ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಚರಂಡಿ ಕಾಮಗಾರಿ; ಸವಾರರಿಗೆ ನರಕ

Last Updated 12 ಜುಲೈ 2013, 12:46 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಬಹಳಷ್ಟು  ಕಡೆಗಳಲ್ಲಿ ರಸ್ತೆಗಳು ಹದೆಗೆಟ್ಟಿದ್ದು ಹೊಂಡಗುಂಡಿಗಳಿಂದ ಅವಾಂತರ ಎಬ್ಬಿಸುವುದು ಸಾರ್ವಕಾಲಿಕ ಸಮಸ್ಯೆ ಎಂದು ನಗರವಾಸಿಗಳು, ಸವಾರರು ಅಂದುಕೊಳ್ಳುವುದು ಒಂದೆಡೆಯಾದರೆ, ಒಳಚರಂಡಿ ಕಾಮಗಾರಿಗಳಿಗಾಗಿ ರಸ್ತೆಯ ಬದಿಯನ್ನು ಇಲ್ಲವೇ ಅಡ್ಡರಸ್ತೆಗಳನ್ನು ಅಗೆದು ಹಾಕಿ ಬಳಿಕ ಅದನ್ನು ಕಾಟಾಚಾರಕ್ಕೆ ಮುಚ್ಚಿ, ರಸ್ತೆ ಹಾಳುಗೆಡವಿ ಸವಾರರಿಗೆ  ದಿನನಿತ್ಯ ನರಕ ದರ್ಶನ ಮಾಡಿಸುವ ಕೆಲಸವನ್ನು ಪಾಲಿಕೆ, ಜಲಮಂಡಳಿ ಹಾಗೂ  ಕೆಯುಡಿಸಿಪಿ ಮಾಡುತ್ತಿವೆ ಎನ್ನುವ ದೂರು ವ್ಯಾಪಕವಾಗಿದೆ.

ನಗರದ ಯಾವುದೇ ಒಂದು ರಸ್ತೆ ಕೂಡ ಹೊಂಡಗುಂಡಿಗಳಿಂದ ಮುಕ್ತವಾಗಿಲ್ಲ ಎನ್ನುವುದು ಸಾರ್ವಜನಿಕರ ದೂರು. ಬೇಸಿಗೆಯಲ್ಲಿ ಅವುಗಳನ್ನು ದುರಸ್ತಿ ಮಾಡುವ ಬಗ್ಗೆ  ಸಂಬಂಧಪಟ್ಟವರು ಕಿಂಚಿತ್ತೂ ಗಮನ ಹರಿಸಿಲ್ಲ. ಬದಲಿಗೆ ಈಗ ಮಳೆಗಾಲ ಬಂದಾಗ ರಸ್ತೆಯ ಬದಿಯಲ್ಲಿ ಒಳಚರಂಡಿ ಪೈಪುಗಳನ್ನು ಬದಲಾಯಿಸುವ ಕಾಮಗಾರಿಗೆ ಕೈ ಹಾಕಿರುವ ಕೆಯುಡಿಸಿಪಿ, ಪಾಲಿಕೆ ಮತ್ತು ಜಲಮಂಡಳಿ ತಮ್ಮ   ನಿರ್ಲಕ್ಷ್ಯಗಳಿಂದಾಗಿ ಕಾಟಾಚಾರಕ್ಕೆ ಕೆಲಸ ಮುಗಿಸಿ, ಅಗೆದು ಹಾಕಿದ ರಸ್ತೆಗಳನ್ನು ಸರಿಪಡಿಸುವ ಗೋಜಿಗೆ ಹೋಗದೇ ಹಾಗೆಯೇ ಬಿಟ್ಟು, ಲೊಕೋಪಯೋಗಿ ಇಲಾಖೆಯತ್ತ ಬೆರಳು ತೋರಿಸಿ, ಮತ್ತೆ ಬೇರೆಡೆ ಕಾಮಗಾರಿ ಮಾಡಲು ಹೊರಟು ಹೋಗುತ್ತಿದ್ದಾರೆ, ಅಲ್ಲಿಯೂ ಇಂಥದೇ ಅವಾಂತರ ಮಾಡುತ್ತಾರೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದಕ್ಕೆ  ನಗರದ ಬಹಳಷ್ಟು ರಸ್ತೆ ಬದಿಯಲ್ಲಿ ಈಗಾಗಲೇ ನಡೆದಿರುವ ಇಂತಹ ಅವ್ಯವಸ್ಥಿತ ಕಾಮಗಾರಿಗಳನ್ನು ಉದಾಹರಿಸಬಹುದು. ವಿದ್ಯಾನಗರದ ಕೆನರಾ ಬ್ಯಾಂಕ್ ಪಕ್ಕದ ರಸ್ತೆಯಲ್ಲಿ ಒಳಚರಂಡಿ ಪೈಪ್ ಹಾಕುವ ಕೆಲಸಕ್ಕಾಗಿ ಅಗೆದು ಹಾಕಿದ ರಸ್ತೆಯನ್ನು ಮತ್ತೆ ಸರಿ ಪಡಿಸದೇ ತಿಂಗಳುಗಳೇ ಕಳೆದವು. ಇನ್ನು ದೇಶಪಾಂಡೆ ನಗರದಿಂದ ಗುಜರಾತ್ ಭವನದ ಮಾರ್ಗವಾಗಿ  ವಿಜಯನಗರದೆಡೆಗೆ ಸಾಗುವ ಮುಖ್ಯ ರಸ್ತೆಯನ್ನು ನೋಡಿದರೂ ಸಾಕು. ಎಷ್ಟೊಂದು ನಿರ್ಲಕ್ಷ್ಯದಿಂದ ಕೆಲಸ ನಡೆಯುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುವುದು ಕಂಡು ಬರುತ್ತಿದೆ.

ಇಷ್ಟು ಸಣ್ಣ ಕೆಲಸಕ್ಕೆ ಇಷ್ಟು ದಿನ ಬೇಕೆ?
`ಕಳೆದೊಂದು ತಿಂಗಳಿನಿಂದ ಇಲ್ಲಿ `ಎಚ್‌ಡಿಎಂಸಿ ಕಾಮಗಾರಿ' ಎಂದು ಬೋರ್ಡ್ ಹಾಕಿಕೊಂಡು ಪೈಪ್ ದುರಸ್ತಿ ಕಾರ್ಯ ನಡೆಸಿದ್ದಾರೆ. ಕೇವಲ 200 ಮೀಟರ್ ದೂರ ಕೊಳವೆಗಳನ್ನು ಹಾಕಲು ಇಷ್ಟೊಂದು ದಿನ ಬೇಕೆ? ಅಷ್ಟೇ ಅಲ್ಲ ಇಲ್ಲಿ ರಸ್ತೆಯ ಅರ್ಧಭಾಗವನ್ನು ಅಗೆದು ಹಾಕಿದ್ದು ಮನೆಯ ಮುಂದಿನಿಂದ ನಾವು ಹಾದು ಹೋಗುವಂತೆಯೂ ಇಲ್ಲ, ಈಗಂತೂ ಜೋರು ಮಳೆ ಸುರಿದು ಆ ರಾಡಿ ಮಣ್ಣೆಲ್ಲ ರಸ್ತೆಗೆ ಸೇರಿಕೊಂಡು ಈ ಮಾರ್ಗದಲ್ಲಿ ಸಂಚರಿಸುವವರು ಪರದಾಡುತ್ತಿದ್ದಾರೆ. ಇಲ್ಲಿನ  ಕಾಮಗಾರಿ ಅವಾಂತರ ಎಂಥವರಿಗೂ ಸಿಟ್ಟು ತರಿಸುತ್ತದೆ' ಎಂದು ಸ್ಥಳೀಯ ನಿವಾಸಿ ನಿಜಗುಣಪ್ಪ  `ಪ್ರಜಾವಾಣಿ'ಯೊಂದಿಗೆ ದೂರಿಕೊಂಡರು.

ಅಗೆದ ರಸ್ತೆ ದುರಸ್ತಿ ಮಾಡೋದು ಬೇಡ್ವೆ ?: `ಅಲ್ರಿ, ಛಲೋ ರಸ್ತೆಯನ್ನು ಪೈಪ್ ಹಾಕೋದಕ್ಕೆ ಅಂತ ಅಗೆದು ಹಾಕ್ತಾರಲ್ರೀ, ಮತ್ತ್  ಯಾರ‌್ರಿ ಅದನ್ನು ದುರಸ್ತಿ ಮಾಡೋದು? ಕಾಟಾಚಾರಕ್ಕೆ ಅಗೆದ ಜಾಗದಲ್ಲಿ ಮಣ್ಣು ಹಾಕಿ ಹಂಗೇ ಹೊರಟು ಹೋಗ್ತಾರ‌್ರಿ, ಮಳೆಗಾಲ ಬೇರೆ, ಎಷ್ಟೊಂದು ಅವಾಂತರ ಆಗ್ತೈತಿ ಎನ್ನೊದು ಈ ಅಧಿಕಾರಿಗಳಿಗೆ, ಇಲ್ಲಿ ಕೆಲಸ ಮಾಡೋರಿಗೆ ಅರ್ಥ ಆಗವಲ್ಲದೇನ್ರಿ?' ಎಂದು ಸಿಟ್ಟಿನಿಂದ ತಮ್ಮ ಆಕ್ರೋಶ ವ್ಯಕ್ತಪಡಿಸಿದವರು ಗುರುರಾಜ ಮಠಪತಿ.

ಒಟ್ಟಿನಲ್ಲಿ  ಇಂತಹ ಅಸಮರ್ಪಕ ಕೆಲಸಗಳನ್ನು ಕಂಡು ಅಸಹನೆ ಹಾಗೂ ಆಕ್ರೋಶದ ಮಾತುಗಳನ್ನು  ನಗರದ ಯಾವ ಭಾಗಕ್ಕೆ ಹೋದರೂ ಸಾರ್ವಜನಿಕರು, ವಾಹನ ಸವಾರರು ಆಡುತ್ತಿದ್ದಾರೆ. ಆದರೆ ಕಾಮಗಾರಿ ನಡೆಸುತ್ತಿರುವವರಿಗೆ ಮಾತ್ರ ಇವ್ಯಾವವೂ ಕೇಳುತ್ತಿಲ್ಲ, ಇಲ್ಲವೇ ಕೇಳಿದರೂ ಕೂಡ ಆ ಬಗ್ಗೆ `ನಡಿತದೆ ಬಿಡ್ರಿ, ಏನಾಗೋದೈತಿ' ಎನ್ನುವ ಉದಾಸೀನ ಭಾವ ಎಂದು ಸಾರ್ವಜನಿಕರು ಬೇಸರದಿಂದ ದೂರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT