ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔಷಧ ಉದ್ಯಮ-ಪ್ರಗತಿ ಉತ್ತಮ

Last Updated 16 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಭಾರತೀಯ ಔಷಧ ಉದ್ಯಮ ಪ್ರಸ್ತುತ ಅತ್ಯುತ್ತಮ ಸಂಘಟಿತ ವಲಯವಾಗಿದೆ. ವಿಜ್ಞಾನ ಆಧಾರಿತ ಉದ್ಯಮಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಪ್ರತಿ ವರ್ಷ ಶೇ 8ರಿಂದ 9ರಷ್ಟು ಅಭಿವೃದ್ಧಿ ಸಾಧಿಸುತ್ತಿದೆ ಈ ಕ್ಷೇತ್ರ. ತಲೆನೋವಿಗೆ ಬಳಸುವ ಸಾಮಾನ್ಯ ಮಾತ್ರೆಯಿಂದ ಹಿಡಿದು ಅತ್ಯಾಧುನಿಕ ಆ್ಯಂಟಿಬಯಾಟಿಕ್ಸ್, ಹೃದ್ರೋಗಕ್ಕೆ ಸಂಬಂಧಿಸಿದ ಸಂಕೀರ್ಣವಾದ ಸಂಯುಕ್ತ ಉತ್ಪನ್ನಗಳವರೆಗೆ ಪ್ರತಿಯೊಂದು ಬಗೆಯ ಔಷಧಿಗಳನ್ನು  ಈಗ ಭಾರತೀಯ ಔಷಧ ಉದ್ಯಮವೇ ತಯಾರಿಸಿ ಮಾರಾಟ ಮಾಡುತ್ತಿದೆ.

ಅದರಲ್ಲೂ ವಿದೇಶಗಳಿಗೆ ರಫ್ತಾಗುವ ಔಷಧದ ಹೆಚ್ಚಿನ ಪಾಲು  ಕರ್ನಾಟಕದ್ದೇ ಆಗಿದೆ ಎಂಬುದು ಗಮನಾರ್ಹ. ಔಷಧ ತಯಾರಿಕೆ ಉದ್ಯಮದ  ನೋವು-ನಲಿವಿನ ಹಾಗೂ ಅಭಿವೃದ್ಧಿಯ ಓಟದ ಒಂದು ನೋಟ ಇಲ್ಲಿದೆ....ಔಷಧ ರೋಗಿಗಳ ಪಾಲಿಗೆ ಸಂಜೀವಿನಿಯೂ ಹೌದು, ಭಾರಿ ಲಾಭ ತಂದುಕೊಡುವ ಉದ್ಯಮವೂ ಹೌದು.

ಯಾವತ್ತೂ ಹಿಂದೆ ಬೀಳದ, ಎಂದಿಗೂ ಹಳತಾಗದ, ಎಲ್ಲಾ ಕಾಲಘಟ್ಟದಲ್ಲೂ ತನ್ನ ಅಗತ್ಯವನ್ನು ಸಾರುವ, ಒಂದರ್ಥದಲ್ಲಿ ಜಗತ್ತನ್ನು ಮುನ್ನಡೆಸುತ್ತಿರುವ ಬಲಿಷ್ಠ ಶಕ್ತಿಕೇಂದ್ರ ಎಂದರೆ `ಔಷಧ ಉದ್ಯಮ'. ಇದು ಕೇವಲ ಒಂದು ದೇಶದ ಅಥವಾ ರಾಜ್ಯದ ಆರ್ಥಿಕ ಸ್ಥಿತಿಯನ್ನು ನಿರ್ಧರಿಸುವುದಷ್ಟೇ ಅಲ್ಲ, ಅಲ್ಲಿನ ಜನರ ಜೀವನದ ಒಟ್ಟಾರೆ ಗುಣಮಟ್ಟವನ್ನು ಹಾಗೂ ಜೀವಿತಾವಧಿಯನ್ನೂ ನಿರ್ಧರಿಸುವ ಪ್ರಮುಖ ಸಂಗತಿಯಾಗಿದೆ.

ಬದಲಾಗುತ್ತಿರುವ ಕಾಲಮಾನದಲ್ಲಿ ಹೊಸ ಹೊಸ ರೋಗಗಳು ಹುಟ್ಟಿಕೊಳ್ಳುತ್ತಿವೆ. ಹಳೆ ರೋಗಗಳೂ ಹೊಸದಾಗಿ ಮರುಹುಟ್ಟು ಪಡೆಯುತ್ತಿವೆ. ಅದೇ ವೇಗದಲ್ಲಿ ಒಂದು ಕಡೆ ವೈದ್ಯಲೋಕವೂ ಪರಿಷ್ಕರಣೆಗೆ ಒಳಪಡುತ್ತಾ ಸಾಗಿದರೆ, ಇನ್ನೊಂದೆಡೆ ಔಷಧ ಉದ್ಯಮವೂ ಹೊಸ ಆವಿಷ್ಕಾರಗಳಿಗೆ ಒಡ್ಡಿಕೊಳ್ಳುತ್ತಾ, ನೂತನ ಉತ್ಪನ್ನಗಳನ್ನು ಪರಿಚಯಿಸುತ್ತಾ ಸಾಗಿದೆ.

ಕಳೆದೊಂದು ದಶಕದಿಂದ ಭಾರತ ಸೇರಿದಂತೆ ಜಗತ್ತಿನಾದ್ಯಂತ ಔಷಧೀಯ ಉತ್ಪನ್ನಗಳ ಬೇಡಿಕೆ ಗಮನಾರ್ಹವಾಗಿ ಹೆಚ್ಚುತ್ತಿದೆ. ಅದಕ್ಕೆ ಅನುಗುಣವಾಗಿ ಔಷಧ ಉದ್ಯಮವೂ ಶರವೇಗದಲ್ಲಿ ಬೆಳೆಯುತ್ತಿದೆ. ಔಷಧ ಉದ್ಯಮದಲ್ಲಿ ತನ್ನದೇ ಆದ ವೇಗದ ಗತಿಯನ್ನು  ಹೊಂದಿರುವ ಭಾರತ ಪ್ರತಿವರ್ಷ ಶೇ 8ರಿಂದ 9ರಷ್ಟು ಅಭಿವೃದ್ಧಿಯನ್ನೂ ಸಾಧಿಸುತ್ತಿದೆ. ಬೆಲೆಯಲ್ಲಿ ತೀವ್ರವಾದ ಸ್ಪರ್ಧೆ ಹಾಗೂ ಬೆಲೆ ನಿಯಂತ್ರಣದ ನಡುವೆಯೂ ಭಾರತೀಯ ಔಷಧ ಕ್ಷೇತ್ರದಲ್ಲಿ ಸಾವಿರಾರು ಘಟಕಗಳು ಕಾರ್ಯನಿರ್ವಹಿಸುತ್ತಿವೆ.

ದೇಶದಲ್ಲಿ ಔಷಧ ಉದ್ಯಮ ಶೇ 70ರಷ್ಟು ಸಗಟು ಬೇಡಿಕೆಯನ್ನು ಪೂರೈಸುವಷ್ಟು ಸಶಕ್ತವಾಗಿದೆ. ಒಂದೆಡೆ ದೇಶದಲ್ಲಿ ಔಷಧೀಯ ಉದ್ಯಮ ಕೇಂದ್ರಗಳು ದಿನಕ್ಕೊಂದರಂತೆ ಹುಟ್ಟಿಕೊಳ್ಳುತ್ತಿವೆ. ಮತ್ತೊಂದೆಡೆ ಅಸ್ತಿತ್ವದಲ್ಲಿರುವ ಕೇಂದ್ರಗಳು ದಿನೇ ದಿನೇ ಹೊಸ ಹುಟ್ಟು ಪಡೆಯುತ್ತಿವೆ. ಪ್ರಸ್ತುತ ಸುಮಾರು 250 ದೊಡ್ಡ ಕಂಪೆನಿಗಳು, 8,000 ಸಣ್ಣ ಘಟಕಗಳು ಔಷಧ ತಯಾರಿಕೆ ಕ್ಷೇತ್ರದಲ್ಲಿ ಕಾರ್ಯಮಗ್ನವಾಗಿವೆ.

2010ನೇ ಸಾಲಿಗೆ ಹೋಲಿಸಿದರೆ 2011ರ ಡಿಸೆಂಬರ್ ವೇಳೆಗೆ ಭಾರತದ ಔಷಧ ಮಾರುಕಟ್ಟೆ ಶೇ 15.7ರಷ್ಟು ಬೆಳವಣಿಗೆ ಕಂಡಿದೆ. ಔಷಧಗಳ ಮೌಲ್ಯವನ್ನು ಆಧರಿಸಿ ಹೇಳುವುದಾದರೆ ಭಾರತ ವಿಶ್ವದ ಔಷಧ ತಯಾರಿಕೆ ಮಾರುಕಟ್ಟೆಯಲ್ಲಿ *ನೇ ಸ್ಥಾನದಲ್ಲಿದೆ. ಒಟ್ಟಾರೆ ಔಷಧಗಳ ಪ್ರಮಾಣವನ್ನು ಆಧರಿಸಿ ಹೇಳುವುದಾದರೆ 13ನೇ ಸ್ಥಾನದಲ್ಲಿದೆ. 201*ರ ವೇಳೆಗೆ ವಾರ್ಷಿಕ ಶೇ 21ರಷ್ಟು ಬೆಳವಣಿಗೆಯನ್ನು ಇದು ಸಾಧಿಸಲಿದೆ ಎಂಬುದು ಮಾರುಕಟ್ಟೆ ತಜ್ಞರು ಅಭಿಪ್ರಾಯ.

(McKinsey & Company’s report, “India Pharma 2020: Propelling access and acceptance, realizing true potential”)

ಕರ್ನಾಟಕ ಔಷಧ ಉದ್ಯಮ
ಕಳೆದ ಐದು ವರ್ಷಗಳಿಂದೀಚೆಗೆ ಕರ್ನಾಟಕದಲ್ಲಿ ಔಷಧ ಉದ್ಯಮಕ್ಕೆ ಹೆಚ್ಚಿನ ಉತ್ತೇಜನ ದೊರಕುತ್ತಿದೆ. ದೇಶದಲ್ಲಿಯೇ ಮೊದಲು ಎನ್ನುವಂತಹ ಮಾದರಿ `ಔಷಧ ನೀತಿ-2012'  ಪ್ರಕಟಿಸಿದ ರಾಜ್ಯ ಕರ್ನಾಟಕ. ಅಷ್ಟೇ ಅಲ್ಲದೆ, ಔಷಧ ತಯಾರಿಕೆ ರಂಗಕ್ಕೆ ಸರ್ಕಾರ ಹಲವಾರು ರೀತಿಯ ರಿಯಾಯಿತಿ ಹಾಗೂ ಅನುಕೂಲಗಳನ್ನು ಒದಗಿಸಲೂ ಮುಂದಾಗಿರುವುದು ಗಮನಾರ್ಹ.

ಅಂತೆಯೇ ದೇಶದ ಬೃಹತ್ ಔಷಧ ಉದ್ಯಮಗಳು ತಮ್ಮ ತಯಾರಿಕಾ ಅವಶ್ಯಕತೆಗಳನ್ನು ರಾಜ್ಯಕ್ಕೆ ಹೊರಗುತ್ತಿಗೆ ನೀಡಲು ಮುಂದಾಗುತ್ತಿವೆ. ಈ ಟ್ರೆಂಡ್‌ನಿಂದ ರಾಜ್ಯದ, ಅದರಲ್ಲೂ ಬೆಂಗಳೂರಿನ ಔಷಧ ಉದ್ಯಮಕ್ಕೆ ಅವಕಾಶಗಳ ಹೊಸ ಬಾಗಿಲೇ ತೆರೆದಂತಾಗಿದೆ. ಪರಿಣಾಮವಾಗಿ ಇಲ್ಲಿನ ಔಷಧ ತಯಾರಿಕೆ ಕಂಪೆನಿಗಳು ತಮ್ಮ ಸಾಮರ್ಥ್ಯವನ್ನು ದೊಡ್ಡಮಟ್ಟದಲ್ಲಿಯೇ ವಿಸ್ತರಿಸಿಕೊಂಡಿವೆ. ರಾಜ್ಯದಲ್ಲಿ ಈಗಾಗಲೇ ಒಟ್ಟು 200 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿವರ್ಷ 6,000 ಕೋಟಿ ರೂಪಾಯಿಯಷ್ಟು ದೊಡ್ಡ ಮಟ್ಟದ ವಹಿವಾಟನ್ನೂ ನಡೆಸುತ್ತಿವೆ. ಜತೆಗೆ ವಾರ್ಷಿಕ ಶೇ 6ರಿಂದ 8ರಷ್ಟು ಬೆಳವಣಿಗೆಯನ್ನೂ ಸಾಧಿಸುತ್ತಿವೆ.

ದೇಶದಲ್ಲಿಯೇ ಔಷಧ ಉತ್ಪಾದನಾ ಘಟಕಗಳ ಸಂಖ್ಯೆಯಲ್ಲಿ ಪ್ರಸ್ತುತ 10ನೇ ಸ್ಥಾನದಲ್ಲಿರುವ ಕರ್ನಾಟಕ, ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಸಾಧನೆ ಮಾಡುವ ನಿರೀಕ್ಷೆ ಇದೆ. ಕರ್ನಾಟಕದಲ್ಲಿ ತಯಾರಾದ ಔಷಧ ಉತ್ಪನ್ನಗಳ ಗುಣಮಟ್ಟಕ್ಕೆ ದೇಶ-ವಿದೇಶದಲ್ಲೂ ಉತ್ತಮ ಮನ್ನಣೆ ಇದೆ. `ರಾಜ್ಯ ಔಷಧ ನಿಯಂತ್ರಣಾ ಇಲಾಖೆ' ಜಾರಿಗೊಳಿಸಿರುವ ಕಟ್ಟುನಿಟ್ಟಿನ ನಿಯಂತ್ರಣಾ ಕ್ರಮಗಳಿಂದಾಗಿಯೇ ರಾಜ್ಯದಲ್ಲಿ ತಯಾರಾಗುವ ಔಷಧಗಳಿಗೆ ಇಂಥದ್ದೊಂದು ಮನ್ನಣೆ ಸಾಧ್ಯವಾಗಿದೆ ಎನ್ನುತ್ತಾರೆ ಔಷಧ ಉದ್ಯಮ ವಲಯದ ಹಿರಿಯರು.

ಔಷಧ ವಿಜ್ಞಾನ-ಶಿಕ್ಷಣ ನೋಟ
ಔಷಧ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆಗೆ ಸಂಬಂಧಿಸಿದ ವಿಚಾರದಲ್ಲಿ ಮಾತ್ರ ರಾಜ್ಯ ಸರ್ಕಾರ ಅದೇಕೋ ತಾತ್ಸಾರ ಧೋರಣೆ ಪ್ರದರ್ಶಿಸುತ್ತಿದೆ. ರಾಜ್ಯದಲ್ಲಿ ಒಟ್ಟು 86 ಔಷಧ ವಿಜ್ಞಾನ ಕಾಲೇಜುಗಳಿವೆ. ಆದರೆ ಸರ್ಕಾರಿ ಕಾಲೇಜು ಎಂದರೆ `ಸರ್ಕಾರಿ ಔಷಧ ವಿಜ್ಞಾನ ಕಾಲೇಜು' ಇರುವುದು ಒಂದೆ.

5 ದಶಕಗಳ ಹಿಂದೆ ನಾಗಪ್ಪ ಆಳ್ವ ಅವರು ಸಚಿವರಾಗಿದ್ದಾಗ, ಕೆ.ಎನ್.ಶಾನಭೋಗ ಅವರ ನೇತೃತ್ವದಲ್ಲಿ (1964ರಲ್ಲಿ) ಈ ಸರ್ಕಾರಿ ಔಷಧ ವಿಜ್ಞಾನ ಕಾಲೇಜು ಆರಂಭವಾಯಿತು. ನಂತರ ಮತ್ತೊಂದು ಸರ್ಕಾರಿ ಕಾಲೇಜು ರಾಜ್ಯದಲ್ಲಿ ತಲೆ ಎತ್ತಲೇ ಇಲ್ಲ. ಹುಬ್ಬಳ್ಳಿಯಲ್ಲಿಯೂ ಒಂದು ಸರ್ಕಾರಿ ಔಷಧ ವಿಜ್ಞಾನ ಕಾಲೇಜು ಆರಂಭವಾಗುವ ಸೂಚನೆ ಇತ್ತೀಚೆಗಷ್ಟೆ ದೊರೆತಿದೆ. ಆದರೆ 85 ಖಾಸಗಿ ಕಾಲೇಜುಗಳು ಸೇರಿದಂತೆ ರಾಜ್ಯದ ಒಟ್ಟೂ 86 ಕಾಲೇಜುಗಳು ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳನ್ನು ತರಬೇತುಗೊಳಿಸುತ್ತಿವೆ. ಗಮನಾರ್ಹ ಸಂಗತಿ ಎಂದರೆ ಇಷ್ಟೂ ಕಾಲೇಜುಗಳಿಂದ ಪ್ರತಿ ವರ್ಷ ಹೊರಬೀಳುವ ಸಾವಿರಾರು ವಿದ್ಯಾರ್ಥಿಗಳಿಗೆ ಈವರೆಗೂ ಉದ್ಯೋಗದ ಕೊರತೆ ಎದುರಾಗಿಲ್ಲ!

ಉದ್ಯೋಗ ಸೃಷ್ಟಿ
ರಾಜ್ಯದಲ್ಲಿ ಉದ್ಯೋಗ ನಿರ್ಮಾಣದಲ್ಲಿ ಔಷಧ ವಲಯ ಮೂರನೇ ಸ್ಥಾನದಲ್ಲಿದೆ. ಗಾರ್ಮೆಂಟ್ ಹಾಗೂ ಐಟಿ ಉದ್ಯಮ ಬಿಟ್ಟರೆ ಅತಿ ಹೆಚ್ಚು ಜನರಿಗೆ ಉದ್ಯೋಗ ಒದಗಿಸುತ್ತಿರುವ ಕ್ಷೇತ್ರ ಔಷಧ ತಯಾರಿಕೆ ಉದ್ಯಮ ವಲಯ.  ಸಗಟು ಔಷಧ ವಹಿವಾಟು, ಚಿಲ್ಲರೆ ಮಾರಾಟ, ಶಿಕ್ಷಣ ವಲಯ, ಮಾರುಕಟ್ಟೆ ಸೇರಿದಂತೆ ಪೂರ್ಣ ಕೌಶಲ ಮತ್ತು ಅರೆಕೌಶಲ ತರಬೇತಿ ಪಡೆದ ಸುಮಾರು 5 ಲಕ್ಷ ಜನರಿಗೆ ಈ ವಲಯ ಪ್ರಸ್ತುತ ಉದ್ಯೋಗ ಒದಗಿಸಿದೆ. ಡಿಪ್ಲೊಮಾ ಔಷಧ ವಿಜ್ಞಾನ(ಡಿ.ಫಾರ್ಮಾ), ಬಿ.ಫಾರ್ಮ್ (ಪದವಿ),   ಎಂ.  ಫಾರ್ಮ್ (ಸ್ನಾತಕೋತ್ತರ ಪದವಿ) ಹಾಗೂ ಪಿ.ಎಚ್‌ಡಿ ಪೂರೈಸಿದ ವಿದ್ಯಾರ್ಥಿಗಳು ಈ ಔಷಧ ತಯಾರಿಕೆ ಉದ್ಯಮ ವಲಯದ ವಿವಿಧ ಹಂತಗಳಲ್ಲಿ ನೌಕರಿ ಪಡೆಯಬಹುದಾಗಿದೆ.

ಉದ್ಯೋಗ ಅವಕಾಶ
*ಔಷಧ ನಿಯಂತ್ರಣ ಇಲಾಖೆ (ಸರ್ಕಾರಿ)
*ಔಷಧ ವ್ಯಾಪಾರಿ (Pharmacist
*ಔಷಧ ಚಿಕಿತ್ಸಕ (Drug Therapist)
*ಆಸ್ಪತ್ರೆ ಔಷಧ ಸಂಯೋಜಕ (ಏHospital Drug Coordinator)
*ರೋಗಿಗಳಿಗೆ ಲಿಖಿತ ಸಲಹಾಕಾರ (Preparing Prescription to Patients)
*ಔಷಧ ನಿರೀಕ್ಷಕ (Drug Inspector)-
*ಔಷಧ ತಂತ್ರಜ್ಞ (Chemical / Drug Technician-)
*ಸಂಶೋಧನಾ ಅಧಿಕಾರಿ (Research Officer-)
*ವಿಜ್ಞಾನಿ (Scientist)
*ಜೈವಿಕ ತಂತ್ರಜ್ಞಾನದ ಕೈಗಾರಿಕೆಗಳು (Biotechnology Industries)
*ವೈದ್ಯಕೀಯ ಸಂಶೋಧನೆ - ಕ್ಲಿನಿಕಲ್ ರಿಸರ್ಚ್ ವಿಭಾಗ

ಉದ್ಯಮದ ಸವಾಲುಗಳು
ತೀವ್ರವಾದ ಸ್ಪರ್ಧೆ, ಬಹಳ ಕಟ್ಟುನಿಟ್ಟಾದ ಮಾರುಕಟ್ಟೆ ನಿಯಂತ್ರಣ ವ್ಯವಸ್ಥೆ, ಬೆಲೆ ನಿಯಂತ್ರಣ ಪ್ರಕ್ರಿಯೆ, ಲಾಭಾಂಶ ಗಳಿಕೆ ಹೆಚ್ಚಿಸಿಕೊಳ್ಳುವ ವಿಚಾರದಲ್ಲಿ ಪ್ರತಿವರ್ಷದ ಒತ್ತಡ, ಕಚ್ಚಾವಸ್ತು ಸೇರಿದಂತೆ ವಿದ್ಯುತ್, ಇಂಧನ ಮುಂತಾದ ವಸ್ತುಗಳ ನಿರಂತರ ಬೆಲೆ ಏರಿಕೆ,  ಸಾಲದ ಬಡ್ಡಿ ನಿರ್ವಹಣೆ ಕಷ್ಟ... ಹೀಗೆ ಹಲವು ಅಂಶಗಳು ಔಷಧ ತಯಾರಿಕಾ ಉದ್ಯಮದ ಬೆಳವಣಿಗೆಯನ್ನು ನಿಯಂತ್ರಿಸುತ್ತಿವೆ ಎನ್ನುತ್ತಾರೆ ಔಷಧ ತಯಾರಿಕೆ ಕಂಪೆನಿಯೊಂದರ ಹಿರಿಯ ಅಧಿಕಾರಿ.

ಔಷಧ ಕಂಪೆನಿ ಆರಂಭ
ಹೊಸದಾಗಿ ಔಷಧ ತಯಾರಿಕೆ ಘಟಕ ಆರಂಭಿಸಬೇಕೆಂದರೆ ಮೊದಲು ಎರಡು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಮೊದಲನೆಯದು ಅನುಭವ. ಘಟಕ ಆರಂಭಿಸುವ ಮೊದಲು ಔಷಧ ತಯಾರಿಕೆ ಉದ್ಯಮಕ್ಕೆ ಸಂಬಂಧಿಸಿದಂತೆ ಕನಿಷ್ಠ 5-6 ವರ್ಷಗಳ ಅನುಭವವನ್ನು ಪಡೆದುಕೊಂಡಿರಬೇಕು.

ಔಷಧ ಉದ್ಯಮದ ಪೂರ್ಣ ಆಳ-ಅಗಲವನ್ನು ಅರಿಯಬೇಕೆಂದರೆ ಒಂದರ್ಥದಲ್ಲಿ ಇಷ್ಟು ಅವಧಿಯೂ ಸಾಲದು. ಆದಾಗ್ಯೂ ಔಷಧ ವಿಜ್ಞಾನದ ಪರಿಚಯವಾದರೂ ನಿಮಗಿದೆ ಎಂಬುದನ್ನು ಅಳೆಯಲು ನಿಮಗೆ ಅನುಮತಿ ನೀಡುವ ಮೊದಲು ನಿಮ್ಮ ಅನುಭವವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ನಂತರದ್ದು ಹಣಕಾಸು ವಿಚಾರ. ಸಾಲ-ಸಬ್ಸಿಡಿ ವಿಚಾರ ಏನೇ ಇದ್ದರೂ ಔಷಧ ತಯಾರಿಕೆ ಘಟಕ ಆರಂಭಿಸಲು ಮೊದಲಿಗೆ ಬಂಡವಾಳ ಹೂಡಲು ನಿಮ್ಮಲ್ಲಿ ಕೋಟ್ಯಂತರ ರೂಪಾಯಿ ಲೆಕ್ಕದಲ್ಲಿಯೇ ಬಂಡವಾಳ ಇರಬೇಕಾಗುತ್ತದೆ.

ಭೂಮಿ, ಕಟ್ಟಡ, ಯಂತ್ರೋಪಕರಣಗಳು, ತಯಾರಾದ ಔಷಧಗಳನ್ನು ಮಾರುಕಟ್ಟೆಗೆ ವಿತರಿಸುವ ಸರಿಯಾಗಿ ಪರೀಕ್ಷಿಸಲು ಅಗತ್ಯವಾದ ಪ್ರಯೋಗಾಲಯ ಮತ್ತು ಅದಕ್ಕೆ  ತಜ್ಞರು, ಔಷಧ ತಯಾರಿಕೆಗೆ ಅತ್ಯಗತ್ಯವಾದ ಹತ್ತಾರು ಬಗೆಯ ರಾಸಾಯನಿಕಗಳ ಸಂಗ್ರಹ, ಪ್ಯಾಕಿಂಗ್ ಮತ್ತು ಲೇಬಲಿಂಗ್ ಘಟಕ, ಪ್ರತಿ ಬ್ಯಾಚ್‌ನ ಔಷಧಗಳ ಮಾದರಿಯನ್ನು ಮತ್ತು ಎಲ್ಲೆಲ್ಲಿಗೆ ವಿತರಣೆಯಾಯಿತು ಎಂಬ ಸಮಗ್ರ ಮಾಹಿತಿಯನ್ನು ದಾಖಲಿಸಿಡುವ ಅಚ್ಚುಕಟ್ಟಾದ ವ್ಯವಸ್ಥೆ ಮೊದಲಾದ ಅಂಶಗಳೆಲ್ಲವೂ ಒಂದು ಔಷಧ ತಯಾರಿಕಾ ಘಟಕದ ಆರಂಭಕ್ಕೆ ಬಹಳ ಮುಖ್ಯವಾದ ಅಂಶಗಳು. ಜತೆಗೆ ಇಲ್ಲಿ ಮುಖ್ಯವಾಗಿರುವುದು ವೈದ್ಯಕೀಯ ಶಾಸ್ತ್ರ ಮತ್ತು ಔಷಧ ಶಾಸ್ತ್ರ ವಿಭಾಗದಲ್ಲಿ ಉನ್ನತ ಶಿಕ್ಷಣ ಪಡೆದವರು ಮತ್ತು ತಜ್ಞ ಸಿಬ್ಬಂದಿಯ ನೇಮಕ.

ಇದೆಲ್ಲದರ ಜತೆಗೆ ಈ ಔಷಧ ತಯಾರಿಕೆ ಉದ್ಯಮ ಬಹಳ ದೊಡ್ಡ ಮೊತ್ತದ ಮೂಲ ಬಂಡವಾಳವನ್ನು ನಿರೀಕ್ಷಿಸುವಂತಹ ಉದ್ಯಮ ಎಂಬುದನ್ನು ಮರೆಯುವಂತಿಲ್ಲ.

ಆದರೆ ಬಂಡವಾಳ ಕ್ರೋಡೀಕರಿಸಿಕೊಳ್ಳುವ ಪ್ರಯತ್ನಕ್ಕೆ ಬೆಂಬಲವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸಾಲ ಸೌಲಭ್ಯ, ಸಬ್ಸಿಡಿ ನೆರವೂ ದೊರೆಯುತ್ತದೆ. ಆದರೆ ಸಾಲ ಸಿಗಬೇಕಾದರೆ ಔಷಧ ತಯಾರಿಕೆ ಘಟಕ ಸ್ಥಾಪನೆಗೆ ಅಗತ್ಯವಾದಂತಹ ವಿಶಾಲವಾದ ಭೂಮಿಯನ್ನು ಮೊದಲು ಹೊಂದಿರಬೇಕು. ಜತೆಗೆ ಔಷಧ ನಿಯಂತ್ರಣ ಇಲಾಖೆಯಿಂದ ಅನುಮತಿ ಪತ್ರವನ್ನೂ ಪಡೆದಿರಬೇಕು

ಔಷಧ ರಫ್ತು: ಅಮೆರಿಕ ದೊಡ್ಡ ಗ್ರಾಹಕ
ಭಾರತ ಮೂಲದ ಔಷಧ ತಯಾರಿಕೆ ಕಂಪೆನಿಗಳು ಕೇವಲ ದೇಶೀಯ ಮಾರುಕಟ್ಟೆಗೆ ವಿವಿಧ ಔಷಧ, ಲಸಿಕೆ, ಪೌಷ್ಠಿಕಾಂಶಗಳನ್ನು ಪೂರೈಸುವುದು ಹಾಗೂ ಸ್ಥಳೀಯ ಬೇಡಿಕೆಗಳನ್ನು  ಈಡೇರಿಸುವುದನ್ನಷ್ಟೇ ಮಾಡುತ್ತಿಲ್ಲ. 220 ದೇಶಗಳಿಗೂ ಔಷಧದ ವಿವಿಧ ಉತ್ಪನ್ನಗಳನ್ನು ರಫ್ತು ಮಾಡುತ್ತಿವೆ.

ಅಮೆರಿಕ, ಮಲೇಷ್ಯಾ, ನೈಜೀರಿಯ, ರಷ್ಯಾ, ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ದೇಶಗಳಿಗೆ ಅತ್ಯಗತ್ಯವಾಗಿರುವ ಔಷಧಗಳನ್ನು ಉತ್ತಮ ಗುಣಮಟ್ಟದಲ್ಲಿ ತಯಾರಿಸಿ ಕಡಿಮೆ ಬೆಲೆಗೆ ಪೂರೈಸುತ್ತಿರುವುದರಿಂದಲೇ ಭಾರತದ ಔಷಧ ಕಂಪೆನಿಗಳ ಉತ್ಪನ್ನಗಳಿಗೆ 220 ದೇಶಗಳಲ್ಲಿ ಉತ್ತಮ ಬೇಡಿಕೆ ಇದೆ. ಸದ್ಯ ಔಷಧಗಳ ಬಳಕೆಯಲ್ಲಿ ಅಮೆರಿಕ ನಮ್ಮ ಬಹುದೊಡ್ಡ ಗ್ರಾಹಕ ದೇಶವಾಗಿದೆ. ವಲಯದ ಒಟ್ಟು ರಫ್ತಿನ ಶೇ 27ರಷ್ಟು ಭಾಗವನ್ನು ಈ ದೇಶ ಸೆಳೆದುಕೊಂಡಿದೆ. ಭಾರತದ ಔಷಧ ಕಂಪೆನಿಗಳ ಪಾಲಿಗೆ ನಂತರದ ದೊಡ್ಡ ಗ್ರಾಹಕ ದೇಶವೆಂದರೆ ಆಫ್ರಿಕಾ (ಶೇ 17)

ಜೆನರಿಕ್  ಔಷಧಕ್ಕೆ ಮನ್ನಣೆ
`ಇತ್ತೀಚೆಗೆ ಭಾರತದಲ್ಲಿ ಜೆನರಿಕ್ ಔಷಧಿ ಬಗ್ಗೆ ಹೆಚ್ಚು ಆಸಕ್ತಿ, ಒಲವು ಮೂಡುತ್ತಿದೆ. ಸರ್ಕಾರವಷ್ಟೇ ಅಲ್ಲ, ನ್ಯಾಯಾಲಯವೂ ಜೆನರಿಕ್ ಔಷಧಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವಲ್ಲಿ ಉತ್ಸಾಹ ತೋರುತ್ತಿದೆ'.

`ಇತ್ತೀಚೆಗಷ್ಟೇ ಸ್ವಿಟ್ಜರ್‌ಲೆಂಡ್ ಮೂಲದ `ನೊವಾರ್ಟಿಸ್' ಔಷಧಿ ಕಂಪೆನಿಯ ಕ್ಯಾನ್ಸರ್ ಔಷಧ ಹಕ್ಕುಸ್ವಾಮ್ಯ ಮನವಿಯನ್ನು ತಳ್ಳಿಹಾಕುವ ಮೂಲಕ ಸುಪ್ರೀಂಕೋರ್ಟ್ `ಜೆನರಿಕ್' ಔಷಧ ವಿಜ್ಞಾನಕ್ಕೆ ಹೆಚ್ಚಿನ ಮನ್ನಣೆ ಕೊಟ್ಟಿರುವುದನ್ನು ಸ್ಮರಿಸಬಹುದು. ಜೆನರಿಕ್ ಔಷಧ ಆಮದು ವಿಚಾರದಲ್ಲಿ ಭಾರತ ಜಗತ್ತಿನಲ್ಲಿಯೇ ಅಗ್ರಸ್ಥಾನದಲ್ಲಿದೆ. ಈ ನಿಟ್ಟಿನಲ್ಲಿ ಭಾರತೀಯ ಜೆನರಿಕ್ ಔಷಧಮಾರುಕಟ್ಟೆ 2013ರ ಅಂತ್ಯಕ್ಕೆ ಕನಿಷ್ಠ ಶೇ 17ರಷ್ಟು ಹೆಚ್ಚಳ ಸಾಧಿಸಲಿದೆ'.

.ಜೀವದ ಲೆಕ್ಕಾಚಾರ...
 

`ಇದು ಕೇವಲ ಒಂದು ಉದ್ಯಮ ಮಾತ್ರವಲ್ಲ, ಜೀವದ ಜೊತೆಗೆ ನೇರ ನಂಟು ಹೊಂದಿರುವ ಅತಿ ಸೂಕ್ಷ್ಮವೂ ಹಾಗೂ ಸಂಕೀರ್ಣವೂ ಆದ ವಿಚಾರ. ಸಾವು-ಬದುಕು ಎಂಬುದರ ನಡುವೆ ಇರುವ ಒಂದು ಸಣ್ಣ ಗೆರೆಯಲ್ಲಿ `ಔಷಧ' ಎಂಬ ಜೀವರಕ್ಷಕ ಮಹತ್ವದ ಕೆಲಸ ಮಾಡುತ್ತದೆ. ಆದ್ದರಿಂದ ಔಷಧ ತಯಾರಿಕೆ ಎಂಬುದು ಕೇವಲ ಹಣದ ಲೆಕ್ಕಾಚಾರದ ಉದ್ಯಮವಷ್ಟೇ ಅಲ್ಲ.

ಅದರಲ್ಲಿ ಜೀವದ ಲೆಕ್ಕಾಚಾರವೂ ಸೇರಿದೆ ಎಂಬುದನ್ನು ಔಷಧ ಉದ್ಯಮಿಗಳು ಮರೆಯಬಾರದು. ರೋಗಿಯೊಬ್ಬ ಪ್ರತಿಬಾರಿ ಔಷಧ ಸೇವಿಸುವಾಗಲೂ ತಾನು ಬದುಕಬೇಕು ಎಂದು ಆಶಿಸುತ್ತಿರುತ್ತಾನೆ. ಈ ಜಗತ್ತಿನಲ್ಲಿ ಇನ್ನೂ ಸ್ವಲ್ಪ ಕಾಲ ತನ್ನ ಹೆಜ್ಜೆ ಗುರುತು ಮೂಡಿಸಬೇಕೆಂಬ ಹಂಬಲದಿಂದಲೇ ಗುಟುಕರಿಸುವ ಪ್ರತಿ ಹನಿ ಔಷಧವೂ ಅವನ ಪಾಲಿಗೆ ನಾಳಿನ ಬೆಳಕನ್ನು ತೋರಿಸುವ ಸಂಜೀವಿನಿಯೇ ಆಗಿರುತ್ತದೆ'
ಡಾ. ಗುಂಡಣ್ಣ ರಾವ್, ಅಧ್ಯಕ್ಷರು, ಕರ್ನಾಟಕ ರಾಜ್ಯ ಫಾರ್ಮಸಿ ಪರಿಷತ್

ಬೆಂಗಳೂರಿನ ಮಹತ್ವ

 'ಬ

ೆಂಗಳೂರು ಔಷಧ ಉತ್ಪಾದನೆ ಮತ್ತು ಮಾರುಕಟ್ಟೆ ದೃಷ್ಟಿಯಿಂದ ಹೆಚ್ಚು ಸೂಕ್ತವಾದ ಭೌಗೋಳಿಕ ಗುಣವನ್ನು ಹೊಂದಿದೆ. ಕರ್ನಾಟಕದಲ್ಲಿ ಒಟ್ಟು 200 ಔಷಧ ತಯಾರಿಕೆ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರಿನಲ್ಲಿಯೇ 150ರಷ್ಟು ಕಂಪೆನಿಗಳಿವೆ. ದೇಶದ ಔಷಧ ಉದ್ಯಮದಲ್ಲಿ ರಾಜ್ಯವನ್ನು ಮೊದಲ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನಗಳು ನಡೆಯಬೇಕು. ಆದರೆ ಅದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಇನ್ನೂ ಹೆಚ್ಚಿನ ಸಹಾಯ ಹಾಗೂ ಉತ್ತೇಜನ ಸಿಗಬೇಕು'.

`ಹಿಮಾಚಲ ಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಔಷಧ ತಯಾರಿಕೆಯ ಮೇಲಿನ ಅಬಕಾರಿ ಶುಲ್ಕಕ್ಕೆ ರಿಯಾಯಿತಿ ನೀಡಿದೆ. ಆದರೆ ಈ ಅವಕಾಶ ನಮ್ಮ ರಾಜ್ಯಕ್ಕೆ ಇಲ್ಲ. ಹೀಗಾಗಿ ತಯಾರಿಕಾ ವೆಚ್ಚ ಹೆಚ್ಚುತ್ತದೆ. ಇದರಿಂದ ಲಾಭಾಂಶ ಕಡಿಮೆ ಆಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ತಂದಿರುವ ಔಷಧ ನೀತಿ -2012ರ ಅಡಿಯಲ್ಲಿ ಸಿಗುವ ಸಬ್ಸಿಡಿ ಎಷ್ಟು ಸಹಾಯಕವಾಗಲಿದೆ ಎಂಬುದನ್ನು ನೋಡಬೇಕಿದೆ'.
ಕೆ.ಆರ್.ಅಮರನಾಥ್, ನಿರ್ದೇಶಕ, ಎಫ್‌ಒಐ ಫಾರ್ಮಾಸ್ಯುಟಿಕಲ್ ಪ್ರೈ.ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT