ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐವರ ಸಜೀವ ದಹನ

ಮೈಸೂರಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟ
Last Updated 12 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮೈಸೂರು: ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಸಜೀವ ದಹನವಾಗಿರುವ ಘಟನೆ ಅಜೀಜ್ ಸೇಟ್ ನಗರದ ಬೀಡಿ ಕಾಲೊನಿಯಲ್ಲಿ ಶುಕ್ರವಾರ ಬೆಳಗಿನ ಜಾವ 3.30 ರ ವೇಳೆಗೆ  ನಡೆದಿದೆ. ಇದೊಂದು ದುಷ್ಕೃತ್ಯ ಎಂದು ಮನೆಯವರು ದೂರಿದ್ದಾರೆ.

ನಾಟಿ ವೈದ್ಯ (ಹಕೀಂ) ಮಹಮ್ಮದ್ ಅಮೀರ್‌ಜಾನ್ (70) ಪುತ್ರಿಯರಾದ ರಿಜ್ವಾನಾಬಾನು (30), ಪರ್ವೀನ್‌ತಾಜ್ (25), ಮೊಮ್ಮಕ್ಕಳಾದ ಅರ್ಬಿಯಾ (10) ಹಾಗೂ ಮಹಮ್ಮದ್ ಅರಾನ್ (2) ಮೃತಪಟ್ಟವರು. ಗಂಭೀರವಾಗಿ ಗಾಯಗೊಂಡಿರುವ ರೇಷ್ಮಾಬಾನು ಹಾಗೂ ಅಫ್ರೋಜ್‌ಬೇಗಂ ಅವರನ್ನು ನಗರದ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇವರ ಪೈಕಿ ಅಫ್ರೋಜ್‌ಬೇಗಂ ಅವರಿಗೆ ಶೇ 85ರಷ್ಟು ಸುಟ್ಟ ಗಾಯಗಳಾಗಿದ್ದು, ಸ್ಥಿತಿ ಗಂಭೀರವಾಗಿದೆ.

ಮನೆಯಲ್ಲಿ ಒಟ್ಟು ಎಂಟು ಮಂದಿ ಮಲಗಿದ್ದರು. ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಬೆಂಕಿಯ ಕೆನ್ನಾಲಗೆಗೆ ರೇಷ್ಮಾಬಾನು ಹಾಗೂ ಅಫ್ರೋಜ್‌ಬೇಗಂ ಸಿಕ್ಕಿಕೊಂಡು ಕಿರುಚುತ್ತ ಹೊರಗೆ ಓಡಿ ಬಂದರು. ಬಳಿಕ ಮಲಗುವ ಕೋಣೆಯಲ್ಲಿ ಇಟ್ಟಿದ್ದ ಸಿಲಿಂಡರ್ ಸ್ಫೋಟಗೊಂಡಿತು. ಇದರಿಂದ ಬೆಚ್ಚಿಬಿದ್ದ ಸುತ್ತಮುತ್ತಲಿನ ನಿವಾಸಿಗಳು ಮನೆಯಿಂದ ಹೊರಗೆ ಬಂದರು. ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯ ಎರಡು ಗೋಡೆಗಳು ಉರುಳಿ, ಪಕ್ಕದ ಮನೆಯ ಮೇಲೆ ಬಿದ್ದವು. ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದರು. ಘಟನಾ ಸ್ಥಳದಲ್ಲಿದ್ದ ಮೃತರ ಸಂಬಂಧಿಕರು, ಬಂಧುಗಳ ರೋದನ ಮುಗಿಲುಮುಟ್ಟಿತ್ತು.

ಬಾಲಕ ಪಾರು: ಅಮೀರ್‌ಜಾನ್‌ಗೆ ಒಟ್ಟು ನಾಲ್ಕು ಹೆಣ್ಣು ಮಕ್ಕಳು. ಇವರಲ್ಲಿ ಮೂವರಿಗೆ ಮದುವೆ ಆಗಿದೆ. ಬೇಸಿಗೆ ರಜೆಯಾದ್ದರಿಂದ ರಿಜ್ವಾನಾಬಾನು ತಮ್ಮ  ಮೂವರು ಮಕ್ಕಳಾದ ಮಹಮ್ಮದ್ ಆರಿಸ್, ಅರ್ಬಿಯಾ ಹಾಗೂ ಮಹಮ್ಮದ್ ಅರಾನ್ ಅವರೊಂದಿಗೆ ತವರು ಮನೆಗೆ ಬಂದಿದ್ದರು. ಬೆಂಕಿ ಹರಡುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಆರಿಸ್ ಮನೆಯಿಂದ ಆಚೆ ಬಂದಿದ್ದು, ಅಪಾಯದಿಂದ ಪಾರಾಗಿದ್ದಾನೆ.

ಈ ಬಗ್ಗೆ `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಆರಿಸ್, `ನನಗೆ ಸರಿಯಾಗಿ ನಿದ್ದೆ ಬಂದಿರಲಿಲ್ಲ. ಆಚೀಚೆ ಹೊರಳಾಡುತ್ತಿದ್ದೆ. ಬೆಂಕಿ ಜ್ವಾಲೆ ಕಣ್ಣು ಮುಂದೆ ಬಂದಿತು. ಎದ್ದು ಆಚೆಗೆ ಓಡಿ ಬಂದೆ. ಬಳಿಕ ಸಿಲಿಂಡರ್ ಸ್ಫೋಟಗೊಂಡು ಎಲ್ಲರೂ ಮೃತಪಟ್ಟರು' ಎಂದು ಹೇಳಿದನು.

ಪೊಲೀಸರು, ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ ಡಾ.ರವೀಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದುಷ್ಕೃತ್ಯ ಶಂಕೆ
`ನಮ್ಮ ತಂದೆ ಹಾಗೂ ರಾಜೀವ್‌ನಗರದ ಬಸ್ ಚಾಲಕ ಅಬ್ದುಲ್ ಷರೀಫ್ ನಡುವೆ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಗಲಾಟೆ ಆಗಿತ್ತು. ಇದರಿಂದ ಅಬ್ದುಲ್ ಷರೀಫ್ ಅವರೇ ಮನೆಯ ಮುಂಬಾಗಿಲ ಚಿಲಕ ಹಾಕಿ ಸೀಮೆಎಣ್ಣೆ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಪರಿಣಾಮ ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡಿದೆ. ಆತನಿಗೆ ತಕ್ಕ ಶಿಕ್ಷೆ ಆಗಬೇಕು, ನಮಗೆ ನ್ಯಾಯ ದೊರಕಿಸಿಕೊಡಬೇಕು' ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಮೀರ್‌ಜಾನ್ ಪುತ್ರಿ ರೇಷ್ಮಾಬಾನು ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

15 ದಿನಗಳ ಹಿಂದೆಯಷ್ಟೇ ಅಬ್ದುಲ್ ಷರೀಫ್ ಅವರು ಅಮೀರ್‌ಜಾನ್ ಅವರ ಮನೆಗೆ ಬಂದು ಜಗಳವಾಡಿದ್ದರು. ಹೀಗಾಗಿ ಅಮೀರ್‌ಜಾನ್ ಉದಯಗಿರಿ ಪೊಲೀಸರಿಗೆ ದೂರು ನೀಡಿದ್ದರು. ಪರ್ವೀನ್‌ತಾಜ್ ಅಂಗನವಾಡಿ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಅವರ ಪತಿ ಕೊಳ್ಳೇಗಾಲಕ್ಕೆ ಹೋಗಿದ್ದರು. ವಿಷಯ ತಿಳಿದ ಅವರು ಬೆಳಿಗ್ಗೆಯೇ ವಾಪಸು ಮೈಸೂರಿಗೆ ಬಂದರು. ಪರ್ವೀನ್ ಸೋಮವಾರ (ಏ. 15) ಗಂಡನ ಮನೆಗೆ ತೆರಳಬೇಕಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT