ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಎಸ್ ಅಧಿಕಾರಿ, ಎಂಜಿನಿಯರ್‌ಗಳು...

ಕಣದಲ್ಲಿ ಹೊಸಮುಖಗಳು
Last Updated 19 ಏಪ್ರಿಲ್ 2013, 13:13 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ವಿಧಾನಸಭಾ ಚುನಾವಣೆಯಲ್ಲಿ ಈ ಸಲವೂ ಹಳಬರು ಮೇಲುಗೈ ಸಾಧಿಸ್ದ್ದಿದಾರೆ. ಕೆಲ ಹೊಸ ಮುಖಗಳಿಗೂ ಅವಕಾಶ ಸಿಕ್ಕಿದೆ. ಇವರಲ್ಲಿ  ಅನೇಕರು ಉನ್ನತ ಶಿಕ್ಷಣದ ಹಿನ್ನೆಲೆ ಹೊಂದಿದ್ದಾರೆ ಎಂಬುದೇ ಈ ಸಲದ ಚುನಾವಣಾ ಕಣದ ವಿಶೇಷ.

ಸ್ವಯಂ ನಿವೃತ್ತಿ ಪಡೆದ ಐಎಎಸ್ ಅಧಿಕಾರಿ, ಪೊಲೀಸ್ ಅಧಿಕಾರಿ, ಎಂಜಿನಿಯರಿಂಗ್‌ನಲ್ಲಿ ರ‌್ಯಾಂಕ್ ವಿಜೇತರು ಸಹ ಕಣದಲ್ಲಿದ್ದಾರೆ. ರಾಜಕಾರಣದ ಕನಸು ಹೊತ್ತು ಬಂದಿರುವ ಶಿಕ್ಷಿತರಿಗೆ ಮತದಾರರು ಮಣೆ ಹಾಕುವರೆ? ಎಂಬುದನ್ನು ಕಾದು ನೋಡಬೇಕಿದೆ.

ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಹಾಗೂ ಕೆಜೆಪಿ ಹೊಸ ಮುಖಗಳನ್ನು ಕಣಕ್ಕಿಳಿಸಿರುವ ಪ್ರಮುಖ ಪಕ್ಷಗಳು. ಜತೆಗೆ ಬಿಎಸ್‌ಆರ್, ಜೆಡಿಯು ಸಹ ಹಿಂದೆ ಬಿದ್ದಿಲ್ಲ. ಕೆಲವರು ಪಕ್ಷೇತರರಾಗಿ ಕಣದಲ್ಲಿದ್ದಾರೆ. ಪ್ರಮುಖ ನಾಲ್ಕು ಪಕ್ಷಗಳ ಹೊಸ ಮುಖಗಳ ಪರಿಚಯ `ಪ್ರಜಾವಾಣಿ' ಓದುಗರಿಗಾಗಿ ಇಲ್ಲಿದೆ.

ಐಎಎಸ್ ಅಧಿಕಾರಿ: ಮಧುಗಿರಿ ತಾಲ್ಲೂಕು ಜಿಲ್ಲೆಯ ಕುತೂಹಲದ ಕ್ಷೇತ್ರ, ಜೆಡಿಎಸ್‌ನ ಅನಿತಾ ಕುಮಾರಸ್ವಾಮಿ ಪ್ರತಿನಿಧಿಸಿದ್ದ ಮಧುಗಿರಿ ಕ್ಷೇತ್ರಕ್ಕೆ ಸತತ ಎರಡನೇ ಸಲ ಹೊಸ ಮುಖಕ್ಕೆ ಅವಕಾಶ ನೀಡಲಾಗಿದೆ.

ಜೆಡಿಎಸ್ ಅಭ್ಯರ್ಥಿ ವೀರಭದ್ರಯ್ಯ ಸ್ವಯಂ ನಿವೃತ್ತಿ ಪಡೆದ ಐಎಎಸ್ ಅಧಿಕಾರಿ. ಇನ್ನೂ ಎರಡೂವರೆ ವರ್ಷ ಸೇವೆ ಬಾಕಿ ಇರುವಾಗಲೇ ಸ್ವಯಂ ನಿವೃತ್ತಿ ಪಡೆದು ರಾಜಕೀಯ ಅಖಾಡ ಪ್ರವೇಶಿಸಿದ್ದಾರೆ.

ವಿದ್ಯಾರ್ಥಿ ದೆಸೆಯಿಂದಲೇ ಮಧುಗಿರಿ ಜೊತೆ ನಂಟು ಬೆಳೆಸಿಕೊಂಡಿರುವ ವೀರಭದ್ರಯ್ಯ ಮೂಲತಃ ಮಣ್ಣೆಯವರು. ಬೆಂಗಳೂರು ವಿ.ವಿ ರಾಜಕೀಯಶಾಸ್ತ್ರದಲ್ಲಿ ಎಂಎ ಪದವೀಧರ. ಕೆಲಕಾಲ ಉಪನ್ಯಾಸಕರಾಗಿದ್ದರು. ನಂತರ ಕೆಎಎಸ್ ತೇರ್ಗಡೆಯಾಗಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಯಾಗಿ ಆಡಳಿತ ಸೇವೆಗೆ ಸೇರ್ಪಡೆಯಾದರು. ಎರಡನೇ ಸಲ ಕೆಎಎಸ್ ಪರೀಕ್ಷೆ ಬರೆದು ಅತ್ಯುತ್ತಮ ಅಂಕಗಳಿಸಿ ಉಪ ವಿಭಾಗಾಧಿಕಾರಿಯಾಗಿ (ಎಸಿ) ಆಯ್ಕೆಯಾದರು.

ಕಾರವಾರ, ಹಾಸನ, ಬೆಂಗಳೂರಿನಲ್ಲಿ ಎಚ್‌ಕ್ಯುಎ, ಎಸಿಯಾಗಿ ಕೆಲಸ. ಮೈಸೂರು ವಿ.ವಿ ಕುಲಪತಿಯಾಗಿ (ಮೌಲ್ಯಮಾಪನ) ಸೇವೆ. ಬೆಂಗಳೂರು ಕಾರ್ಪೋರೇಷನ್‌ನಲ್ಲಿ ಡಿಸಿ, ಬೆಂಗಳೂರು ವಿಶೇಷ ಜಿಲ್ಲಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದವರು. ಈಚೆಗಷ್ಟೇ ಐಎಎಸ್‌ಗೆ ಬಡ್ತಿ ಪಡೆದಿದ್ದು, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಮಧುಗಿರಿ ಜೊತೆಗಿನ ನಿರಂತರ ಸಂಪರ್ಕ ಈಗ ಅವರ ರಾಜಕೀಯಕ್ಕೆ ಬಾಗಿಲು ತೆರೆದಿದೆ. ಉಪ ಚುನಾವಣೆಯಲ್ಲೇ ಜೆಡಿಎಸ್ ಅಭ್ಯರ್ಥಿಯಾಗಬೇಕಿತ್ತು. ಆದರೆ ಸರ್ಕಾರ ಸ್ವಯಂ ನಿವೃತ್ತಿ ಅಂಗೀಕರಿಸದ ಕಾರಣ ಆಸೆ ಈಡೇರಿರಲಿಲ್ಲ.

ಮತ್ತೊಬ್ಬ ಅಧಿಕಾರಿ: ಕೊರಟಗೆರೆ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಬುಲ್ಲಾ ಸುಬ್ಬರಾವ್ ನಿವೃತ್ತ ಐಎಎಸ್ ಅಧಿಕಾರಿ. ಇವರು ಕೂಡ ಮೊದಲ ಸಲ ಚುನಾವಣಾ ಪರೀಕ್ಷೆಗೆ ಇಳಿದಿದ್ದಾರೆ. ಪ್ರೊಬೆಷನರಿ ಜಿಲ್ಲಾಧಿಕಾರಿಯಾಗಿ ತುಮಕೂರಿನಲ್ಲಿ ಕೆಲಸ ಮಾಡಿದ್ದಾರೆ. ನಾಗವಲ್ಲಿ ಗ್ರಾಮದಲ್ಲಿ ಒಂದೂವರೆ ವರ್ಷ ವಾಸವಿದ್ದರು.

ಕೊರಟಗೆರೆ ಕ್ಷೇತ್ರದಲ್ಲಿ ಜೆಡಿಎಸ್ ಹೊಸ ಮುಖಕ್ಕೆ ಮಣೆ ಹಾಕಿದೆ. ಆದರೆ ಅಭ್ಯರ್ಥಿ ಸುಧಾಕರಲಾಲ್ ಸತತ ಮೂರು ಸಲ ಜಿಲ್ಲಾ ಪಂಚಾಯಿತಿ ಸದಸ್ಯರು. ವಿಧಾನಸಭೆಗೆ ಮೊದಲ ಸಲ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕೊರಟಗೆರೆ ಅಕ್ಕಿರಾಂಪುರದ ತೋಟದ ಮನೆಯವರು.

ಬಿಇ ಪದವೀಧರ. ತುಮಕೂರು ಎಸ್‌ಐಟಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು. ನಂತರ ಎನ್‌ಎಸ್‌ಯುಐ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದರು. ಪತ್ನಿ ಶ್ರೀರೂಪಾ ಕೆಎಎಸ್ ಅಧಿಕಾರಿ. ಲಾಲ್ ಮೊದಲಿನಿಂದಲೂ ಪಾವಗಡದಲ್ಲಿ ಇಂಡಿಯನ್ ಆಯಿಲ್ ಕಂಪೆನಿಯ ಗ್ಯಾಸ್ ಏಜೆನ್ಸಿ ನಡೆಸುತ್ತಿದ್ದಾರೆ. ಅಲ್ಲದೆ ಅಕ್ಕಿರಾಂಪುರದಲ್ಲಿ ಕುರಿ ಸಾಕಾಣಿಕೆಯಲ್ಲೂ ತೊಡಗಿದ್ದಾರೆ. ಜಿ.ಪಂ.ಗೆ ಮೊದಲ ಯತ್ನದಲ್ಲೇ ಗೆಲುವು ಸಾಧಿಸಿ ರಾಜಕೀಯ ರಂಗ ಪ್ರವೇಶಿಸಿದವರು. ಈಗ ವಿಧಾನಸಭೆಯ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಎಂಜಿನಿಯರಿಂಗ್ ಪದವೀಧರ: ತುಮಕೂರು ಕ್ಷೇತ್ರದಲ್ಲಿ ಇಬ್ಬರು ಹೊಸಬರಿದ್ದಾರೆ. ಕೆಜೆಪಿ ಅಭ್ಯರ್ಥಿ ಜ್ಯೋತಿ ಗಣೇಶ್, ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಇಬ್ಬರೂ ಹೊಸಬರು. ಜ್ಯೋತಿ ಗಣೇಶ್ ಬಿಇ ಎಂಬಿಎ ಪದವೀಧರ. ಬಿಇ ರ‌್ಯಾಂಕ್ ವಿಜೇತ. ತಂದೆ ಜಿ.ಎಸ್.ಬಸವರಾಜ್ ಸಂಸದರು. ಹೀಗಾಗಿ ರಾಜಕೀಯದ ನಂಟಿದೆ. ಆದರೆ ಇದೇ ಮೊದಲ ಸಲ ಚುನಾವಣಾ ಕಣಕ್ಕೆ ದುಮುಕಿದ್ದಾರೆ. ಗುಬ್ಬಿಯಲ್ಲಿರುವ ಚನ್ನಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಕಾರ್ಯದರ್ಶಿಯಾಗಿದ್ದು, ಕೆಲ ಸೀಟ್‌ಗಳನ್ನು ಬಡ ಮಕ್ಕಳಿಗೆ ಉಚಿತವಾಗಿ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಕೂಡ ಮೊದಲ ಸಲ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಾಂಗ್ರೆಸ್‌ನಲ್ಲಿದ್ದವರು ಜೆಡಿಎಸ್‌ಗೆ ಜಿಗಿದು ಟಿಕೆಟ್ ಪಡೆದಿದ್ದಾರೆ. ಡಿಪ್ಲೋಮಾ ಶಿಕ್ಷಣ ಪಡೆದಿದ್ದಾರೆ. ಮೂಲತಃ ಉದ್ಯಮಿ. ನಗರದಲ್ಲಿ ಉಚಿತವಾಗಿ ನೀರು ಕೊಡುವ ಕೆಲಸ ಮಾಡುತ್ತಿದ್ದಾರೆ.

ತುಮಕೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಡಿಟರ್ ನಾಗರಾಜ್ ಬಿಕಾಂ, ಎಸಿಎಸ್ ಪದವೀಧರ. ಮೊದಲು ಸಲ ಚುನಾವಣಾ ಕಣದಲ್ಲಿದ್ದಾರೆ.

ಮೂವರು ಹೊಸಬರು: ಗುಬ್ಬಿ ಕ್ಷೇತ್ರದಲ್ಲಿ ಕೆಜೆಪಿ, ಬಿಜೆಪಿ, ಕಾಂಗ್ರೆಸ್ ಮೂರು ಪಕ್ಷಗಳು ಹೊಸ ಮುಖಗಳನ್ನೇ ಕಣಕ್ಕಿಳಿಸಿವೆ. ಕೆಜೆಪಿ ಅಭ್ಯರ್ಥಿ ಬೆಟ್ಟಸ್ವಾಮಿ ಈಗಾಗಲೇ ಗುಬ್ಬಿ ಪಟ್ಟಣ ಪಂಚಾಯಿತಿ ಸದಸ್ಯರಾಗಿದ್ದವರು. ಮೊದಲ ಸಲ ವಿಧಾನಸಭೆಗೆ ಸ್ಪರ್ಧಿಸುತ್ತಿದ್ದಾರೆ. ಮೂಲತಃ ಕೃಷಿಕ. ನಾಲ್ಕನೇ ತರಗತಿವರೆಗೆ ಓದಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಹೊನ್ನಗಿರಿಗೌಡ ಕೂಡ ಮೊದಲ ಸಲ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಾಳೇನಹಳ್ಳಿಯವರಾದ ಇವರು ಜೀವನ ಅರಸಿ ಸಣ್ಣದರಲ್ಲೇ ಬೆಂಗಳೂರಿಗೆ ಹೋದವರು. ಮದ್ಯದಂಗಡಿಗಳ ಮಾಲೀಕ. ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ.
ಬಿಜೆಪಿ ಅಭ್ಯರ್ಥಿ ಸಾಗರನಹಳ್ಳಿ ನಟರಾಜ್ ರಾಜಕೀಯ ಕುಟುಂಬದಿಂದಲೇ ಬಂದವರು. ಎಂಕಾಂ ಪದವೀಧರ. ಅಡಿಟರ್ ವೃತ್ತಿಯಲ್ಲಿದ್ದಾರೆ. ಇವರ ತಂದೆ ಸಾಗರನಹಳ್ಳಿ ರೇವಣ್ಣ, ರಾಮಕೃಷ್ಣ ಹೆಗ್ಡೆ ಸರ್ಕಾರದಲ್ಲಿ ಬಂಧೀಖಾನೆ ಸಚಿವರಾಗಿದ್ದರು. ಹೀಗಾಗಿ ರಾಜಕೀಯ ನಂಟಿದೆ.

ಪೊಲೀಸ್ ಗತ್ತು: ತಿಪಟೂರು ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿ ಲೋಕೇಶ್ವರ್ ಹೊಸ ಮುಖ. ಬಿಎ, ಎಂಪಿಇಡಿ ಪದವೀಧರ. ಬೆಂಗಳೂರು ವಿಧಾನಸೌಧ ಭದ್ರತಾ ವಿಭಾಗದ ಎಸಿಪಿಯಾಗಿದ್ದ ಇವರು ಸ್ವಯಂ ನಿವೃತ್ತಿ ಪಡೆದು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ತಾಲ್ಲೂಕಿನ ಗುಡ್ಡದ ಪಾಳ್ಯ ಸ್ವಂತ ಊರು. ಅವರ ತಂದೆ ತಿಪಟೂರಿನಲ್ಲಿ ಹೋಟೆಲ್ ನಡೆಸುತ್ತಿದ್ದರು. ರಾಜಕೀಯ ಆಸೆಯಿಂದಲೇ ಮೊದಲಿನಿಂದಲೂ ಕ್ಷೇತ್ರದೊಂದಿಗೆ ಒಡನಾಟ ಇಟ್ಟುಕೊಂಡಿದ್ದವರು. ಇದೇ ಮೊದಲ ಸಲ ಪರೀಕ್ಷೆಗೆ ಇಳಿದಿದ್ದಾರೆ.

ಮಹಿಳೆಗೆ ಅವಕಾಶ: ತುರುವೇಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಗೀತಾ ರಾಜಣ್ಣ ಹೊಸ ಮುಖ. ಬೆಂಗಳೂರಿನವರಾದ ಇವರು ಸಿ.ಎಸ್.ಪುರ ಹೋಬಳಿ ಸೊಸೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮೈಕ್ರೋ ಬಯೋಲಜಿ ಸ್ನಾತಕೋತ್ತರ ಪದವೀಧರೆ. ಜಿಲ್ಲಾ ಪಂಚಾಯಿತಿ ಚುನಾವಣೆಗೆ ನಿಂತು ಸೋತಿದ್ದರು. ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಹಾಗೂ ಕೆಪಿಸಿಸಿ ಸದಸ್ಯೆಯೂ ಹೌದು.
ಕೆಜೆಪಿ ಅಭ್ಯರ್ಥಿಯಾಗಿರುವ ಮಸಲಾ ಜಯರಾಮ್ ಕೂಡ ಮೊದಲ ಸಲ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸಿ.ಎಸ್.ಪುರ ಹೋಬಳಿ ಅಂಕಲಕೊಪ್ಪದವರು. ಮಸಾಲೆ ಪುಡಿ ಮಾರಾಟಗಾರರು. ಎಸ್‌ಎಸ್‌ಎಲ್‌ಸಿ ಶಿಕ್ಷಣ ಪಡೆದಿದ್ದಾರೆ.

ಬಿಜೆಪಿಯ ಸೋಮಶೇಖರ್ ಬ್ಯಾಲಹಳ್ಳಿಯವರು. ಜೆಡಿಎಸ್‌ನಲ್ಲಿ ಶಾಸಕ ಕೃಷ್ಣಪ್ಪ ಜತೆಗೆ ಜಗಳ ಮಾಡಿಕೊಂಡು ಸಿಡಿದು ಬಿಜೆಪಿಗೆ ಬಂದು ಮೊದಲ ಬಾರಿ ಸ್ಪರ್ಧೆಯಲ್ಲಿದ್ದಾರೆ. ಪಿಯುಸಿ ಶಿಕ್ಷಣ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT