ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು ಬೀಳು ಸಾಮಾನ್ಯ; ನಡೆ- ನುಡಿಯೇ ಮುಖ್ಯ

Last Updated 11 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): `ಜನಪ್ರಿಯತೆ ಬಗ್ಗೆ ನಾನು ಹೆಚ್ಚಿಗೆ ಗಮನ ಕೊಟ್ಟವನಲ್ಲ. ಜೀವನದಲ್ಲಿ ಏಳು- ಬೀಳು ಸಾಮಾನ್ಯ. ಮೇಲೆ ಹೋಗಿದ್ದೆಲ್ಲವೂ ಕೆಳಗೆ ಬರಲೇ ಬೇಕು.

ಇದಕ್ಕೆ ನಾನು ಅಪವಾದವೇನಲ್ಲ. ನಾನೂ ಎಲ್ಲರಂತೆ ಸಾಮಾನ್ಯ ವ್ಯಕ್ತಿ. ಎಲ್ಲ ಕಾಲದಲ್ಲೂ ನಮ್ಮ ನಡೆ- ನುಡಿ ಹೇಗಿತ್ತೆಂಬುದೇ ಅತಿ ಮುಖ್ಯವಾದುದು~ - ಇದು 70ನೇ ವರ್ಷಕ್ಕೆ ಕಾಲಿಟ್ಟಿರುವ ಬಾಲಿವುಡ್‌ನ ಖ್ಯಾತನ ನಟ ಅಮಿತಾಭ್ ಬಚ್ಚನ್ ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದ ನುಡಿಗಳು.

`ಯಶಸ್ಸು ಎನ್ನುವುದು ಸರ್ವಕಾಲವೂ ಇರುವಂತಹದಲ್ಲ. ಜೀವನದಲ್ಲಿ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ, ಮುಂದೆ ಬಂದರೆ ಯಶಸ್ಸು ಸಾಧಿಸಿದ್ದೇವೆ ಎನ್ನಲು ಅಡ್ಡಿಯಿಲ್ಲ~ ಎಂದು ನಾಲ್ಕು ದಶಕಗಳಿಂದ 180ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ `ಸೈ~ ಎನಿಸಿಕೊಂಡಿರುವ ಬಚ್ಚನ್ ಹೇಳಿದರು.

`ನಾನೇ ಸರ್ವ ಶ್ರೇಷ್ಠ ನಟ ಎಂದೇನು ನನಗೆ ಅನಿಸುವುದಿಲ್ಲ. ನನ್ನ ಸಮಕಾಲೀನರೇನೂ ಹಿಂದೆ ಬಿದ್ದವರಲ್ಲ. ನನ್ನ ಸಮಕಾಲೀನರು ನನಗಿಂತ ಹಿಂದೆ ಉಳಿದವರು ಎಂದುಕೊಂಡರೆ ಅದು ದೊಡ್ಡ ತಪ್ಪು~ ಎಂದರು.

`ಜಲ್ಸಾ~ದಲ್ಲಿ ಅಭಿಮಾನಿಗಳ ಜಾತ್ರೆ: ಮುಂಬೈನ ವಿಲೆ ಪಾರ್ಲೆಯಲ್ಲಿರುವ ಅಮಿತಾಭ್ ಬಚ್ಚನ್ ಅವರ ಬಂಗ್ಲೆ `ಜಲ್ಸಾ~ ಮುಂದೆ ಅಭಿಮಾನಿಗಳು ಜಾತ್ರೆಯೇ ನೆರೆದಿತ್ತು. ಬಚ್ಚನ್ ಅವರ ನಟಿಸಿರುವ ಸಿನಿಮಾ ಹಾಡುಗಳನ್ನು ಗುನುಗುಟ್ಟುತ್ತ ಗಂಟೆಗಟ್ಟಲೆ ಕಾದು ತಮ್ಮ ನೆಚ್ಚಿನ ನಟನನ್ನು ಕಣ್ತುಂಬ ಕಾಣಲು ತವಕಿಸಿದರು.

ಹರಿಯಾಣ, ಪಂಜಾಬ್ ಮತ್ತಿತರ ಕಡೆಗಳಿಂದಲೂ ಅಭಿಮಾನಿಗಳು ಬಂದಿದ್ದರು. ಹಲವರು ಹೋಮ- ಹವನ ನಡೆಸಿ ಸಿಹಿ ವಿತರಣೆ ಮಾಡಿದರು. ಅನೇಕರು ಅಮಿತಾಭ್ ಅವರ ಭಾವ ಚಿತ್ರವಿದ್ದ ಟಿ- ಶರ್ಟ್‌ಗಳನ್ನು ಧರಿಸಿ ಸಂಭ್ರಮಿಸಿದರು. ಅಭಿಮಾನಿಗಳಿಗೆ ನಿರಾಶೆ ಮಾಡದ ಬಚ್ಚನ್ `ಸೆವೆನ್ ಹಿಲ್ಸ್~ ಆಸ್ಪತ್ರೆಗೆ ಹೋಗುವುದಕ್ಕೂ ಮುನ್ನ ಎಲ್ಲರತ್ತ ಕೈ ಬೀಸಿ ಹೋದರು.

ಅಂಧೇರಿಯಲ್ಲಿರುವ ಈ ಆಸ್ಪತ್ರೆಯಲ್ಲಿ ಬಚ್ಚನ್ ಅವರು ತಮಗೆ ಬ್ರಿಟನ್ ಉಪ ಹೈಕಮಿಷನರ್ ಅವರು ಉಡುಗೊರೆಯಾಗಿ ನೀಡಿದ ಸಂಚಾರಿ ಮಧುಮೇಹ ತಪಾಸಣಾ ಘಟಕವನ್ನು ಸ್ವೀಕರಿಸಿದರು.

`ಬಿ 70~ ಔತಣಕೂಟ: ದಿಲೀಪ್‌ಕುಮಾರ್, ಸಾಯಿರಾ ಬಾನು, ಶಾರೂಕ್ ಖಾನ್ ಇನ್ನಿತರ ಖ್ಯಾತ ನಾಮರು. ರಾಜಕೀಯ, ಉದ್ಯಮ ವಲಯದ ಗಣ್ಯರು ಬುಧವಾರ ರಾತ್ರಿ ಬಚ್ಚನ್ ಅವರ ಕುಟುಂಬದವರು ಏರ್ಪಡಿಸಿದ್ದ `ಬಿ 70~ ಹುಟ್ಟುಹಬ್ಬದ ಔತಣ ಕೂಟದಲ್ಲಿ ಭಾಗವಹಿಸಿದ್ದರು.

ಬಚ್ಚನ್ ಅವರ ಈ 70ನೇ ಹುಟ್ಟುಹಬ್ಬಕ್ಕೆ ಮೊಮ್ಮಗಳು ಆರಾಧ್ಯಾ (ಅಭಿಷೇಕ್ ಬಚ್ಚನ್- ಐಶ್ವರ್ಯಾ ರೈ ಪುತ್ರಿ) ಕೂಡ ಸಾಕ್ಷಿಯಾದಳು.

ಬಚ್ಚನ್ ಚಪ್ಪಲಿ ಪೂಜಿಸಿದ ಅಭಿಮಾನಿಗಳು: ಕೋಲ್ಕತ್ತ ವರದಿ: ಅಮಿತಾಭ್ ಬಚ್ಚನ್ 70ನೇ ಜನ್ಮದಿನದ ಅಂಗವಾಗಿ ಕೋಲ್ಕತ್ತದಲ್ಲಿ ಅಭಿಮಾನಿಗಳು ಅವರ ಚಪ್ಪಲಿಯನ್ನು ಇಟ್ಟು ಗುರುವಾರ ಪೂಜಿಸಿದರು. `ಅಗ್ನಿಪಥ್~ ಚಿತ್ರದಲ್ಲಿ ಬಚ್ಚನ್ ಅವರು ಧರಿಸಿದ್ದ ಚಪ್ಪಲಿಯನ್ನು `ಅಕ್ಸ್~ ಚಿತ್ರದಲ್ಲಿ ಅವರು ಕುಳಿತಿದ್ದ ಕುರ್ಚಿಯ ಮೇಲೆ ಇಟ್ಟು ಪೂಜಿಸಲಾಯಿತು.
 

ಅಮಿತಾಭ್‌ಗೆ ಪೆಟಾ ಉಡುಗೊರೆ

ನಾಸಿಕ್ (ಪಿಟಿಐ): ಮೆಗಾ ಸ್ಟಾರ್ ಅಮಿತಾಭ್ ಬಚ್ಚನ್ ಗುರುವಾರ ತಮ್ಮ 70ನೇ ಜನ್ಮದಿನ ಆಚರಿಸಿಕೊಂಡ ಸಂದರ್ಭದಲ್ಲಿ ಅವರಿಗೆ ಅವಿಸ್ಮರಣೀಯ ಉಡುಗೊರೆಯೊಂದು ದೊರೆತಿದೆ.

ದೀರ್ಘಕಾಲ ರಕ್ತಹಿನತೆಯಿಂದ ಬಳಲುತ್ತಿದ್ದ ಎತ್ತೊಂದನ್ನು ರಕ್ಷಿಸಿರುವ ಪ್ರಾಣಿ ದಯಾ ಸಂಘ (ಪೆಟಾ), ಇದಕ್ಕೆ `ವಿಜಯ್~ ಎಂಬ ಹೆಸರನ್ನಿಟ್ಟಿದೆ. `ವಿಜಯ್~ ಎಂಬುದು ಅಮಿತಾಭ್ ನಟಿಸಿರುವ ಹಲವು ಚಿತ್ರಗಳಲ್ಲಿ ಅವರ ಪಾತ್ರದ ಹೆಸರು. ಈ ಮೂಲಕ ಪೇಟಾ ಅಮಿತಾಭ್‌ಗೆ ಗೌರವ ಸಲ್ಲಿಸಿದೆ.
 ಬಹಳ ಕಾಲದಿಂದ ಅಮಿತಾಭ್ ಸಸ್ಯಹಾರಿಯಾಗ್ದ್ದಿದಾರೆ. ಪೆಟಾ ನೀಡುವ `ಹಾಟೆಸ್ಟ್ ವೆಜಿಟೇರಿಯನ್ ಸೆಲೆಬ್ರಿಟಿ~ ಗೌರವಕ್ಕೆ ಸತತ ಮೂರು ವರ್ಷಗಳಿಂದ ಪಾತ್ರರಾಗಿದ್ದಾರೆ. ಈ ಅಂಶವೇ ಎತ್ತಿಗೆ `ವಿಜಯ್~ ಎಂಬ ಹೆಸರಿಡಲು ಸ್ಫೂರ್ತಿ ಎಂದು ಪೆಟಾ ಅಧಿಕಾರಿಗಳು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

 ಶುಭಾಶಯದ ಮಹಾಪೂರ

`ಅಮಿತಾಭ್ ನಿಷ್ಕಪಟ ಮತ್ತು ವೃತ್ತಿಪರ ನಟ: ಕೆಲಸದಲ್ಲಿ ಪರಿಶ್ರಮಿ. ಆದ್ದರಿಂದಲೇ ಅವರು ಇಷ್ಟು ದೀರ್ಘ ಕಾಲ ನಟನೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಯಿತು. ಭಾರತೀಯ ಸಿನಿಮಾದಲ್ಲಿ ಅದ್ಭುತ ಹೆಸರು ಮಾಡಿದ `ಶೋಲೆ~ಯಲ್ಲಿ ಅವರೊಂದಿಗೆ ಕೆಲಸ ಮಾಡಿದ ಎಂಬುದು ದೊಡ್ಡ ಗೌರವ.
 
-ರಮೇಶ್ ಸಿಪ್ಪಿ, ನಿರ್ದೇಶಕ

ಅವರೊಂದು ಅದ್ಭುತ: `ಸಿನಿಮಾದಲ್ಲಿ ಅವರು ಬೆಳೆದು ಬಂದ ಬಗೆಯೇ ಒಂದು ಅತ್ಯಮೋಘ. ಅವರು ನಿರ್ವಹಿಸಿದ್ದಷ್ಟು ಸವಾಲಿನ ಪಾತ್ರಗಳನ್ನು ಬೇರೊಬ್ಬರು ಮಾಡುವುದು ಕಷ್ಟಸಾಧ್ಯ. ಒಟ್ಟಾರೆ ಅವರೊಂದು ಅದ್ಭುತ~
 
-ಶ್ರೀದೇವಿ, ನಟಿ

ಹಾಡುಗಳನ್ನು ಗುನಗುಡುತ್ತಲೇ ಬೆಳೆದವನು: `ಅಮಿತಾಭ್ ಮತ್ತು ಜಯಾ ಅವರೊಂದಿಗೆ ನರ್ತಿಸಿದೆ. ನಾನು ಅವರ ಹಾಡುಗಳನ್ನು ಗುನಗುಡುತ್ತಲೇ ಬೆಳೆದವನು. ಬುಧವಾರ ರಾತ್ರಿ ನಡೆದ ಹುಟ್ಟುಹಬ್ಬದ ಪಾರ್ಟಿಯಲ್ಲಿ ಮಜಾವೇ ಮಜಾ~

 - ಶಾರೂಕ್ ಖಾನ್, ನಟ (ಟ್ವಿಟರ್‌ನಲ್ಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT