ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲಿಮೆಂಟರಿ ಶಾಲೆಯಲ್ಲಿ ಶೂಟೌಟ್ ಪ್ರಕರಣ: ಕಣ್ಣೀರಿಟ್ಟ ಒಬಾಮ

ಬಂದೂಕು ಪರವಾನಗಿ: ಬಿಗಿ ಕ್ರಮಕ್ಕೆ ಒತ್ತಡ
Last Updated 15 ಡಿಸೆಂಬರ್ 2012, 19:54 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಐಎಎನ್‌ಎಸ್): ಕನೆಕ್ಟಿಕಟ್‌ನ ಎಲಿಮೆಂಟರಿ ಶಾಲೆಯಲ್ಲಿ ಶುಕ್ರವಾರ ನಡೆದ ಶೂಟೌಟ್ ಘಟನೆ ನೆನೆಸಿಕೊಂಡು ಕಣ್ಣೀರಿಟ್ಟ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಆ ಶಾಲೆಯ ಆವರಣದಲ್ಲಿ ಶಾಂತಿ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ನಡುವೆ, ಇಂಥ ದುಷ್ಕೃತ್ಯಗಳಿಗೆ ದೇಶದಲ್ಲಿರುವ `ಬಂದೂಕು ಲಾಬಿ'ಯೇ ಕಾರಣವಾಗಿದೆ. ಇಂಥ `ಲಾಬಿ'ಯನ್ನು ಮಟ್ಟಹಾಕಲು `ಬಂದೂಕು ಪರವಾನಗಿ' ಕಾನೂನನ್ನು ಬಿಗಿಗೊಳಿಸಬೇಕು ಎಂದು ಒಬಾಮ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ.
ಈ ಕುರಿತು ಮಾತನಾಡಿರುವ ನ್ಯೂಯಾರ್ಕ್‌ನ ಮೇಯರ್ ಮೈಕೆಲ್ ಬ್ಲೂಮ್‌ಬರ್ಗ್, `ಶಾಲೆಯ ಮೇಲೆ ನಡೆದ ಗುಂಡಿನ ದಾಳಿ ಬಗ್ಗೆ ಒಬಾಮ ಅವರು ಶೀಘ್ರ ಕ್ರಮ ಕೈಗೊಳ್ಳಬೇಕು. ಜೊತೆಗೆ ದೇಶದಲ್ಲಿರುವ `ಬಂದೂಕು ಪರವಾನಗಿ ಕಾನೂನಿನಲ್ಲಿರುವ ಲೋಪಗಳನ್ನು ಸರಿಪಡಿಸುವಂತೆ' ಒತ್ತಾಯಿಸಿದ್ದಾರೆ.

ಬಂದೂಕು ಪರವಾನಗಿ ಕಾನೂನು ಬಿಗಿಗೊಳಿಸಲು ಯಾವ ಪಕ್ಷಗಳೂ ಮುಂದಾಗುತ್ತಿಲ್ಲ. ಹೀಗಾಗಿ ಅಮೆರಿಕದಲ್ಲಿ `ಬಂದೂಕು ಹೊಂದುವುದು' ಮೂಲಭೂತ ಹಕ್ಕಿನಂತಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ವಿಶ್ವ ನಾಯಕರ ದಿಗ್ಭ್ರಮೆ
ನ್ಯೂಯಾರ್ಕ್ (ಪಿಟಿಐ):
ಕನೆಕ್ಟಿಕಟ್‌ನ ಶಾಲೆಯಲ್ಲಿ ನಡೆದ `ಶೂಟೌಟ್' ಪ್ರಕರಣದ ಬಗ್ಗೆ ವಿಶ್ವದ ಹಲವು ನಾಯಕರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.`ಇದೊಂದು ಅವಿವೇಕಿಗಳು ನಡೆಸಿದ ದುಷ್ಕೃತ್ಯ. ಇಂಥ ದುರ್ಘಟನೆಗಳು ಮುಂದೆ ಪುನಾವರ್ತನೆಯಾಗದಂತೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ' ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭರವಸೆ ನೀಡಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್, `ಇದೊಂದು ಊಹಿಸಲಾಗದ ಹೇಯ ಕೃತ್ಯ' ಎಂದು ಬಣ್ಣಿಸಿದ್ದಾರೆ. ದಾಳಿಯಲ್ಲಿ ಮೃತಪಟ್ಟ ಮಕ್ಕಳ  ಕುಟುಂಬದವರಿಗೆ ಮೂನ್ ಸಾಂತ್ವನ ಹೇಳಿದ್ದಾರೆ.

ಆಡಮ್ ಅಂತರ್ಮುಖಿ 
ನ್ಯೂಯಾರ್ಕ್ (ಪಿಟಿಐ):
ಗುಂಡಿನ ದಾಳಿ ನಡೆಸಿದ ಆಡಮ್ ಕುರಿತು ಪ್ರೌಢಶಾಲೆಯ ಸಹಪಾಠಿಗಳು, ನೆರೆಯವರು ವಿವಿಧ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಪ್ರೌಢಶಾಲೆಯಲ್ಲಿದ್ದ ಆಡಮ್‌ನ ಸಹಪಾಠಿಗಳು `ಆತ ಬುದ್ದಿವಂತ, ಅಂತರ್ಮುಖಿ ಹಾಗೂ ಹೆದರಿಕೆಯ ಗುಣಗಳ ವ್ಯಕ್ತಿತ್ವ. ಆತ ಶಾಲೆಯಲ್ಲಿದ್ದಾಗ ಒಂಟಿಯಾಗಿರುತ್ತಿದ್ದ' ಎಂದು ಹೇಳಿದ್ದಾರೆ.

ಆತ ಯಾವಾಗಲೂ ಒಬ್ಬ ಸಮಾಜಘಾತುಕನಂತೆ ಕಾಣುತ್ತಿದ್ದ. ಒಂದಲ್ಲಾ ಒಂದು ಪ್ರಕರಣದಲ್ಲಿ ಸಿಲುಕಿರುತ್ತಿದ್ದ' ಎಂದು ಆಡಮ್‌ನ ನೆರೆಯವರಾದ ಬೇತ್ ಇಸ್ರೇಲ್ ಹೇಳಿದ್ದಾರೆ.

ಸಿಖ್ ಸಮುದಾಯದ ನಮನ
ವಾಷಿಂಗ್ಟನ್(ಪಿಟಿಐ):
  ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಪರವಾಗಿ ಅಮೆರಿಕದಲ್ಲಿರುವ ಸಿಖ್ ಸಮುದಾಯವರು ಶನಿವಾರ ಪ್ರಾರ್ಥಿಸುವ ಮೂಲಕ ಮೃತರಿಗೆ ನಮನ ಸಲ್ಲಿಸಿದ್ದಾರೆ.

ಇಡೀ ದೇಶವೇ ಬೆಚ್ಚಿಬೀಳುವಂತೆ ಮಾಡಿರುವ ಈ ಪ್ರಕರಣ ಕೆಲ ತಿಂಗಳ ಹಿಂದೆ ವಿಸ್ಕಾನ್ಸಿನ್‌ನ ಗುರುದ್ವಾರದ ಮೇಲೆ ನಡೆದ ದಾಳಿಯನ್ನು ನೆನಪಿಸಿದೆ' ಎಂದು ವಿಸ್ಕಾನ್ಸಿನ್‌ನ ಗುಂಡಿನ ದಾಳಿಯಲ್ಲಿ ಮೃತಪಟ್ಟ ಗುರುದ್ವಾರದ ಅಧ್ಯಕ್ಷರ ಪುತ್ರ ಅಮರ್‌ದೀಪ್ ಕಲಿಕಾ ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದಲ್ಲಿ ಕ್ಯಾಂಪಸ್ ಹಿಂಸಾಚಾರ: ಎರಡು ದಶಕಗಳಲ್ಲಿ ನೂರು ಸಾವು
ವಾಷಿಂಗ್ಟನ್ (ಐಎಎನ್‌ಎಸ್):
ಇಪ್ಪತ್ತು ವರ್ಷಗಳಲ್ಲಿ ಅಮೆರಿಕದ ಶಾಲೆಗಳ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ನೂರು ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.

ಏಪ್ರಿಲ್ 16, 2007: ವರ್ಜೀನಿಯಾದ ಪಾಲಿಟೆಕ್ನಿಕ್ ಇನ್ಸ್ಟಿಟ್ಯೂಟ್ ಮತ್ತು ಬ್ಲಾಕ್‌ಸ್ಬರ್ಗ್ ನಲ್ಲಿರುವ ಸ್ಟೇಟ್ ಯೂನಿವರ್ಸಿಟಿ ಆವರಣದಲ್ಲಿ  ಸೆಂಗ್-ಹುಯಿ ಚೊ ಎಂಬುವವನು ನಡೆಸಿದ ಪ್ರತ್ಯೇಕ ಗುಂಡಿನ ದಾಳಿಗೆ 32 ಮಂದಿ ಸತ್ತು, 17 ಮಂದಿ ಗಾಯಗೊಂಡಿದ್ದರು. ಇದಾದ ನಂತರ ದಾಳಿ ನಡೆಸಿದವನೂ ಆತ್ಮಹತ್ಯೆ ಮಾಡಿಕೊಂಡಿದ್ದ.

ಫೆಬ್ರುವರಿ 27,2012: ಚಾರ್ಡೊನ್ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಮೂವರು ವಿದ್ಯಾರ್ಥಿಗಳನ್ನು ಕೊಂದು, ನಾಲ್ವರನ್ನು ಗಾಯಗೊಳಿಸಿದ್ದ.

ಅಕ್ಟೋಬರ್ 2, 2006: ಪೆನ್ಸಿಲ್ವೇನಿಯಾದ ನಿಖಲ್ ಮೈನ್ಸ್, ವೆಸ್ಟ್ ನಿಖಲ್ ಮೈನ್ಸ್ ಶಾಲೆಯ ಮೇಲೆ ಚಾರ್ಲ್ಸ್ ರಾಬರ್ಟ್ಸ್ -4, ಎಂಬುವವನು ದಾಳೀ ನಡೆಸಿದ ಐವರು ಬಾಲಕಿಯರನ್ನು ಕೊಂದು ಆರು ಮಂದಿಯನ್ನು ಗಾಯಗೊಳಿಸಿದ್ದ. ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ.

ನವೆಂಬರ್8, 2005: ಜೆನ್ನಿಸ್ಸೀಯ ಜಾಕ್ಸ್‌ಬೊರೊನಲ್ಲಿರುವ ಕ್ಯಾಂಪಬೆಲ್ ಕೌಂಟಿ ಕಾಂಪ್ರಹೆನ್ಸಿವ್ ಹೈಸ್ಕೂಲ್‌ನಲ್ಲಿ ಹದಿನೈದು ವರ್ಷದ ವಿದ್ಯಾರ್ಥಿಯೊಬ್ಬ ಪ್ರಾಚಾರ್ಯರು ಮತ್ತು ಇಬ್ಬರು ಉಪ ಪ್ರಾಚಾರ್ಯರ ಮೇಲೆ ಗುಂಡು ಹಾರಿಸಿ ಒಬ್ಬರನ್ನು ಕೊಂದು ಮತ್ತೊಬ್ಬರನ್ನು ಗಾಯಗೊಳಿಸಿದ್ದ.

ಮಾರ್ಚ್ 21, 2005 : ಮಿನ್ನೆಸೊಟಾದ ರೆಡ್ ಲೇಕ್‌ನಲ್ಲಿರುವ ರೆಡ್ ಲೇಕ್ ಹೈಸ್ಕೂಲ್‌ನಲ್ಲಿ ಹದಿನಾರರ ಹರೆಯದ ಜೆಫ್ ವೈಸ್ ಎಂಬ ವಿದ್ಯಾರ್ಥಿ, ತನ್ನ ತಾತ, ನಾಲ್ವರು ಸಹಪಾಠಿಗಳು, ಶಿಕ್ಷಕ ಹಾಗೂ ಭದ್ರತಾ ಅಧಿಕಾರಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ.

ಮಾರ್ಚ್ 5, 2001: ಕ್ಯಾಲಿಫೋರ್ನಿಯಾದ ಸ್ಯಾಂಟಿಯಲ್ಲಿರುವ ಸಂತನ ಹೈಸ್ಕೂಲ್‌ನಲ್ಲಿ 15 ವರ್ಷ ಆಂಡಿ ವಿಲಿಯಮ್ಸ, ತನ್ನ ಇಬ್ಬರು ಸಹಪಾಠಿಗಳನ್ನು ಕೊಂದು ಹದಿಮೂರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಗಾಯಗೊಳಿಸಿದ್ದ. 2002ರಲ್ಲಿ ಈತನಿಗೆ ನ್ಯಾಯಾಲಯ 50 ವರ್ಷಗಳ ಜೈಲು ವಾಸದ ಶಿಕ್ಷೆ ವಿಧಿಸಲಾಗಿತ್ತು.

ಏಪ್ರಿಲ್ 20, 1999: ಕೊಲೊರಡೊದ ಲಿಟ್ಟಲ್‌ಟನ್‌ನಲ್ಲಿರುವ ಕೊಲಂಬೀನ್ ಹೈಸ್ಕೂಲ್‌ನಲ್ಲಿ 18 ವರ್ಷದ ಎರಿಕ್ ಹ್ಯಾರಿಸ್ ಮತ್ತು ಡೈಲಾನ್ ಕ್ಲೆಬೋಲ್ಡ್ ಎಂಬ ಇಬ್ಬರು ವ್ಯಕ್ತಿಗಳು ನಡೆಸಿದ ದಾಳಿಯಲ್ಲಿ 12 ವಿದ್ಯಾರ್ಥಿಗಳು ಹಾಗೂ ಒಬ್ಬ ಶಿಕ್ಷಕಿ ಸಾವನ್ನಪಿದ್ದರು. ನಂತರ ಇಬ್ಬರೂ ಶಾಲೆಯ ಗ್ರಂಥಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಮೇ 21, 1998: ಒರೆಗಾನ್‌ನ ಸ್ಪ್ರಿಂಗ್‌ಫೀಲ್ಡ್‌ನಲ್ಲಿರುವ ಥುರ್‌ಸ್ಟೋನ್ ಹೈಸ್ಕೂಲ್‌ನ ಕಿಪ್ ಕಿನ್‌ಕೇಲ್ ಎಂಬ ಹದಿನೈದು ವರ್ಷದ ವಿದ್ಯಾರ್ಥಿ ಶಾಲೆಯ ಕ್ಯಾಂಟಿನ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಕೊಂದಿದ್ದ. ಇದಕ್ಕೂ ಮುನ್ನ ಮನೆಯಲ್ಲಿ ತನ್ನ ಪೋಷಕರನ್ನೇ ಹತ್ಯೆ ಮಾಡಿದ್ದ. ಈತನಿಗೆ ನ್ಯಾಯಾಲಯ 112 ವರ್ಷ ಜೈಲುವಾಸ ಶಿಕ್ಷೆ ವಿಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT