ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್ ವೀರರೂ, ಚಲನಚಿತ್ರ ನಟರೂ

Last Updated 3 ಜೂನ್ 2012, 19:30 IST
ಅಕ್ಷರ ಗಾತ್ರ

ಆತನಿಗೆ ಇದೊಂದು ಬಗೆಯ ಕನಸು. ಎಳೆಯ ವಯಸ್ಸಿನಲ್ಲಿ ಈಜು ಕಲಿಯಲು ಆರಂಭಿಸಿದರೂ ಒಲಿಂಪಿಕ್ಸ್‌ನಲ್ಲಿ ಪದಕ ಪಡೆಯುತ್ತೇನೆಂಬ ಕಲ್ಪನೆಯೂ ಇರಲಿಲ್ಲ. ಪದಕ ಗೆದ್ದ ಮೇಲೆ ಸಿನಿಮಾದಲ್ಲಿ ಜನಪ್ರಿಯತೆ ಪಡೆಯುವ ಬಗ್ಗೆ ಕೂಡ ಆತ ಯೋಚನೆಯನ್ನೂ ಮಾಡಿರಲಿಲ್ಲ.
 
ಆದರೆ ಇದೆಲ್ಲವೂ ಆ ವ್ಯಕ್ತಿಯ ಬದುಕಿನಲ್ಲಿ ನಡೆದು ಹೋಯಿತು. ಕ್ರೀಡಾರಂಗದಲ್ಲಿ ಖ್ಯಾತಿ ಪಡೆದಂತೆ, ರಜತ ಪರದೆಯಲ್ಲೂ ಪ್ರಸಿದ್ಧ ನಟನಾಗಿ ಹೊರ ಹೊಮ್ಮಿದ ಆ ಕ್ರೀಡಾಪಟುವೇ ಜಾನಿ ವೈಸ್ ಮುಲ್ಲರ್. 

ಆಧುನಿಕ ಒಲಿಂಪಿಕ್ಸ್  ಶುರುವಾಗಿ ಒಂದು ಶತಮಾನ  ಕಳೆದಿದ್ದು ಇದು ನಿರಂತರವಾಗಿ ಜನಪ್ರಿಯತೆ ಗಳಿಸುತ್ತಾ ಸಾಗಿದೆ. ಆಧುನಿಕ ಒಲಿಂಪಿಕ್ಸ್ ಪ್ರಾರಂಭವಾದ ಸಮಯದಲ್ಲೇ ಚಲನಚಿತ್ರ ಮಾಧ್ಯಮ ತಂತ್ರಜ್ಞಾನದ ಆವಿಷ್ಕಾರವಾಯಿತು.

ಚಲನಚಿತ್ರ ಹಾಗೂ ಒಲಿಂಪಿಕ್ಸ್ ಪರಸ್ಪರ ಬೆಸುಗೆ ಹಾಕಿಕೊಂಡಿದೆ ಎನ್ನುವಷ್ಟರಮಟ್ಟಿಗೆ ಹತ್ತಿರವಾಗಿವೆ. ಚಲನಚಿತ್ರಗಳಲ್ಲಿ ಅನೇಕ ಒಲಿಂಪಿಕ್ಸ್ ಘಟನೆಗಳು ಮೂಡಿಬಂದಿವೆ. ಒಲಿಂಪಿಕ್ಸ್‌ನಲ್ಲಿ ಜರುಗಿದ ಹಲವು ಸಂಗತಿಗಳೇ ಪರದೆಯಲ್ಲಿ ಕಾಣಿಸಿಕೊಂಡಿವೆ. ಅನೇಕ ಒಲಿಂಪಿಕ್ ವೀರರು ಚಲನಚಿತ್ರಗಳಲ್ಲೂ ಯಶಪಡೆದಿದ್ದಾರೆ. ಜಾನಿ ವೈಸ್ ಮುಲ್ಲರ್ ಅಂತವರಲ್ಲೊಬ್ಬ ಕ್ರೀಡಾಳು.

ಮೀನಿನಂತೆ ಈಜುವುದರಲ್ಲಿ ಪರಿಣಿತರಾದ ಮುಲ್ಲರ್ ಒಂದಲ್ಲ ಎರಡಲ್ಲ ಐದು ಚಿನ್ನದ ಪದಕಗಳನ್ನು ತಮ್ಮ ಕೊರಳಿಗೇರಿಸಿಕೊಂಡರು. 1924 ಹಾಗೂ 1928ರ ಒಲಿಂಪಿಕ್ಸ್‌ನ ಈಜು ಕೊಳದಲ್ಲಿ ಜಾನಿ ಹೀರೋ.

ಫ್ರಿಸ್ಟೈಲ್ ಈಜಿನಲ್ಲಿ ಅನೇಕ ದಾಖಲೆಗಳನ್ನು ನಿರ್ಮಿಸಿದ ಸದೃಢಕಾಯದ ಜಾನಿಯನ್ನು ಅನೇಕ ಜಾಹೀರಾತು ಚಿತ್ರಗಳಲ್ಲಿ ಪುಟ್ಟ ಪುಟ್ಟ ಪಾತ್ರಗಳಲ್ಲಿ ಬಳಸಲಾಯಿತು. ಕೊನೆಗೆ ಪ್ರಖ್ಯಾತ ಎಂ.ಜಿ.ಎಂ ಚಿತ್ರ ನಿರ್ಮಾಣ ಸಂಸ್ಥೆ ಜಾನಿಯನ್ನು ಟಾರ್ಜಾನ್ ಪಾತ್ರಕ್ಕಾಗಿ ಆಯ್ಕೆ ಮಾಡಿತು.

ಜಾನಿ 1932 ರಲ್ಲಿ ಚಿತ್ರರಂಗದಲ್ಲಿ ಕಾಲಿಟ್ಟ ಮೇಲೆ 12 ಟಾರ್ಜಾನ್ ಸಾಹಸಗಳಲ್ಲಿ ಕಾಣಿಸಿಕೊಂಡರು. ಕೊನೆಗೆ ಟಾರ್ಜಾನ್ ಸರಣಿಯನ್ನು ತೊರೆದು ಜಂಗ್ಲೀ ಜ್ಯುಮ್ ಸರಣಿಯಲ್ಲಿ ಜಾನಿ ಪಾತ್ರವಹಿಸಿದ್ದರು. 1950ರ ಮಧ್ಯಭಾಗದಲ್ಲಿ ಅಭಿನಯದಿಂದ ನಿವೃತ್ತಿ ಪಡೆದ ಮುಲ್ಲರ್ ಆ ವೇಳೆಗೆ 6 ಬಾರಿ ಮದುವೆಯಾಗಿದ್ದರು.
 
ಅದರಲ್ಲಿ ವಿವಾದಾತ್ಮಕ ನಟಿ ಲೂಪೆ ವೆಲೇಸ್ ಕೂಡ ಸೇರಿದ್ದರು. ಒಲಿಂಪಿಕ್ಸ್ ಹಾಗೂ ಸಿನಿಮಾದಲ್ಲಿ ಖ್ಯಾತಿ ಗಳಿಸಿದ ಜಾನಿ ತನ್ನ ಆತ್ಮ ಚರಿತ್ರೆಯನ್ನು ಬರೆದರು. ಅದೂ ಕೂಡ ಜನಪ್ರಿಯವಾಯಿತು.

ಜಾನಿಯಂತೆ ಈಜುಕೊಳದಲ್ಲಿ ಪಾರಮ್ಯ ಸಾಧಿಸಿದ ಒಲಿಂಪಿಕ್ ಕಲಿ ಬೂಸ್ಟರ್ ಕಾರ್ಬಿ ಕೂಡ ಹಾಲಿವುಡ್ ಚಿತ್ರಗಳಲ್ಲಿ ಟಾರ್ಜಾನ್ ಪಾತ್ರಗಳನ್ನು ವಹಿಸಿದ್ದರು. ಈಜುಗಾರ ಹಾಗೂ ಅಥ್ಲಿಟ್ ಆಗಿದ್ದ ಬೂಸ್ಟರ್ ಕಾರ್ಬಿ ಟಾರ್ಜಾನ್ ಪಾತ್ರವಲ್ಲದೆ ಫ್ಲಾಶ್ ಗಾರ್ಡನ್, ಬಿಲ್ಲಿ ದ ಕಿಡ್, ಬಕ್ ರೋಗಾರ್ಸ್,  ಮೊದಲಾದ ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

1932, 1928 ಒಲಿಂಪಿಕ್ಸ್ ಕೂಟಗಳಲ್ಲಿ ಚಿನ್ನ ಹಾಗೂ ಕಂಚಿನ ಪದಕಗಳ ವಿಜೇತರಾದ ಬೂಸ್ಟರ್ ಟಿ.ವಿ., ಸೀರಿಯಲ್‌ಗಳಲ್ಲೂ ಪ್ರಸಿದ್ಧರಾದರು. ಹಾಲಿವುಡ್‌ನ ಯಶಸ್ವಿ ತಾರೆಯೆನಿಸಿಕೊಂಡ ಬೂಸ್ಟರ್ ನಟಿಸಿದ ಚಿತ್ರಗಳು ನೂರಕ್ಕೂ ಹೆಚ್ಚು.

ಚಳಿಗಾಲದ ಒಲಿಂಪಿಕ್ಸ್‌ನಲ್ಲಿ 3 ಚಿನ್ನದ ಪದಕಗಳನ್ನು ಸ್ಕೇಟಿಂಗ್ ವಿಭಾಗಗಳಲ್ಲಿ ಗೆದ್ದು ದಾಖಲೆಗಳನ್ನು ಸ್ಥಾಪಿಸಿದ ಸೋನಾಜೆ ಹೆನೈ (ನಾರ್ವೆ) ಚಲನಚಿತ್ರ ನಟಿಯಾಗಿಯೂ ಜನಪ್ರಿಯತೆ ಪಡೆದರು. 1928, 1932, ಹಾಗೂ 1936ರ ಚಳಿಗಾಲ ಒಲಿಂಪಿಕ್ಸ್‌ನಲ್ಲಿ ಸ್ಕೇಟಿಂಗ್‌ನಲ್ಲಿ ಪದಕಗಳನ್ನು ತನ್ನದಾಗಿಸಿಕೊಂಡ ಸನೋಜಾ ಹಿಮ ಅಂಗಳದಲ್ಲಿ ಶ್ರೇಷ್ಠ ವೃತ್ತಿಪರ ಕ್ರೀಡಾಪಟುವಾಗಿ ಹೆಸರು ಮಾಡಿದ್ದರು.
 
ಆ ವೇಳೆಗಾಗಲೆ ಶ್ರೀಮಂತ ಕ್ರೀಡಾಪಟುಗಳ ಸಾಲಿಗೆ ಸೇರಿದ್ದ ಈಕೆ ಟ್ವೆಂಟಿತ್ ಸೆಂಚುರಿ ಫಾಕ್ಸ್ ಸಂಸ್ಥೆಯ ಜೊತೆಗೆ ಚಲನಚಿತ್ರಗಳಲ್ಲಿ ಅಭಿನಯಿಸಲು ಸಹಿ ಮಾಡಿ ಆ ಸಂಸ್ಥೆಯ ಹಲವಾರು ಯಶಸ್ವಿ ಚಿತ್ರಗಳಲ್ಲಿ ಪ್ರಮುಖ ಪಾತ್ರಧಾರಿಯಾಗಿ ಕಾಣಿಸಿಕೊಂಡರು. ಆಕೆಯ ಜನಪ್ರಿಯತೆ ಟೆಲಿವಿಷನ್ ಸರಣಿಗಳಲ್ಲಿಯೂ ಮುಂದುವರೆಯಿತು.

ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ (1928) ಗೆದ್ದ ಅಮೆರಿಕದ ಹೆರ್ಮಾನ್ ಬ್ರಿಕ್ಸ್ (ಬ್ರೂಸ್ ಬೆನ್ನೆಟ್) ಷಾಟ್‌ಪಟ್ ಪ್ರವೀಣ. ಒಲಿಂಪಿಕ್ಸ್‌ನಲ್ಲಿ ಯಶಸ್ವಿಯಾದ ನಂತರ ಆಕರ್ಷಕ ಮೈಕಟ್ಟಿನ ಇವರನ್ನು ಎಂ.ಜಿ.ಎಂ ಸಂಸ್ಥೆ ಟಾರ್ಜಾನ್ ಪಾತ್ರಗಳಿಗಾಗಿ ಸಹಿ ಮಾಡಿಸಿಕೊಂಡಿತ್ತು. 

ಹೆರ್ಮಾನ್ ಬ್ರಿಕ್ಸ್ ಅನೇಕ ಹಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡು ನಂತರ ಹೊಸ ಹೆಸರಿನೊಂದಿಗೆ (ಬ್ರೂಸ್ ಬೆನ್ನೆಟ್) ವಾರ್ನರ್ ಬ್ರದರ್ಸ್‌ ಚಿತ್ರ ನಿರ್ಮಾಣ ಸಂಸ್ಥೆಗೆ ಸೇರಿ ಹಲವಾರು ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿದರು.

ಈಜು ಕೊಳದಲ್ಲಿ ವಿಜಯಿಗಳಾದ ಅನೇಕ ಒಲಿಂಪಿಕ್ ವೀರರು ಚಿತ್ರ ನಟರಾಗಿಯೂ ಪ್ರಸಿದ್ದಿ ಪಡೆದಿದ್ದು ಅವರ ಸಾಲಿಗೆ ಡ್ಯೂಕ್ ಕಹಾನ್‌ಮೋಕು ಅವರೂ ಸೇರಿದ್ದಾರೆ.

ಮೂರು ಒಲಿಂಪಿಕ್ಸ್ ಕೂಟಗಳಿಂದ ಒಟ್ಟು ಮೂರು ಚಿನ್ನ ಹಾಗೂ ಎರಡು ಬೆಳ್ಳಿ ಪದಕಗಳನ್ನು ಗೆದ್ದುಕೊಂಡ ಹವಾಯಿಯ ಡ್ಯೂಕ್ ಹಾಲಿವುಡ್ ಚಿತ್ರರಂಗದಲ್ಲಿಯೂ ಜನಪ್ರಿಯತೆ ಗಳಿಸಿದ್ದರು. ಇವರು ಅನೇಕ ಚಿತ್ರಗಳಲ್ಲಿ ಖಳನಾಯಕರಾಗಿ ಮಿಂಚಿದರು.
 
1955ರ ವರೆಗೆ ಹಾಲಿವುಡ್‌ನಲ್ಲಿ ತಯಾರಾದ ಅನೇಕ ಚಲನಚಿತ್ರಗಳಲ್ಲಿ ಕಾಣಿಸಿಕೊಂಡ ಡ್ಯೂಕ್ ತನ್ನ ವೈವಿಧ್ಯಮಯ ಅಭಿನಯದಿಂದ ನೋಡುಗರ ಮನಸೂರೆಗೊಂಡರು.
ಒಲಿಂಪಿಕ್ ಚರಿತ್ರೆಯಲ್ಲಿ ಇಂತಹ ಅನೇಕ ಕ್ರೀಡಾಪಟುಗಳು ಚಲನಚಿತ್ರಗಳಲ್ಲಿ ಕಾಣಿಸಿಕೊಂಡರೂ ಯಶಸ್ವಿ ಪಡೆದಿರುವುದು ಬೆರಳೆಣಿಕೆಯಷ್ಟು ಮಂದಿ ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT