ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಜೆಆರ್ ಕಾಲೇಜಿಗೆ ಹುಸಿ ಬಾಂಬ್ ಕರೆ

Last Updated 6 ಜುಲೈ 2012, 19:35 IST
ಅಕ್ಷರ ಗಾತ್ರ

ಬೆಂಗಳೂರು:  ರಾಜಾಜಿನಗರ ನಾಲ್ಕನೇ ಹಂತದ ಎಸ್‌ಜೆಆರ್ ಮಹಿಳಾ ಕಾಲೇಜಿಗೆ ಶುಕ್ರವಾರ ಬೆಳಿಗ್ಗೆ ಬಂದ ಹುಸಿ ಬಾಂಬ್ ಕರೆಯಿಂದ ಕಾಲೇಜಿನಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಬೆಳಿಗ್ಗೆ 9.15 ಕ್ಕೆ ಅನಾಮಧೇಯ ವ್ಯಕ್ತಿಯೊಬ್ಬ ಕಾಲೇಜಿನ ಆಡಳಿತ ಕಚೇರಿಗೆ ಕರೆ ಮಾಡಿ, ಕಾಲೇಜಿನಲ್ಲಿ ಬಾಂಬ್ ಇಡಲಾಗಿದೆ ಎಂದು ತಿಳಿಸಿದ್ದಾನೆ. ಗಾಬರಿಗೊಂಡ ಕಾಲೇಜಿನ ಸಿಬ್ಬಂದಿ ಕೂಡಲೇ ಠಾಣೆಗೆ ವಿಷಯ ತಿಳಿಸ್ದ್ದಿದಾರೆ. ಸ್ಥಳಕ್ಕೆ ಬಂದ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಕಾಲೇಜನ್ನು ತಪಾಸಣೆ ಮಾಡಿದ ನಂತರ, ಹುಸಿ ಬಾಂಬ್ ಕರೆ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

`ಕಾಲೇಜಿನಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಕರೆ ಬಂದಾಗಲೇ ಇದೊಂದು ಹುಸಿ ಕರೆ ಇರಬಹುದು ಎಂಬ ಅನುಮಾನ ಇತ್ತು. ಆದರೆ 600  ವಿದ್ಯಾರ್ಥಿಗಳು ಹಾಗೂ 40 ಸಿಬ್ಬಂದಿ ಕಾಲೇಜಿನಲ್ಲಿದ್ದ ಸಂದರ್ಭದಲ್ಲಿ ಬಾಂಬ್ ಬೆದರಿಕೆಯನ್ನು ನಿರ್ಲಕ್ಷಿಸುವಂತಿರಲಿಲ್ಲ. ಬಾಂಬ್ ಬೆದರಿಕೆ ಕರೆಯ ಬಗ್ಗೆ ಹೇಳಿದ್ದರೆ ವಿದ್ಯಾರ್ಥಿಗಳು ಗಾಬರಿಗೊಳ್ಳಬಹುದಿತ್ತು. ಹೀಗಾಗಿ ಅನಿವಾರ್ಯ ಕಾರಣಗಳಿಂದ ತರಗತಿಗಳನ್ನು ರದ್ದುಗೊಳಿಸಲಾಗಿದೆ ಎಂದು ಘೋಷಿಸಲಾಯಿತು~ ಎಂದು ಕಾಲೇಜಿನ ಪ್ರಾಂಶುಪಾಲೆ ಡಾ.ಸರಸ್ವತಿ ತಿಳಿಸಿದರು.

`ವಿದ್ಯಾರ್ಥಿಗಳೆಲ್ಲಾ ಕೊಠಡಿಗಳಿಂದ ಹೊರಗೆ ಬಂದ ನಂತರ ಕಾಲೇಜಿನ ಸಿಬ್ಬಂದಿ ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಕಾಲೇಜಿನ ಇಂಚಿಂಚನ್ನೂ ಶೋಧಿಸಿದರು. ಎಲ್ಲೂ ಬಾಂಬ್ ಕಂಡು ಬರಲಿಲ್ಲ. ಕೊನೆಗೆ ಇದು ಹುಸಿ ಕರೆ ಎಂಬುದು ಸಾಬೀತಾಯಿತು~ ಎಂದು ಅವರು ಹೇಳಿದರು.

`ಸ್ಥಳೀಯ ಕಾಯಿನ್ ಬಾಕ್ಸ್‌ನಿಂದ ಕರೆ ಬಂದಿರುವುದು ಗೊತ್ತಾಗಿದೆ. ಕಾಯಿನ್ ಬಾಕ್ಸ್ ಮಾಲೀಕರನ್ನು ವಿಚಾರಿಸಿದಾಗ `ಯಾರು ಕರೆ ಮಾಡಿದ್ದಾರೆ ಎಂಬುದು ಗೊತ್ತಿಲ್ಲ~ ಎಂದು ಹೇಳಿಕೆ ನೀಡಿದ್ದಾರೆ ಎಂದು ಮಾಗಡಿ ರಸ್ತೆ ಪೊಲೀಸರು ತಿಳಿಸಿದ್ದಾರೆ.

ಬಿಗುವಿನ ವಾತಾವರಣ : ಬಾಂಬ್ ಕರೆಯಿಂದ ತರಗತಿಗಳಿಂದ ಆಚೆ ಬಂದ ವಿದ್ಯಾರ್ಥಿನಿಯರ ಮುಖಗಳಲ್ಲಿ ಆತಂಕ ಮನೆ ಮಾಡಿತ್ತು. ಕಾಲೇಜಿನ ಸುತ್ತಮುತ್ತ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

`ಪಾಠ ಕೇಳುತ್ತಾ ಕುಳಿತಿದ್ದೆವು. 9.30ರ ಹೊತ್ತಿಗೆ ತರಗತಿಗಳು ರದ್ದಾಗಿವೆ, ವಿದ್ಯಾರ್ಥಿಗಳು ಮನೆಗೆ ಹೊರಡಿ ಎಂದು ತಿಳಿಸಿದರು. ತರಗತಿಗಳಿಂದ ಹೊರ ಬಂದ ನಂತರ ಕಾಲೇಜಿಗೆ ಬಾಂಬ್ ಇಡಲಾಗಿದೆ ಎಂಬ ಕರೆ ಬಂದಿರುವ ಬಗ್ಗೆ ಕೇಳಿ ಭಯ ಶುರುವಾಯಿತು. ಆವರಣದಿಂದ ಹೊರ ಬಂದು ಕಾಲೇಜಿನ ಕಟ್ಟಡವನ್ನೇ ನೋಡುತ್ತಾ ನಿಂತೆವು. ಯಾವ ಕ್ಷಣದಲ್ಲಿ ಬಾಂಬ್ ಸ್ಫೋಟಿಸುತ್ತದೆಯೋ ಎಂಬ ಆತಂಕವಿತ್ತು~ ಎಂದು ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ರೇಖಾ ತಿಳಿಸಿದರು.

ಕಡಿವಾಣ ಅಗತ್ಯ
: `ನಗರದಲ್ಲಿ ಇಂಥ ಹುಸಿ ಕರೆಗಳು ಪದೇ ಪದೇ ಕೇಳಿ ಬರುತ್ತಿವೆ. ಇದಕ್ಕೆ ಸರಿಯಾದ ಕಡಿವಾಣ ಹಾಕಬೇಕಾದ ಅಗತ್ಯ ಇದೆ~ ಎಂದು ಪ್ರಾಂಶುಪಾಲೆ ಸರಸ್ವತಿ ಅಭಿಪ್ರಾಯಪಟ್ಟರು.

`ಹುಸಿ ಬಾಂಬ್ ಕರೆಗಳಿಂದ ವಿನಾ ಕಾರಣ ಭಯ ಹಾಗೂ ಆತಂಕವುಂಟಾಗುವ ಜತೆಗೆ ಸಂಸ್ಥೆಗಳ ಹಾಗೂ ಪೊಲೀಸ್ ಸಿಬ್ಬಂದಿಯ ಸಮಯವೂ ವ್ಯರ್ಥವಾಗುತ್ತದೆ. ಹುಸಿ ಕರೆಯಿಂದ ವಿದ್ಯಾರ್ಥಿಗಳ ಒಂದು ದಿನದ ತರಗತಿಗಳು ರದ್ದಾಗಿವೆ ಎಂದರು.
 

ಪತ್ತೆ ಹಚ್ಚುವುದು ಕಷ್ಟ

`ಕಿಡಿಗೇಡಿಗಳು ಕಾಯಿನ್ ಬಾಕ್ಸ್‌ನಿಂದ ಹುಸಿ ಕರೆ ಮಾಡುವುದರಿಂದ ಇಂಥ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವುದು ಕಷ್ಟ. ಒಂದರ ಹಿಂದೊಂದು ಇಂಥ ಪ್ರಕರಣಗಳು ನಡೆದರೆ ಪತ್ತೆ ಹಚ್ಚುವುದು ಸಾಧ್ಯವಾಗಬಹುದು.

ಆದರೆ, ಇಂಥ ಕರೆಗಳು ಬರುವುದು ಅಪರೂಪಕ್ಕೆ ಮಾತ್ರ. ಅಲ್ಲದೇ ಬಾಂಬ್ ಇಡುವವರು ಯಾರೂ ಕರೆ ಮಾಡಿ ತಿಳಿಸುವುದಿಲ್ಲ. ಹೀಗಾಗಿ ಇಂಥ ಕರೆಗಳನ್ನು ನಿರ್ಲಕ್ಷಿಸುವುದೇ ಒಳಿತು~ಎಂದು ಪಶ್ಚಿಮ ವಲಯ ಡಿಸಿಪಿ ಎಸ್.ಎನ್.ಸಿದ್ಧರಾಮಪ್ಪ `ಪ್ರಜಾವಾಣಿ~ ಜತೆ ಅಭಿಪ್ರಾಯಪಟ್ಟರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT