ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ ವಿನಾಯ್ತಿ ಮಿತಿ 3 ಲಕ್ಷಕ್ಕೆ?

Last Updated 24 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮುಂದಿನ ಹಣಕಾಸು ವರ್ಷದಿಂದ ಆದಾಯ ತೆರಿಗೆ ಗರಿಷ್ಠ ವಿನಾಯ್ತಿ ಮಿತಿಯನ್ನು   ಗರಿಷ್ಠ ರೂ 3 ಲಕ್ಷದವರೆಗೆ ಹೆಚ್ಚಿಸಲು ನೇರ ತೆರಿಗೆ ನೀತಿ ಸಂಹಿತೆ (ಡಿಟಿಸಿ) ಪರಿಶೀಲಿಸುತ್ತಿರುವ  ಹಣಕಾಸು ಸ್ಥಾಯಿ ಸಮಿತಿಯು ಒಮ್ಮತದಿಂದ ಶಿಫಾರಸು ಮಾಡುವ ಸಾಧ್ಯತೆಗಳಿವೆ.

ವಾರ್ಷಿಕ ಆದಾಯ ತೆರಿಗೆ ಮಿತಿಯನ್ನು ರೂ 3 ಲಕ್ಷಕ್ಕೆ ಹೆಚ್ಚಿಸುವ ಕುರಿತು ಸ್ಥಾಯಿ ಸಮಿತಿ ಸದಸ್ಯರಲ್ಲಿ ಒಮ್ಮತ ಮೂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಬಿಜೆಪಿ ಮುಖಂಡ ಯಶವಂತ ಸಿನ್ಹಾ ನೇತೃತ್ವದಲ್ಲಿ ಶುಕ್ರವಾರ ಇಲ್ಲಿ ಸಭೆ ಸೇರಿದ್ದ ಸ್ಥಾಯಿ ಸಮಿತಿ ಸಭೆಯಲ್ಲಿ ಈ ಬಗ್ಗೆ ವಿವರವಾಗಿ ಚರ್ಚಿಸಿ ಸರ್ವಾನುಮತದ ತೀರ್ಮಾನಕ್ಕೆ ಬರಲಾಗಿದೆ. ಸದ್ಯದ ರೂ 1.80 ಲಕ್ಷದಿಂದ ರೂ 3 ಲಕ್ಷಕ್ಕೆ ಹೆಚ್ಚಿಸುವುದು ಇಂದಿನ ಅಗತ್ಯವಾಗಿದೆ.

ಗರಿಷ್ಠ ಹಣದುಬ್ಬರದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಆದಾಯ ತೆರಿಗೆ ಪಾವತಿಸುವವರಿಗೆ ಪರಿಹಾರ ನೀಡಲು ಈ ವಿನಾಯ್ತಿ ಮಟ್ಟ ಹೆಚ್ಚಿಸುವ ಅಗತ್ಯ ಇದೆ ಎಂದು ಸಮಿತಿಯ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.

ಭವಿಷ್ಯ ನಿಧಿ, ಜೀವ ವಿಮೆ, ಮಕ್ಕಳ ಶಿಕ್ಷಣ, ಮೂಲ ಸೌಕರ್ಯ ಬಾಂಡ್‌ಗಳಲ್ಲಿ ಹಣ ತೊಡಗಿಸುವುದಕ್ಕೆ ಸಂಬಂಧಿಸಿದಂತೆ ತೆರಿಗೆ ವಿನಾಯ್ತಿ ಮಿತಿಯನ್ನೂ ಸದ್ಯದ ರೂ 1.20 ಲಕ್ಷದಿಂದ ರೂ 2.5 ಲಕ್ಷಕ್ಕೆ ಹೆಚ್ಚಿಸಬೇಕು ಎಂದೂ ಸದಸ್ಯರು ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸದ್ಯಕ್ಕೆ, ನಿರ್ದಿಷ್ಟ ಉಳಿತಾಯ ಯೋಜನೆಗಳಲ್ಲಿ ತೊಡಗಿಸುವ  ರೂ 1 ಲಕ್ಷದಷ್ಟು ಮೊತ್ತವನ್ನು ಆದಾಯ ತೆರಿಗೆಗೆ ಒಳಪಡುವ ಮೊತ್ತದಲ್ಲಿ ಕಡಿತ (ತೆರಿಗೆ ವಿನಾಯ್ತಿ) ಮಾಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ದೀರ್ಘಾವಧಿ ಬಾಂಡ್‌ಗಳಲ್ಲಿ ರೂ 20 ಸಾವಿರದವರೆಗೆ ತೊಡಗಿಸುವ ಮೊತ್ತವನ್ನೂ ತೆರಿಗೆಯಿಂದ ಹೊರತುಪಡಿಸಲಾಗುತ್ತಿದೆ.`ಡಿಟಿಸಿ~ಗೆ ಸಂಬಂಧಿಸಿದಂತೆ ಹಣಕಾಸು ಸ್ಥಾಯಿ ಸಮಿತಿಯು ಮಾರ್ಚ್ 2ರಂದು ತನ್ನ ಶಿಫಾರಸುಗಳನ್ನು ಅಂತಿಮಗೊಳಿಸಲಿದೆ. ಸಮಿತಿಯು ಮಾರ್ಚ್ 3ನೇ ವಾರದಲ್ಲಿ ತನ್ನ ವರದಿಯನ್ನು ಸಂಸತ್ತಿಗೆ ಸಲ್ಲಿಸಲಿದೆ.

ಕಾಂಗ್ರೆಸ್ ಒತ್ತಾಯ: ಆದಾಯ ತೆರಿಗೆ ಹಂತಗಳನ್ನು ಹೆಚ್ಚಿಸುವ ಮತ್ತು `ಎಲ್ಲರನ್ನೂ ಓಲೈಸುವಂತಹ~ ಬಜೆಟ್ ಮಂಡಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT