ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಷ್ಟೊಂದು ಮಾತು!

ಬ್ಲಾಗಿಲನು ತೆರೆದು...
Last Updated 24 ಜನವರಿ 2013, 19:59 IST
ಅಕ್ಷರ ಗಾತ್ರ

ಡಾ. ಬಿ.ಆರ್. ಸತ್ಯನಾರಾಯಣ ವೃತ್ತಿಯಿಂದ ಗ್ರಂಥಪಾಲಕರು. ಕೃಷಿಯ ಜೊತೆಗೆ ಅಕ್ಷರ ಕೃಷಿಯ ಬಗ್ಗೆಯೂ ಪ್ರೀತಿಯುಳ್ಳವರು. ಇಷ್ಟು ಹೇಳಿದ ಮಾತ್ರಕ್ಕೆ ಸತ್ಯನಾರಾಯಣರ ಪರಿಚಯ ಮುಗಿಯುವುದಿಲ್ಲ. `ಕುವೆಂಪು ಕಾವ್ಯಪ್ರೇಮಿ' ಎನ್ನುವುದು ಅವರ ಪರಿಚಯಕ್ಕೆ ಹೊಂದುವ ಸರಿಯಾದ ವಿಶೇಷಣ. ನೆಚ್ಚಿನ ಕವಿಯ ಸಾಂದರ್ಭಿಕ ಕವಿತೆಗಳ ರಸಯಾತ್ರೆ ಕುರಿತಂತೆ `ಕುವೆಂಪು ಕಾವ್ಯ ಯಾನ' ಎನ್ನುವ ಪುಸ್ತಕವನ್ನೂ ಅವರು ಪ್ರಕಟಿಸಿದ್ದಾರೆ. `ಕನ್ನಡ ಛಂದಸ್ಸು: ಸಂಕ್ಷಿಪ್ತ ಪರಿಚಯ', `ಮುಡಿ' ಕಥಾಸಂಕಲನ ಅವರ ಕೃತಿಗಳಲ್ಲಿ ಸೇರಿವೆ. ಇದಿಷ್ಟು ಪರಿಚಯದೊಂದಿಗೇ  `ನಂದೊಂದ್ಮಾತು' ಬ್ಲಾಗನ್ನು ಎದುರುಗೊಳ್ಳುವುದು ಒಳ್ಳೆಯದು.

ಸತ್ಯನಾರಾಯಣರ ಕುವೆಂಪು ಪ್ರೀತಿ `ನಂದೊಂದ್ಮಾತು' (nandondmatu.blogspot.in) ಬ್ಲಾಗಿನುದ್ದಕ್ಕೂ ಕಾಣಿಸಿಕೊಂಡಿದೆ. ಕುವೆಂಪು ಕಾವ್ಯದ ಬಗ್ಗೆ ಪ್ರೀತಿ ಉಕ್ಕಿಸುವಂತೆ ಬರೆಯುವ ಅವರು, ಕುವೆಂಪು ವ್ಯಕ್ತಿತ್ವ ಮತ್ತು ಸಾಧನೆಯನ್ನು ಅವರ ಕವಿತೆಗಳ ಮೂಲಕವೇ ಮಾಡಿಕೊಡಲು ಪ್ರಯತ್ನಿಸಿದಂತಿದೆ. ಕುವೆಂಪು ಮಾತ್ರವಲ್ಲ- ರನ್ನ, ಅಲ್ಲಮಪ್ರಭು, ಅಕ್ಕಮಹಾದೇವಿ, ತೇಜಸ್ವಿ ಕುರಿತ `ಮಾತು'ಗಳೂ ಬ್ಲಾಗ್‌ನಲ್ಲಿದ್ದು, ಸಾಹಿತ್ಯದ ವಿದ್ಯಾರ್ಥಿಗಳಿಗೆ ಈ `ಮಾತು'ಗಳು ರುಚಿಸುವಂತಿವೆ.

ಕವಿ-ಕಾವ್ಯದ ಆಚೆಗೂ ಕೆಲವು ಸ್ವಾರಸ್ಯಕರ ಬರಹಗಳು ಬ್ಲಾಗ್‌ನಲ್ಲಿವೆ. ಈ ನಿಟ್ಟಿನಲ್ಲಿ- ಬಾಲ್ಯದ ನೆನಪುಗಳು, ತಿಪಟೂರು ತೆಂಗಿನಕಾಯಿ ಮಹಿಮೆಯನ್ನು ಸಾರುವ ಮಾತು ಮತ್ತು ಕವಿತೆ, ಬೆಂಗಳೂರಿನ ಸ್ಥಳನಾಮಗಳನ್ನು ಕುರಿತಾದ ಟಿಪ್ಪಣಿಗಳನ್ನು ನೋಡಬಹುದು.

ತೇಜಸ್ವಿ ಕುರಿತ ಬರಹವನ್ನು ಓದಿನ ರುಚಿಗಾಗಿ ಗಮನಿಸಬಹುದು. ಈ ಲೇಖನದಲ್ಲಿನ ಕಿರು ಪ್ರಸಂಗಗಳು ತೇಜಸ್ವಿ ವ್ಯಕ್ತಿತ್ವದ ಸೊಗಸನ್ನು ಕಟ್ಟಿಕೊಡುವಂತಿವೆ. ಉದಾಹರಣೆಗೆ-
“ತಬರನ ಕಥೆ ಚಿತ್ರೀಕರಣದ ಸಮಯದಲ್ಲಿ ತೇಜಸ್ವಿಯವರ ಮನೆಯ ಮಹಡಿಯ ಮೇಲೆ ಚಿತ್ರೀಕರಿಸಲು ಗಿರೀಶ್ ಕಾಸರವಳ್ಳಿಯವರು ತೇಜಸ್ವಿಯವರ ಒಪ್ಪಿಗೆಯನ್ನು ಕೇಳಿದ್ದಕ್ಕೆ ಕೊಟ್ಟ ಉತ್ತರ: `ನೀವು ಮೇಲೆ ಶೂಟ್ ಮಾಡಿಕೊಳ್ಳಬಹುದು, ನಾನಂತೂ ಅಲ್ಲಿಗೆ ಬರುವುದಿಲ್ಲ. ನೀವೇನಾದರೂ ಕೆಳಗೆ ಬಂದಿರೋ, ನಾನು ಶೂಟ್ ಮಾಡಿಬಿಡುತ್ತೇನೆ!'.

ಕೃಷ್ಣೇಗೌಡನ ಆನೆ ಕಥೆಯ ಸಿನಿಮಾ ಹಕ್ಕನ್ನು ಕೇಳಲು ಬಂದ ನಿರ್ದೇಶಕರಿಗೆ ಹೇಳಿದ ಮಾತು: `ಯಾವ ಕಾರಣಕ್ಕೂ ಇದನ್ನು ಆರ್ಟ್ ಸಿನಿಮಾ ಮಾಡಿ ಬೋರು ಹೊಡೆಸಬೇಡಿ. ಕೆಡಿಸಿದ್ರೆ ಜನ ನನ್ನ ಬೈತಾರೆ. ಚೆನ್ನಾಗಿ ಮಾಡಿದ್ರೆ ನನಗೂ ಹೆಸರು ಬರುತ್ತೆ'.
ತೇಜಸ್ವಿ ತಾವು ಯಾವಾಗಲೂ ಬ್ಯುಸಿಯಾಗಿರುವುದಕ್ಕೆ ಕೊಡುತ್ತಿದ್ದ ಕಾರಣ: “ನಮ್ಮ ಗ್ಯಾರಂಟಿ ಪೀರಿಯಡ್ ಮುಗಿದು ಹೋಗಿದೆ ಕಣ್ರೀ. ಆದಷ್ಟು ಬೇಗ ಮಾಡಬೇಕು ಅಂದುಕೊಂಡಿದ್ದನ್ನೆಲ್ಲ ಮಾಡಿ ಮುಗಿಸಬೇಕು”.

ಶಿಶುಪ್ರಾಸಗಳ ಕುರಿತು ಬರೆಯುವ ಬ್ಲಾಗಿಗರು, ತಮ್ಮ ಬರಹದಲ್ಲಿ ಅನೇಕ ಶಿಶುಪ್ರಾಸಗಳನ್ನು ಸಂಗ್ರಹಿಸಿದ್ದಾರೆ. ಇವು ಚಿಣ್ಣರು ಗುನುಗಿಕೊಳ್ಳಲು ತಕ್ಕನಾಗಿವೆ. ಈ ಬರಹದ ಒಂದು ಭಾಗ- “ಶಿಶುಪ್ರಾಸಗಳು ಜಾನಪದ ಸಾಹಿತ್ಯದ ಒಂದು ಪ್ರಕಾರ. ಇವುಗಳಲ್ಲಿ ಅರ್ಥಕ್ಕೂ ಹಾಗೂ ಅರ್ಥಕ್ಕಿಂತ (ಹೆಸರೇ ಹೇಳುವಂತೆ) ಪ್ರಾಸಕ್ಕೂ ಲಯಕ್ಕೂ ಹೆಚ್ಚಿನ ಪ್ರಾಧಾನ್ಯತೆ ಇರುತ್ತದೆ.

ಇವು ಕರ್ನಾಟಕದಾದ್ಯಂತ ಕೇಳಸಿಗುತ್ತವೆ. ಆದರೆ ಇತ್ತೀಚಿನ ಆಧುನೀಕರಣ ಪ್ರಕ್ರಿಯೆಯಿಂದಾಗಿ, ವಿಭಕ್ತ ಕುಟುಂಬಗಳಿಂದಾಗಿ ಇಂತಹ ಶಿಶುಪ್ರಾಸಗಳಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ. ನಮ್ಮ ಬಯಲಸೀಮೆಯಲ್ಲಿ ಹಲವಾರು ಶಿಶುಪ್ರಾಸಗಳು ಪ್ರಚಲಿತದಲ್ಲಿವೆ. ಗಾದೆ, ಒಗಟುಗಳ ರೂಪವೂ ಅವಕ್ಕಿವೆ ಹಾಗೂ ಕ್ರೀಡಾ ಸ್ವರೂಪವೂ ಇದೆ. ಭಾಷೆಯು ಬದಲಾದಂತೆ, ಆಯಾಯ ಪ್ರಾಂತ್ಯದ ವೈಶಿಷ್ಟ್ಯವನ್ನು ಅವು ಮೈಗೂಡಿಸಿಕೊಂಡಿರುತ್ತವೆ. ಉದಾಹರಣೆಗೆ,

ಕಬಡ್ಡಿ ಕಬಡ್ಡಿ ಕಾರ
ಹುಳ್ಳಿ ಹೊಲದಲ್ಲಿ ಕೀರ
ಇದನ್ನು ಮಂಡ್ಯ, ಕೊಳ್ಳೇಗಾಲದ ಕಡೆ-
ಕಬಡ್ಡಿ ಕಬಡ್ಡಿ ಕಾರ
ಕಬ್ಬಿನ ಗದ್ದೇಲಿ ಕೀರ

ಎಂದು ಹೇಳುತ್ತಾರೆ. ಪ್ರಶ್ನೋತ್ತರ ರೂಪದ ಶಿಶುಪ್ರಾಸಗಳೂ ಇರುತ್ತವೆ.

ಕಾಗೆ ಕಾಗೆ ಕೌವ್ವ
ಯಾರು ಬರ್ತಾರವ್ವ?
ಮಾವ ಬರ್ತಾನವ್ವ
ಮಾವಗೇನು ಊಟ?
ರಾಗಿಕಲ್ಲಿನ ಗೂಟ!

ಹೆಣ್ಣುಮಗಳೊಬ್ಬಳು ತನ್ನ ತಾಯಿಗೆ ಹೇಳುತ್ತಿರುವ ರೀತಿಯ ಒಂದು ಶಿಶುಗೀತೆ ಹೀಗಿದೆ-

ಯವ್ವ ಯವ್ವ ಗೆಣಸೆ
ಕುಕ್ಕೆಲಿ ಕುಣಿಸೆ
ಕರಿಸೀರೆ ಉಡಿಸೆ
ಗಂಡನ ಮನೆಗೆ ಕಳಿಸೆ!”

ನಂದೂ ಒಂದು ಮಾತು ಎನ್ನುವ ವಿನಯದ `ನಂದೊಂದ್ಮಾತು' ಬ್ಲಾಗು, ಸಹೃದಯರೊಂದಿಗೆ ಪಿಸುನುಡಿಯುತ್ತಲೇ ಅವರ ಸ್ನೇಹ ಗಳಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT