ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಲಾಡುವ ತೇಲಾಡುವ ಕಸರತ್ತು ಟಿಆರ್ಎಕ್ಸ್

Last Updated 15 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನೆಲದ ಗುರುತ್ವಾಕರ್ಷಣೆಗೆ ಹೊರತಾಗಿ, ವಿರೋಧವಾಗಿ ಹಗ್ಗಗಳೊಂದಿಗೆ ನೇತಾಡುತ್ತ, ಜೋತಾಡುತ್ತ ನೆಗೆಯುತ್ತ, ಹಾರುತ್ತ ಮಾಡುವ ಅಮೆರಿಕನ್ ನೇವಿಯಿಂದ ಪ್ರೇರಣೆ ಪಡೆದ ಕಸರತ್ತು ಟಿಆರ್‌ಎಕ್ಸ್‌. ನಗರದ ‘ದಿ ಝೋನ್‌’ ಈ ಕಸರತ್ತಿಗಾಗಿ ತರಬೇತಿ, ತರಬೇತುಗಾರರಿಗೂ ತರಬೇತಿ ನೀಡುತ್ತಿದೆ.

ನಮ್ಮ ಧಾರಣಾಶಕ್ತಿ, ಸಾಮರ್ಥ್ಯದಿಂದ ನಮ್ಮ ಕಾಯವನ್ನು ಬಾಗಿಸುವ, ಬಳುಕಿಸುವ ಕಸರತ್ತು ಇದು. ಒಂದು ಬಗೆಯಲ್ಲಿ ಭೂಮಿಯ ಗುರುತ್ವಾಕರ್ಷಣೆಗೆ ವಿರುದ್ಧವಾಗಿ ಗಾಳಿಯಲ್ಲಿ ಕಸರತ್ತು ಮಾಡುವ ಬಗೆ ಟಿಆರ್‌ಎಕ್ಸ್‌ ಸಸ್ಪೆನ್ಶನ್‌! ಯುಎಸ್‌ ನೇವಿ ಹಿನ್ನೆಲೆಯ ಈ ವ್ಯಾಯಾಮದಿಂದ ಕಡಿಮೆ ಸಮಯದಲ್ಲಿ ಹೆಚ್ಚು ಕ್ಯಾಲೋರಿ ವ್ಯಯಿಸುವ ವ್ಯಾಯಾಮ.
 
ವ್ಯಕ್ತಿಯ ಶಕ್ತಿ, ಸಾಮರ್ಥ್ಯ, ಜಡಗಟ್ಟಿದ ಮೈ ಕೀಲು, ಸಂದುಗಳನ್ನು ಸಡಿಲಗೊಳಿಸುವ ‘ಫ್ಲೆಕ್ಸಿಬಿಲಿಟಿ’ ಸಮತೋಲನ, ಚಲನೆ ಈ ಎಲ್ಲವನ್ನೂ ಏಕೀಕೃತಗೊಳಿಸುವುದೇ ಈ ವ್ಯಾಯಾಮದ ಉದ್ದೇಶವಾಗಿದೆ.ದೇಹ ಮತ್ತು ಮನಸಿನ ನಡುವೆ ಸೇತುಬಂಧ ಕಟ್ಟಿ, ಮನಸಿನ ವೇಗ, ಆವೇಗ ದೇಹದ ಅವಯವಗಳಲ್ಲಿ ಹರಿಯುವಂತೆ ಮಾಡುವುದು ಈ ವ್ಯಾಯಾಮದ ವಿಶೇಷ.

ಜೀವನದ ವಾಸ್ತವಗಳನ್ನು ಕಟು ಸತ್ಯಗಳನ್ನು ಸ್ವೀಕರಿಸುವ ಮನೋದಾರ್ಢ್ಯ ನೀಡುತ್ತದೆ. ಜೀವನದ ಸವಾಲುಗಳನ್ನು ಎದುರಿಸುವ ದೈಹಿಕ ಸಾಮರ್ಥ್ಯ ನೀಡುತ್ತದೆ. ಹಿಗ್ಗುವ, ಜಗ್ಗಾಡುವ ಎರಡು ಪಟ್ಟಿಗಳನ್ನು ಮನೆಯಲ್ಲಿ ಅಳವಡಿಸಿಕೊಂಡು, ಅವುಗಳೊಂದಿಗೆ ಕಸರತ್ತು ಮಾಡುವುದು ಟಿಆರ್‌ಎಕ್ಸ್‌ ಸಸ್ಪೆನ್ಶನ್‌ ಆಗಿದೆ.

ಈ ಪಟ್ಟಿಗಳನ್ನು ಹಿಡಿದುಕೊಂಡು ಕಸರತ್ತು ಮಾಡುವುದರಿಂದ ತೋಳ್ಬಲ, ಧಾರಣಾ ಸಾಮರ್ಥ್ಯ ಎರಡೂ ಹೆಚ್ಚುತ್ತದೆ. ಜೊತೆಗೆ ಅತಿ ಕಡಿಮೆ ಕಾಲದಲ್ಲಿ ಅತಿ ಹೆಚ್ಚು ಕ್ಯಾಲೋರಿ ವ್ಯಯವಾಗುತ್ತದೆ. ಸ್ನಾಯುಗಳು ಬಿಗಿಗೊಳ್ಳುತ್ತವೆ. ದೇಹ ಹುರಿಗಟ್ಟುತ್ತದೆ. ಜೊತೆಗೆ ಸರಳ ಚಲನೆ, ಸಮತೋಲನ ಎರಡನ್ನೂ ಸಾಧಿಸಬಹುದಾಗಿದೆ.

ಸಾಮಾನ್ಯವಾಗಿ ವ್ಯಾಯಾಮ, ದೇಹದಂಡನೆಯನ್ನು ಆರಂಭಿಸಿದಾಗ ನೋವು ಇದ್ದೇ ಇರುತ್ತದೆ. ನಂತರವೂ ಕಠಿಣ ಕಸರತ್ತಿನಲ್ಲಿ ತೊಡಗಿಸಿಕೊಂಡಾಗ ನೋವನ್ನು ಅನುಭವಿಸಲೇಬೇಕು. ಆದರೆ ಟಿಆರ್‌ಎಕ್ಸ್‌. ಪಟ್ಟಿಯ ಆಧಾರದಿಂದ ವ್ಯಾಯಾಮವನ್ನು ಮಾಡುತ್ತಿದ್ದರೆ ದೇಹದ ಕಸುವು ಹೆಚ್ಚಾಗುತ್ತಿರುವುದನ್ನೂ ಆನಂದಿಸಬಹುದು.

ಪ್ರತಿಯೊಂದು ಸೆಶನ್‌ ನಂತರ ನಿಮ್ಮ ಧಾರಣಾ ಸಾಮರ್ಥ್ಯ ಮತ್ತು ಕಸರತ್ತಿನ ಅವಧಿ ಹೆಚ್ಚಿಸುವ ಶಕ್ತಿಯು ಪ್ರಜ್ಞೆಗೆ ಬರುತ್ತದೆ. 15 ನಿಮಿಷಗಳಲ್ಲಿ 5 ಕಿ.ಮೀ. ಓಟ ಪೂರೈಸಿದ ಅನುಭವ ನೀಡುತ್ತದೆ. ಭುಜಬಲ, ತೋಳ್ಬಲ, ಸ್ನಾಯುಗಳನ್ನು ಬಲಗೊಳಿಸುವುದು ಮುಂತಾದವನ್ನು ಟಿಆರ್‌ಎಕ್ಸ್‌. ಮೂಲಕ ಮಾಡಬಹುದು ಎನ್ನುವುದು ಝೋನ್‌ನಲ್ಲಿ ತರಬೇತಿ ನೀಡುತ್ತಿರುವ ಶರತ್‌ ಸರೀನ್‌ ಅವರ ಅಭಿಪ್ರಾಯ.

ಹೈ ಇಂಟೆನ್ಸಿಟಿ ಇಂಟರ್ವಲ್ ಟ್ರೇನಿಂಗ್‌, ಅಥ್ಲೀಟ್‌ ಕಂಡೀಶ್ನಿಂಗ್‌ ಕಾರ್ಡಿಯೊ ಮುಂತಾದವುಗಳ ಕುರಿತು ತರಬೇತಿಯನ್ನು ನೀಡಲಾಗುತ್ತದೆ. ವೈಯಕ್ತಿಕ ಕಸರತ್ತಿಗೆ ಮಾತ್ರವಲ್ಲ, ತರಬೇತಿದಾರರನ್ನು ತಯಾರು ಮಾಡಲು ಸಹ ಝೋನ್‌ ಸ್ಟುಡಿಯೊ ಸಜ್ಜಾಗಿದೆ. ಮನಸು, ದೇಹ ಎರಡನ್ನೂ  ನಿಮ್ಮ ನಿಯಂತ್ರಣದಲ್ಲಿರಿಸಬಲ್ಲ ವ್ಯಾಯಾಮವಿದು.

ಪಿಲ್ಲಾಟೇಸ್‌ ಜೊತೆಜೊತೆಗೇ ಮಾಡಬಹುದು. ಹೆಚ್ಚಿನ ಸ್ಥಳಾವಕಾಶ ಬಯಸದ ಈ ಕಸರತ್ತು ಆನಂದದಾಯಕವಾಗಿರುತ್ತದೆ ಎನ್ನುವ ಭರವಸೆಯನ್ನು ಶರತ್‌ ನೀಡುತ್ತಾರೆ. ತರಬೇತುದಾರರಾಗಿ ಭವಿಷ್ಯ ರೂಪಿಸಿಕೊಳ್ಳಲು ಆಸಕ್ತಿ ಇದ್ದವರಿಗೆ ವಿಶ್ವದಾದ್ಯಂತ ಉದ್ಯೋಗದವಕಾಶಗಳಿವೆ ಎನ್ನುವುದೂ ಅವರ ಅಭಿಪ್ರಾಯವಾಗಿದೆ.

ಹೆಚ್ಚಿನ ಮಾಹಿತಿಗೆ thezonestudio@gmail.com
ಶರತ್‌ ಸರೀನ್‌: 98453 91006.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT