ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಮನೆತನದ ಮಧ್ಯೆ ಮೂರನೆಯವರು!

ಚಿಂತಾಮಣಿ ವಿಧಾನಸಭಾ ಕ್ಷೇತ್ರ
Last Updated 1 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಾಲ್ಕು ದಶಕಗಳಿಂದ ಎರಡೂ ಮನೆತನಗಳಿಗೆ ಮಾತ್ರವೇ ಸೀಮಿತವಾಗಿದ್ದ ಚಿಂತಾಮಣಿ ವಿಧಾನಸಭಾ ಕ್ಷೇತ್ರದ ರಾಜಕಾರಣಕ್ಕೆ ಈ ಬಾರಿ ತಡೆ ಬೀಳುವ ಸಾಧ್ಯತೆಯಿದೆ.

ಎರಡು ಮನೆತನಗಳ ನಡುವೆ ಮಾತ್ರವೇ ಹಂಚಿಕೆಯಾಗುತ್ತಿದ್ದ ಗದ್ದುಗೆ ಮೇಲೆ ಮೊದಲ ಬಾರಿಗೆ ಮೂರನೆಯವರ ಕಣ್ಣು ಬಿದ್ದಿದೆ. ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಚಿಂತಾಮಣಿಯಲ್ಲಿ ಈಗ ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎಂಬ ಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನ ನಡೆದ ಅನಿರೀಕ್ಷಿತ ಬೆಳವಣಿಗೆಯಿಂದ ಈ ಪರಿಸ್ಥಿತಿ ಉದ್ಭವಿಸಿದೆ.

ದಶಕಗಳಿಂದ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದ ಹಾಲಿ ಶಾಸಕ ಡಾ.ಎಂ.ಸಿ.ಸುಧಾಕರ್, ಈ ಬಾರಿ ಪಕ್ಷೇತರರಾಗಿ ಸ್ಪರ್ಧಿಸಲು ನಿರ್ಧರಿಸಿದ್ದರೆ, ಜೆಡಿಎಸ್‌ನಲ್ಲಿದ್ದ ಮಾಜಿ ಸಚಿವ ಕೆ.ಎಂ.ಕೃಷ್ಣಾರೆಡ್ಡಿ ಪುತ್ರಿ ವಾಣಿ ಕೃಷ್ಣಾರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದು ಬಹತೇಕ ಖಚಿತವಾಗಿದೆ. ಡಾ.ಎಂ.ಸಿ.ಸುಧಾಕರ್ ಮತ್ತು ವಾಣಿ ಕೃಷ್ಣಾರೆಡ್ಡಿ ಅವರಿಗೆ ಸ್ಪರ್ಧೆ ಒಡ್ಡಲು ಜೆಡಿಎಸ್‌ನ ಜೆ.ಕೆ.ಕೃಷ್ಣಾರೆಡ್ಡಿ ಸಿದ್ಧತೆ ನಡೆಸಿದ್ದಾರೆ.

ಪಕ್ಷಕ್ಕಿಂತ ವ್ಯಕ್ತಿಪ್ರತಿಷ್ಠೆಯೇ ಮುಖ್ಯವಾಗಿರುವ ಚಿಂತಾಮಣಿಯಲ್ಲಿ ವಂಶಪಾರಂಪರ‌್ಯವಾಗಿ ಎರಡೂ ಮನೆತಗಳ ನಡುವೆಯೇ ತುರುಸಿನ ಸ್ಪರ್ಧೆ ನಡೆಯುತ್ತಿದ್ದು, ಬೇರೆಯವರಿಗೆ ಅವಕಾಶ ಸಿಕ್ಕಿಲ್ಲ. ಈ ರೀತಿಯ ಜಿದ್ದಾಜಿದ್ದಿ ಹೋರಾಟ ಇತ್ತೀಚಿನದ್ದಲ್ಲ. 1957ರ ವಿಧಾನಸಭೆ ಚುನಾವಣೆಯಿಂದಲೂ ನಡೆದುಕೊಂಡು ಬಂದಿದೆ. ತಮ್ಮ ತಾತಾ ಆಂಜನೇಯರೆಡ್ಡಿ ಕಾಲದಿಂದ ಆರಂಭಗೊಂಡ ರಾಜಕೀಯ ಸಂಘರ್ಷವನ್ನು ಡಾ.ಎಂ.ಸಿ.ಸುಧಾಕರ್ ಮುಂದುವರೆಸಿದರೆ, ಸಂಬಂಧಿಯಾದ ಟಿ.ಕೆ.ಗಂಗಿರೆಡ್ಡಿ ಕಾಲದಲ್ಲಿ ಚಾಲನೆ ದೊರೆತ ರಾಜಕೀಯ ಸಮರವನ್ನು ವಾಣಿ ಕೃಷ್ಣಾರೆಡ್ಡಿ ಮುಂದುವರೆಸಿದ್ದಾರೆ.

ಆಸಕ್ತಿಯ ಸಂಗತಿ ಏನೆಂದರೆ, 1957ರಿಂದ ಆರಂಭಗೊಂಡ ಈ ಎರಡೂ ಮನೆತನಗಳ ಕದನದಲ್ಲಿ ಒಮ್ಮೆ ಟಿ..ಕೆ.ಗಂಗಿರೆಡ್ಡಿ ಜಯ ಸಾಧಿಸಿದರೆ, ಮಗದೊಮ್ಮೆ ಎಂ.ಸಿ.ಆಂಜನೇಯರೆಡ್ಡಿ ಗೆಲುವು ದಾಖಲಿಸುತ್ತ ಬಂದಿದ್ದಾರೆ. 1957ರ ಚುನಾವಣೆಯಲ್ಲಿ ಟಿ.ಕೆ.ಗಂಗಿರೆಡ್ಡಿ ಶಾಸಕರಾಗಿ ಆಯ್ಕೆಯಾದರೆ, 1962ರಲ್ಲಿ ಪ್ರತಿಸ್ಪರ್ಧಿ ಎಂ.ಸಿ.ಆಂಜನೇಯರೆಡ್ಡಿ ಶಾಸಕರಾಗಿ ಆಯ್ಕೆಯಾದರು. 1967ರಲ್ಲಿ ಟಿ.ಕೆ.ಗಂಗಿರೆಡ್ಡಿ ಪುನರಾಯ್ಕೆಯಾದ ನಂತರ 1972, 1978 ಮತ್ತು 1983ರ ಚುನಾವಣೆಯಲ್ಲಿ ಚೌಡರೆಡ್ಡಿ ಸತತ ಗೆಲುವು ದಾಖಲಿಸಿದರು.

ಮೊದಲ ಬಾರಿ ಚುನಾವಣಾ ಅಖಾಡಕ್ಕೆ ಇಳಿದ ಟಿ.ಕೆ.ಗಂಗಿರೆಡ್ಡಿ ಅಳಿಯ ಕೆ.ಎಂ.ಕೃಷ್ಣಾರೆಡ್ಡಿ 1985ರಲ್ಲಿ ಗೆಲುವು ದಾಖಲಿಸಿದರು. 1989ರಲ್ಲಿ ಮತ್ತೆ ಗೆಲುವು ಸಾಧಿಸಿದ ಚೌಡರೆಡ್ಡಿ ಅವರನ್ನು 1994ರ ಚುನಾವಣೆಯಲ್ಲಿ ಕೆ.ಎಂ.ಕೃಷ್ಣಾರೆಡ್ಡಿ ಮತ್ತೆ ಮಣಿಸಿದರು. 1999ರಲ್ಲಿ ಮತ್ತೆ ಗೆಲುವು ದಾಖಲಿಸಿದ ಚೌಡ ರೆಡ್ಡಿ ಅವರು ತಮ್ಮ ಪುತ್ರ ಡಾ.ಎಂ.ಸಿ.ಸುಧಾಕರ್ ಅವರನ್ನು 2004ರ ಚುನಾವಣೆಯಲ್ಲಿ ಕಣಕ್ಕೆ ಇಳಿಸಿ, ಗೆಲ್ಲಿಸಿದರು. 2008ರ ಚುನಾವಣೆಯಲ್ಲಿ ಮತ್ತೆ ಗೆದ್ದ ಡಾ.ಎಂ.ಸಿ.ಸುಧಾಕರ್ 2013ರ ಚುನಾವಣೆಯಲ್ಲೂ ಸ್ಪರ್ಧಿಸಲಿದ್ದಾರೆ.

ಎರಡೂ ಕುಟುಂಬಗಳು ರಾಜಕೀಯ ಹಿನ್ನೆಲೆ ಹೊಂದಿವೆ. ಆದರೆ ಜೆ.ಕೆ.ಕೃಷ್ಣಾರೆಡ್ಡಿ ನೇರವಾದ ರಾಜಕೀಯ ಹಿನ್ನೆಲೆಯುಳ್ಳವರಲ್ಲ. ಬೆಂಗಳೂರು ಮೂಲದ ಅವರು ಕೆಲ ವರ್ಷಗಳಿಂದ ಚಿಂತಾಮಣಿಯಲ್ಲೇ ಉಳಿದುಕೊಂಡು ಸಮಾಜಸೇವೆ ಕಾರ್ಯಗಳಲ್ಲಿ ತೊಡಗಿಕೊಂಡು ಈಗ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ. ಮಾಜಿ ಸಚಿವ ಕೆ.ಎಂ.ಕೃಷ್ಣಾರೆಡ್ಡಿ ನಿಧನದ ನಂತರ ಉತ್ತರಾಧಿಕಾರಿಯಾಗಿ ವಾಣಿ ಕೃಷ್ಣಾರೆಡ್ಡಿ ಜೆಡಿಎಸ್‌ನಲ್ಲೇ ಮುಂದುವರಿಯುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಸ್ಥಳೀಯ ಸಂಸ್ಥೆ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಅವರು ಚುನಾವಣಾ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಿಸುವ ಜವಾಬ್ದಾರಿಯನ್ನು ಜೆ.ಕೆ.ಕೃಷ್ಣಾರೆಡ್ಡಿ ಅವರಿಗೆ ವಹಿಸಿದಾಗ, ಮುನಿಸಿಕೊಂಡ ವಾಣಿ ಕೃಷ್ಣಾರೆಡ್ಡಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಡಾ.ಎಂ.ಸಿ.ಸುಧಾಕರ್ ಮತ್ತು ಕೆ.ಎಚ್.ಮುನಿಯಪ್ಪ ಬಣಗಳ ನಡುವಿನ ಶೀತಲ ಸಮರ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಕೆ.ಎಚ್.ಮುನಿಯಪ್ಪ ವಿರುದ್ಧ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ದೂರು ನೀಡಿದ್ದ ಸುಧಾಕರ್ ಅವರು, ಕಾಂಗ್ರೆಸ್‌ನಿಂದ ದೂರವಾಗುವ ಸುಳಿವನ್ನು ಕೆಲ ತಿಂಗಳುಗಳ ಹಿಂದೆಯೇ ನೀಡಿದ್ದರು. ಸುಧಾಕರ್ ಒಬ್ಬಂಟಿಯಾಗಿ ಚುನಾವಣೆ ಎದುರಿಸಬಹುದು. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಜೊತೆಗೂಡಿ ಅವರನ್ನು ಮಣಿಸುವ ಏಕೈಕ ಗುರಿಯಿಂದ ಕಣಕ್ಕೆ ಇಳಿದರೆ, ಅನಿರೀಕ್ಷಿತ ಬೆಳವಣಿಗಳಿಗೂ ಕಾರಣವಾಗುವ ಸಾಧ್ಯತೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT