ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್.ಎಂ. ಕೃಷ್ಣ ನಗರ : ಹೊಸ ಬಡಾವಣೆಗೆ ಕೂಡಿ ಬಂದ ಕಾಲ

Last Updated 18 ಅಕ್ಟೋಬರ್ 2012, 6:05 IST
ಅಕ್ಷರ ಗಾತ್ರ

ಹಾಸನ: ಒಂದು ದಶಕದಿಂದ ನೆನೆಗುದಿಗೆ ಬಿದ್ದಿರುವ ಮತ್ತು ಹಾಸನ ನಗರಾಭಿವೃದ್ಧಿ ಪ್ರಾಧಿಕಾರವನ್ನು ಮುಳುಗಡೆಯ ಹಂತಕ್ಕೆ ತಂದು ನಿಲ್ಲಿಸಿದ್ದ ಎಸ್.ಎಂ. ಕೃಷ್ಣ ನಗರ ಯೋಜನೆಯ ಶಾಪ ವಿಮೋಚನೆ ಲಕ್ಷಣ ಗೋಚರಿಸುತ್ತಿದ್ದು, ಪ್ರಾಧಿಕಾರ ನಿರೀಕ್ಷಿಸಿದಂತೆ ಎಲ್ಲವೂ ನಡೆದರೆ ಒಂದೆರಡು ತಿಂಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ನಿವೇಶನಗಳಿಗೆ ಅರ್ಜಿ ಆಹ್ವಾನಿಸುವ ಸಾಧ್ಯತೆ ಇದೆ.

2002ರಲ್ಲಿ ನಡೆದ ಭೂಸ್ವಾಧೀನದ ಬಳಿಕ ಭೂಮಿಯನ್ನು ಬೇಕಾಬಿಟ್ಟಿಯಾಗಿ ಬಲ್ಕ್ ಅಲಾಟ್‌ಮೆಂಟ್ ಮಾಡಿದ್ದು, ನಂತರ ರೈತರು ನ್ಯಾಯಾಲಯದ ಮೊರೆಗೆ ಹೋದದ್ದು... ಮುಂತಾದ ಕಾರಣಗಳಿಂದ ಎಸ್.ಎಂ.ಕೃಷ್ಣ ನಗರ ಯೋಜನೆ ಹುಡಾಗೆ ನುಂಗಲಾರದ ತುತ್ತಾಗಿತ್ತು.

ಅತ್ತ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಜನರಿಗೆ ಮಾರಾಟ ಮಾಡಲಾಗದೆ, ಇತ್ತ ಭೂಸ್ವಾಧೀನಕ್ಕಾಗಿ ಪಡೆದ ಸಾಲ ಪಾವತಿಸಲಾಗದೆ ಹುಡಾ ಸಂಕಷ್ಟಕ್ಕೆ ಸಿಲುಕಿತ್ತು. ಈ ನಡುವೆ ಕೆಲವು ವರ್ಷಗಳ ಕಾಲ ಹುಡಾಕ್ಕೆ ಅಧ್ಯಕ್ಷರೇ ಇರಲಿಲ್ಲ. ಪಡೆದಿದ್ದ ಸಾಲ ಬೆಳೆದು ಈಗ ದಿನಕ್ಕೆ 35ಸಾವಿರ ರೂಪಾಯಿ ಬಡ್ಡಿ ಕಟ್ಟಬೇಕಾದ ಸ್ಥಿತಿಗೆ ಬಂದು ನಿಂತಿದೆ. ಹುಡಾ ಈಗ ಸುಮಾರು 50 ಕೋಟಿ ರೂಪಾಯಿ ಮರುಪಾವತಿ ಮಾಡಬೇಕಾಗಿದೆ.


ಹುಡಾ 2002ರಲ್ಲಿ ಒಟ್ಟು 453 ಎಕರೆ ಭೂಮಿ ಸ್ವಾಧೀನಪಡಿಸಿತ್ತು. ಭೂಸ್ವಾಧೀನಕ್ಕಾಗಿ ವಿಜಯಾ ಬ್ಯಾಂಕ್‌ನಿಂದ 15 ಕೋಟಿ ರೂಪಾಯಿ ಸಾಲ ಪಡೆದಿತ್ತು. ಇದಾಗುತ್ತಿದ್ದಂತೆ ಸರ್ಕಾರ ಬದಲಾಗಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತು. ಇಲ್ಲಿಂದ ಯೋಜನೆಯ ಸ್ವರೂಪ ಬದಲಾಯಿತು. ನಿವೇಶನಕ್ಕಾಗಿ  ಖರೀದಿಸಿದ್ದ ಭೂಮಿಯಲ್ಲಿ 23 ಎಕರೆ ಭೂಮಿ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್‌ಗೆ, 10 ಎಕರೆಯನ್ನು ನಿಸರ್ಗ ಟ್ರಸ್ಟ್‌ಗೆ ಹಾಗೂ ಒಂದು ಎಕರೆ ಚೇತನ್ ನ್ಯೂರೋ ಸೆಂಟರ್‌ಗೆ ಸೇಲ್ ಡೀಡ್ ಮಾಡಿ ಕೊಡಲಾಯಿತು.

ಇದಾದ ನಂತರ ಲೋಕೋಪಯೋಗಿ ಇಲಾಖೆಗೆ 20 ಎಕರೆ, ಕೆಎಸ್‌ಆರ್‌ಟಿಸಿಗೆ 15 ಎಕರೆ, ಕೆಎಸ್‌ಆರ್‌ಪಿಗೆ 150 ಎಕರೆ, ಮಂಜೂರು ಮಾಡಲಾಗಿದೆ. ಈ ಸಂಸ್ಥೆಗಳಿಂದ ಹುಡಾ ಹಣ ಪಡೆದಿದೆ.

ಇದಲ್ಲದೆ ರಾಜೀವ್‌ಗಾಂಧಿ ವಸತಿ ಯೋಜನೆಗೆ 100 ಎಕರೆ ಮಂಜೂರು ಮಾಡ ಲಾಗಿತ್ತು. ನಗರಸಭೆ ಈ ಭೂಮಿಗೆ ಹಣ ಸಂದಾಯ ಮಾಡದಿದ್ದರೂ ಫಲಾನುಭವಿಗಳನ್ನು ಆಯ್ಕೆ ಮಾಡಿ ಭೂಮಿಯ ಹಕ್ಕುಪತ್ರಗಳನ್ನು ವಿತರಿಸಿತ್ತು. ಈ ಬೆಳವಣಿಗೆಗಳ ಬಳಿಕ ಮತ್ತೆ ರಾಜಕೀಯ ವ್ಯವಸ್ಥೆ ಬದಲಾಯಿತು. ಯೋಜನೆಗೆ ಭೂಮಿ ನೀಡಿದ್ದ ರೈತರು `ಮೂಲ ಉದ್ದೇಶಕ್ಕೆ ಭೂಮಿಯನ್ನು ಬಳಸದ ಕಾರಣ ನಮ್ಮ ಭೂಮಿಯನ್ನು ನಮಗೆ ಮರಳಿಸಬೇಕು~ ಎಂದು ಒತ್ತಾಯಿಸಿ ನ್ಯಾಯಾಲಯದ ಮೊರೆ ಹೋದರು.
 
ಇಡೀ ಯೋಜನೆ ರದ್ದಾಗುವ ಸಾಧ್ಯತೆ ಮನಗಂಡ ಅಂದಿನ ಜಿಲ್ಲಾಧಿಕಾರಿ (ಹುಡಾ ಆಯುಕ್ತರೂ ಆಗಿದ್ದರು) ನವೀನ್‌ರಾಜ್ ಸಿಂಗ್ ಎಲ್ಲ ಬಲ್ಕ್ ಅಲಾಟ್‌ಮೆಂಟ್‌ಗಳನ್ನು ರದ್ದು ಮಾಡಿ, ಮೂಲ ಉದ್ದೇಶ ಕ್ಕಾಗಿ ಭೂಮಿ ಬಳಸುವುದಾಗಿ ಸರ್ಕಾರಕ್ಕೆ ಸ್ಪಷ್ಟಪ ಡಿಸಿದ್ದರು.

ನವಿಲೆ ಅಣ್ಣಪ್ಪ ಅವರು ಹುಡಾ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ರೈತರೊಡನೆ ಮಾತುಕತೆ ನಡೆಸಿ 60ಃ 40ರ ಅನುಪಾತದಲ್ಲಿ (ಭೂಮಿ ನೀಡಿದ ರೈತರಿಗೆ ಶೇ 40 ನಿವೇಶನಗಳನ್ನು ನೀಡುವುದು) ನಿವೇಶನ ಹಂಚಿಕೆಯ ಸೂತ್ರ ರಚಿಸಿ ಯೋಜನೆ ಮುಂದುವರಿಸಲು ತೀರ್ಮಾನಿ ಸಿದ್ದಾರೆ. ರೈತರೂ ಸಹ ಇದಕ್ಕೆ ಒಪ್ಪಿಗೆ ಸೂಚಿಸಿ ನ್ಯಾಯಾಲಯಕ್ಕೆ ಈ ಬಗ್ಗೆ ಮನವಿ ಮಾಡಿದ್ದಾರೆ.

ಹಳೆಯ ಯೋಜನೆಯಾಗಿದ್ದರೂ ಇದೇ ಸ್ಥಿತಿಯಲ್ಲಿದ್ದ ಬೆಂಗಳೂರಿನ ಅರ್ಕಾವತಿ ಬಡಾವಣೆಯ ಪ್ರಕರಣವನ್ನೇ ಇಲ್ಲೂ ಅನ್ವಯಿಸಿ ಅನುಮತಿ ನೀಡಲು ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಹುಡಾ ಹೊಸ ಯೋಜನಾ ವರದಿಯನ್ನು ಸಿದ್ಧಪಡಿಸಿದೆ.
 
ಹಿಂದೆ ಆಗಿರುವ ಸೇಲ್ ಡೀಡ್‌ಗಳನ್ನು ರದ್ದುಮಾಡಲು ಆಗದಿರುವ ಹಿನ್ನೆಲೆಯಲ್ಲಿ ಇಲ್ಲಿಯೇ ಮೂರು ಸಂಸ್ಥೆಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲು ಹುಡಾ ಯೋಜನೆ ಮಾಡಿಕೊಂಡಿದೆ. ಹುಡಾದ ಕೆಲವು ಅಧಿಕಾರಿಗಳು ಸಂಪೂರ್ಣ ದಾಖಲಾತಿ ಹಾಗೂ ಮಾಹಿತಿಯೊಂದಿಗೆ ಬುಧವಾರ ಬೆಂಗಳೂರಿಗೆ ತೆರಳಿದ್ದಾರೆ.

ಒಟ್ಟು 5210 ನಿವೇಶನಗಳು. ಇದರಲ್ಲಿ ಶೇ 40ರಷ್ಟನ್ನು ಭೂಮಿ ನೀಡಿದ ರೈತರಿಗೆ ಕೊಟ್ಟರೆ ಸುಮಾರು 3500 ನಿವೇಶನಗಳು ಸಾರ್ವಜನಿ ಕರಿಗೆ ಲಭ್ಯವಾಗಲಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಒಂದೆರಡು ತಿಂಗಳಲ್ಲಿ ಸುಮಾರು 3500 ನಿವೇಶನಗಳಿಗೆ ಆಸಕ್ತರಿಂದ ಅರ್ಜಿ ಆಹ್ವಾನಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT