ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಕುಳಿ ಆಡಿದರೆ ಊರಿಗೆ ಕೇಡಂತೆ...!

Last Updated 19 ಮಾರ್ಚ್ 2011, 6:25 IST
ಅಕ್ಷರ ಗಾತ್ರ

ಗಜೇಂದ್ರಗಡ: ಕಾಮಣ್ಣನ ಮಕ್ಕಳು..ಏನೇನು ಕದ್ದರು... ಎಂದು ರಾಗಬದ್ಧವಾಗಿ ಹಾಡುವುದು, ವ್ಯಕ್ತಿಯೊಬ್ಬರನ್ನು ಹೆಣ ಮಾಡಿ ಹಾಸ್ಯ, ವ್ಯಂಗ್ಯ ವಿಧವಿಧವಾಗಿ ಅಳುವ ದೃಶ್ಯಗಳು 15ದಿನಗಳ ಹೋಳಿ ಹಬ್ಬದ ಸಂದರ್ಭದಲ್ಲಿ ಎಲ್ಲೆಡೆ ಕಂಡು ಬರುವುದು ಸರ್ವೆ ಸಾಮಾನ್ಯ.ಆದರೆ ಇದಕ್ಕೆ ಅಪವಾದವಾಗಿವೆ ಇಲ್ಲಿಗೆ ಸಮೀಪದ ಕೆಲ ಗ್ರಾಮಗಳು. ವಿಶೇಷವಾಗಿ ಗಂಡು ಮಕ್ಕಳ ಹಬ್ಬವೆಂದು ಕರೆಯಲ್ಪಡುವ ಹೋಳಿ ಹಬ್ಬದ ಆಚರಣೆ ಇಲ್ಲಿ ಇಲ್ಲವೇ ಇಲ್ಲ. ಹೀಗಾಗಿ ಈ ಗ್ರಾಮಗಳಲ್ಲಿ ಮಕ್ಕಳು, ಯುವಕರು ಯಾರೂ ಕೂಡ ಹಲಿಗೆ ಬಾರಿಸುವುದು, ಹೆಣ ಮಾಡಿ ಅಳುವುದು, ಬಾಯಿ ಬಡಿದುಕೊಳ್ಳುವುದು, ಓಕುಳಿಯಾಡಿ ಸಂಭ್ರಮಿಸುವುದೇ ಇಲ್ಲವೇ ಇಲ್ಲ.

ಓಕುಳಿಯಾಡಿದರೆ ಊರಿಗೆ ಕೇಡಾಗುತ್ತದೆ ಎಂದು ಇಲ್ಲಿನ ಜನರು ಹಿಂದಿನಿಂದ ನಡೆದುಕೊಂಡು ಬಂದಿದ್ದಾರೆ. ಹೀಗಾಗಿಯೇ ಇಲ್ಲಿಗೆ ಸಮೀಪದ ಕಾಲಕಾಲೇಶ್ವರ, ಭೈರಾಪೂರ, ಜಿಗೇರಿ, ರಾಜೂರ, ದಿಂಡೂರ, ಲಕ್ಕಲಕಟ್ಟಿ ಮತ್ತು ನಾಗೇಂದ್ರಗಡ ಗ್ರಾಮಗಳು ಹೋಳಿ ಹಬ್ಬದ ಸಡಗರದಿಂದ ದೂರವೇ ಉಳಿದಿವೆ. ಇದರಿಂದ ಇಲ್ಲೆಲ್ಲ ರತಿಪತಿಗೆ ಪೂಜೆ, ನೈವೇದ್ಯ ಅರ್ಪಣೆ ಇಲ್ಲ. ದಹನ ಕ್ರಿಯೆ ಯಾವುದು ನಡೆಯುವುದಿಲ್ಲ.

ಈ ಭಾಗದ ಆರಾಧ್ಯ ದೇವನಾಗಿರುವ ಶ್ರೀ ಕಾಲಕಾಲೇಶ್ವರನ ರುದ್ರಭೂಮಿ ಎಂದೇ ಗುರುತಿಸಲ್ಪಡುವ ಈ ಗ್ರಾಮಗಳಲ್ಲಿ ಬೆಂಕಿ ಉರುಸುವುದು ಕೇಡಿಗೆ ಆಹ್ವಾನ ಕೊಟ್ಟಂತೆ. ನಮ್ಮ ಹಿರಿಯರು ನಡೆಸಿಕೊಂಡು ಬಂದಿರುವ ನಂಬಿಕೆಯನ್ನು ನಾವು ಕೂಡ ಮುಂದುವರೆಸಿದ್ದೇವೆ ಎಂದು ಅಲ್ಲಿನ ಯುವಕರು ತಿಳಿಸುತ್ತಾರೆ.

ಅಂದಾಜು 250ರಿಂದ 300ವರ್ಷಗಳಿಂದಲೂ ಈ ರುದ್ರಭೂಮಿಗಳಲ್ಲಿ ಹೋಳಿಯ ಆಚರಣೆ ನಡೆಯುತ್ತಿಲ್ಲ ಎನ್ನುವ ಮಾತಿದೆ. ಸುಮಾರು 70-75ವರ್ಷಗಳ ಹಿಂದೆ ಕಾಲಕಾಲೇಶ್ವರನ ರುದ್ರಭೂಮಿಯಾದ ರಾಜೂರ ಗ್ರಾಮದಲ್ಲಿ ಹೋಳಿ ಹುಣ್ಣಿಮೆ ಆಚರಿಸಿ ಕಾಮದಹನ ಮಾಡಿದರಂತೆ. ಅದೇ ಸಂದರ್ಭದಲ್ಲಿ ಗ್ರಾಮದಲ್ಲಿ ಅನೇಕ ಗುಡಿಸಲುಗಳಲ್ಲಿ ಬೆಂಕಿ ಕಾಣಿಸಿಕೊಂಡು ಜನರು ತೀವ್ರ ತೊಂದರೆ ಅನುಭವಿಸಿದ್ದರಂತೆ. ಮತ್ತೆ 10ವರ್ಷಗಳ ನಂತರ ಅಲ್ಲಿನ ಜನರು ಮತ್ತೊಮ್ಮೆ ಹಬ್ಬ ಆಚರಿಸಿದಾಗಲೂ ಅದೇ ಸ್ಥಿತಿ ನಿರ್ಮಾಣವಾಯಿತಂತೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ. ಹೀಗಾಗಿ ಇಲ್ಲಿನ ಜನರು ಹೋಳಿ ಹಬ್ಬದಿಂದ ದೂರ ಉಳಿದಿದ್ದಾರೆ. ಇತೆರೆ ಗ್ರಾಮಗಳಂತೆ ನಮ್ಮಲ್ಲಿ ಹೋಳಿ ಹಬ್ಬದ ಸುಳಿವೇ ಇರುವುದಿಲ್ಲ ಎಂದು ರಾಜೂರ ಗ್ರಾಮದ ಡಾ.ಮಲ್ಲಿಕಾರ್ಜುನ ಕುಂಬಾರ ಹೇಳುತ್ತಾರೆ.

 ವಿಚಿತ್ರ ಎನ್ನುವಂತೆ ಈ ಗ್ರಾಮಗಳನ್ನು ಹೊರತುಪಡಿಸಿದರೆ ಕಾಲಕಾಲೇಶ್ವರ ಮತ್ತು ರಾಜೂರ ಗ್ರಾಮಗಳ ಮಧ್ಯ ಇರುವ ಪುರ್ತಗೇರಿ ಗ್ರಾಮದಲ್ಲಿ ಹಬ್ಬದ ಆಚರಣೆ ಇರುತ್ತದೆ.
ರತಿಪತಿಗೆ ಪೂಜೆಯು ಇಲ್ಲ; ಜನರಿಗೆ ಹೋಳಿಗೆ ರುಚಿಯು ಇಲ್ಲ : ಹೋಳಿಯಾಡದಿದ್ದರೆ ಹೋಳಿಗೆ ತಿನ್ನಬಾರದೇ ಎನ್ನುವ ಮಾತು ಇದೆ. ಆದರೆ, ರುದ್ರಭೂಮಿಯ ಈ ಗ್ರಾಮಗಳಲ್ಲಿ ಹಿರಿಯರು ನಡೆಸಿಕೊಂಡು ಬಂದಿರುವ ರೂಢಿಯಂತೆ ಬಹುತೇಕರು ಹೋಳಿ ಹುಣ್ಣಿಮೆ ಆಚರಿಸುವುದಿಲ್ಲ. ಹೀಗಾಗಿ ಇಲ್ಲಿ ರತಿಪೂಜೆಯೂ ಇಲ್ಲ; ಜನರಿಗೆ ಹೋಳಿ ಹುಣ್ಣಿಮೆಯ ಹೋಳಿಗೆ ರುಚಿಸುವ ಭಾಗ್ಯವೂ ಇಲ್ಲ.ಹೋಳಿಯಾಟದಿಂದ ಊರಿಗೆ ಕೇಡು ಎಂಬ ಅಲ್ಲಿನ ಜನರು ಪ್ರಾಚೀನ ಕಾಲದ ನಂಬಿಕೆಯಿಂದಾಗಿ ಆ ಗ್ರಾಮಗಳಲ್ಲಿ ಹೋಳಿ ಹುಣ್ಣಿಮೆ ಆಚರಣೆ ಇಲ್ಲವೇ ಇಲ್ಲ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT