ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಬಿಎಂ ಶಾಖೆಯಲ್ಲಿ ಶಾರ್ಟ್ ಸರ್ಕೀಟ್

Last Updated 14 ಫೆಬ್ರುವರಿ 2012, 8:05 IST
ಅಕ್ಷರ ಗಾತ್ರ

ಬಳ್ಳಾರಿ: ನಗರದ ಸತ್ಯನಾರಾಯಣ ಪೇಟೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ರಾಘವೇಂದ್ರ ಕಾಲೊನಿಯ ಶಾಖೆಯಲ್ಲಿ ಸೋಮವಾರ ಬೆಳಗಿನ ಜಾವ ಶಾರ್ಟ್ ಸರ್ಕೀಟ್ ನಿಂದಾಗಿ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ವಿವಿಧ ಸಾಮಗ್ರಿಗಳು ಸುಟ್ಟು ಹಾಳಾಗಿವೆ.

ಬ್ಯಾಂಕಿನಲ್ಲಿರುವ ಕಂಪ್ಯೂಟರ್, ಎಸಿ ಸೇರಿದಂತೆ ಇತರ ವಸ್ತುಗಳು ಸಂಪೂರ್ಣ ಸುಟ್ಟಿವೆ. ಸೋಮವಾರ ಬೆಳಿಗ್ಗೆ ಬ್ಯಾಂಕಿನಲ್ಲಿರುವ ಸರ್ವರ್ ರೂಮಿನಲ್ಲಿರುವ ಎಸಿ ಶಾರ್ಟ್ ಸರ್ಕೀಟ್‌ನಿಂದ ಸ್ಫೋಟಗೊಂಡಿದ್ದರಿಂದ ಬೆಂಕಿ ಕಾಣಿಸಿಕೊಂಡಿದ್ದು, ಅನಾಹುತಕ್ಕೆ ಕಾರಣವಾಗಿದೆ. ತಕ್ಷಣವೇ ಬ್ಯಾಂಕಿನ ಹಿಂಭಾಗದ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸಕಾಲದಲ್ಲಿ ಸ್ಥಳಕ್ಕೆ ಆಗಮಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸರ್ವರ್ ರೂಂಗೆ ಬೆಂಕಿ ತಾಕಿದ್ದರಿಂದ ಎಸಿ ಯಂತ್ರಗಳು, ಪ್ರಿಂಟರ್, ಕಂಪ್ಯೂಟರ್‌ಗಳು ಸುಟ್ಟಿವೆ. ಸರ್ವರ್ ಯಂತ್ರ ಸುಟ್ಟಿದ್ದರಿಂದ ಸೋಮವಾರ ಬ್ಯಾಂಕಿನ ಗ್ರಾಹಕರಿಗೆ ತೊಂದರೆಯಾಗಿತ್ತು.

ಗ್ರಾಹಕರ ವಹಿವಾಟಿಗೆ ತೊಂದರೆ ಆಗುವುದನ್ನು ತಪ್ಪಿಸಲು ಬ್ಯಾಂಕ್ ಆಡಳಿತ ಅಧಿಕಾರಿಗಳು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಸಮೀಪದ ಶಾಖೆಗಳಿಂದಾಗಿ ವ್ಯವಹಾರ ನಿರ್ವಹಿಸಿ ಗ್ರಾಹಕರಿಗೆ ಅನುಕೂಲ ಮಾಡಿಕೊಟ್ಟು ಆತಂಕವನ್ನು ನಿವಾರಿಸಿದರು.

ಮಧ್ಯಾಹ್ನದ ನಂತರ ಹೊಸ ಸರ್ವರ್ ಅಳವಡಿಸಲಾಗಿತ್ತು. ಮಂಗಳವಾರ ಯತಾವತ್ತಾಗಿ ಕಾರ್ಯನಿರ್ವಹಣೆ ಆಗಲಿದೆ ಎಂದು ಎಸ್‌ಬಿಎಂ ಬಳ್ಳಾರಿ ಪ್ರಾದೇಶಿಕ ಕಚೇರಿ ಸಹಾಯಕ ಪ್ರಧಾನ ಪ್ರಬಂಧಕ ರಮೇಶಬಾಬು ತಿಳಿಸಿದ್ದಾರೆ.

ತೊಟ್ಟಿಗೆ ಬಿದ್ದು ವ್ಯಕ್ತಿ ಸಾವು

ಬಳ್ಳಾರಿ:
ನೀರಿನ ತೊಟ್ಟಿಯಲ್ಲಿ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಗರದ ಹೊರವಲಯದಲ್ಲಿರುವ ಹೊಸೂರ್ ಸ್ಟೀಲ್ಸ್‌ನಲ್ಲಿ ಸೋಮವಾರ ಸಂಭವಿಸಿದೆ.

ಗುಂತಕಲ್ ಮೂಲದ ಷೇಕ್‌ಜಾಫರ್ (23) ಮೃತ ವ್ಯಕ್ತಿ. ಕಾರ್ಖಾನೆಯಲ್ಲಿ ವಾಚ್‌ಮನ್ ಕೆಲಸ ಮಾಡುತ್ತಿದ್ದ ಅವರು ಬೆಳಿಗ್ಗೆ ಮುಖ ತೊಳಿಯಲು ನೀರಿನ ತೊಟ್ಟಿ ಬಳಿ ಹೋದಾಗ ಈ ಘಟನೆ ಸಂಭವಿಸಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಕಸ್ಮಿಕ ಬೆಂಕಿ ತಗುಲಿ ಮಹಿಳೆಯ ಸಾವು

ಕೂಡ್ಲಿಗಿ:
ಸೀಮೆ ಎಣ್ಣೆಯ ಸ್ಟೋವ್ ಹಚ್ಚುವಾಗ ಅಜಾಗರೂಕತೆಯಿಂದ ಬೆಂಕಿ ತಗುಲಿ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಇಲ್ಲಿಯ ಬಳ್ಳಾರಿಯ ವಿಮ್ಸಯಲ್ಲಿ ಭಾನುವಾರ ಮೃತಪಟ್ಟಿದ್ದಾರೆ.

ಪಟ್ಟಣದ ಕೆಎಚ್‌ಬಿ ಕಾಲೊನಿಯ ಮರಿಯಮ್ಮ (19) ಮೃತ ಮಹಿಳೆ.
ಮರಿಯಮ್ಮ ಕಳೆದ 6ರಂದು ರಾತ್ರಿ ವಿದ್ಯುತ್ ಇಲ್ಲದ ಸಂದರ್ಭದಲ್ಲಿ ತನ್ನ ಪತಿ ಮಲ್ಲೇಶನಿಗೆ ಸ್ನಾನಕ್ಕೆ ನೀರು ಕಾಯಿಸಲು ಸೀಮೆ ಎಣ್ಣೆ ಸ್ಟೋವ್ ಹಚ್ಚಲು ಯತ್ನಿಸುತ್ತಿದ್ದಾಗ ಮೈಮೇಲೆ ಎಣ್ಣೆ ಚೆಲ್ಲಿ, ಆಕಸ್ಮಿಕವಾಗಿ ಬೆಂಕಿ ತಗುಲಿದ್ದರಿಂದ ಗಾಯಗಳಾಗಿದ್ದವು.

ತಕ್ಷಣವೇ ಮರಿಯಮ್ಮ ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮರಿಯಮ್ಮ ಭಾನುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೂಡ್ಲಿಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT