ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡೆಯರ್‌ ಹ್ಯಾಟ್ರಿಕ್‌ಗೆ ಚಂದ್ರಪ್ರಭಾ ಅರಸು ಬ್ರೇಕ್‌

ಮೈಸೂರು ಲೋಕಸಭಾ ಚುನಾವಣೆ– 1991
Last Updated 28 ಮಾರ್ಚ್ 2014, 6:28 IST
ಅಕ್ಷರ ಗಾತ್ರ

ಮೈಸೂರು: ಯದುವಂಶದ ಅರಸ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಹ್ಯಾಟ್ರಿಕ್‌ ಗೆಲುವಿಗೆ ಬ್ರೇಕ್‌ ಹಾಕಿದವರು ಮಾಜಿ ಮುಖ್ಯಮಂತ್ರಿ ದಿ.ಡಿ. ದೇವರಾಜ ಅರಸು ಅವರ ಪುತ್ರಿ ಚಂದ್ರಪ್ರಭಾ ಅರಸು. ಸತತ ಎರಡು ಬಾರಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಒಡೆಯರ್‌ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದರು. ಹಾಗಾಗಿ, ಮಾಜಿ ಪ್ರಧಾನಿ ದಿ. ರಾಜೀವ್‌ಗಾಂಧಿ ಕಾಂಗ್ರೆಸ್‌ನಿಂದ ಚಂದ್ರಪ್ರಭಾ ಅರಸು ಅವರನ್ನು 1991ರ ಲೋಕಸಭಾ ಚುನಾವಣೆಯಲ್ಲಿ ಒಡೆಯರ್‌ ಎದುರು ಕಣಕ್ಕೆ ಇಳಿಸಿದರು. ಒಡೆಯರ್‌ 16,882 ಮತಗಳ ಅಂತರದಿಂದ ಸೋತರು.

1984, 1989ರಲ್ಲಿ ಎರಡು ಬಾರಿ ಒಡೆಯರ್‌ ಕಾಂಗ್ರೆಸ್‌ನಿಂದ ಗೆದ್ದಿದ್ದರು. ಆಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿವಾದ ಜೋರಾಗಿತ್ತು. ಅಲ್ಲದೆ, ವಿ.ಪಿ. ಸಿಂಗ್‌ ಸರ್ಕಾರಕ್ಕೆ ಬಿಜೆಪಿ ನೀಡಿದ್ದ ಬೆಂಬಲ ವಾಪಸ್‌ ಪಡೆದಿದ್ದರಿಂದ ಸರ್ಕಾರ ಬಿದ್ದಿತ್ತು. ಆಗ ಬಿಜೆಪಿ ಅಲೆ ಚೆನ್ನಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬರಬಹುದು ಎಂಬ ಲೆಕ್ಕಾಚಾರ ಇತ್ತು. ಅಲ್ಲದೆ, ಎರಡು ಬಾರಿ ಗೆದ್ದಿದ್ದರೂ ಒಡೆಯರ್‌ಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ದಕ್ಕಿರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ಮಂತ್ರಿ ಪದವಿ ಸಿಗಬಹುದು ಎಂದು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು.

ಆದರೆ, ಒಡೆಯರ್‌ ಪಕ್ಷ ತೊರೆಯುತ್ತಾರೆ ಎಂದು ಕಾಂಗ್ರೆಸ್‌ನಲ್ಲಿ ಯಾರೂ ಊಹಿಸಿರಲಿಲ್ಲ. 1991ರಲ್ಲಿ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಒಡೆಯರ್‌ ಟಿಕೆಟ್‌ ಪಡೆದರು. ಆದರೆ, ಒಡೆಯರ್‌ ವಿರುದ್ಧ ಸಮರ್ಥ ಅಭ್ಯರ್ಥಿ ಕೊರತೆ ಕಾಂಗ್ರೆಸ್‌ಗೆ ಎದುರಾಯಿತು.

ಆಗ ರಾಜೀವ್‌ ಗಾಂಧಿ ಅವರು ಅರಸು ಮನೆತನದವರೇ ಆದ ಚಂದ್ರಪ್ರಭಾ ಅರಸು ಅವರನ್ನೇ ಒಡೆಯರ್‌ ವಿರುದ್ಧ ಕಣಕ್ಕೆ ಇಳಿಸಲು ನಿರ್ಧರಿಸಿದರು. ಆಗ ಚಂದ್ರಪ್ರಭಾ ಅವರು ಹುಣಸೂರಿನಲ್ಲಿ ಎರಡನೇ ಅವಧಿಗೆ ಶಾಸಕಿಯಾಗಿದ್ದರು. ಸಂಸದೆಯಾಗಿ ದಿಲ್ಲಿಗೆ ಹೋಗುವ ಇರಾದೆ ಇವರಿಗೆ ಇರಲಿಲ್ಲ.

ಬೆಂಗಳೂರಿನಲ್ಲಿ ಹಾಸಿಗೆ ಹಿಡಿದಿದ್ದ ಚಂದ್ರಪ್ರಭಾ ಅರಸು ಅವರ ತಾಯಿ ಚಿಕ್ಕಮ್ಮಣ್ಣಿ ಅವರನ್ನು ರಾಜೀವ್‌ಗಾಂಧಿ ನೋಡಲು ಬಂದು ಮೈಸೂರಿನಿಂದ ಚಂದ್ರಪ್ರಭಾ ಅವರನ್ನು ಕಣಕ್ಕೆ ಇಳಿಯಲು ಸೂಚಿಸಿದರು. ಹಿರಿಯರಾದ ಕೆ.ಎಸ್‌. ನಾಗರತ್ನಮ್ಮ ಮತ್ತು ರಾಜಶೇಖರಮೂರ್ತಿ ಅವರ ಹೆಸರನ್ನು ಚಂದ್ರಪ್ರಭಾ ಅರಸು ಸೂಚಿಸಿದ್ದರು. ಕೊನೆಗೆ ಒಲ್ಲದ ಮನಸ್ಸಿನಿಂದಲೇ ಒಪ್ಪಿದ್ದರು. ಗೆದ್ದರೆ ದೆಹಲಿಗೆ ಹೋಗಲು, ಸೋತರೆ ಶಾಸಕಿಯಾಗಿ ಮುಂದುವರಿಯಲು ಚಂದ್ರಪ್ರಭಾ ಅರಸು ನಿರ್ಧರಿಸಿದರು.

ನಗರದ ಪುರಭವನ ಮೈದಾನದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಒಡೆಯರ್‌ ಪರ ಅಡ್ವಾಣಿ ಬಹಿರಂಗ ಪ್ರಚಾರ ಸಭೆ ನಡೆಸಿದ್ದರು. ‘ಒಡೆಯರ್‌ ಈಗಾಗಲೇ ಗೆದ್ದಾಗಿದೆ. ಫಲಿತಾಂಶ ಮಾತ್ರ ಬರಬೇಕಿದೆ’ ಎಂಬ ಮಾತನ್ನು ಅಡ್ವಾಣಿ ಹೇಳಿದ್ದರು. ರಾಜೀವ್‌ಗಾಂಧಿ ಸಹ ಅದೇ ಪುರಭವನದಲ್ಲಿ ಚಂದ್ರಪ್ರಭಾ ಅರಸು ಪರ ಪ್ರಚಾರ ಮಾಡಿದ್ದರು. ‘ಚಂದ್ರಪ್ರಭಾ ಕಾಂಗ್ರೆಸ್‌ ಅಭ್ಯರ್ಥಿ ಇವರನ್ನು ಗೆಲ್ಲಿಸಿ’ ಎಂದು ಮನವಿ ಮಾಡಿದ್ದರು. ಆದರೆ, ಮೈಸೂರಿನ ಯದುವಂಶದ ಅರಸರ ಬಗ್ಗೆ ಅಪಾರ ಗೌರವ ಹೊಂದಿದ್ದ ರಾಜೀವ್‌ಗಾಂಧಿ ಅವರು ಒಡೆಯರ್‌ ಕಾಂಗ್ರೆಸ್‌ ತೊರೆದಿದ್ದರೂ ಸಹ ಅವರ ವಿರುದ್ಧ ಭಾಷಣದಲ್ಲಿ ಒಂದೂ ಮಾತನಾಡಲಿಲ್ಲ. ಆದರೆ, ಫಲಿತಾಂಶ ಬಂದಾಗ ಅಚ್ಚರಿ ಕಾದಿತ್ತು. ಚಂದ್ರಪ್ರಭಾ ಅರಸು ಒಡೆಯರ್‌ ಅವರನ್ನೇ ಮಣಿಸಿದರು. ಒಡೆಯರ್‌ ಲೆಕ್ಕಾಚಾರವೆಲ್ಲ ತಲೆಕೆಳಗಾಯಿತು.

ಬಿಜೆಪಿ–ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಇದ್ದ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಡಿ. ಮಾದೇಗೌಡ ಕಣಕ್ಕೆ ಇಳಿದಿದ್ದರು. ಬಿಜೆಪಿ–ಕಾಂಗ್ರೆಸ್‌ ಪ್ರಚಾರದ ಅಬ್ಬರದ ನಡುವೆ ಮಾದೇಗೌಡ ಅವರು 1,17,471 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಉಳಿದಂತೆ 7 ಮಂದಿ ಪಕ್ಷೇತರ ಅಭ್ಯರ್ಥಿಗಳಾಗಿ ಕಣದಲ್ಲಿ ಇದ್ದರು.

ಆಘಾತ ತಂದ ರಾಜೀವ್‌ಗಾಧಿ ಸಾವಿನ ಸುದ್ದಿ
ಚಂದ್ರಪ್ರಭಾ ಅರಸು ಎಲ್ಲೆಡೆ ಪ್ರಚಾರ ಮಾಡುತ್ತಿದ್ದರು. ಅಶೋಕಪುರಂನಲ್ಲಿ ಪ್ರಚಾರ ನಡೆಸುವ ವೇಳೆ ರಾಜೀವ್‌ಗಾಂಧಿ ಹತ್ಯೆ ಸುದ್ದಿ ಗುಪ್ತದಳದಿಂದ ತಿಳಿದುಬಂತು. ಒಂದು ಕ್ಷಣ ಅವರಿಗೆ ದಿಕ್ಕೇ ತೋಚದಂತಾಯಿತು. ಕೈ–ಕಾಲುಗಳು ಆಡಲಿಲ್ಲ. ‘ಇದು ನಂಬಲಸಾಧ್ಯವಾದ ಸುದ್ದಿ. ಮತ್ತೆ ಖಾತರಿ ಮಾಡಿಕೊಳ್ಳಿ’ ಎಂದು ಗುಪ್ತದಳ ಮತ್ತು ಪೊಲೀಸರಿಗೆ ಚಂದ್ರಪ್ರಭಾ ತಿಳಿಸಿದ್ದರು. ನಂತರ ರಾಜೀವ್‌ಗಾಂಧಿ ಹತ್ಯೆಯಾಗಿರುವುದು ದೃಢಪಟ್ಟಿತು. ಹಾಗಾಗಿ, ದೇಶದಲ್ಲಿ ಚುನಾವಣೆಯನ್ನು 20 ದಿನಗಳ ಕಾಲ ಮುಂದೂಡಲಾಯಿತು.

‘ತಂದೆಯ ವರ್ಚಸ್ಸು ಶ್ರೀರಕ್ಷೆ’
‘ಲೋಕಸಭಾ ಚುನಾವಣೆಯಲ್ಲಿ ಒಂದು ವೇಳೆ ಸೋತರೂ ಹುಣಸೂರಿನಲ್ಲಿ ಶಾಸಕಿಯಾಗಿ ಮುಂದುವರಿಯಲು ನಾನು ನಿರ್ಧರಿಸಿದ್ದೆ.
ಆಗ ಅಬ್ಬರದ ಪ್ರಚಾರವೇನು ಮಾಡಿರಲಿಲ್ಲ. ತಂದೆ, ದೇವರಾಜ ಅರಸು ಅವರ ವರ್ಚಸ್ಸು, ಅವರ ಸಾಧನೆ ಮತ್ತು ಅವರ ಮೇಲೆ ಜಿಲ್ಲೆಯವರು ಇಟ್ಟಿದ್ದ ಪ್ರೀತಿ ಮತಗಳಾಗಿ ಪರಿವರ್ತನೆ ಆಗುತ್ತದೆ ಎಂಬ ನಂಬಿಕೆ ಇತ್ತು.

ವೋಟಿಗಾಗಿ ಹಣ–ಹೆಂಡವನ್ನು ನಾವು ಎಂದೂ ಹಂಚಿಲ್ಲ. ಎರಡು ಕೈಜೋಡಿಸಿ ಮುಗಿದು ಮತ ನೀಡುವಂತೆ ಕೋರುತ್ತಿದ್ದೆವು. ಪ್ರಚಾರಕ್ಕೆ ಎಲ್ಲೇ ಹೋದರೂ ಮಧ್ಯರಾತ್ರಿಯಾದರೂ ಕಾದು, ಊರ ಹೆಬ್ಬಾಗಿಲನ್ನು ತಳಿರು–ತೋರಣಗಳಿಂದ ಸಿಂಗರಿಸಿಕೊಂಡು ಜನರು ನಮ್ಮನ್ನು ಬರಮಾಡಿಕೊಳ್ಳುತ್ತಿದ್ದರು. ‘ಚುನಾವಣೆಯಲ್ಲಿ ಗೆದ್ದು ನೀವು ದಿಲ್ಲಿಗೆ ಹೋಗಬೇಡಿ. ನಿಮ್ಮನ್ನು ಬಾಂಬ್‌ ಹಾಕಿ ಸಾಯುಸ್ತಾರೆ. ನೀವು ಇಲ್ಲೇ ಇರಿ’ ಎಂದು ಮತದಾರರೊಬ್ಬರು ಹೇಳಿದ ಮಾತನ್ನು’ ಮೈಸೂರಿನಲ್ಲಿ ಹಾಸಿಗೆ ಹಿಡಿದು ಮಲಗಿರುವ ಚಂದ್ರಪ್ರಭಾ ಅರಸು ಈಗಲೂ ನೆನೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT