ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ:ಶೇ 79.83 ಯಶಸ್ಸು; ಗುಣಮಟ್ಟಕ್ಕೆ ಧಕ್ಕೆ ಇಲ್ಲ

Last Updated 18 ಮೇ 2012, 6:15 IST
ಅಕ್ಷರ ಗಾತ್ರ

ಕೋಲಾರ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಜಿಲ್ಲಾವಾರು ಪಟ್ಟಿಯಲ್ಲಿ ಕೋಲಾರ 21ನೇ ಸ್ಥಾನ ಪಡೆದಿದೆ. 1ರಿಂದ 10ನೇ ಸ್ಥಾನದೊಳಗೇ ಇರಬೇಕೆಂಬ ಜಿಲ್ಲೆಯ ಮಹತ್ವಾಕಾಂಕ್ಷೆ ಈಡೇರದಿದ್ದರೂ ಅದಕ್ಕಾಗಿ ಪಟ್ಟ ಶ್ರಮವು ಜಿಲ್ಲೆಯ ಶೇಕಡಾವಾರು ಫಲಿತಾಂಶ ಕುಸಿಯದಂತೆ ಕಾಪಾಡಿದೆ.ಫಲಿತಾಂಶದ ಶೇಕಡಾವರು ಪ್ರಮಾಣ ಸಮಾಧಾನಕರವಾಗಿದೆ.

ಕಳೆದ ಬಾರಿ 8ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ 21ನೇ ಸ್ಥಾನ ಪಡೆದರೂ ಫಲಿತಾಂಶದಲ್ಲಿ ಹೆಚ್ಚು ಏರಪೇರಾಗಿಲ್ಲ ಎಂಬುದು ಗಮನಾರ್ಹ. ಕಳೆದ ಬಾರಿ ಶೇ 81.46ರಷ್ಟು ಫಲಿತಾಂಶ ದೊರೆತಿತ್ತು. ಈ ಬಾರಿ 79.83ರಷ್ಟು ಫಲಿತಾಂಶ ದೊರೆತಿದೆ. ಹಿಂದಿನ ವರ್ಷಕ್ಕಿಂತ ಶೇ 1.6ರಷ್ಟು ಮಾತ್ರ ಕಡಿಮೆಯಾಗಿದೆ.

ಹಿನ್ನೋಟ: 2007-08ನೇ ಸಾಲಿನಲ್ಲಿ 24ನೇ ಸ್ಥಾನ, 2008-09ನೇ ಸಾಲಿನಲ್ಲಿ 29ನೇ ಸ್ಥಾನದಲ್ಲಿದ್ದ ಜಿಲ್ಲೆ 2009-10ನೇ ಸಾಲಿನಲ್ಲಿ ಇನ್ನೂ ಒಂದು ಸ್ಥಾನ ಕೆಳಕ್ಕೆ ಕುಸಿದಿತ್ತು. ಶೇ 57.81ರಷ್ಟು ಫಲಿತಾಂಶ ಪಡೆದು 30ನೇ ಸ್ಥಾನ ಪಡೆದಿತ್ತು. ಆದರೆ ಆ ಸ್ಥಾನದಿಂದ ಮೇಲೇರುವ ಹಠ ತೊಟ್ಟ ಇಲಾಖೆಯು ಹಲವು ಸುಧಾರಣಾ ಕಾರ್ಯಕ್ರಮಗಳನ್ನು ವರ್ಷವಿಡೀ ಹಮ್ಮಿಕೊಂಡ ಪರಿಣಾಮವಾಗಿ 2010-11ನೇ ಸಾಲಿನಲ್ಲಿ 8ನೇ ಸ್ಥಾನಕ್ಕೇರಿ ದಾಖಲೆ ಫಲಿತಾಂಶವನ್ನು ಪಡೆದು ರಾಜ್ಯಮಟ್ಟದಲ್ಲಿ ಗಮನ ಸೆಳೆದಿತ್ತು.

ನಂತರದ ಶೈಕ್ಷಣಿಕ ವರ್ಷದಲ್ಲಿ 10ರ ಒಳಗಿನ ಸ್ಥಾನ ಪಡೆಯುವ ಮಹತ್ವಾಕಾಂಕ್ಷೆಯಿಂದ ಇಲಾಖೆಯು ಮತ್ತೆ ಆರಂಭದಿಂದಲೇ ಚಟುವಟಿಕೆಗಳನ್ನು ಹಮ್ಮಿಕೊಂಡಿತ್ತು. ನಮ್ಮ ಗುರಿ ಈಡೇರದಿದ್ದರೂ ಫಲಿತಾಂಶದ ಪ್ರಮಾಣ ಮಾತ್ರ ಆಶಾದಾಯಕವಾಗಿದೆ ಎಂಬುದು ಪರೀಕ್ಷೆಯ ನೋಡಲ್ ಅಧಿಕಾರಿ ಎ.ಎನ್. ನಾಗೇಂದ್ರ ಪ್ರಸಾದರ ನುಡಿ.

ಹಲವು ಯತ್ನ: ಫಲಿತಾಂಶದಲ್ಲಿ ಮೇಲಕ್ಕೇರಲು ಜಿಲ್ಲೆ ಕಳೆದ ಬಾರಿ ನಡೆಸಿದ್ದ ಪ್ರಯತ್ನಗಳನ್ನು ಈ ಬಾರಿ ಇನ್ನಷ್ಟು ಪರಿಶ್ರಮದೊಡನೆ ಮುಂದುವರಿಸಲಾಗಿತ್ತು ಎಂಬುದು ವಿಶೇಷ.2010ರಲ್ಲಿ ಶೇ 50ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ 56 ಶಾಲೆಗಳನ್ನು ಇಲಾಖೆಯ 12 ಅಧಿಕಾರಿಗಳಿಗೆ ಕಳೆದ ಬಾರಿ ದತ್ತು ನೀಡಲಾಗಿತ್ತು.

ಇಲಾಖೆ ಉಪನಿರ್ದೇಶಕರೇ ಬಂಗಾರಪೇಟೆ ತಾಲ್ಲೂಕಿನ ಆರು ಶಾಲೆಗಳನ್ನು ದತ್ತು ಪಡೆದಿದ್ದರು. ಆ ಪೈಕಿ13 ಖಾಸಗಿ ಪ್ರೌಢಶಾಲೆಗಳಿದ್ದವು. ಕೆಜಿಎಫ್ ವಲಯದಲ್ಲೆ ಶೇ 51ರಷ್ಟು ಫಲಿತಾಂಶ ಪಡೆದಿದ್ದ 9 ಶಾಲೆಗಳಿದ್ದವು. ಬಂಗಾರಪೇಟೆಯಲ್ಲಿ ಹೆಚ್ಚು ಶಾಲೆಗಳನ್ನು ದತ್ತು ನೀಡಲಾಗಿತ್ತು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಆಯಾ ಶಾಲೆ ಶಿಕ್ಷಕರಿಗೆ ದತ್ತು ನೀಡಲಾಗಿತ್ತು. ಈ ಯೋಜನೆ ಪ್ರಸಕ್ತ ವರ್ಷದಲ್ಲೂ ಮುಂದುವರಿದಿತ್ತು.

ಫಲಿತಾಂಶ ಹೆಚ್ಚಿಸುವ ಪ್ರಯತ್ನದ ಅಂಗವಾಗಿ ಜಿಲ್ಲಾ ಪಂಚಾಯಿತಿ ಮತ್ತು ಇಲಾಖೆಯು ಜಂಟಿಯಾಗಿ ಮುಖ್ಯ ಶಿಕ್ಷಕರಿಗಾಗಿ ಗುಣಾತ್ಮಕ ಫಲಿತಾಂಶದ ಮಾರ್ಗಸೂಚಿ `ಸ್ಫೂರ್ತಿ~ ಕೈಪಿಡಿಯನ್ನು 2010ರ ಜುಲೈ ತಿಂಗಳಲ್ಲಿ ಪ್ರಕಟಿಸಿತ್ತು. ಫಲಿತಾಂಶ ಹೆಚ್ಚಳಕ್ಕೆ ಕಡ್ಡಾಯವಾಗಿ ಕೈಗೊಳ್ಳಬೇಕಾದ ಹಲವು ಕಾರ್ಯಕ್ರಮಗಳ ಬಗ್ಗೆ ಕೈಪಿಡಿಯಲ್ಲಿ ಸೂಚನೆಗಳನ್ನು ನೀಡಲಾಗಿತ್ತು. ನಂತರದಲ್ಲಿ ಈ ವರ್ಷ `ನವ್ಯಸ್ಫೂರ್ತಿ~ ಕೈಪಿಡಿಯನ್ನು ಪ್ರಕಟಿಸಲಾಗಿತ್ತು.

2010ರಲ್ಲಿ ಪ್ರತಿ ವಿಷಯಕ್ಕೂ ಅಧ್ಯಾಯವಾರು ಪ್ರಶ್ನೆ ಮಾಲೆಗಳುಳ್ಳ ವಿದ್ಯಾರ್ಥಿ ಮಾರ್ಗದರ್ಶಿಯನ್ನು ಕೂಡ ಪ್ರಕಟಿಸಲಾಗಿತ್ತು. ಪರೀಕ್ಷೆ ಎದುರಿಸುವ ಪೂರ್ವಸಿದ್ಧತಾ ಕೌಶಲಗಳನ್ನು ವಿದ್ಯಾರ್ಥಿಗಳಲ್ಲಿ ಹೆಚ್ಚಿಸುವ ಪ್ರಯತ್ನಗಳ ಕಡೆಗೆ ಗಮನಹರಿಸಿತ್ತು.

ರಾತ್ರಿ ಶಾಲೆ: ಇದೆಲ್ಲದರ ಜೊತೆಗೆ ಎಲ್ಲ ಶಾಲೆಗಳಲ್ಲೂ ರಾತ್ರಿ ವೇಳೆ ಪಾಠ ಅನುಷ್ಠಾನಗೊಳಿಸಲಾಗಿತ್ತು. ರಾತ್ರಿ ಶಾಲೆಯ ಕಾರ್ಯವೈಖರಿ ಪರಿಶಿಲನೆಗೆ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿತ್ತು. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಮುಖ್ಯಶಿಕ್ಷಕರ ಸಭೆಯನ್ನು ಹಲವು ಬಾರಿ ಸಭೆಗಳನ್ನು ನಡೆಸಲಾಗಿತ್ತು.

ಸಮಾಧಾನ: ಜಿಲ್ಲಾವಾರು ಪಟ್ಟಿಯಲ್ಲಿ ಹಿಂದೆ ಸರಿದರೂ ಒಟ್ಟಾರೆ ಫಲಿತಾಂಶದಲ್ಲಿ ಗುಣಾತ್ಮಕತೆಗೆ ಧಕ್ಕೆ ಬಂದಿಲ್ಲ. ಹೊಸ ಅಭ್ಯರ್ಥಿಗಳ ಫಲಿತಾಂಶ ಶೇ 82.38 ಬಂದಿದೆ. ಕಳೆದ ಬಾರಿಗೆ ಹೋಲಿಸಿದರೆ ಗಮನಾರ್ಹ ಸಾಧನೆ ಎಂದು ನಾಗೇಂದ್ರ ಪ್ರಸಾದ್ ತಿಳಿಸಿದರು.

                           ಗ್ರಾಮೀಣ ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಳ
ಕೋಲಾರ: ಕಳೆದ ಏಪ್ರಿಲ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ 47 ಶಾಲೆಗಳು ಪೂರ್ಣ ಫಲಿತಾಂಶ ಪಡೆದಿವೆ.ಕಳೆದ ವರ್ಷ ಶೇ.100 ಫಲಿತಾಂಶ ಗಳಿಸಿದ ಶಾಲೆಗಳ ಸಂಖ್ಯೆ 43 ಇತ್ತು. ಸರ್ಕಾರಿ ಶಾಲೆಗಳು-17, ಅನುದಾನಿತ ಶಾಲೆಗಳು-2 ಮತ್ತು ಅನುದಾನ ರಹಿತ ಶಾಲೆಗಳು 28 ಈ ಸಾಲಿಗೆ ಸೇರಿವೆ.
 
ಈ ಬಾರಿಯ ಫಲಿತಾಂಶದಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಗ್ರಾಮೀಣ ಭಾಗದ 6725 ಬಾಲಕರ ಪೈಕಿ 5380 ಮಂದಿ (ಶೇ.80). 6459 ಬಾಲಕಿಯರ ಪೈಕಿ 5,514 ಮಂದಿ ತೇರ್ಗಡೆಯಾಗಿದ್ದಾರೆ (ಶೇ 85.37).

ಪರೀಕ್ಷೆಗೆ ಹಾಜರಾದ 20,809 ವಿದ್ಯಾರ್ಥಿಗಳ ಪೈಕಿ 16,612 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಜಿಲ್ಲೆಯ 277 ಶಾಲೆಗಳ ಪೈಕಿ 198 ಶಾಲೆಗಳಿಗೆ ಶೇ.80ಕ್ಕಿಂತಲೂ ಹೆಚ್ಚಿನ ಫಲಿತಾಂಶ ದೊರೆತಿದೆ. 10,596 ಬಾಲಕರ ಪೈಕಿ 8,067 ಮತ್ತು 10,213 ಬಾಲಕಿಯರ ಪೈಕಿ 8,545 ಮಂದಿ ತೇರ್ಗಡೆಯಾಗಿದ್ದಾರೆ.
 
670 ಮಂದಿ ಅಗ್ರ ಶ್ರೇಣಿಯಲ್ಲಿ, 5,764 ಮಂದಿ ಪ್ರಥಮ ಶ್ರೇಣಿ, 3,811 ಮಂದಿ ದ್ವಿತೀಯ ಶ್ರೇಣಿ ಮತ್ತು 6,316 ಮಂದಿ ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಹೊಸದಾಗಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಫಲಿತಾಂಶ ಶೇ.82.38.

ಜಿಲ್ಲೆಯ 277 ಶಾಲೆಗಳ ಪೈಕಿ 84 ಸರ್ಕಾರಿ ಶಾಲೆ, 21 ಅನುದಾನಿತ ಮತ್ತು 93 ಅನುದಾನರಹಿತ ಶಾಲೆಗಳು ಶೇ.80ಕ್ಕಿಂತ ಹೆಚ್ಚು ಫಲಿತಾಂಶ ಪಡೆದಿವೆ.  ಶೇ.60 ರಿಂದ 80ರ ನಡುವಿನ ಫಲಿತಾಂಶ ಗಳಿಸಿದ ಶಾಲೆಗಳಲ್ಲಿ ಸರ್ಕಾರಿ ಶಾಲೆ-30, ಅನುದಾನಿತ-9, ಅನುದಾನ ರಹಿತ-6 ಶಾಲೆಗಳು ಸೇರಿವೆ. ಶೇ.40ಕ್ಕಿಂತ ಕಡಿಮೆ ಸಾಧನೆ ಮಾಡಿರುವ ಶಾಲೆಗಳ ಸಂಖ್ಯೆ ಕೇವಲ 7. ಶೂನ್ಯ ಫಲಿತಾಂಶ ಪಡೆದ ಯಾವುದೇ ಶಾಲೆ ಇಲ್ಲ.

ಸರ್ಕಾರಿ ಶಾಲೆಗಳಲ್ಲಿ 5353 ಬಾಲಕರ ಪೈಕಿ  3808 ಮಂದಿ ತೇರ್ಗಡೆಯಾಗಿದ್ದಾರೆ ( ಶೇ.71.08), 5,444 ಬಾಲಕಿಯರ ಪೈಕಿ 4351 ಮಂದಿ ತೇರ್ಗಡೆಯಾಗಿದ್ದಾರೆ (ಶೇ.79.92).  ಅನುದಾನಿತ ಶಾಲೆಗಳಲ್ಲಿ ಬಾಲಕರ ಸಾಧನೆ ಶೇ.73.86, ಬಾಲಕಿಯರ ಸಾಧನೆ 82.43. ಅನುದಾನ ರಹಿತ ಶಾಲೆಗಳಲ್ಲಿ ಬಾಲಕರ ಸಾಧನೆ 85.25, ಬಾಲಕಿಯರ ಸಾಧನೆ 93.2.

ನಗರ ಹಿನ್ನಡೆ:  ನಗರ ಪ್ರದೇಶದ 3871 ಬಾಲಕರ ಪೈಕಿ 2687 ಮಂದಿ (ಶೇ.69.41), 3754 ಬಾಲಕಿಯರ ಪೈಕಿ 3031 ಮಂದಿ ತೇರ್ಗಡೆಯಾಗಿದ್ದಾರೆ (ಶೇ.80.74). ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಫಲಿತಾಂಶದಲ್ಲೂ ಈ ಬಾರಿ ಏರಿಕೆ ಕಂಡು ಬಂದಿದೆ. ಬಾಲಕರು ಶೇ.75.55 ಮತ್ತು ಬಾಲಕಿಯರು ಶೇ.80.13 ಫಲಿತಾಂಶ ಗಳಿಸಿದ್ದಾರೆ. ನಗರ ಪ್ರದೇಶ ಶೇ 74.99 ಫಲಿತಾಂಶ ಪಡೆದಿದ್ದರೆ, ಗ್ರಾಮೀಣ ಪ್ರದೇಶ ಶೇ 82.63 ಫಲಿತಾಂಶ ಪಡೆದಿದೆ.

ವಿಷಯವಾರು ಫಲಿತಾಂಶ: ಪ್ರಥಮ ಭಾಷೆ-ಶೇ.87.03, ದ್ವಿತೀಯ ಭಾಷೆ-89.79,  ತೃತೀಯ ಭಾಷೆ-ಶೇ.91.40, ಗಣಿತ-ಶೇ.87.35,  ವಿಜ್ಞಾನ-83.84,  ಸಮಾಜ-87.83 ಫಲಿತಾಂಶ ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT