ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಡಿಐಗೆ ರತ್ನಗಂಬಳಿ ಹಾಸಿದ ಕಾಂಗ್ರೆಸ್

Last Updated 11 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಮಹಾತ್ಮ ಗಾಂಧೀಜಿ ತತ್ವ, ಚಳವಳಿ 60 ವರ್ಷಗಳಲ್ಲಿ ಸತ್ತು ಹೋಯಿತು. ಜಯಪ್ರಕಾಶ್ ನಾರಾಯಣ್ ತತ್ವ, ಚಳವಳಿ ಆರು ವರ್ಷಗಳಲ್ಲಿ ಹಾಗೂ ಅಣ್ಣಾ ಹಜಾರೆ ಚಳವಳಿ ಆರೇ ತಿಂಗಳಲ್ಲಿ ಮೃತಪಟ್ಟಿತು~ ಎಂದು ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಮ್ ವಿಷಾದ ವ್ಯಕ್ತಪಡಿಸಿದರು.

ಜನತಾದಳದ (ಜಾತ್ಯತೀತ) ವಿದ್ಯಾರ್ಥಿ ಘಟಕದ ಆಶ್ರಯದಲ್ಲಿ ನಗರದ ಪಕ್ಷದ ಕಚೇರಿಯಲ್ಲಿ ಗುರುವಾರ ನಡೆದ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ 110ನೇ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.

`ಗಾಂಧೀಜಿ ಅವರು ವಿದೇಶಿ ವಸ್ತುಗಳನ್ನು ಬಹಿಷ್ಕರಿಸಲು ಕಾಂಗ್ರೆಸ್ ಅನ್ನು ಬಳಸಿಕೊಂಡರು. ಆದರೆ, ಈಗ ಕಾಂಗ್ರೆಸ್ ಪಕ್ಷವೇ ವಿದೇಶಿ ನೇರ ಬಂಡವಾಳ ಹೂಡಿಕೆಗೆ ರತ್ನಗಂಬಳಿ ಹಾಸಿದೆ. ಗಾಂಧೀಜಿ ಚಳವಳಿಗೆ ನೈತಿಕ ಹಿನ್ನೆಲೆ ಇತ್ತು. ಆದರೆ, ಭ್ರಷ್ಟಾಚಾರವನ್ನು ಮಾತ್ರ ಮುಂದಿಟ್ಟುಕೊಂಡು ಹಜಾರೆ ಹೋರಾಟ ನಡೆಸಿದರು. ಉಳಿದ ಸಮಸ್ಯೆಗಳ ಬಗ್ಗೆ ಅವರು ಗಮನ ಹರಿಸಲಿಲ್ಲ~ ಎಂದು ಬೇಸರ ವ್ಯಕ್ತಪಡಿಸಿದರು.

`ಹಳ್ಳಿಗಳು ಇಂದು ವೃದ್ಧಾಶ್ರಮಗಳಾಗುತ್ತಿವೆ. ನಗರಕ್ಕೆ ಎಲ್ಲ ಸುಖ ದೊರಕುತ್ತಿದೆ. ಒಂದೆರಡು ವರ್ಷಗಳಲ್ಲಿ ಆಹಾರ ಸ್ವಾವಲಂಬಿತನ ಕಳೆದುಕೊಳ್ಳಲಿದ್ದೇವೆ. ನೆಲ ಹಾಗೂ ಮನಸ್ಸು ಬರಡಾಗಿದೆ~ ಎಂದು ಅವರು ಕಳವಳ ವ್ಯಕ್ತಪಡಿಸಿದರು.

`ಜಯಪ್ರಕಾಶ್ ನಾರಾಯಣ್ ಎಲ್ಲ ತರಹದ ತ್ಯಾಗಕ್ಕೆ ಸಿದ್ಧರಾಗಿದ್ದರು. ನಮ್ಮ ಎಲ್ಲ ಹಕ್ಕುಗಳನ್ನು ಮರಳಿ ಸಿಗುವಂತೆ ಮಾಡಿದವರು ಅವರು. ಅಂತ್ಯೋದಯದ ಕನಸು ಬಿತ್ತಿದವರು ಜೆ.ಪಿ. ಅವರು ಇನ್ನಷ್ಟು ಕಾಲ ಇದ್ದಿದ್ದರೆ ಸುಖಿ ಭಾರತ ನಿರ್ಮಾಣವಾಗುತ್ತಿತ್ತು~ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, `ದೇಶದ ಪ್ರಮುಖ ಶತ್ರು ಭ್ರಷ್ಟಾಚಾರ. ಅದರ ವಿರುದ್ಧ ಯುವಕರು ಸಿಡಿದೇಳುವ ಕಾಲ ಸನ್ನಿಹಿತವಾಗಿದೆ. ದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು ಬಡಿದೋಡಿಸಲು ಮಹಾನ್ ನಾಯಕರ ತತ್ವ ಆದರ್ಶ, ಮಾರ್ಗದರ್ಶನದಲ್ಲಿ ಯುವಜನತೆ ಅಹಿಂಸಾತ್ಮಕ ಹೋರಾಟ ನಡೆಸಬೇಕು~ ಎಂದರು. 

`ಭ್ರಷ್ಟಾಚಾರದಿಂದಾಗಿ ರಾಜಕೀಯ ವ್ಯವಸ್ಥೆಗೆ ದೊಡ್ಡ ಪೆಟ್ಟು ಬಿದ್ದಿದೆ. ಕೇಂದ್ರ ಹಾಗೂ ರಾಜ್ಯದ ರಾಜಕೀಯ ಮುಖಂಡರು ತಮ್ಮ ಸ್ಥಾನ ಉಳಿಸಿಕೊಳ್ಳಲು ವ್ಯವಸ್ಥೆಯ ಜತೆಗೆ ಹೊಂದಾಣಿಕೆ ಮಾಡಿಕೊಂಡರು. ಜೆ.ಪಿ. ಅವರ ಸಂಪೂರ್ಣ ಕ್ರಾಂತಿ, ಅಂತ್ಯೋದಯಗಳು ರಾಜಕೀಯ ನಾಯಕರ ಅಧಿಕಾರ ದಾಹಕ್ಕೆ ಸಿಲುಕಿ ಬೇರೆ ದಿಕ್ಕಿನಲ್ಲಿ ಹೋಗಿವೆ. ಈಗ ಅವುಗಳನ್ನು ಸಂಪೂರ್ಣವಾಗಿ ಮರೆತಿದ್ದೇವೆ~ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸಾಹಿತಿ ಕೆ.ಬಿ. ಸಿದ್ದಯ್ಯ, `ವಿದ್ಯಾರ್ಥಿಗಳು ಸ್ವಾಭಿಮಾನಿಗಳಾಗಬೇಕು. ಯಾವುದೇ ಕಾರಣಕ್ಕೂ ದೇಶಭಕ್ತಿ ಹಾಗೂ ಸ್ವಾಭಿಮಾನವನ್ನು ಬಲಿ ಕೊಡಬಾರದು. ವಿದ್ಯಾರ್ಥಿಗಳಿಗೆ ಸಮಾಜವಾದಿ ಚಳವಳಿ ಮಾದರಿಯಾಗಬೇಕು~ ಎಂದರು.

ಜೆಡಿಎಸ್ ವಕ್ತಾರ ವೈ.ಎಸ್.ವಿ. ದತ್ತ, ಮಾಜಿ ಸಚಿವ ಆರ್. ಕೃಷ್ಣಪ್ಪ, ಮಾಜಿ ಶಾಸಕ ಎಂ.ಎಸ್. ನಾರಾಯಣ ರಾವ್, ಜೆಡಿಎಸ್ ಸಾಂಸ್ಕೃತಿಕ ವಿಭಾಗದ ಅಧ್ಯಕ್ಷ ಕೆ.ಎಚ್. ಕುಮಾರ್, ಜೆಡಿಎಸ್ ವಿದ್ಯಾರ್ಥಿ ಘಟಕದ ರಾಜ್ಯ ಅಧ್ಯಕ್ಷ ದಾ.ಕೃ. ದೇವರಾಜ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT