ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ನತ್ತ ಕನ್ನಡಿಗನ `ಗುರಿ'

Last Updated 14 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಶೂಟಿಂಗ್ ಕ್ರೀಡೆಯ ಮಟ್ಟಿಗೆ ರಾಷ್ಟ್ರೀಯ  ಎತ್ತರದಲ್ಲಿ ಕನ್ನಡಿಗರ ಸಾಧನೆ ಅಷ್ಟಕಷ್ಟೆ. ಅಭಿನವ್ ಬಿಂದ್ರಾ, ರಾಜ್ಯವರ್ಧನ್ ರಾಥೋಡ್, ಅಂಜಲಿ ಪಾಠಕ್... ಹೀಗೆ ಹತ್ತು ಹಲವು ಹೆಸರುಗಳ ಸಾಲಿನಲ್ಲಿ ಕನ್ನಡಿಗನೊಬ್ಬನ ಹೆಸರು ಇದೀಗ ಮೂಡಿ ಬಂದಿದೆ. ಬೆಂಗಳೂರಿನ ಪಿ.ಎನ್.ಪ್ರಕಾಶ್ ಕಳೆದ ವಾರ ದಕ್ಷಿಣ ಕೊರಿಯಾದಲ್ಲಿ ನಡೆದ ವಿಶ್ವಕಪ್ ಶೂಟಿಂಗ್‌ನಲ್ಲಿ ಕಂಚು ಗೆದ್ದಿದ್ದಾರೆ. ಮಂಗಳೂರಿನ ಸೇಂಟ್ ಅಲೋಷಿಯಸ್ ಹೈಸ್ಕೂಲು, ಬೆಂಗಳೂರಿನ ವಿಜಯಾ ಕಾಲೇಜು, ಅಮೆರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದಿರುವ ಪ್ರಕಾಶ್ ಇದೀಗ ಈ ನೆಲದ ಅಭಿಮಾನದ ಕ್ರೀಡಾತಾರೆಯಾಗಿ ಹೊಳೆಯುತ್ತಿದ್ದಾರೆ. ಇವರು ತಮ್ಮ ಶೂಟಿಂಗ್ ಬದುಕಿನ ಕುರಿತ ಮನದಾಳದ ಅನಿಸಿಕೆಗಳನ್ನು `ಪ್ರಜಾವಾಣಿ' ಜತೆಗೆ ಹಂಚಿಕೊಂಡಿದ್ದಾರೆ.
........

ವಾಹನ ಅಪಘಾತಗಳು ಬಹುತೇಕ ಎಲ್ಲರಿಗೂ ಕೆಟ್ಟ ಅನುಭವಗಳೇ. ನನಗೂ ಹೌದು. ಆದರೆ ಆ ಅಪಘಾತವೇ ನನ್ನ ಬದುಕಿಗೆ ಹೊಸ ತಿರುವು ನೀಡಿದ್ದೊಂದು ವಿಶೇಷ. ಶಾಲಾ ಕಾಲೇಜು ದಿನಗಳಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದ ಕೆಲವು ಕಡೆ ಮೋಟಾರು ರ್‍ಯಾಲಿಯಲ್ಲಿ ಪಾಲ್ಗೊಳ್ಳುತ್ತಿದ್ದ ನನಗೆ ಅದೊಂದು ದಿನ ಸಂಭವಿಸಿದ ಅಪಘಾತದಿಂದಾಗಿ ಮೋಟಾರು ಕ್ರೀಡೆಯಿಂದ ಶೂಟಿಂಗ್‌ನತ್ತ ಹೆಜ್ಜೆ ಹಾಕುವಂತಾಯಿತು. ವಾರದ ಹಿಂದೆ ದಕ್ಷಿಣ ಕೊರಿಯಾದಲ್ಲಿ ನಡೆದ ವಿಶ್ವಕಪ್ ಶೂಟಿಂಗ್‌ನಲ್ಲಿ ನಾನು  ಕಂಚಿನ ಪದಕವನ್ನು ಸ್ವೀಕರಿಸಲು ವಿಜಯ ವೇದಿಕೆಯತ್ತ ಸಾಗುತ್ತಿದ್ದಾಗ ನನ್ನ ತಂದೆ, ನನ್ನ ಬೆಂಗಳೂರು, ಆ ಅಪಘಾತ... ಎಲ್ಲವೂ ನನ್ನ ಸ್ಮೃತಿಪಠಲದಲ್ಲಿ ಮೆರವಣಿಗೆ ನಡೆಸಿದ್ದವು.

ಅಂದು ದಕ್ಷಿಣ ಕೊರಿಯಾದ ಚಾಂಗ್ವಾನ್ ನಗರದ ನೆತ್ತಿಯ ಮೇಲಿಂದ ಸೂರ್ಯ ಪಡುವಣದತ್ತ ಜಾರುತ್ತಿದ್ದ. ಇಂಟರ್‌ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಷನ್ (ಐಎಸ್‌ಎಸ್‌ಎಫ್)  ವತಿಯಿಂದ ಅಲ್ಲಿ ನಡೆಯುತ್ತಿದ್ದ ವಿಶ್ವಕಪ್ ಶೂಟಿಂಗ್‌ನ 10 ಮೀಟರ್ಸ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ನಾನು ಹತ್ತು ಮೀಟರ್ಸ್ ದೂರದ ವೃತ್ತಾಕಾರದ ಬಣ್ಣಗಳತ್ತ ಗುರಿ ಇಟ್ಟು ನಿಂತಿದ್ದೆ. ಚೀನಾದ ವಾಂಗ್‌ಜೀವಿ, ವಿಯಟ್ನಾಮ್‌ನ ಹ್ವಾಂಗ್ ಕ್ಸುಯಾನ್‌ವಿನ್, ಜಪಾನ್‌ನ ಮಟ್ಸುದಾ ಟೊಮೊಯುಕಿ, ದಕ್ಷಿಣ ಕೊರಿಯಾದ ಲೀ ಡೇಮ್ಯುಂಗ್, ಜರ್ಮನಿಯ ಫೋರಿಯಾನ್, ರಷ್ಯಾದ ಎರೆಮೊಮ್ ಸೇರಿದಂತೆ ಅನೇಕ ಘಟಾನುಘಟಿಗಳು ಸಾಲು ಸಾಲಾಗಿ ನನ್ನಂತೆಯೇ ನಿಂತಿದ್ದರು. ನನ್ನ ಮನಸ್ಸಿನಲ್ಲಿ ಬಲು ದೂರದ ಭಾರತ, ಬೆಂಗಳೂರಿನ ನೆನಪುಗಳು ಒತ್ತರಿಸಿ ಬರುತ್ತಲೇ ಇದ್ದವು... ಕೊನೆಗೆ ಅದೊಂದೇ ಧ್ಯಾನ... ನನ್ನ ಎದುರು ಇರುವ ಆ ಗುರಿಯತ್ತಲೇ ಏಕಾಗ್ರಚಿತ್ತದಿಂದ ನೋಡತೊಡಗಿದೆ.

ನನ್ನ ಗುರಿ ಕರಾರುವಾಕ್ಕಾಗಿತ್ತು. ರೋಮಾಂಚನಗೊಳ್ಳಲಿಲ್ಲ. ಎಲೆಕ್ಟ್ರಾನಿಕ್ ಬೋರ್ಡ್‌ನ ಮೇಲೆ ನನ್ನ ಹೆಸರಿನ ಮುಂದೆ ಪಾಯಿಂಟ್ಸ್ ಏರತೊಡಗಿತ್ತು... ಹೌದು, ಅಂತಿಮದಲ್ಲಿ ನಾನು 180.2 ಪಾಯಿಂಟ್ಸ್ ಗಳಿಸಿದ್ದೆ. ಆದರೆ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಬಂಗಾರದ ಸಾಮರ್ಥ್ಯ ತೋರಿದ್ದ ವಿಯಟ್ನಾಮ್‌ನ ಅನುಭವಿ ಶೂಟರ್ ವಿನ್ ಹೊಂಗ್ 200.8 ಪಾಯಿಂಟ್ಸ್ ಗಳಿಸಿದ್ದು, ಅಗ್ರಸ್ಥಾನದಲ್ಲಿದ್ದರು. ಕಳೆದ ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಚೀನಾದ ವಾಂಗ್‌ಜೀವಿ 200.1 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರು. ನನ್ನ ಹೆಸರು ಮೂರನೇ ಸ್ಥಾನದಲ್ಲಿತ್ತು. ನನಗಾದ ಸಂತಸ               ವರ್ಣನಾತೀತ. ಬದುಕಿನಲ್ಲಿ ಮರೆಯಲಾರದ ಕ್ಷಣ ಅದು.

ಆ ಕ್ಷಣದಲ್ಲಿ ನಾನು ಬೆಂಗಳೂರಿಗೆ ಫೋನಾಯಿಸಿದೆ. ನನ್ನ ಕೋಚ್ ಕೂಡಾ ಆಗಿರುವ ನನ್ನ ತಂದೆಯ ಜತೆಗೆ ಮಾತನಾಡಿದೆ. ಆ ಕ್ಷಣದಲ್ಲಿ ಮತ್ತೆ ಆ ಅಪಘಾತದ ಕ್ಷಣಗಳು ನೆನಪಾಯಿತು. ದಶಕದ ಹಿಂದೆ ಮೋಟಾರು ಬೈಕು ರ್‍ಯಾಲಿಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ನಾನು ಅದೊಂದು ದಿನ ಬೈಕಿನಿಂದ ಬಿದ್ದು, ಗಾಯಗೊಂಡು ಕೆಲವು ವಾರ ಮಲಗಿದ್ದಲ್ಲೇ ಇದ್ದೆ. ಚೇತರಿಸಿಕೊಂಡ ನಂತರ ಅದೊಂದು ದಿನ ತಂದೆ ನನ್ನನ್ನು ಶೂಟಿಂಗ್ ರೇಂಜ್‌ನತ್ತ ಕರೆದೊಯ್ದಿದ್ದರು. ಆಗ ನಾನು ಅವರನ್ನುದ್ದೇಶಿಸಿ  `ಇದೇನು, ರೈಫಲ್ ಹಿಡಿದುಕೊಂಡು ಉದ್ದಕ್ಕೆ ಮಲಗಿ ಗುರಿ ಇಡುತ್ತಿದ್ದೀರಲ್ಲಾ, ಇದೂ ಒಂದು ಕ್ರೀಡೆಯಾ...' ಎಂದು ತಮಾಷೆ ಮಾಡಿದ್ದೆ. ಆಗ ಅವರು `ಧೈರ್ಯವಿದ್ದರೆ ನೀನೂ ಈ ರೈಫಲ್ ಹಿಡಿದು ಸ್ಪರ್ಧಿಸು ನೋಡುವಾ...' ಎಂದು ಸವಾಲು ಒಡ್ಡಿದ್ದರು.

ಈ ಸಂದರ್ಭದಲ್ಲಿ ನನ್ನ ತಂದೆಯ ಬಗ್ಗೆ ಹೇಳಲೇಬೇಕಿದೆ. ಸರ್ಕಾರದಲ್ಲಿ ಹಿರಿಯ ಅಧಿಕಾರಿಯಾಗಿದ್ದು ನಿವೃತ್ತರಾಗಿರುವ ನನ್ನ ತಂದೆ ಪಿ.ಎನ್.ಪಾಪಣ್ಣ ಅವರಿಗೆ ಬಹಳ ಹಿಂದಿನಿಂದಲೂ ಫೋಟೋಗ್ರಾಫಿ, ಶೂಟಿಂಗ್ ಇತ್ಯಾದಿ ಹತ್ತು ಹಲವು ಹವ್ಯಾಸ. ಇವರು ಐಎಸ್‌ಎಸ್‌ಎಫ್ ವತಿಯಿಂದ ಫಿನ್ಲೆಂಡ್‌ನಲ್ಲಿ ನಡೆದಿದ್ದ ಶೂಟಿಂಗ್ ತರಬೇತಿಗೆ ಸಂಬಂಧಿಸಿದ ಪರೀಕ್ಷೆಯಲ್ಲಿ ತೇರ್ಗಡೆಗೊಂಡು `ಸಿ' ಸರ್ಟಿಫಿಕೆಟ್ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಆರ್ಮಿ ಪ್ಯಾರಾ ರೆಜಿಮೆಂಟ್‌ನಲ್ಲಿ ಕೋಚ್ ಆಗಿದ್ದರು. ನನಗೆ ತರಬೇತಿ ನೀಡಲಿಕ್ಕಾಗಿ ಅವರು ಆರ್ಮಿ ಯೋಧರಿಗೆ ತರಬೇತು ನೀಡುವ ಹುದ್ದೆಯನ್ನೇ ತೊರೆದರು.
ಅಂದು ನನ್ನ ತಂದೆ ನೀಡಿದ್ದ ಸವಾಲಿಗೆ ನಾನೂ ಒಪ್ಪಿದೆ.

ಗಾಯಾಳುವಾಗಿದ್ದರಿಂದ ರ್‍ಯಾಲಿಗಳಲ್ಲಿ ಪಾಲ್ಗೊಳ್ಳುವಂತಿರಲಿಲ್ಲ ತಾನೆ. ರೈಫಲ್ ಶೂಟಿಂಗ್ ಅಭ್ಯಾಸದಲ್ಲಿ ತೊಡಗಿದೆ. ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ರೈಫಲ್ ಸಂಸ್ಥೆಯ ಶೂಟಿಂಗ್ ರೇಂಜ್‌ಗೆ ನಿತ್ಯವೂ ಹೋಗತೊಡಗಿದೆ. ರಾಜ್ಯ ತಂಡಕ್ಕೂ ಆಯ್ಕೆಯಾದೆ. ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದೆ. ಆಗ ರಾಜ್ಯ ರೈಫಲ್ ಸಂಸ್ಥೆಯ ಮುಖ್ಯಸ್ಥರಾಗಿದ್ದ ನಾಗರಾಜರಾವ್ ಜಗದಾಳೆ ನನಗೆ ಇನ್ನಿಲ್ಲದ ಪ್ರೋತ್ಸಾಹ ನೀಡಿದ್ದರು. `ರಾಷ್ಟ್ರೀಯ ಕೂಟಗಳಲ್ಲಿ ಕರ್ನಾಟಕದವರ ಬಗ್ಗೆ ಇತರ ರಾಜ್ಯಗಳ ಎಲ್ಲರಿಗೂ ಭಯ ಮೂಡಬೇಕು. ಆ ಮಟ್ಟಿಗಿನ ಪ್ರತಿಭಾವಂತ ಶೂಟರ್‌ಗಳು ನಮ್ಮಲ್ಲಿಂದ ಬರಬೇಕು' ಎಂದು ಅವರು ಹೇಳುತ್ತಲೇ ಇದ್ದುದು ನನಗಿನ್ನೂ ನೆನಪಿದೆ.

ಹೀಗೆ ನನ್ನಲ್ಲಿ ಶೂಟಿಂಗ್ ಬಗ್ಗೆ ಅತೀವ ಆಸಕ್ತಿ ಮೂಡಿದ್ದ ದಿನಗಳಲ್ಲೇ ಮತ್ತೊಮ್ಮೆ ರಸ್ತೆ ಅಪಘಾತಕ್ಕೆ ಸಿಲುಕಿ ಕೆಲವು ದಿನಗಳ ಕಾಲ ಮಲಗಬೇಕಾಯಿತು. ಚೇತರಿಸಿಕೊಂಡ ನಾನು ಶೂಟಿಂಗ್ ರೇಂಜ್‌ನತ್ತ ಹೋಗಿ ಎಲ್ಲರೂ ಅಭ್ಯಾಸ ನಡೆಸುವುದನ್ನು ನೋಡುತ್ತಾ ಸುಮ್ಮನೆ ಕುಳಿತ್ತಿರುತ್ತಿದ್ದೆ. ಆಗ ಅಲ್ಲಿ ರೇಂಜ್ ಇನ್‌ಚಾರ್ಜ್ ಆಗಿದ್ದ ಪಾಲ್ ಎಂಬುವವರು `ಇದೇಕೆ ಸುಮ್ಮನೆ ಕುಳಿತ್ತಿದ್ದೀರಿ' ಎಂದು ಪ್ರಶ್ನಿಸಿದ್ದರು. ಆಗ ನನಗಾದ ಅಪಘಾತದ ಬಗ್ಗೆ ಅವರ ಗಮನಕ್ಕೆ ತಂದು `ಎಡಗೈ ಮಣಿಕಟ್ಟಿನ ಬಳಿ ಇನ್ನೂ ನೋವಿದೆ. ಹೀಗಾಗಿ ನಾನು ರೈಫಲ್ ಹಿಡಿಯಲಾಗುತ್ತಿಲ್ಲ' ಎಂದೆ. ಆಗ ಅವರು `ಹಾಗಿದ್ದರೆ ಬಲಗೈ ಸರಿ ಇದೆಯಲ್ಲಾ, ಪಿಸ್ತೂಲಿನಲ್ಲಿ ಅಭ್ಯಾಸ ನಡೆಸಬಹುದಲ್ಲಾ' ಎಂದರು. ಅಂದು ಹಿಡಿದ ಪಿಸ್ತೂಲನ್ನು ಇಂದಿಗೂ ನಾನು ಬಿಟ್ಟಿಲ್ಲ. ಆ ದಿನಗಳಲ್ಲೇ  ಪಂಜಾಬ್‌ನಲ್ಲಿ ನಡೆದ ಜಿ.ವಿ.ಮೌಲಂಕರ್ ಸ್ಮರಣಾರ್ಥ ಪ್ರಿ ನ್ಯಾಶನಲ್ ಟೂರ್ನಿಯಲ್ಲಿಯೂ ಪಾಲ್ಗೊಂಡಿದ್ದೆ.

2004ರಲ್ಲಿ ಕೆನಡಾದಲ್ಲಿ ಉದ್ಯೋಗ ಸಿಕ್ಕಿತು. ನಾನು ಅಲ್ಲಿಗೆ ತೆರಳಿ ಐದು ವರ್ಷಗಳ ಕಾಲ ಅಲ್ಲಿದ್ದೆ. ಹೀಗಾಗಿ ನನ್ನ ಶೂಟಿಂಗ್ ಚಟುವಟಿಕೆ ಅರ್ಧ ದಶಕದ ಕಾಲ ನಿಂತೇ ಹೋಯಿತು. 2009ರಲ್ಲಿ ವಾಪಸು ಬಂದ ನಂತರ ಮತ್ತೆ ಶೂಟಿಂಗ್ ರೇಂಜ್‌ನತ್ತ ಹೋಗತೊಡಗಿದೆ. ಅದೇ ವರ್ಷ ಜಲಂಧರ್‌ನಲ್ಲಿ ಮತ್ತು ಅದರ ಮರುವರ್ಷ ಪುಣೆಯಲ್ಲಿ ನಡೆದ ರಾಷ್ಟ್ರೀಯ ಕೂಟಗಳಲ್ಲಿ ರಜತ ಪದಕ ಗೆದ್ದೆ.  ಕಾಮನ್‌ವೆಲ್ತ್ ಕೂಟದ ಆಯ್ಕೆ ಟ್ರಯಲ್ಸ್‌ನಲ್ಲಿ ಅನಾರೋಗ್ಯದ ಕಾರಣ ಪಾಲ್ಗೊಳ್ಳಲಿಲ್ಲ. ಈ ನಡುವೆ ಲಂಡನ್, ಮಿಲನ್, ಮ್ಯೂನಿಕ್ ನಗರಗಳಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್ ಕೂಟಗಳಲ್ಲಿ ನಾನು ಭಾರತ ತಂಡವನ್ನು ಪ್ರತಿನಿಧಿಸಿದ್ದೆ. ಅಮೆರಿಕಾದ ಜಾರ್ಜಿಯಾದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಮೊದಲ ಸಲ ಪಾಲ್ಗೊಂಡಿದ್ದೆ. ಆಗ ಬಳಸಿದ್ದ ಪಿಸ್ತೂಲು ಸರಿ ಇರಲಿಲ್ಲ. ಇಂತಹ ಅನುಭವಗಳು ಚಾಂಗ್ವಾನ್‌ನಲ್ಲಿ ನನಗೆ ಬಹಳ ನೆರವಾಯಿತು.

ಅಂದು ಪದಕ ಗೆದ್ದ ದಿನ ನನ್ನ ತಂದೆ ನನಗೆ ಫೋನಾಯಿಸಿ ಅಭಿನಂದಿಸುತ್ತಾ `ನನಗೆ ಗೊತ್ತಿದ್ದ ಮಟ್ಟಿಗೆ ಇಂತಹ ಸಾಧನೆ ಮಾಡಿದ ಮೊದಲ ಕನ್ನಡಿಗ ನೀನು' ಎಂದಾಗ ನನಗೆ ಅತೀವ ಖುಷಿಯಾಗಿತ್ತು. ಆ ಸಂದರ್ಭದಲ್ಲಿ ರಾಜೇಶ್ ಜಗದಾಳೆಯವರಿಗೆ ಈ ಶುಭ ಸುದ್ದಿ ತಿಳಿಸಲು ಫೋನ್ ಎತ್ತಿಕೊಂಡಿದ್ದೆ. ಬಹುಶಃ ಜಗದಾಳೆ ಉದ್ದಿಮೆ ಸಂಸ್ಥೆಯ ಪ್ರಾಯೋಜಕತ್ವ ಸಿಗದೇ ಇದ್ದರೆ ನಾನು ಈ ಎತ್ತರಕ್ಕೆ ಏರಲು ಸಾಧ್ಯವೇ ಆಗುತ್ತಿರಲಿಲ್ಲ.

ಮೊನ್ನೆ ಚಾಂಗ್ವಾನ್‌ನಲ್ಲಿ ಇತರ ದೇಶಗಳ ಸ್ಪರ್ಧಿಗಳು ಪರಸ್ಪರ ಮಾತಿಗಿಳಿದಾಗ  ಭಾರತದ ಬಗ್ಗೆಯೂ ಮಾತನಾಡುವುದನ್ನು ಕಂಡಿದ್ದೇನೆ. ಹಿಂದೆಲ್ಲಾ ಚೀನಾ, ಕೊರಿಯಾ, ರಷ್ಯಾ, ಜಪಾನ್ ಸ್ಪರ್ಧಿಗಳ ಬಗ್ಗೆಯೇ ಮಾತುಗಳು ಕೇಳಿ ಬರುತ್ತಿದ್ದವು. ಭಾರತ ಇವತ್ತು ವಿಶ್ವ ಶೂಟಿಂಗ್‌ನಲ್ಲಿ ಪದಕ ಗೆದ್ದಿದ್ದು ಎರಡು ಅಥವಾ ಮೂರು ಇರಬಹುದು. ಆದರೆ ಬಹಳಷ್ಟು ಸ್ಪರ್ಧೆಗಳಲ್ಲಿ ಗಮನ ಸೆಳೆದಿದೆ ಎನ್ನುವುದನ್ನು ಮರೆಯುವಂತಿಲ್ಲ. ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಭಾರತದಲ್ಲಿ ಅತ್ಯುತ್ತಮ ಭವಿಷ್ಯವಿದೆ. ನಾನೂ ಕೂಡಾ ಮುಂದಿನ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಮಹದಾಸೆ ಇರಿಸಿಕೊಂಡಿದ್ದೇನೆ. ಈ ನಿಟ್ಟಿನಲ್ಲಿ ಈಗಿನಿಂದಲೇ ತರಬೇತಿ ಆರಂಭಿಸಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT