ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್: ಕ್ರೀಡಾಪಟುಗಳಿಗೆ ತಲಾ ರೂ 5 ಲಕ್ಷ

Last Updated 18 ಜುಲೈ 2012, 19:30 IST
ಅಕ್ಷರ ಗಾತ್ರ

ಮಡಿಕೇರಿ: ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ರಾಜ್ಯದ ಪ್ರತಿಯೊಬ್ಬ  ಕ್ರೀಡಾಪಟುಗೆ ತಲಾ 5 ಲಕ್ಷ ರೂಪಾಯಿ ಹಾಗೂ ತರಬೇತುದಾರರಿಗೂ 1 ಲಕ್ಷ ರೂಪಾಯಿ ನೀಡಲು ನಿರ್ಧರಿಸಲಾಗಿದೆ ಎಂದು ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಮಂಡೇಪಂಡ ಅಪ್ಪಚ್ಚು ರಂಜನ್ ಹೇಳಿದರು.

ನಗರದ ಕೋಟೆ ಆವರಣದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ಧನ ಸಹಾಯ ನೀಡಲಾಗುತ್ತಿದ್ದು, ಒಟ್ಟು 46 ಲಕ್ಷ ರೂಪಾಯಿ ಮಂಜೂರಾಗಿದೆ ಎಂದರು.

ಶೀಘ್ರದಲ್ಲಿಯೇ ಕ್ರೀಡಾಪಟುಗಳಿಗೆ ಅಥವಾ ಅವರ ಕುಟುಂಬದವರಿಗೆ ಮುಖ್ಯಮಂತ್ರಿ ಅವರಿಂದ ಚೆಕ್ ವಿತರಿಸಲು ಕ್ರಮಕೈಗೊಳ್ಳಲಾಗುವುದು.

ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ರಾಜ್ಯದ ಕ್ರೀಡಾಪಟುಗಳು ದೇಶಕ್ಕೆ ಚಿನ್ನದ ಪದಕ ತಂದುಕೊಡುವಂತಾಗಲಿ ಎಂದು ಆಶಿಸಿದ ಸಚಿವರು, ಚೀನಾದ ಮಾದರಿಯಂತೆ ನಾವು ಕೂಡ ಮುಂದಿನ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಈಗಿನಿಂದಲೇ ತರಬೇತಿ ನೀಡಲು ಯೋಜನೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಶೀಘ್ರ ಯುವನೀತಿ: ಯುವಜನರಲ್ಲಿನ ಪ್ರತಿಭೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ದಿಸೆಯಲ್ಲಿ ರಾಜ್ಯದಲ್ಲಿ ನೂತನ ಯುವ ನೀತಿ ಜಾರಿಗೊಳಿಸಲು ಚಿಂತನೆ ನಡೆದಿದೆ ಎಂದು ಸಚಿವ ಅಪ್ಪಚ್ಚು ರಂಜನ್ ಹೇಳಿದರು.
ಅಮೆರಿಕಾ, ಜಪಾನ್, ಇಂಗ್ಲೆಂಡ್ ಮತ್ತಿತರ ರಾಷ್ಟ್ರಗಳಲ್ಲಿ ಜಾರಿಯಲ್ಲಿರುವ ಯುವ ನೀತಿ ಬಗ್ಗೆ ಅಧ್ಯಯನ ಮಾಡಿ ರಾಜ್ಯದಲ್ಲಿ ಯುವ ನೀತಿ ರೂಪಿಸಲಾಗುವುದು.  ಈ ಬಗ್ಗೆ ಹಿರಿಯರು, ಚಿಂತಕರು ಸಲಹೆ ನೀಡಬಹುದಾಗಿದೆ ಎಂದು ಅವರು ಹೇಳಿದರು.

ಇಲಾಖೆಗೆ ರಾಜ್ಯ ಬಜೆಟ್‌ನಲ್ಲಿ 143 ಕೋಟಿಗಳ ಅನುದಾನ ನೀಡಲಾಗಿದೆ. ಇನ್ನೂ ಹೆಚ್ಚಿನ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಯವರಲ್ಲಿ ಕೋರಲಾಗುವುದು ಎಂದರು.

`ಅಶ್ವಿನಿ ಪೊನ್ನಪ್ಪ ಪ್ರಕರಣ ಪರಿಶೀಲಿಸಿ ಕ್ರಮ~

ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಕೊಡಗು ಮೂಲದ ಅಶ್ವಿನಿ ಪೊನ್ನಪ್ಪ ಅವರು ಸದ್ಯ ಹೈದರಾಬಾದ್‌ನಲ್ಲಿ ನೆಲೆಸಿರುವ ಕಾರಣ ಆಂಧ್ರ ಪ್ರದೇಶ ಸರ್ಕಾರದಿಂದ ಸಹಾಯಹಸ್ತ ಪಡೆದಿದ್ದಾರೆಯೇ ಇಲ್ಲವೋ ಎನ್ನುವುದನ್ನು ಗಮನಿಸಿ ನೆರವು ನೀಡುವುದರ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಸಚಿವ ಅಪ್ಪಚ್ಚು ರಂಜನ್ ಹೇಳಿದರು.

ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವ ಕುರಿತ ದಾಖಲೆಗಳನ್ನು ಹಾಜರುಪಡಿಸುವಂತೆ ಅಶ್ವಿನಿ ಪೊನ್ನಪ್ಪ ಅವರಿಗೆ ಅಧಿಕಾರಿಗಳು ಸೂಚಿಸಿರುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಆಂಧ್ರಪ್ರದೇಶ ಸರ್ಕಾರದಿಂದ ಯಾವುದಾದರೂ ನೆರವು ಪಡೆದಿದ್ದಾರೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಲು ಅಧಿಕಾರಿಗಳು ಈ ಮಾಹಿತಿ ಕೇಳಿರಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT