ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದಾಯ ಗ್ರಾಮವಾಗಿಸಲು ಸರ್ಕಾರ ನಿರ್ಧಾರ

ಗೊಲ್ಲರ ಹಟ್ಟಿಗಳ ಸಮೀಕ್ಷೆ ಆರಂಭ: ಸಚಿವ ಎಚ್.ಆಂಜನೇಯ
Last Updated 17 ಡಿಸೆಂಬರ್ 2013, 8:36 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಊರಿಂದ ಹೊರಭಾಗದಲ್ಲಿ ವಾಸಿಸುತ್ತಿರುವ ಕಾಡುಗೊಲ್ಲ ಸಮುದಾಯದ ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ ಸಮೀಕ್ಷೆ ಪ್ರಾರಂಭವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ತಿಳಿಸಿದರು.

ನಗರದ ತ.ರಾ.ಸು. ರಂಗಮಂದಿರದಲ್ಲಿ ಸೋಮವಾರ ದೇವರಾಜ ಅರಸು ಸಂಶೋಧನಾ ಸಂಸ್ಥೆ ಏರ್ಪಡಿಸಿದ್ದ ಕಾಡುಗೊಲ್ಲ ಸಮುದಾಯದ ರಾಜ್ಯಮಟ್ಟದ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಜನಾಂಗವನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾ­ದರೆ ಅವರನ್ನು ಮೀಸಲಾತಿ ಪಟ್ಟಿಗೆ ಸೇರಿಸಬೇಕು. ಅದಕ್ಕೂ ಮೊದಲು ಸಮೀಕ್ಷೆ ನಡೆಸಬೇಕು. ಜಾತಿವಾರು ಜನಗಣತಿ ಮಾಡಿ, ಸೌಲಭ್ಯ ನೀಡಿ, ಮುಖ್ಯವಾಹಿನಿಗೆ ಕೊಂಡೊಯ್ಯ ಬೇಕಾಗುವುದು. ಈ ಸಂಬಂಧ ಸರ್ಕಾರ ಮುಂದಿನ ವರ್ಷದ ಏಪ್ರಿಲ್, ಮೇ ವೇಳೆಗೆ ಸಮಗ್ರ ಜಾತಿವಾರು ಜನಗಣತಿಯನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಇದಕ್ಕಾಗಿ ರೂ ೧೦೦ ಕೋಟಿ ಮೀಸಲಿಟ್ಟಿದೆ ಎಂದು ಸಚಿವರು ತಿಳಿಸಿದರು.

ಗೊಲ್ಲ ಜನಾಂಗದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿ ಸುಧಾರಣೆಗಾಗಿ ವಿಶೇಷ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದ್ದು ರೂ ೨೫ ಕೋಟಿ ಅನುದಾನ ಮೀಸಲಿಡಲಾಗಿದೆ’ ಎಂದು ತಿಳಿಸಿದರು. 

ಪ್ರಸಕ್ತ ವರ್ಷ ಹಿಂದುಳಿದ ವರ್ಗಗಳ ಜನಾಂಗದ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ರಾಜ್ಯದಲ್ಲಿ ೧೦೦ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಗೊಲ್ಲ ಜನಾಂಗದ ವಿದ್ಯಾರ್ಥಿಗಳ ಶಿಕ್ಷಣ, ವಸತಿ ವ್ಯವಸ್ಥೆಗಾಗಿ ವಿದ್ಯಾರ್ಥಿನಿಲಯ ನಿರ್ಮಿಸಲು ಮುಂದಾದಲ್ಲಿ ರೂ ೧ ಕೋಟಿ ಆರ್ಥಿಕ ನೆರವು ನೀಡಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.

ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷ ಬಿ.ಆರ್.ಯಾವಗಲ್ ಮಾತನಾಡಿ, ‘ಕಾಡುಗೊಲ್ಲ ಜನಾಂಗದ ಅಭಿವೃದ್ಧಿಗಾಗಿ ಸರ್ಕಾರ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾದ ಮಾಹಿತಿ ಹಾಗೂ ವಸ್ತುಸ್ಥಿತಿಯನ್ನು ಜನಾಂಗದ ಮುಖಂಡರು ನೀಡಬೇಕು’ ಎಂದು ಅವರು ಸಲಹೆ ನೀಡಿದರು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ‘ಗೊಲ್ಲ ಸಮುದಾಯ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮುಂದೆ ಬರಲು ಅವರಿಗೆ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ವಿಶೇಷ ನೆರವನ್ನು ನೀಡುವುದು ಅವಶ್ಯ’ ಎಂದು ಅವರು ತಿಳಿಸಿದರು.

ಸಾಹಿತಿ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ‘ಈ ಜನಾಂಗವನ್ನು ಬುಡಕಟ್ಟು ವರ್ಗಕ್ಕೆ ಸೇರಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು’ ಎಂದು ಹೇಳಿದರು.

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಬಿ.ಗುರುಸ್ವಾಮಿ, ಚಿಕ್ಕಪ್ಪ, ಯಳವಾಡ್ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಇಂದಿರಾ, ಶಾಸಕ  ಟಿ.ರಘುಮೂರ್ತಿ, ಕಾಡುಗೊಲ್ಲ ಕ್ಷೇಮಾಭಿವೃದ್ದಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ವಿ.ನಾಗಪ್ಪ, ವೈ.ಕಾಟಪ್ಪ, ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕೆ.ಎಂ.ನಾರಾಯಣಸ್ವಾಮಿ ಹಾಜರಿದ್ದರು.

ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ವೆಂಕಟೇಶ್ ಸ್ವಾಗತಿಸಿದರು. ದೇವರಾಜ್ ಅರಸು ಸಂಶೋಧನಾ ಸಂಸ್ಥೆ ನಿರ್ದೇಶಕಿ ಡಾ. ಆರ್.ಅನುರಾಧಾ ಪಟೇಲ್ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಹೇಶ್ ವಂದಿಸಿದರು. 
ಎರಡು ದಿನ ನಡೆಯುವ ಈ ವಿಚಾರಸಂಕಿರಣದಲ್ಲಿ ಕಾಡುಗೊಲ್ಲ ಜನಾಂಗದ ಶೈಕ್ಷಣಿಕ, ಅರ್ಥಿಕ, ಸಾಹಿತ್ಯ, ಸಂಸ್ಕೃತಿ ಕುರಿತು ಹಾಗೂ ಅವರ ಸ್ಥಿತಿಗತಿ ಕುರಿತು ತಜ್ಞರಿಂದ ವಿಚಾರಮಂಡನೆ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT