ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್ ಹರಾಜು: ಆರ್‌ಸಿಬಿ ತೆಕ್ಕೆಗೆ ವಿನಯ್ ಕುಮಾರ್

Last Updated 4 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಿರೀಕ್ಷೆ ಸುಳ್ಳಾಗಲಿಲ್ಲ! ಶುಕ್ರವಾರವಷ್ಟೇ       ಮೆಲ್ಬರ್ನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಲ್‌ರೌಂಡ್ ಪ್ರದರ್ಶನದ ಮೂಲಕ `ಪಂದ್ಯ ಶ್ರೇಷ್ಠ~ ಎನಿಸಿದ್ದ ರವೀಂದ್ರ ಜಡೇಜಾ ಶನಿವಾರ ಉದ್ಯಾನ ನಗರಿಯಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಮಾರಾಟವಾದರು.

ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುತ್ತಾ ಹೋದ ಬಿಡ್ಡಿಂಗ್‌ನಲ್ಲಿ ಜಡೇಜಾ 9.71 ಕೋಟಿ ರೂಪಾಯಿ ಮೊತ್ತಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾದರು. ಈ ಆಲ್‌ರೌಂಡರ್ ಆಟಗಾರನನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಆರಂಭದಿಂದಲೂ ಡೆಕ್ಕನ್ ಚಾರ್ಜಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪೈಪೋಟಿ ಏರ್ಪಟ್ಟಿತ್ತು.

ಉಭಯ ಫ್ರಾಂಚೈಸಿಗಳು ತಲಾ 9.71 ಕೋಟಿ ರೂಪಾಯಿ ಹಣ ನೀಡಿ ಖರೀದಿಸಲು ಮುಂದಾದವು. ಆದರೆ ಇದಕ್ಕಿಂತ ಹೆಚ್ಚು ಬಿಡ್ ಮಾಡಲು ಉಭಯ ಫ್ರಾಂಚೈಸಿಗಳ ಬಳಿ ನಿಗದಿತ ಮೊತ್ತ ಇರಲಿಲ್ಲ. ಹಾಗಾಗಿ ಹರಾಜು ಪ್ರಕ್ರಿಯೆ ನಡೆಸಿಕೊಟ್ಟ ಇಂಗ್ಲೆಂಡ್‌ನ ರಿಚರ್ಡ್ ಮೆಡ್ಲೆ ಟೈ ಬ್ರೇಕರ್‌ಗೆ ಮುಂದಾದರು. ಇದರಲ್ಲಿ ಮಹೇಂದ್ರ ಸಿಂಗ್ ದೋನಿ ಸಾರಥ್ಯದ ಚೆನ್ನೈ ಯಶಸ್ವಿಯಾಯಿತು.

ಆದರೆ ಸ್ಥಳೀಯ ಆಟಗಾರ ಹಾಗೂ ಟ್ವೆಂಟಿ-20 ಪರಿಣತ ಬೌಲರ್ ಆರ್.ವಿನಯ್ ಕುಮಾರ್ ಅವರನ್ನು ತಮ್ಮತ್ತ ಸೆಳೆದುಕೊಳ್ಳುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಪ್ಪು ಮಾಡಲಿಲ್ಲ. ಈ ತಂಡದ ಮಾಲೀಕ ಸಿದ್ದಾರ್ಥ್ ಮಲ್ಯ, ಮುಖ್ಯ ಸಲಹೆಗಾರ ಅನಿಲ್ ಕುಂಬ್ಳೆ ಹಾಗೂ ಸಿಇಒ ಬ್ರಿಜೇಶ್ ಪಟೇಲ್ ವಿನಯ್ ಅವರಿಗೆ 4.86 ಕೋಟಿ ನೀಡಿ ಖರೀದಿಸಿದರು. ಅವರಿಗೆ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ಹಾಗೂ ದೆಹಲಿ ಡೇರ್‌ಡೆವಿಲ್ಸ್ ಸಾಕಷ್ಟು ಪೈಪೋಟಿ ನೀಡಿದವು.

ಐಪಿಎಲ್‌ನ ಮೊದಲ ಮೂರು ಅವತರಣಿಕೆಯಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಪರ ಆಡಿದ್ದ `ದಾವಣಗೆರೆ ಎಕ್ಸ್‌ಪ್ರೆಸ್~ ಖ್ಯಾತಿಯ ವಿನಯ್ ನಾಲ್ಕನೇ ಅವತರಣಿಕೆಯಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳ ತಂಡ ಪ್ರತಿನಿಧಿಸಿದ್ದರು. ಈಗ ಮತ್ತೆ ವಾಪಾಸಾಗಿದ್ದಾರೆ.

`ವಿನಯ್ ಪ್ರತಿಭಾವಂತ ಆಟಗಾರ. ಅವರು ತಮ್ಮ ಸಾಮರ್ಥ್ಯವೇನು ಎಂಬುದನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತೋರಿಸಿದ್ದಾರೆ. ಅವರನ್ನು ಈ ಬಾರಿಯ ಹರಾಜಿನಲ್ಲಿ ಪಡೆಯಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಅದರಲ್ಲಿ ಯಶಸ್ವಿಯಾಗಿದ್ದೇವೆ~ ಎಂದು ಸಿದ್ದಾರ್ಥ್ ನುಡಿದರು.



ಬೆಂಗಳೂರು ತಂಡದವರು ಸ್ಪಿನ್ ದಂತಕಥೆ ಮುತ್ತಯ್ಯ ಮುರಳೀಧರನ್ ಅವರಿಗೂ ಗಾಳ ಹಾಕಿದರು. 1.06 ಕೋಟಿ ರೂ. ನೀಡಿ ತಂಡದ ಸ್ಪಿನ್ ಬಲವನ್ನು ಹೆಚ್ಚಿಸಿಕೊಂಡರು. `ನಮ್ಮ ತಂಡದ ನಾಯಕ ಡೇನಿಯಲ್ ವೆಟೋರಿ. ನಮ್ಮ ತಂಡದ ಸಲಹೆಗಾರ ಅನಿಲ್ ಕುಂಬ್ಳೆ. ಇವರೆಲ್ಲಾ ಸ್ಪಿನ್ ಬೌಲರ್‌ಗಳು. ಈಗ ಮತ್ತೊಬ್ಬ ಸ್ಪಿನ್ನರ್ ಸೇರ್ಪಡೆಯಾಗಿದ್ದಾರೆ. ಅದು ಮುರಳೀಧರನ್~ ಎಂದು ಸಿದ್ದಾರ್ಥ್ ಹೇಳಿದರು.


ಜಡೇಜಾ, ವಿನಯ್ ಹಾಗೂ ಮುರಳೀಧರನ್ ಈ ಮೊದಲು ಕೊಚ್ಚಿ ಟಸ್ಕರ್ಸ್ ಕೇರಳ ತಂಡದಲ್ಲಿ ಆಡಿದ್ದರು. ಆದರೆ ಬಿಸಿಸಿಐ ಈ ತಂಡದ ಒಪ್ಪಂದ ರದ್ದುಗೊಳಿಸಿದ ಕಾರಣ ಮತ್ತೆ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಾಯಿತು. ಆದರೆ ಭಾರತದ ವಿ.ವಿ.ಎಸ್.ಲಕ್ಷ್ಮಣ್ ಹಾಗೂ ವಿ.ಆರ್.ವಿ.ಸಿಂಗ್ ಅವರತ್ತ ಯಾವ ಫ್ರಾಂಚೈಸಿಯೂ ತಿರುಗಿಯೂ ನೋಡಲಿಲ್ಲ. ಹರಾಜು ಪಟ್ಟಿಯ್ಲ್ಲಲಿ 11 ದೇಶಗಳ 144 ಮಂದಿ ಆಟಗಾರರು ಇದ್ದರು. ಆದರೆ 25 ಮಂದಿ ಮಾತ್ರ ಮಾರಾಟವಾದರು. 44 ಮಂದಿ ಆಟಗಾರರನ್ನು ಯಾರೂ ಖರೀದಿಸಲಿಲ್ಲ.

ವಿದೇಶಿ ಆಟಗಾರರಲ್ಲಿ ಶ್ರೀಲಂಕಾದ ಮಾಹೇಲ ಜಯವರ್ಧನೆ ಹೆಚ್ಚು ಮೊತ್ತಕ್ಕೆ ಮಾರಾಟವಾದರು. ಅವರಿಗೆ  ದೆಹಲಿ ಡೇರ್‌ಡೆವಿಲ್ಸ್ ತಂಡ 6.80 ಕೋಟಿ ರೂ. ನೀಡಿ ಖರೀದಿಸಿತು. ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕ್ಲಮ್‌ಗೆ 4.37 ಕೋಟಿ ನೀಡಿ ಶಾರೂಖ್ ಖಾನ್ ಒಡೆತನದ ಕೋಲ್ಕತ್ತ ನೈಟ್‌ರೈಡರ್ಸ್ ತನ್ನದಾಗಿಸಿಕೊಂಡಿತು.  


 ಅಚ್ಚರಿ ಮೂಡಿಸಿದ ಹರಾಜು ಎಂದರೆ ವೆಸ್ಟ್‌ಇಂಡೀಸ್‌ನ ಸುನಿಲ್ ನರೈನ್. ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟೂರ್ನಿಯಲ್ಲಿ ಅದ್ಭುತ ಆಟದ ಮೂಲಕ ಗಮನ ಸೆಳೆದಿದ್ದ ಅವರಿಗೆಎ 3.40 ಕೋಟಿ ರೂ. ನೀಡಿ  ಕೋಲ್ಕತ್ತ ನೈಟ್ ರೈಡರ್ಸ್ ಖರೀದಿಸಿತು.

ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಅವರು 3.16 ಕೋಟಿ ರೂ.ಗೆ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡದ ಪಾಲಾದರೆ, ಶ್ರೀಲಂಕಾದ ತಿಸ್ಸಾರ ಪೆರೇರಾ 3.15 ಕೋಟಿ ರೂಗೆ ಮುಂಬೈ ಇಂಡಿಯನ್ಸ್ ಪಾಲಾದರು.

ಆಸ್ಟ್ರೇಲಿಯಾ (32), ದಕ್ಷಿಣ ಆಫ್ರಿಕಾ (30), ಶ್ರೀಲಂಕಾ (10), ವೆಸ್ಟ್‌ಇಂಡೀಸ್ (19), ಇಂಗ್ಲೆಂಡ್ (15), ನ್ಯೂಜಿಲೆಂಡ್ (10), ಭಾರತ (8), ಜಿಂಬಾಬ್ವೆ (7), ಐರ್ಲೆಂಡ್ (2), ಬಾಂಗ್ಲಾದೇಶ (1), ಹಾಲೆಂಡ್‌ನ (1) ಆಟಗಾರರು ಹರಾಜು ಪಟ್ಟಿಯಲ್ದ್ದ್‌ದರು.

ಆದರೆ ಇಂಗ್ಲೆಂಡ್ ಆಟಗಾರರತ್ತ ಯಾವುದೇ ಫ್ರಾಂಚೈಸಿ ಗಮನ ಹರಿಸಲಿಲ್ಲ. ಕಾರಣ ಅವರು ಟೂರ್ನಿಗೆ ಅಲಭ್ಯರಾಗುತ್ತಾರೆ ಎಂಬುದು. ವೆಸ್ಟ್‌ಇಂಡೀಸ್‌ನ ಪ್ರಮುಖ ಆಟಗಾರರತ್ತಲೂ ಯಾರ ಗಮನ ಹರಿಯಲಿಲ್ಲ. ಐಪಿಎಲ್ ವೇಳೆ ಈ ತಂಡದವರು ಅಂತರರಾಷ್ಟ್ರೀಯ ಸರಣಿಯಲ್ಲಿ ಆಡುತ್ತಿರುವುದು ಇದಕ್ಕೆ ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT