ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡೆದ ನಾಲೆಗಳು: 350 ಎಕರೆ ಬತ್ತದ ಬೆಳೆಗೆ ಹಾನಿ

Last Updated 10 ಅಕ್ಟೋಬರ್ 2012, 6:30 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಸೋಮವಾರ ತಡರಾತ್ರಿ ಸುರಿದ ದಾಖಲೆ (140 ಮಿ.ಮೀ) ಮಳೆಗೆ ಕೃಷ್ಣರಾಜಸಾಗರ ಅಚ್ಚುಕಟ್ಟು ಪ್ರದೇಶದ 3 ನಾಲೆಗಳು   ಒಡೆದಿದ್ದು, 350 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬತ್ತದ ಬೆಳೆಗೆ ಹಾನಿಯಾಗಿದೆ. ಕಾಲುವೆ ಏರಿ ಹಾಗೂ ರಸ್ತೆ ಕೊಚ್ಚಿ ಹೋಗಿವೆ.

ಬೆಳಗೊಳ ಬಳಿ ಬಲದಂಡೆ (ಆರ್‌ಬಿಎಲ್‌ಎಲ್) ನಾಲೆ 8ನೇ ಮೈಲಿಯಲ್ಲಿ ಒಡೆದಿದೆ. ನಾಲೆಯ ಎಡಭಾಗದ ಏರಿ ನೆಲಮಟ್ಟಕ್ಕೆ ಕುಸಿದಿದೆ. ಬಲದಂಡೆ ನಾಲೆಯ ನೀರು ವಿರಿಜಾ ನಾಲೆಗೆ ಹರಿದ ಪರಿಣಾಮ ನಗುವನಹಳ್ಳಿ, ಬ್ರಹ್ಮಪುರ, ಪಾಲಹಳ್ಳಿ, ರಂಗನತಿಟ್ಟು ಪಕ್ಷಿಧಾಮದ ಬಳಿ ನಾಲೆಯ ಏರಿ ನಾಲ್ಕಾರು ಕಡೆ ಕೊಚ್ಚಿ ಹೋಗಿದೆ.
9ನೇ ಮೈಲಿಯಲ್ಲಿ ನಾಲೆಯ ಏರಿಗೆ ಹೆಚ್ಚು ಹಾನಿಯಾಗಿದೆ. ಅಚ್ಚುಕಟ್ಟು ಪ್ರದೇಶದ ದೇವರಾಯ ನಾಲೆ 4ನೇ ಮೈಲಿ ಬಳಿ ಒಡೆದಿದ್ದು, ಬೆಳೆಗಳಿಗೆ ನೀರು ನುಗ್ಗಿದೆ. ಈ ಮೂರೂ ನಾಲೆಗಳ ನೀರು ಬತ್ತದ ಬೆಳೆಗೆ ನುಗ್ಗಿರುವುದರಿಂದ ಅಪಾರ ಹಾನಿಯಾಗಿದೆ.

ಬೆಳಗೊಳ ಸಮೀಪ ಬಾಳೆ, ತೆಂಗು, ಅಡಿಕೆ ತೋಟಗಳಿಗೂ ನೀರು ನುಗ್ಗಿದೆ. ಹೊಸ ಆನಂದೂರು ಬಳಿ ಶೈಲೇಶ್, ಶ್ರೀನಿವಾಸ್, ಮಾದೇಗೌಡ, ಕೂರ್ಗಳ್ಳಿ ಅಣ್ಣೇಗೌಡ ಇತರರ ಬತ್ತದ ಬೆಳೆ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದೆ.
ಸಂಚಾರ ಬಂದ್: ವಿರಿಜಾ, ಆರ್‌ಬಿಎಲ್ ಹಾಗೂ ದೇವರಾಯ ನಾಲೆಗಳ ನೀರು ಘಟ್ಟದ ಹಳ್ಳಕ್ಕೆ ಧುಮುಕಿದ್ದರಿಂದ ನಗುವನಹಳ್ಳಿ-ಶ್ರೀರಂಗಪಟ್ಟಣ ಸಂಪರ್ಕ ಸೇತುವೆ ಸಂಪೂರ್ಣ ಜಲಾವೃತಗೊಂಡಿತ್ತು. ಈ ಮಾರ್ಗದಲ್ಲಿ ಬೆಳಿಗ್ಗೆ 10 ಗಂಟೆಯ ವರೆಗೆ ವಾಹನ ಹಾಗೂ ಜನ ಸಂಚಾರ ಸ್ಥಗಿತಗೊಂಡಿತ್ತು.

ಈಶ್ವರ, ಅಯ್ಯಪ್ಪಸ್ವಾಮಿ ಹಾಗೂ ಭೈರವೇಶ್ವರಸ್ವಾಮಿ ದೇವಾಲಯಗಳು ಜಲಾವೃತಗೊಂಡಿದ್ದವು. ರಾಜಪ್ಪ ಎಂಬವರ ಮನೆ ಹಾಗೂ ತೋಟ ನೀರಿನಿಂದ ಮುಳುಗಿದ್ದವು. ನಗುವನಹಳ್ಳಿ ಬಳಿ ಬತ್ತ ಅಷ್ಟೇ ಅಲ್ಲದೆ ತೆಂಗು, ಅಡಿಕೆ, ಬಾಳೆ ತೋಟಗಳಿಗೂ ಹಾನಿಯಾಗಿದೆ. ಬೆಳಗೊಳ ಬಳಿ ಕರಿಯಮ್ಮನ ಹಳ್ಳ ಉಕ್ಕಿ ಹರಿದ ಪರಿಣಾಮ ರಸ್ತೆಯ ಮೇಲೆ ಎರಡು ಅಡಿಗಳಷ್ಟು ನೀರು ಹರಿಯಿತು. ಇದರಿಂದ ಮೈಸೂರು-ಕೆಆರ್‌ಎಸ್ ನಡುವೆ ಸಂಚಾರಕ್ಕೆ ಅಡ್ಡಿಯಾಗಿ ಜನರು ಪರದಾಡಿದರು.

ಭೇಟಿ: ನಾಲೆ ಒಡೆದ ಸ್ಥಳಕ್ಕೆ ಶಾಸಕ ರಮೇಶ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ, ಉಪ ವಿಭಾಗಾಧಿಕಾರಿ ಲತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಸಿ. ಜಯಣ್ಣ, ತಹಶೀಲ್ದಾರ್ ಅರುಳ್‌ಕುಮಾರ್, ಜಂಟಿ ಕೃಷಿ ನಿರ್ದೇಶಕ ಸಂಗಯ್ಯ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತೋಟ, ಗದ್ದೆ ಜಲಾವೃತ: ಕಂಗೆಟ್ಟ ರೈತ
ತಮಿಳುನಾಡಿಗೆ ನೀರು ಹರಿಸಿದ ಕಾರಣಕ್ಕೆ ಆತಂಕಗೊಂಡಿದ್ದ ಈ ಭಾಗದ ರೈತರು ಸೋಮವಾರ ತಡರಾತ್ರಿ ಸುರಿದ ಮಳೆ ಹಾಗೂ ಅದರಿಂದಾದ ಅನಾಹುತಕ್ಕೆ ಮತ್ತಷ್ಟು ಕಂಗೆಟ್ಟಿದ್ದಾರೆ.

ಕುಂಭದ್ರೋಣ ಮಳೆಗೆ 350 ವರ್ಷಗಳಷ್ಟು ಹಳೆಯದಾದ ವಿರಿಜಾ ನಾಲೆ, ಬಲದಂಡೆ ಹಾಗೂ ದೇವರಾಯ ನಾಲೆಗಳು ಒಡೆದು ಬೆಳೆಯನ್ನು ನಾಶ ಮಾಡಿವೆ. ಬೆಳಗೊಳ, ಹೊಸ ಆನಂದೂರು, ಪಾಲಹಳ್ಳಿ, ಬ್ರಹ್ಮಪುರ, ಶ್ರೀರಂಗಪಟ್ಟಣ ಹಾಗೂ ನಗುವನಹಳ್ಳಿಯ ರೈತರು ಬೆಳೆ ನಷ್ಟ ಅನುಭವಿಸಿದ್ದಾರೆ.

ಜಿಲ್ಲಾಧಿಕಾರಿಗಳ ಅಂದಾಜಿನ ಪ್ರಕಾರ 350 ಎಕೆರೆಗೂ ಹೆಚ್ಚು ಭತ್ತದ ಬೆಳೆಗೆ ಹಾನಿಯಾಗಿದೆ. ಕೆಲವೆಡೆ ಬೆಳೆ ಕೊಚ್ಚಿ ಹೋಗಿದ್ದರೆ ಮತ್ತೆ ಕೆಲವೆಡೆ ಬೆಳೆಯ ಮೇಲೆ ಕೆಸರು ಆವರಿಸಿದೆ. ನಗುವನಹಳ್ಳಿ ಬಳಿ ಹಳ್ಳದ ಮಗ್ಗುಲಲ್ಲಿದ್ದ ಮೂರು ದೇವಾಯಗಳಿಗೆ ನೀರು ನುಗ್ಗಿದ್ದು ದೇವಾಲಯಗಳ ಆವರಣ ಕೆಸರುಮಯವಾಗಿದೆ.

ರೈತರ ಆಕ್ರೋಶ: ವಿರಿಜಾ ನಾಲೆ 350 ವರ್ಷಗಳಷ್ಟು ಹಳೆಯದು. ಈ ನಾಲೆಯ ಏರಿಗಳು ಶಿಥಿಲಗೊಂಡಿವೆ. ಅಲ್ಲಲ್ಲಿ ನೀರು ಸೋರಿಕೆ ಆಗುತ್ತಲೇ ಇದೆ. ಸಿಮೆಂಟ್ ಲೈನಿಂಗ್ ಮಾಡುವುದಾಗಿ ಅಧಿಕಾರಿಗಳು ಕಳೆದ 5 ವರ್ಷಗಳಿಂದ ಹೇಳುತ್ತ ಬಂದಿದ್ದಾರೆ. ಆದರೆ ಅಂತಹ ಯಾವ ಪ್ರಯತ್ನವೂ ನಡೆದಿಲ್ಲ.

ಕೆಲವೆಡೆ ಜಂಗಲ್ ಕೂಡ ಸ್ವಚ್ಛಗೊಳಿಸಿಲ್ಲ. ನಾಲೆಯ ಏರಿಗಳನ್ನು ದುರಸ್ತಿ ಮಾಡಿದ್ದರೆ ಇಂತಹ ಅನಾಹುತ ಆಗುತ್ತಿರಲಿಲ್ಲ. ಈ ಹಿಂದೆ ವರುಣಾ ನಾಲೆ ಒಡೆದು ನಷ್ಟ ಅನಭವಿಸಿದ ರೈತರಿಗೆ ಸೂಕ್ತ ಪರಿಹಾರ ನೀಡಿಲ್ಲ. ಈ ಬಾರಿ ವೈಜ್ಞಾನಿಕ ಪರಿಹಾರ ದೊರಕಿಸಬೇಕು ಎಂದು ಬೆಳಗೊಳ ರೈತರಾದ ವಿಷಕಂಠು, ಸುನಿಲ್ ಇತರರು    ಒತ್ತಾಯಿಸಿದ್ದಾರೆ.

ವಾರದಲ್ಲಿ ಕಾಮಗಾರಿ ಪೂರ್ಣ: ಮಳೆಯಿಂದಾಗಿ ಹಾನಿಗೊಂಡಿರುವ ನಾಲೆಯ ಸೇತುವೆಗಳನ್ನು ವಾರದ ಒಳಗೆ ದುರಸ್ತಿ ಮಾಡಲಾಗುವುದು ಎಂದು ಕಾವೇರಿ ನೀರಾಶವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ವಿಜಯಕುಮಾರ್ ತಿಳಿಸಿದ್ದಾರೆ. ಮಂಗಳವಾರ ಸಂಜೆಯಾದರೂ ನಾಲೆಗಳಲ್ಲಿ ನೀರು ನಿಂತಿಲ್ಲ. ನೀರು ಸಂಪೂರ್ಣ ಬಸಿದು ಹೋದ ನಂತರವಷ್ಟೇ ಕಾಮಗಾರಿ ಶುರು ಮಾಡ್ತುತೇವೆ. ಯಂತ್ರಗಳು ಸೇರಿದಂತೆ ಕಾಮಗಾರಿಗೆ ಬೇಕಾದ ಅಗತ್ಯ ವಸ್ತುಗಳನ್ನು ತರಿಸಲಾಗುತ್ತಿದೆ. ಆದಷ್ಟು ಶೀಘ್ರ ಕಾಮಗಾರಿ ಮುಗಿಸಲು ಪ್ರಯತ್ನಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಪರಿಹಾರ: ನಾಲೆಗಳು ಒಡೆದು ಉಂಟಾಗಿರುವ ಬೆಳೆ ನಷ್ಟದ ಅಂದಾಜು ತಯಾರಿಸುವ ಕಾರ್ಯ ಮಂಗಳವಾರದಿಂದಲೇ ಶುರುವಾಗಿದೆ. ಕೃಷಿ, ತೋಟಗಾರಿಕೆ, ನೀರಾವರಿ, ಕಂದಾಯ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ.

ಈ ತಂಡ ವಾರದ ಒಳಗೆ ವರದಿ ನೀಡಲಿದೆ. ನಂತರ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗುವುದು. ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ಕೊಡಿಸುವ ಸಂಬಂಧ ಜಿಲ್ಲಾಡಳಿತ ಸರ್ಕಾರಕ್ಕೆ ಕೋರಿಕೆ ಸಲ್ಲಿಸಲಿದೆ ಎಂದು ತಹಶೀಲ್ದಾರ್ ಅರುಳ್‌ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT