ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ಗ್ರಾಮಕ್ಕೆ ಇಲ್ಲ ಸೇತುವೆ

Last Updated 4 ಡಿಸೆಂಬರ್ 2013, 6:44 IST
ಅಕ್ಷರ ಗಾತ್ರ

ಬೇಲೂರು: ಮಲೆನಾಡಿನಿಂದ ಆವೃತವಾಗಿರುವ ಪುಟ್ಟ ಗ್ರಾಮ ದಬ್ಬೆ. ಹೊಯ್ಸಳರ ಕಾಲದಲ್ಲಿಯೇ ಉನ್ನತಿಯಲ್ಲಿದ್ದ ಈ ಗ್ರಾಮ ಭವ್ಯ ಇತಿಹಾಸ ಹೊಂದಿದೆ. ಈ ಗ್ರಾಮದಲ್ಲಿ ಸಮಸ್ಯೆಗಳು ಅಷ್ಟಾಗಿಲ್ಲದಿದ್ದರೂ ಊರಿನ ಸಮೀಪ ಹರಿಯುತ್ತಿರುವ ಯಗಚಿ ನದಿಗೆ ಸೇತುವೆ ನಿರ್ಮಿಸಿ ಗೆಂಡೇಹಳ್ಳಿ ಭಾಗದ ಗ್ರಾಮಗಳಿಗೆ ಹೋಗಲು ಅನುಕೂಲ ಕಲ್ಪಿಸಬೇಕೆಂಬ ಗ್ರಾಮಸ್ಥರ ಬೇಡಿಕೆ ಹಲವು ವರ್ಷಗಳಿಂದ ಬೇಡಿಕೆಯಾಗಿಯೇ ಉಳಿದಿದೆ.

ದಬ್ಬೆ ಅಗ್ರಹಾರ ಎಂದೇ ಕರೆಯಲ್ಪಡುವ ಈ ಗ್ರಾಮದ ಮೂಲ ಹೆಸರು ‘ದರ್ವೇ’ ಎಂದಾಗಿತ್ತು. ‘ಕಲ್ಯಾಣ ಚಾಲುಕ್ಯರ 6ನೇ ವಿಕ್ರಮಾದಿತ್ಯನ ಸಾಮ್ರಾಜ್ಯದಲ್ಲಿ ಹೊಯ್ಸಳರ ಆರಂಭಿಕರಲ್ಲಿ ಒಬ್ಬನಾದ 1ನೇ ಬಲ್ಲಾಳನು ಮಹಾ ಮಂಡಲೇಶ್ವರ ನಾಗಿದ್ದಾಗ ದಬ್ಬೆ ಗ್ರಾಮದ ಕೂಬೆಗಾವುಂಡ ಎಂಬಾತನು ದಬ್ಬೆ ಗ್ರಾಮದಲ್ಲಿ ಒಂದು ಶಿವಾಲಯ ನಿರ್ಮಿಸಿ ಅದಕ್ಕೆ ಕೂಬೇಶ್ವರ ಎಂದು ಹೆಸರಿಟ್ಟಿದ್ದನು.

ಮಹಾ ಮಂಡಲೇಶ್ವರನಾಗಿದ್ದ 1ನೇ ಬಲ್ಲಾಳನು ಬೇಲೂರಿನಿಂದ ತಮ್ಮ ಮೂಲ ಸ್ಥಾನ ಅಂಗಡಿ ಅಥವಾ ಸೊಸೆಯೂರು ಗ್ರಾಮಕ್ಕೆ ದರ್ವೇ ಗ್ರಾಮದ ಮೂಲಕ ಪ್ರಯಾಣ ಮಾಡುವ ಸಂದರ್ಭ ಕೂಬೆಗಾವುಂಡನ ವಿನಂತಿಯ ಮೇರೆಗೆ ದಬ್ಬೆ ಊರಿನ ಕೂಬೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರನ್ನು ಪೂಜಿಸಿ ಒಂದು ಕಲ್ಲಿನ ಮಂಟಪವನ್ನು ಕಟ್ಟಿಸಿ ಕೊಟ್ಟಿದ್ದನಲ್ಲದೆ, ಕೆಲವು ಭೂಮಿಯನ್ನು ದಾನವಾಗಿ ನೀಡಿದ್ದನು’ ಎಂಬುದರ ಉಲ್ಲೇಖ ಹಾಲಿ ಸೋಮೇಶ್ವರ ದೇವಾಲಯದ ಮುಂದಿರುವ ಎರಡು ಶಾಸನಗಳ ಮೂಲಕ ತಿಳಿಯುತ್ತದೆ ಎಂದು ಸಂಶೋಧಕ ಡಾ.ಶ್ರೀವತ್ಸ ಎಸ್‌. ವಟಿ ಮಾಹಿತಿ ನೀಡಿದ್ದಾರೆ.

ಹೊಯ್ಸಳರ ಕಾಲದಲ್ಲಿ ದರ್ವೇ ಗ್ರಾಮವಾಗಿದ್ದ ಈ ಗ್ರಾಮ ದಬ್ಬೆ ಗ್ರಾಮವಾಗಿ ಮಾರ್ಪಾಡಾಗಿದೆ. ಪುರಾತನ ದಬ್ಬೆ ಗ್ರಾಮ ಇತ್ತೀಚೆಗೆ ಸ್ಥಳಾಂತರಗೊಂಡಿದ್ದು, ಕಾಡು ಮತ್ತು ಪೊದೆಗಳಿಂದ ಆವೃತ್ತವಾಗಿದೆ. ಕೂಬೇಶ್ವರ ದೇವಾಲಯವು ಹೊಸ ಗ್ರಾಮಾಂತರಕ್ಕೆ ಸ್ಥಳಾಂತರಗೊಂಡು ಸೋಮೇಶ್ವರ ದೇವಾಲಯವಾಗಿ ನಾಮಾಂತರಗೊಂಡಿದೆ. 20 ವರ್ಷಗಳ ಹಿಂದೆಯೂ ದಬ್ಬೆ ಗ್ರಾಮ ಕಾಡಿನಿಂದ ಆವೃತ್ತವಾಗಿತ್ತು. ಗ್ರಾಮದ ಸಮೀಪದಲ್ಲಿದ್ದ ದಬ್ಬೆ ಗುಡ್ಡ ಹುಲಿ, ಚಿರತೆಗಳ ವಾಸ ಸ್ಥಾನವೂ ಆಗಿತ್ತು. ಈಗಲೂ ದಬ್ಬೆ ಗುಡ್ಡವಿದ್ದು, ಅಲ್ಲಿ ಹೇರಳವಾಗಿ ನವಿಲುಗಳು ವಾಸಿಸುತ್ತಿವೆ. ಚಿರತೆಗಳು ಇವೆ ಎಂದು ಹೇಳಲಾಗುತ್ತದೆ.

ಮೂಲತಃ ಅಗ್ರಹಾರವಾಗಿದ್ದ ದಬ್ಬೆ ಗ್ರಾಮದಲ್ಲಿ ದಶಕಗಳ ಹಿಂದೆ ಬ್ರಾಹ್ಮಣರು ಹೆಚ್ಚಾಗಿ ವಾಸಿಸುತ್ತಿದ್ದರು. ಉದ್ಯೋಗ ಅರಸಿ ಬ್ರಾಹ್ಮಣರು ಬೇರೆಡೆ ತೆರಳಿದ್ದಾರೆ. ದಬ್ಬೆ ಕೃಷ್ಣಮೂರ್ತಿಯವರ ಕುಟುಂಬ ಸೇರಿದಂತೆ ಈಗ ಕೇವಲ ಮೂರು ಕುಟುಂಬಗಳು ಇಲ್ಲಿ ವಾಸವಾಗಿವೆ.

ಸೇತುವೆಯೇ ಪ್ರಮುಖ ಬೇಡಿಕೆ
ಇಷ್ಟೆಲ್ಲಾ ಇತಿಹಾಸ ಹೊಂದಿರುವ ದಬ್ಬೆ ಗ್ರಾಮದಲ್ಲಿ ಸಮಸ್ಯೆಗಳು ಅಷ್ಟಾಗಿಲ್ಲ. ಸುಮಾರು 60 ಕುಟುಂಬಗಳು ಮತ್ತು 350ರಷ್ಟು ಜನರು ಇಲ್ಲಿ ವಾಸವಾಗಿದ್ದಾರೆ. ಈ ಗ್ರಾಮದ ಜನರ ಬಹು ವರ್ಷಗಳ ಬೇಡಿಕೆ ಊರಿನ ಸಮೀಪ ಹರಿಯುವ ಯಗಚಿ ನದಿಗೆ ಸೇತುವೆ ನಿರ್ಮಿಸಿ ಕೊಡಿ ಎಂಬುದು.

ಇದಕ್ಕೂ ಕಾರಣವಿದೆ. ಯಗಚಿ ನದಿಗೆ ಸೇತುವೆ ನಿರ್ಮಿಸಿದರೆ ದಬ್ಬೆಯಿಂದ– ಬಾಣಸವಳ್ಳಿ ಮಾರ್ಗವಾಗಿ ಗೆಂಡೇಹಳ್ಳಿಗೆ, ಮೂಡಿಗೆರೆ ಸಮೀಪದ ದಾರಿಯಾಗಲಿದೆ. ಸದ್ಯ ಗೆಂಡೇಹಳ್ಳಿಗೆ ತಲುಪಬೇಕೆಂದರೆ ಸುಮಾರು 20 ಕಿ.ಮೀ. ಬಳಸಿ ಹಾದಿಯಲ್ಲಿ ಕ್ರಮಿಸಬೇಕಾಗಿದೆ.
ಈ ಸೇತುವೆ ನಿರ್ಮಾಣದಿಂದ ಈ ಭಾಗದ ಸುಮಾರು 20 ಹಳ್ಳಿಗಳ ಜನರಿಗೆ ಸಂಪರ್ಕ ದೊರಕಲಿದೆ. ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಈ ಭಾಗದ ಜನರು ಶಾಸಕರು ಸೇರಿದಂತೆ ಜನಪ್ರತಿನಿಧಿಗಳ ಮೊರೆ ಹೋಗುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಲಿ ಶಾಸಕ ವೈ.ಎನ್‌. ರುದ್ರೇಶ್‌ಗೌಡ ಈ ಬಗ್ಗೆ ಗಮನಹರಿಸಿ ಸೇತುವೆ ನಿರ್ಮಿಸಿ ಕೊಡಬೇಕೆಂಬುದು ಜನರ ಆಗ್ರಹವಾಗಿದೆ.

ದಬ್ಬೆ ಗ್ರಾಮಕ್ಕೆ ಬೇಲೂರಿನಿಂದ ರಸ್ತೆ ಮತ್ತು ಬಸ್‌ ಸೌಕರ್ಯ ಉತ್ತಮವಾಗಿದೆ. ಕುಡಿಯುವ ನೀರಿನ ಸಮಸ್ಯೆ ಇಲ್ಲಿಲ್ಲ. ಕಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಗ್ರಾಮ ಪಂಚಾಯಿತಿ ಇಲ್ಲಿದೆ. ದಬ್ಬೆ ಗ್ರಾಮದಲ್ಲಿರುವ ಕೃಷಿ ಪತ್ತಿನ ಸಹಕಾರ ಸಂಘ ಉತ್ತಮವಾಗಿ ನಡೆಯುತ್ತಿದೆ. ಸಂಘದ ಲಾಭದ ಹಣದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿರುವುದು ಇಲ್ಲಿನ ಹೆಗ್ಗಳಿಕೆಯಾಗಿದೆ. ಪೂರ್ಣ ಮಲೆನಾಡು ಪ್ರದೇಶವಾಗಿರುವ ದಬ್ಬೆ ಗ್ರಾಮದ ಜನರ ಪ್ರಮುಖ ಬೆಳೆ ಕಾಫಿ, ಮೆಣಸು, ಕಿತ್ತಳೆ ಮತ್ತು ಭತ್ತವಾಗಿದೆ.

ನಾಡಿನ ಪ್ರಖ್ಯಾತ ಸಾಹಿತಿ ಅತಿಮಬ್ಬೆ ಪ್ರಶಸ್ತಿ ಪುರಸ್ಕೃತರಾದ ವಿಜಯಾ ದಬ್ಬೆ ಇದೇ ಊರಿನವರು ಎಂಬುದು ಹೆಮ್ಮೆಯ ವಿಷಯ. ಈಗಲೂ ವಿಜಯಾ ದಬ್ಬೆಯವರು ಇದೇ ಗ್ರಾಮದಲ್ಲಿ ತಮ್ಮ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದಾರೆ. ಒಟ್ಟಾರೆ ಹಲವು ವಿಷಯಗಳಲ್ಲಿ ಪ್ರಸಿದ್ಧಿ ಪಡೆದಿರುವ ಈ ಗ್ರಾಮದ ಮತ್ತಷ್ಟು ಅಭಿವೃದ್ಧಿಯನ್ನು ಹೊಂದಬೇಕು ಎಂಬುದು ಗ್ರಾಮಸ್ಥರ ಆಶಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT