ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು ಸಲ ಬೀಗರಿಗೇ ಒಲಿದ ಅದೃಷ್ಟ

Last Updated 7 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ವಿಜಾಪುರ:  ಹೂವಿನ ಹಿಪ್ಪರಗಿ (ಈಗ ದೇವರ ಹಿಪ್ಪರಗಿ) ಕ್ಷೇತ್ರದಿಂದ ಸಂಬಂಧಿಗಳಾದ ಬಿ.ಎಸ್. ಪಾಟೀಲ (ಸಾಸನೂರ) ಹಾಗೂ ಶಿವಪುತ್ರಪ್ಪ ದೇಸಾಯಿ ಸರದಿಯಂತೆ ಗೆಲ್ಲುತ್ತಿದ್ದರು. ಈ ಇಬ್ಬರೂ ಬಸವನ ಬಾಗೇವಾಡಿ ತಾಲ್ಲೂಕು ಸಾಸನೂರ ಗ್ರಾಮದವರು. ಮೇಲಾಗಿ ಅವರ ಮನೆಗಳೂ ಅಲ್ಲಿ ಎದುರು ಬದುರು ಇವೆ.

1978ರಿಂದ 2004ರ ಚುನಾವಣೆ ವರೆಗೆ ಈ ಬೀಗರ `ಸರದಿ ವಿಜಯ' ಮುಂದುವರೆದಿತ್ತು. ಕ್ಷೇತ್ರ ಪುನರ್ ವಿಂಗಡಣೆಯ ನಂತರ ಅವರಿಬ್ಬರ ಅದೃಷ್ಟವೂ ಕೈಕೊಟ್ಟಿತು.

2008ರಲ್ಲಿ ಈ ಕ್ಷೇತ್ರದ ಹೆಸರು ದೇವರ ಹಿಪ್ಪರಗಿ ಎಂದು ಬದಲಾಯಿತು. ಬಸವನ ಬಾಗೇವಾಡಿ ತಾಲ್ಲೂಕಿನ ನಿಡಗುಂದಿ ಹೋಬಳಿ ಕೈಬಿಟ್ಟು, ಸಿಂದಗಿ ತಾಲ್ಲೂಕಿನ ದೇವರ ಹಿಪ್ಪರಗಿ ಹೋಬಳಿಯನ್ನು ಈ ಕ್ಷೇತ್ರದಲ್ಲಿ ಸೇರಿಸಲಾಯಿತು.

ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಿ.ಎಸ್. ಪಾಟೀಲ (ಸಾಸನೂರ) ಅವರಿಗೆ ಟಿಕೆಟ್ ನೀಡಲಿಲ್ಲ. ಎ.ಎಸ್. ಪಾಟೀಲ (ನಡಹಳ್ಳಿ) ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಆಯ್ಕೆಯಾದರು. ಆಗ ಹಾಲಿ ಶಾಸಕರಾಗಿದ್ದ ಶಿವಪುತ್ರಪ್ಪ ದೇಸಾಯಿ ಅವರಿಗೂ ಬಿಜೆಪಿ ಟಿಕೆಟ್ ಕೊಡಲಿಲ್ಲ.

ಬಸನಗೌಡ ಪಾಟೀಲ ಯತ್ನಾಳ ಆ ಪಕ್ಷದಿಂದ ಕಣಕ್ಕಿಳಿದು ಪರಾಭವಗೊಂಡರು. ಬಿ.ಎಸ್. ಪಾಟೀಲ ತಟಸ್ಥರಾದರೆ, ಶಿವಪುತ್ರಪ್ಪ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತರು.

ಹೂವಿನ ಹಿಪ್ಪರಗಿ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದ್ದು 1967ರಲ್ಲಿ. ಆಗ ಕಾಂಗ್ರೆಸ್‌ನ ಪಿ.ಜಿ. ನಿಂಗನಗೌಡ, 1972ರಲ್ಲಿ  ಸಂಸ್ಥಾ ಕಾಂಗ್ರೆಸ್‌ನ ಕೆ.ಡಿ. ಪಾಟೀಲ (ಉಕ್ಕಲಿ) ಆಯ್ಕೆಯಾಗಿದ್ದರು. ಆ ನಂತರ ನಡೆದ ಏಳು ಚುನಾವಣೆಗಳಲ್ಲಿ ಬೀಗರದ್ದೇ ಪಾರುಪತ್ಯ.

ಬಿ.ಎಸ್. ಪಾಟೀಲ ಸಾಸನೂರ 1978ರಲ್ಲಿ ಜನತಾ ಪಕ್ಷಕ್ಷದಿಂದ ಆಯ್ಕೆಯಾದರೆ, 1983ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪುನರಾಯ್ಕೆಯಾದರು.

1985ರ ಚುನಾವಣೆಯಲ್ಲಿ ಶಿವಪುತ್ರಪ್ಪ ದೇಸಾಯಿ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. 1989 ಮತ್ತು 1999ರ ಚುನಾವಣೆಗಳಲ್ಲಿ ಪಾಟೀಲ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದರೆ, 1994ರ ಚುನಾವಣೆಯಲ್ಲಿ ಜನತಾ ದಳ ಹಾಗೂ 2004ರ ಚುನಾವಣೆಯಲ್ಲಿ ಬಿಜೆಪಿಯಿಂದ ದೇಸಾಯಿ ಆಯ್ಕೆಯಾದರು.

ವೀರಪ್ಪ ಮೊಯಿಲಿ ಅವರ ಸಂಪುಟದಲ್ಲಿ ಬಿ.ಎಸ್ ಪಾಟೀಲ (ಸಾಸನೂರ) ಅವರು ಆರೋಗ್ಯ ಖಾತೆ ಹಾಗೂ ಎಸ್.ಎಂ. ಕೃಷ್ಣ ಸಂಪುಟದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿದ್ದರು. ಶಿವಪುತ್ರಪ್ಪ ದೇಸಾಯಿ ಅವರು ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಭೂಸೇನಾ ನಿಗಮದ ಅಧ್ಯಕ್ಷರಾಗಿದ್ದರು.

ಕೆಪಿಸಿಸಿ ಉಪಾಧ್ಯಕ್ಷರಾಗಿದ್ದ ಹಿರಿಯ ಕಾಂಗ್ರೆಸ್ಸಿಗ ಬಿ.ಎಸ್. ಪಾಟೀಲ ಸಾಸನೂರ ಈಗ ತಟಸ್ಥರಾಗಿದ್ದಾರೆ. ಅವರ ಪುತ್ರ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಸೋಮನಗೌಡ ಪಾಟೀಲ ಬಿಜೆಪಿ ಟಿಕೆಟ್‌ನಿಂದ ಈ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಮುಂದಾಗಿದ್ದಾರೆ. ಶಿವಪುತ್ರಪ್ಪ ದೇಸಾಯಿ ಬಿಎಸ್‌ಆರ್ ಕಾಂಗ್ರೆಸ್‌ನ ಜಿಲ್ಲಾ ಘಟಕದ ಅಧ್ಯಕ್ಷರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT