ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದಿ ನಕ್ಕು ಬಿಡುವ ಸಂಶೋಧನೆಗಳಿಗೆ ಪ್ರಶಸ್ತಿ!

Last Updated 21 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮಹಿಳೆಯರ ಮಾನ, ಸೌಂದರ್ಯ ಕಾಪಾಡುವ ಕಂಚುಕವನ್ನು (ಬ್ರಾ) ಪ್ರಾಣ ರಕ್ಷಿಸುವ ಅನಿಲ ಮಾಸ್ಕ್ ಆಗಿ ಪರಿವರ್ತಿಸಬಹುದು. ಹೆಸರುಳ್ಳ ಡೇರಿಯ ದನಗಳು ಹೆಸರಿಲ್ಲದ ಡೇರಿಯ ದನಗಳಿಗಿಂತ ಹೆಚ್ಚು ಹಾಲು ಕೊಡುತ್ತವೆ. ಎಡ ಭಾಗಕ್ಕೆ ವಾಲುವುದರಿಂದ ಐಫೆಲ್ ಗೋಪುರ ಚಿಕ್ಕದಾಗಿ ಕಾಣುತ್ತದೆ. ಹಿಮದಾರಿಗಳಲ್ಲಿ ನಡೆದಾಡುವ ಜನ ಚಳಿಗಾಲದಲ್ಲಿ ಶೂ ಮೇಲೆ ಮತ್ತೊಂದು ಸಾಕ್ಸ್ ಧರಿಸಿದರೆ ಜಾರಿ ಬೀಳುವ ಅಪಾಯ ಕಮ್ಮಿ...!

ಇಂತಹ ನೂರೆಂಟು ಚಿತ್ರ-ವಿಚಿತ್ರ, ಹಾಸ್ಯಾಸ್ಪದ ಸಂಶೋಧನೆಗಳು ಪ್ರತಿನಿತ್ಯ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಲೇ ಇರುತ್ತವೆ. ಇವನ್ನು ಓದಿ, ನಕ್ಕು ಸುಮ್ಮನಾಗುತ್ತೇವೆ. ಪಕ್ಕದಲ್ಲಿರುವ ಯಾರಿಗಾದರೂ ಈ ‘ಮಹಾ’ ಸಂಶೋಧನೆಗಳ ಬಗ್ಗೆ ಹೇಳಿ ತಮಾಷೆ ಮಾಡಿ ಮರೆತು ಬಿಟ್ಟಿರುತ್ತೇವೆ.

ಆದರೆ, ಇಂಥ ಹುಚ್ಚುಚ್ಚು ಸಂಶೋಧನೆಗಳಿ­ಗಾಗಿಯೇ ‘ಇಗ್ನೊಬೆಲ್’ ಎಂಬ ಪ್ರಶಸ್ತಿಯೊಂದಿದೆ. ಈ ಪ್ರಶಸ್ತಿಯ ಪರಿಕಲ್ಪನೆ ಸಂಶೋಧನೆಗಳಷ್ಟೇ ವಿಚಿತ್ರ.  

ಎಷ್ಟು ರೋಚಕವೋ ಅಷ್ಟೇ ವಿಚಿತ್ರವಾದ ವಿಜ್ಞಾನ ಕ್ಷೇತ್ರದಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ಅನ್ವೇಷಣೆಗಳು ನಡೆಯುತ್ತಲೇ ಇರುತ್ತವೆ. ಕೆಲವು ಗಂಭೀರ; ಮತ್ತೆ ಕೆಲವು ಹಾಸ್ಯಾಸ್ಪದ. ಸದಾ ಅನ್ವೇಷಣೆಯ ಗುಂಗಿನಲ್ಲಿಯೇ ಮುಳುಗಿರುವ ವಿಜ್ಞಾನಿಗಳು ಕೆಲವೊಮ್ಮೆ ಕ್ಷುಲ್ಲಕ ಸಂಶೋಧನೆಗಳಿಂದಲೂ ಹಾಸ್ಯಕ್ಕೆ ಗುರಿಯಾಗುತ್ತಾರೆ. ಅಂಥವರಿಗಾಗಿಯೇ ಈ ಪ್ರಶಸ್ತಿ ಮೀಸಲು. ಶ್ರೇಷ್ಠ ಹಾಗೂ ಗಂಭೀರ ಸಂಶೋಧನೆಗಳಿಗೆ ನೀಡಲಾಗುವ ನೊಬೆಲ್ ಪ್ರಶಸ್ತಿ ರೀತಿಯಲ್ಲಿಯೇ ಪ್ರತಿವರ್ಷ ಅತಿ ಹೆಚ್ಚು ತಲೆಹರಟೆಯ, ಹಾಸ್ಯಾಸ್ಪದ ಆವಿಷ್ಕಾರ­ಗಳಿಗೆ ‘ಇಗ್ನೊಬೆಲ್’ ಪ್ರಶಸ್ತಿ ನೀಡಲಾಗುತ್ತದೆ. ಕಳೆದ 22 ವರ್ಷಗಳಿಂದ ನೀಡಲಾಗುತ್ತಿರುವ ಈ ಪ್ರಶಸ್ತಿ ನೊಬೆಲ್‌ನ ಅಣಕ.

ಕುಡಿತದ ‘ಅಡ್ಡ’ಪರಿಣಾಮ ಕುರಿತ ಸಂಶೋಧನೆ ಈ ಬಾರಿ ಮನೋವೈಜ್ಞಾನಿಕ ವಿಭಾಗದಲ್ಲಿ ಇಗ್ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದೆ. ಹೊಟ್ಟೆಯೊಳಗೆ ‘ಪರಮಾತ್ಮ’ನನ್ನು ಇಳಿಸಿಕೊಂಡ ‘ಗುಂಡು’ಗೋವಿಗಳು ‘ಈ ಜಗತ್ತಿನಲ್ಲಿ ನಾನೇ ಅತ್ಯಂತ ಆಕರ್ಷಕ ವ್ಯಕ್ತಿ’ ಎಂಬ ಭ್ರಮೆಯಲ್ಲಿ ತೇಲಾಡುತ್ತಿರುತ್ತಾರಂತೆ! ತಾವು ಪತ್ತೆ ಹಚ್ಚಿರುವ ಈ ಆವಿಷ್ಕಾರಕ್ಕೆ ಮಹಾನ್ ಸಂಶೋಧಕರು ಇಟ್ಟ ಹೆಸರು ‘ಬೀರ್ ಗಾಗಲ್ ಎಫೆಕ್ಟ್’. ಅಂದರೆ, ‘ಕುಡಿತದ ಅಡ್ಡ ಪರಿಣಾಮ’ ಎಂದರ್ಥ.

ಈರುಳ್ಳಿ ಹೆಚ್ಚಿದಾಗ ಕಣ್ಣೀರು ಏಕೆ ಬರುತ್ತವೆ? ಎಂಬ ಶತಮಾನಗಳಷ್ಟು ಹಳೆಯದಾದ ಮತ್ತೊಂದು ಪ್ರಶ್ನೆಗೆ ಜಪಾನ್ ಮತ್ತು ಜರ್ಮನಿಯ ವಿಜ್ಞಾನಿಗಳು ಉತ್ತರ ಕಂಡುಕೊಂಡಿದ್ದಾರೆ. ಈ ಮೊದಲು ವಿಜ್ಞಾನಿಗಳು ಕಂಡು ಹಿಡಿದಂತೆ ಈರುಳ್ಳಿಯಲ್ಲಿರುವ ವಿಶೇಷ ಬಗೆಯ ಕಿಣ್ವಗಳು ಕಣ್ಣೀರಿಗೆ ಕಾರಣವಾಗುತ್ತವೆ ಎಂಬುವುದು ಅವರು ತಿಳಿದುಕೊಂಡಷ್ಟು ಸುಲಭವಲ್ಲ. ಈ ರಾಸಾಯನಿಕ ಕ್ರಿಯೆ ಬಹಳ ಸಂಕೀರ್ಣ ಎಂಬ ಶೋಧನೆ ಅವರಿಗೆ ಇಗ್ನೊಬೆಲ್ ತಂದುಕೊಟ್ಟಿದೆ.  

ಸಾರ್ವಜನಿಕ ಸ್ಥಳದಲ್ಲಿ ಚಪ್ಪಾಳೆ ತಟ್ಟುವುದು ಕಾನೂನುಬಾಹಿರ ಎಂಬ ಹೊಸ ಕಾನೂನು ಜಾರಿಗೆ ತಂದ ಬೆಲಾರಸ್ ರಾಷ್ಟ್ರದ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಮತ್ತು ಪೊಲೀಸರು ‘ಶಾಂತಿ’ ಪ್ರಶಸ್ತಿ ಹಂಚಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಚಪ್ಪಾಳೆ ತಟ್ಟಿದ ಒಂಟಿಗೈಯ ವ್ಯಕ್ತಿಯನ್ನು ಬಂಧಿಸಿದ ಮಹಾನ್ ಕಾರ್ಯಕ್ಕಾಗಿ ಪೊಲೀಸರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಅದೇ ರೀತಿ, ಮಲಗಿದ ಉದ್ದನೆಯ ಆಕಳು ಯಾವಾಗ ಬೇಕಾದರೂ ಎದ್ದು ನಿಂತುಕೊಳ್ಳಬಹುದು. ಒಮ್ಮೆ ನಿಂತ ಆಕಳು ಮತ್ತೆ ಯಾವಾಗ ಕುಳಿತುಕೊಳ್ಳುತ್ತದೆ ಅಥವಾ ಮಲಗುತ್ತದೆ ಎನ್ನುವುದನ್ನು ಊಹಿಸಲು ಅಸಾಧ್ಯ. ಈ ವಿಷಯವನ್ನು ಬ್ರಿಟನ್, ಕೆನಡಾ ಮತ್ತು ನೆದರ್‌ಲೆಂಡ್ಸ್ ನ ‌ವಿಜ್ಞಾನಿಗಳ ತಂಡ ಪತ್ತೆ ಹಚ್ಚಿದೆ. ಇದಕ್ಕಾಗಿ ಅವರಿಗೆ ‘ಹೊಸ ಊಹನಾತ್ಮಕ ಸಂಶೋಧನೆ’ ವಿಭಾಗದಲ್ಲಿ ಈ ಗೌರವ ಸಂದಿದೆ.

ಮತ್ತೊಬ್ಬರು ‘ಕೆಲವರು ಕೊಳದ ನೀರಿನ ಮೇಲೂ ನಡೆದಾಡುವ ದೈಹಿಕ ಸಾಮರ್ಥ್ಯ ಹೊಂದಿರುತ್ತಾರೆ’ ಎಂಬ ಭಾರಿ ರಹಸ್ಯ ಭೇದಿಸಿದ್ದಾರೆ. ಈ ಬಾರಿಯ ಭೌತವಿಜ್ಞಾನ ವಿಭಾಗದ ಶ್ರೇಷ್ಠ ಸಂಶೋಧನೆ ಇದು.

ಆಕಾಶಗಂಗೆ ಮತ್ತು ಸೆಗಣಿ ಹುಳು
ಮೈದಾನದಲ್ಲಿ ದಾರಿ ತಪ್ಪಿದ ಸೆಗಣಿ ಹುಳುಗಳು ಆಗಸದಲ್ಲಿರುವ ಕ್ಷೀರಪಥ ಅಥವಾ ಆಕಾಶಗಂಗೆಯನ್ನು ಮಾರ್ಗಸೂಚಿ ಅಥವಾ ದಿಕ್ಸೂಚಿ ವ್ಯವಸ್ಥೆ (ಜಿಪಿಆರ್‌ಎಸ್) ರೀತಿಯಲ್ಲಿ ಬಳಸಿಕೊಂಡು ಪುನಃ ಮನೆ ಸೇರುತ್ತವೆಯಂತೆ. ಒಂದು ವೇಳೆ ಮೋಡ ಕವಿದರೆ ಅವುಗಳ ಕಥೆ ಗೋವಿಂದ! ದಾರಿ ತಪ್ಪಿದ ಮಕ್ಕಳಂತೆ ಎಲ್ಲೆಂದರಲ್ಲಿ ಸುತ್ತುತ್ತವೆಯಂತೆ. ತಮ್ಮ ಈ ಮಹಾನ್ ಸಂಶೋಧನೆಗಾಗಿ ಸ್ವೀಡನ್, ಆಸ್ಟ್ರೇಲಿಯಾ, ಜರ್ಮನ್ ಮತ್ತು ಬ್ರಿಟನ್ ವಿಜ್ಞಾನಿಗಳು ಜೀವಶಾಸ್ತ್ರ ಮತ್ತು ಖಗೋಳಶಾಸ್ತ್ರ ವಿಭಾಗದ ಪ್ರಶಸ್ತಿ ಹಂಚಿಕೊಂಡಿದ್ದಾರೆ.

ಆಫ್ರಿಕಾದ ಸೆಗಣಿ ಹುಳುವಿನ ಪ್ರಭೇದವೊಂದರ ಮೈಮೇಲಿನ ಕವಚ ಅವುಗಳ ಕಣ್ಣುಗಳನ್ನು ಆವರಿಸಿರುತ್ತದೆ. ಹೀಗಾಗಿ ಮೋಡ ಕವಿದರೆ ಅವುಗಳಿಗೆ ಆಕಾಶ ಅಥವಾ ನಕ್ಷತ್ರಗಳು ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಅಂತಹ ಸಮಯದಲ್ಲಿ ಅವು ಮನ ಬಂದಂತೆ ಗೊತ್ತು, ಗುರಿ ಇಲ್ಲದೆ ತಿರುಗುತ್ತಲೇ ಇರುತ್ತವೆ. ಮೋಡ ಸರಿದು ಸ್ವಲ್ಪ ನಕ್ಷತ್ರ ಬೆಳಕು ಗೋಚರಿಸಿದರೆ ಸಾಕು ಅದನ್ನು ಅನುಸರಿಸಿ ಮನೆ ಸೇರಿಕೊಳ್ಳುತ್ತವೆಯಂತೆ. ಕ್ಷೀರಪಥವನ್ನು ಪ್ರಾಣಿಗಳು ಮಾರ್ಗಸೂಚಿಯಾಗಿ ಬಳಸಿಕೊಳ್ಳುವ ಕುರಿತಂತೆ ನಡೆದಿರುವ ಮೊದಲ ಸಂಶೋಧನೆ ಇದು ಎಂದು ಹೆಮ್ಮೆಯಿಂದಲೂ  ಹೇಳಿಕೊಂಡಿದ್ದಾರೆ.

23ನೇ ಇಗ್ನೊಬೆಲ್ ಪ್ರಶಸ್ತಿ ಪುರಸ್ಕೃತರು ಹತ್ತು ಟ್ರಿಲಿಯನ್ ಡಾಲರ್ ಪ್ರಶಸ್ತಿ ಮೊತ್ತ ಬಾಚಿಕೊಳ್ಳಲಿದ್ದಾರೆ. ಆದರೆ, ಅಮೆರಿಕನ್ ಡಾಲರ್ ಲೆಕ್ಕದಲ್ಲಿ ಅಲ್ಲ, ಜಿಂಬಾಬ್ವೆ ಡಾಲರ್ ರೂಪದಲ್ಲಿ. ಪ್ರತಿ ವಿಜ್ಞಾನಿಗೆ ದಕ್ಕುವುದು ಮೂರರಿಂದ ನಾಲ್ಕು ಅಮೆರಿಕನ್ ಡಾಲರ್ ಮಾತ್ರ! (240 ರೂಪಾಯಿ).

ತಮಾಷೆಯ ಸಂಶೋಧನೆಗಳು
*ಗರ್ಭಿಣಿಯರು ಮುಗ್ಗರಿಸುವುದಿಲ್ಲ.
*ಹರಕೆ ಹೊರುವುದು ನೋವನ್ನು ಕಡಿಮೆ ಮಾಡುತ್ತದೆ ಎಂಬ ಜನಪ್ರಿಯ ನಂಬಿಕೆ ನಿಜ.
*ಸೂಕ್ಷ್ಮಜೀವಿಗಳು ಹೆಚ್ಚಾಗಿ ಗಡ್ಡಧಾರಿ ವಿಜ್ಞಾನಿಗಳಿಗೇ ಅಂಟಿಕೊಂಡಿರುತ್ತವೆ.
*ಬೇರೆಯವರಿಗೆ ಬೈಯ್ಯುವುದರಿಂದ ನೋವು ಕಡಿಮೆ ಮಾಡಿಕೊಳ್ಳಬಹುದು.  
*ನೀರು ಮತ್ತು ಪೆಟ್ರೋಲ್ ಬೆರೆಯುವುದಿಲ್ಲವೆನ್ನುವ ನಂಬಿಕೆ ಸುಳ್ಳು
* ಸುಮ್ಮನೆ ಪದೋನ್ನತಿ ನೀಡುವುದರಿಂದ ಸಂಸ್ಥೆಗಳ ಸಾಮರ್ಥ್ಯ ಹೆಚ್ಚುತ್ತದೆ.

ಇಗ್ನೊಬೆಲ್ ಎಂದರೇನು?
ನೊಬೆಲ್‌ ಪ್ರಶಸ್ತಿಗೆ ಪ್ರತಿಯಾಗಿ ಈ ಪ್ರಶಸ್ತಿಯನ್ನು ‘ಆನಲ್ಸ್ ಆಫ್ ಇಂಪ್ರೊಬೆಬಲ್ ರಿಸರ್ಚ್’ ಹಾಸ್ಯಭರಿತ ವೈಜ್ಞಾನಿಕ ನಿಯತಕಾಲಿಕದ ಸಂಪಾದಕ ಮಾರ್ಕ್ 1991ರಲ್ಲಿ ಆರಂಭಿಸಿದರು. ‘ಸಂಶೋಧನೆ ಮಾಡಲಾಗದ, ಮಾಡಬಾರದ, ಮರುಕಳಿಸಬಾರದ’ ಆವಿಷ್ಕಾರಗಳಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎನ್ನುವುದು ಆಯೋಜಕರ ಹೇಳಿಕೆ. ನೊಬೆಲ್ ಎನ್ನುವ ಪದವನ್ನೇ ಬಳಸಿ ಇಗ್ನೊಬೆಲ್ ಪದವನ್ನು ಹುಟ್ಟು ಹಾಕಲಾಗಿದೆ. ಇಗ್ನೊಬೆಲ್ ಎಂದರೆ ಪ್ರಾಮುಖ್ಯವಲ್ಲದ ಎನ್ನುವ ಅರ್ಥ ಕೊಡುತ್ತದೆ.

ಜನರನ್ನು ನಕ್ಕು, ನಗಿಸಿ ನಂತರ ಚಿಂತನೆಗೆ ಹಚ್ಚುವ ವ್ಯಂಗ್ಯ, ವಿನೋದ, ವಿಡಂಬನೆಯ ಸಂಶೋಧನೆಗಳಿಗೆ ಈ ಪ್ರಶಸ್ತಿ ಮೀಸಲು. ಪ್ರಯೋಜನವಿಲ್ಲದ ಸಂಶೋಧನೆಗಳಿಗೆ ಕೆಲವೊಮ್ಮೆ ಈ ಪ್ರಶಸ್ತಿ ಬಿಸಿ ಮುಟ್ಟಿಸುತ್ತದೆ. ಜೋಸೆಫ್ ಕೆಲ್ಲರ್ ಎಂಬ ವಿಜ್ಞಾನಿ 1999 ಮತ್ತು 2012 ಎರಡು ಬಾರಿ ಇಗ್ನೊಬೆಲ್ ಗಳಿಸಿದ್ದಾರೆ. ಈ ಪ್ರಶಸ್ತಿ ವಿಜ್ಞಾನ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಆರ್ಥಿಕ ಕ್ಷೇತ್ರ, ಆಡಳಿತ ನಿರ್ವಹಣೆ, ಶಾಂತಿ ಪಾಲನೆ ಮತ್ತು ಇತರ ಹತ್ತು ಕ್ಷೇತ್ರಗಳನ್ನೂ ಪರಿಗಣಿಸಲಾಗುತ್ತದೆ.

ಮೊದಲಿಗೆ ಎಮ್. ಐ. ಟಿ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿದ್ದ ಪ್ರಶಸ್ತಿ ಪ್ರದಾನ ಸಮಾರಂಭ ಈಗ ಪ್ರತಿವರ್ಷ ಅಕ್ಟೋಬರ್ ಒಂದನೇ ತಾರೀಕಿನಂದು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಸ್ಯಾಂಡರ್ಸ್ ಥಿಯೇಟರ್‌ನಲ್ಲಿ ನಡೆಯುತ್ತದೆ.

ನೊಬೆಲ್ ಪ್ರಶಸ್ತಿ ವಿಜೇತ ವಿದ್ವಾಂಸರುಗಳಿಂದ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ ವಿಜೇತರ ಭಾಷಣವೂ ಇರುತ್ತದೆ. ಭಾಷಣಕಾರರ ಭಾಷಣ ಉದ್ದವಾದರೆ  ಮಿಸ್ ಸ್ವೀಟಿ ಪೂ ಎಂಬ ಚಿಕ್ಕ ಹುಡುಗಿ ಅಳಲು ಆರಂಭಿಸುತ್ತಾಳೆ. ಅಲ್ಲಿಗೆ ನಿಮ್ಮ ಭಾಷಣ ಸಾಕು ನಿಲ್ಲಿಸಿ ಎಂದರ್ಥ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT