ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದಾಯ ಇಲಾಖೆ ನೌಕರರ ಮುಷ್ಕರ; ಸಾರ್ವಜನಿಕರ ಪರದಾಟ

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಚನ್ನಪಟ್ಟಣ: ಕಂದಾಯ ಇಲಾಖೆ ನೌಕರರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರವು ಮುಂದುವರೆದಿರುವಂತೆಯೇ ಸಾರ್ವಜನಿಕ ಕೆಲಸಕಾರ್ಯಗಳಿಗೆ ತೊಂದರೆ ಎದುರಾಗಿದ್ದು ಸಾರ್ವಜನಿಕರು ಕಂದಾಯ ಇಲಾಖೆ ನೌಕರರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.



ರಾಮನಗರ ಈಗಲ್‌ಟನ್ ರೆಸಾರ್ಟ್ ಭೂ ಒತ್ತುವರಿ ವಿಚಾರದಲ್ಲಿ ಅಮಾನತುಗೊಂಡಿರುವ ಇಬ್ಬರು ನೌಕರರ ಅಮಾನತು ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಕಂದಾಯ ಇಲಾಖೆ ನೌಕರರು ಮೂರು ದಿನಗಳಿಂದ ರಾಮನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಇವರು ತಮ್ಮ ಪಟ್ಟು ಸಡಿಲಿಸದ ಕಾರಣ ಸಾರ್ವಜನಿಕ ಕೆಲಸಗಳು ವಿಲೇವಾರಿಯಾಗದೆ ನೆನೆಗುದಿಗೆ ಬಿದ್ದಿವೆ.

ಪ್ರತಿಭಟನಾಕಾರರು ನೌಕರರನ್ನು ಬಲವಂತವಾಗಿ ಪ್ರತಿಭಟನೆಗೆ ಕರೆದೊಯ್ಯುತ್ತಿದ್ದು, ಇದರಿಂದ ಕಂದಾಯ ಇಲಾಖೆ ಕಚೇರಿಗಳು ಭಣಗುಡುತ್ತಿವೆ.

ತಮ್ಮ ಆಸ್ತಿ ಮತ್ತಿತರ ದಾಖಾಲಾತಿಗಳು, ಕಾಗದ ಪತ್ರಗಳಿಗಾಗಿ ದೂರದೂರುಗಳಿಂದ ಆಗಮಿಸುತ್ತಿರುವ ಸಾರ್ವಜನಿಕರನ್ನು ಖಾಲಿ ಕುರ್ಚಿ ಟೇಬಲ್‌ಗಳು ಸ್ವಾಗತಿಸುತ್ತಿದ್ದು, ಸಾರ್ವಜನಿಕರ  ಕೋಪ ಮೇರೆ ಮೀರುತ್ತಿದೆ. ಈಗ ಬರಬಹುದು, ಆಗ ಬರಬಹುದು ಎಂದು  ಸಾರ್ವಜನಿಕರು ಕಾಯುತ್ತಾ ಕುಳಿತಿರುವ ದೃಶ್ಯ ಸಾಮಾನ್ಯವಾಗಿದ್ದು, ತಹಸೀಲ್ದಾರ್ ಮೇಲೆ ಹರಿಹಾಯುವ ಘಟನೆಗಳು ನಡೆಯುತ್ತಿವೆ.


ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಪಹಣಿ ಮುಂತಾದ ಕಾಗದ ಪತ್ರಗಳಿಗಾಗಿ ಹಳ್ಳಿಗಳಿಂದ ಆಗಮಿಸುವ ರೈತರು, ಜಾತಿ ಹಾಗೂ ವರಮಾನ ಪ್ರಮಾಣ ಪತ್ರಗಳನ್ನು ಪಡೆಯಲು ಆಗಮಿಸುವ ವಿದ್ಯಾರ್ಥಿಗಳು ಕಳೆದ ಮೂರು ದಿನಗಳಿಂದ ಖಾಲಿ ಕುರ್ಚಿಗಳನ್ನು ನೋಡಿ ಬೇಸತ್ತಿದ್ದಾರೆ.

ಕಂದಾಯ ಇಲಾಖೆ ನೌಕರರ ಈ ಕ್ರಮ ಈಗ ಸ್ಥಳಿಯ ಸಂಘಸಂಸ್ಥೆಗಳ ಕೆಂಗಣ್ಣಿಗೂ ಗುರಿಯಾಗಿದ್ದು, ನೌಕರರು ತಮ್ಮ ಪ್ರತಿಭಟನೆ ಹಿಂಪಡೆದು ಕೆಲಸಕ್ಕೆ ಮರಳದಿದ್ದರೆ ಅವರ ಮೇಲೆ ಎಸ್ಮಾ ಜಾರಿಗೊಳಿಸುವಂತೆ ತಹಸೀಲ್ದಾರ್ ಮೇಲೆ ಒತ್ತಡ ತರಲಾರಂಭಿಸಿದ್ದಾರೆ.

ಕೆಲವು ಸಂಘಸಂಸ್ಥೆಗಳು ನೌಕರರ ಈ ಕ್ರಮದ ವಿರುದ್ಧ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದು, ನೌಕರರ ಪ್ರತಿಭಟನೆ ಹೀಗೆಯೇ ಮುಂದುವರೆದರೆ ಸಂಘಸಂಸ್ಥೆಗಳ ಸಹಕಾರದೊಂದಿಗೆ ಸಾರ್ವಜನಿಕರು ಬೀದಿಗಿಳಿಯುವುದು ನಿಶ್ಚಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT