ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಐಎಸ್ಸಿ ಪ್ರತಿಭಾ ವಿಕಾಸ ಕೇಂದ್ರ ಲೋಕಾರ್ಪಣೆ

Last Updated 26 ಫೆಬ್ರುವರಿ 2011, 16:55 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕುದಾಪುರದಲ್ಲಿ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯ ಎರಡನೇ ಶಾಖೆಯ ಕಾರ್ಯ ಚಟುವಟಿಕೆಗಳಿಗೆ ಶನಿವಾರ ಅಧಿಕೃತವಾಗಿ ಚಾಲನೆ ನೀಡಲಾಯಿತು. ಈ ಮೂಲಕ ವೈಜ್ಞಾನಿಕ ನಕಾಶೆಯಲ್ಲಿ ಕುದಾಪುರ ಗುರುತಿಸಿಕೊಂಡಿದೆ.

ಸಂಸ್ಥೆಯ ಶತಮಾನೋತ್ಸವದ ಕೊಡುಗೆಯಾಗಿ ಕುದಾಪುರದಲ್ಲಿನ 1500 ಎಕರೆ ಜಮೀನಿನಲ್ಲಿ ಈ ಶಾಖೆ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ ಪ್ರತಿಭಾ ವಿಕಾಸ ಕೇಂದ್ರವನ್ನು ತೆರೆಯಲಾಗಿದೆ.

ಈ ಕೇಂದ್ರದಲ್ಲಿ ಪ್ರಥಮ ಹಂತದಲ್ಲಿ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಯ ವಿಜ್ಞಾನ ಶಿಕ್ಷಕರಿಗೆ ತರಬೇತಿ ನೀಡಲಾಗುವುದು. ಒಂದು ವರ್ಷದಲ್ಲಿ 10 ಶಿಕ್ಷಕರ ತಂಡಗಳಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದ್ದು, ಪ್ರತಿ ತಂಡದಲ್ಲಿ 100 ಶಿಕ್ಷಕರಿಗೆ ವೈಜ್ಞಾನಿಕ ಸಂಶೋಧನೆ ಮತ್ತು ಬೋಧನೆ ಇತ್ಯಾದಿ ವಿಷಯಗಳ ಕುರಿತು ತರಬೇತಿ ನಡೆಯಲಿದೆ.

ಪ್ರಸ್ತುತ ಕೇಂದ್ರದಲ್ಲಿ ಒಂದು ಸುಸಜ್ಜಿತ ರಾಸಾಯನಿಕ ಮತ್ತು ಕಂಪ್ಯೂಟರ್ ಪ್ರಯೋಗಾಲಯ ಹಾಗೂ ಎರಡು ಉಪನ್ಯಾಸ ಕೊಠಡಿಗಳನ್ನು ಆರಂಭಿಸಲಾಗಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ವಿಜ್ಞಾನಿಗಳು ಶೈಕ್ಷಣಿಕ ಚಟುವಟಿಕೆ ಜತೆಗೆ ಕೃಷಿಕರಿಗೆ ಅನುಕೂಲವಾಗುವ ಸಂಶೋಧನೆಗಳನ್ನು ಕೈಗೊಳ್ಳಬೇಕು. ರೈತರು ವೈಜ್ಞಾನಿಕವಾಗಿ ಬೆಳೆ ಬೆಳೆಯುವಂತೆ ವಾತಾವರಣ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು.

ವಿಜ್ಞಾನಿಗಳ ಸಂಶೋಧನೆಯ ಫಲ ರೈತರಿಗೆ ದೊರೆಯಬೇಕು. ಕೃಷಿ ಉತ್ಪನ್ನಗಳ ಸಂಸ್ಕರಣೆ, ವಿದ್ಯುತ್ ಕೊರತೆ ನೀಗಿಸುವುದು ಮುಂತಾದ ವಿಷಯಗಳ ಬಗ್ಗೆ ವಿಜ್ಞಾನಿಗಳು ಗಮನ ಹರಿಸಬೇಕು ಎಂದರು.

ಸಂಸ್ಥೆಯ ಈ ಶಾಖೆಯಲ್ಲಿ ಸೌರಶಕ್ತಿ ಮೂಲಕ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಅಗತ್ಯವಿರುವ 10 ಕೋಟಿ ರೂ ಅನುದಾನ ನೀಡುವ ಬಗ್ಗೆ ಬಜೆಟ್‌ಗೆ ಉತ್ತರ ನೀಡುವ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಸಂಸ್ಥೆಯ ನಿರ್ದೇಶಕ ಪ್ರೊ.ಪಿ. ಬಲರಾಮ್ ಮಾತನಾಡಿ, ವೈಜ್ಞಾನಿಕ ಚಟುವಟಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿಭಾ ವಿಕಾಸ ಕೇಂದ್ರವನ್ನು ಕುದಾಪುರದಲ್ಲಿ ಆರಂಭಿಸಲು ನಿರ್ಧರಿಸಲಾಯಿತು. ಇದರಿಂದ ರಾಜ್ಯದ ಶಿಕ್ಷಕರು ಲಾಭ ಪಡೆಯಲಿದ್ದಾರೆ ಎಂದರು.

ಈ ಶಾಖೆಯಲ್ಲಿ ಸೌರಶಕ್ತಿ ಬಳಕೆ ಮತ್ತು ಜಲಸಂಪನ್ಮೂಲ ವಿಷಯ ಕುರಿತು ಸಂಶೋಧನೆ ನಡೆಯಲಿವೆ. ಜತೆಗೆ ಅತಿಮುಖ್ಯವಾಗಿ ಇಲ್ಲಿ ಸ್ಥಾಪನೆಯಾಗಲಿರುವ ‘ಸಿಂಕ್ರೊಟ್ರಾನ್’ನ ಅತ್ಯಾಧುನಿಕ ಪ್ರಯೋಗಾಲಯ ದೇಶ ವಿದೇಶದ ವಿಜ್ಞಾನಿಗಳ ಗಮನ ಸೆಳೆಯಲಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT