಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ಶುಲ್ಕ ವಸೂಲಾಗಿದೆ. ಮುಂದಿನ ವರ್ಷಗಳಲ್ಲಿ 2 ಕೋಟಿಯಷ್ಟು ಶುಲ್ಕ ವಸೂಲಿಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ರೈತರಿಗೆ ತೂಕದಲ್ಲಿ ವಂಚನೆಯಾಗಬಾರದು ಎಂಬ ಉದ್ದೇಶದಿಂದ ಪ್ರಾಂಗಣದಲ್ಲಿ ಕಡ್ಡಾಯವಾಗಿ ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ಅಳವಡಿಸುವ ನಿಯಮವನ್ನು ಜಾರಿಗೊಳಿಸಲಾಗಿದೆ. ರೂ. 54  ಲಕ್ಷ ವೆಚ್ಚದಲ್ಲಿ ಎಪಿಎಂಸಿ ಪ್ರಾಂಗಣದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. 2012-13ನೇ ಸಾಲಿನಲ್ಲಿ ವಾರ್ಷಿಕ ಕ್ರಿಯಾ ಯೋಜನೆ ಅಡಿ 1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಲಾಗಿದೆ ಎಂದರು.

ವಿಷಾದ: ಈರಪ್ಪನವರು ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೇಳುತ್ತಿರುವ ಸಂದರ್ಭದಲ್ಲೆ, ಎಪಿಎಂಸಿಯಲ್ಲಿ ಶೇ 100ಕ್ಕೆ 100ರಷ್ಟು ಅವ್ಯವಹಾರಗಳನ್ನು ತಡೆಗಟ್ಟಲು ಸಾಧ್ಯವಾಗಿಲ್ಲ ಎಂದು ಎಪಿಎಂಸಿ ಸದಸ್ಯ ಹೊಳಲಿ ಪ್ರಕಾಶ್ ವಿಷಾದಿಸಿದ ಘಟನೆಯೂ ನಡೆಯಿತು.

ವರ್ತಕರು ರೈತರಿಗೆ ಅಧಿಕೃತ ರಸೀದಿ ನೀಡದೆ ವ್ಯವಹರಿಸುವುದು, ಪ್ರಾಂಗಣಕ್ಕೆ ಬಂದ ಉತ್ಪನ್ನಗಳ ಪ್ರಮಾಣವನ್ನು ದಾಖಲಿಸುವ ಸ್ಪಷ್ಟ ವ್ಯವಸ್ಥೆ ಇಲ್ಲದಿರುವುದು, ರೈತರಿಗೆ ತಂಗಲು ಅನುಕೂಲವಿಲ್ಲದಿರುವುದು, ಪ್ರಾಂಗಣದಲ್ಲಿ ಅಕ್ರಮವಾಗಿ ಶೆಡ್‌ಗಳನ್ನು ನಿರ್ಮಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗದಿರುವುದು, ಎಪಿಎಂಸಿ ಅಧ್ಯಕ್ಷರಿಗೆ ಬೆದರಿಕೆ ಒಡ್ಡಿದ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲು ಸಾಧ್ಯವಾಗದಿರುವುದು ಸೇರಿದಂತೆ ಹಲವು ಅಂಶಗಳನ್ನು ಪತ್ರಕರ್ತರು ಉಲ್ಲೇಖಿಸಿದಾಗ ಅವರು ವಿಷಾದ ವ್ಯಕ್ತಪಡಿಸಿ ಒಪ್ಪಿಕೊಂಡರು. ಮುಂದಿನ ದಿನಗಳಲ್ಲಿ ಸರಿಪಡಿಸುವುದಾಗಿ ಭರವಸೆ ನೀಡಿದರು.

ಸ್ಥಳದಲ್ಲಿದ್ದ ಕೆಲವು ಸದಸ್ಯರು ಅವರ ಮಾತಿಗೆ ಅಸಮ್ಮತಿ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಎಪಿಎಂಸಿ ಉಪಾಧ್ಯಕ್ಷ ಟಿ.ವಿ.ಕೃಷ್ಣಪ್ಪ, ಸದಸ್ಯರಾದ ಪ್ರೇಮಕುಮಾರ್, ರಾಮು, ಕೆ.ರಮೇಶ್, ಎಂ.ಗೋಪಾಲಪ್ಪ, ಎಂ.ಚಂದ್ರೇಗೌಡ, ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT