ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚೇರಿ ಅಲೆದಾಟದಲ್ಲೇ ಕಾಲಹರಣ

ಮಾಸಾಶನ ನೀಡಿಕೆಯಲ್ಲಿ ಅನ್ಯಾಯ
Last Updated 3 ಡಿಸೆಂಬರ್ 2013, 9:53 IST
ಅಕ್ಷರ ಗಾತ್ರ

ಶಿರಸಿ: ‘ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಕೂಲಿ ಮಾಡಲು ದೇಹ ಒಪ್ಪುತ್ತಿಲ್ಲ, ಹೀಗಾಗಿ ಮನೆಯಲ್ಲಿ ದುಡಿಯುವ ಏಕೈಕ ಜೀವ ತಾಯಿ. ಆಕೆಯ ಸಂಪಾದನೆಯಿಂದ ವಿಕಲಚೇತನ ಮಕ್ಕಳಿಬ್ಬರ ತುತ್ತಿನ ಚೀಲ ತುಂಬುತ್ತಿದೆ’ ಹೀಗೆಂದ ತಾಲ್ಲೂಕಿನ ಬೊಮ್ಮನಳ್ಳಿಯ ಭಾಸ್ಕರ ನಾಯ್ಕ ಎರಡೇ ಮಾತಿನಲ್ಲಿ ಬದುಕಿನ ಚಿತ್ರಣ ತೆರೆದಿಟ್ಟರು.

ದೈಹಿಕ ತೊಂದರೆ ಅನುಭವಿಸುತ್ತಿರುವ ಭಾಸ್ಕರ ಅವರಿಗೆ ಸ್ವತಂತ್ರವಾಗಿ ನಿಂತುಕೊಳ್ಳಲು ಕಾಲಿನ ಸ್ವಾಧೀನ ಇಲ್ಲ. ತೆವಳುತ್ತ ಮನೆಯ ಒಳಗಷ್ಟೇ ಓಡಾಡುತ್ತಾರೆ. ಕುಳಿತಲ್ಲೇ ಕುಳಿತು ದೇಹ ಭಾರವಾಗಿದೆ. ಅದರ ಪರಿಣಾಮದಿಂದ ಕೈ ಸಹ ಬಾಗುತ್ತಿದೆ. ಶೇ 90ರಿಂದ 100ರಷ್ಟು ಅಂಗವೈಕಲ್ಯ ಇರುವುದನ್ನು ವೈದ್ಯರು ಪ್ರಮಾಣೀಕರಿಸಿದ್ದಾರೆ. ಆದರೆ ಮೂರು ವರ್ಷಗಳಿಂದ ನ್ಯಾಯಯುತ ಮಾಸಾಶನ ಪಡೆಯಲು ಪ್ರಯತ್ನಿಸಿ ಭಾಸ್ಕರ ವಿಫಲರಾಗಿದ್ದಾರೆ.

‘ಅಣ್ಣನಿಗೆ ಶೇ 100ರಷ್ಟು ಅಂಗವೈಕಲ್ಯ ಇದ್ದುದರಿಂದ ಪ್ರಸ್ತುತ ಸಿಗುತ್ತಿರುವ ₨ 500 ಮಾಸಾಶನವನ್ನು ₨ 1000ಕ್ಕೆ ಪರಿವರ್ತಿಸಬೇಕು ಎಂದು ಮೂರು ವರ್ಷಗಳ ಹಿಂದೆ ಸ್ಥಳೀಯ ಗ್ರಾಮ ಪಂಚಾಯ್ತಿಯಲ್ಲಿ ಡಾಟಾ ಶೀಟ್‌ ತುಂಬಿ ಕೊಟ್ಟಿದ್ದೇವು. ನಂತರದಲ್ಲಿ ಅನೇಕ ಬಾರಿ ಗ್ರಾಮ ಪಂಚಾಯ್ತಿಗೆ ಅಲೆದಾಡಿದ್ದಾಯ್ತು. ಅಣ್ಣನಿಗೆ ಬರುವ ₨ 500 ಮಾಸಾಶನದಲ್ಲಿ ಬದಲಾವಣೆಯಾಗಿಲ್ಲ’ ಎಂದು ಕಾಲಿನ ವೈಕಲ್ಯ ಹೊಂದಿರುವ ಸುಧಾ ನಾಯ್ಕ ’ಪ್ರಜಾವಾಣಿ’ ಪ್ರತಿನಿಧಿ ಅವರ ಮನೆಗೆ ಭೇಟಿ ನೀಡಿದಾಗ ವಿವರಿಸಿದರು.

ಸುಧಾ ಸಹ ಶೇ 45ರಷ್ಟು ಅಂಗವೈಕಲ್ಯ ಹೊಂದಿದ್ದಾರೆ. ಅವರಿಗೆ ನಿಯಮಿತವಾಗಿ ತಿಂಗಳಿಗೆ ₨ 500 ಮಾಸಾಶನ ದೊರೆಯುತ್ತಿದೆ. ಆದರೆ ಕುಳಿತಲ್ಲೇ ತೆವಳುವ ಭಾಸ್ಕರ ಅವರಿಗೆ ಪ್ರತಿ ತಿಂಗಳು ಹಣ ಸಿಗುತ್ತಿದ್ದರೂ ಮಾಸಾಶನ ನೀಡಿಕೆಯಲ್ಲಿ ಅನ್ಯಾಯವಾಗಿದೆ.
ಸ್ವಂತ ಮನೆಯಿಲ್ಲ, ಒಂದು ಹಿಡಿ ಜಮೀನು ಈ ಕುಟುಂಬದ ಹೆಸರಿನಲ್ಲಿ ಇಲ್ಲ. ಯಾರದೋ ಜಮೀನಿನ ಚಿಕ್ಕ ಜೋಪಡಿಯಂತಹ ಮನೆಯಲ್ಲಿ ಜೀವನ ಕಳೆಯುತ್ತಿರುವ ಮೂರು ಜನರ ಈ ಕುಟುಂಬಕ್ಕೆ ತಾಯಿ ತಾರಾ ನಾಯ್ಕ ದುಡಿಮೆಯೇ ಆಧಾರವಾಗಿದೆ. ಕೆಲ ಪ್ರಮಾಣದ ಅಂಗವೈಕಲ್ಯ ಇದ್ದರೂ ನಡೆದಾಡಲು ತೊಂದರೆ ಇಲ್ಲದ ತಂಗಿ ಸುಧಾ ನಿತ್ಯ ಸಂಜೆ ಮೂರು ಗಾಲಿ ಸೈಕಲ್‌ ಮೇಲೆ ಅಣ್ಣನನ್ನು ರಸ್ತೆಗೆ ಕರೆದುಕೊಂಡು ಹೋಗುತ್ತಾರೆ. ‘ಈ ಸೈಕಲ್‌ ತಂತ್ರಜ್ಞಾನ ಅವೈಜ್ಞಾನಿಕ ವಾಗಿದ್ದು, ತುಸು ಎಚ್ಚರ ತಪ್ಪಿದರೆ ಅನಾಹುತವಾಗುತ್ತದೆ’ ಎನ್ನುತ್ತಾರೆ ಸುಧಾ.

‘15 ವರ್ಷಗಳ ಹಿಂದೆ ನಿಂತುಕೊಳ್ಳುವಷ್ಟು ತಾಕತ್ತು ಕಾಲಿನಲ್ಲಿತ್ತು. ಒಮ್ಮೆ ಬಿದ್ದು ಪೆಟ್ಟು ಮಾಡಿಕೊಂಡ ನಂತರ ಈಗ ಸಂಪೂರ್ಣ ಕುಳಿತಲ್ಲೇ ಜೀವನವಾಗಿದೆ. ಸುತ್ತಲಿನ ಹಳ್ಳಿಗರು ಸೈಕಲ್‌ ತಂದುಕೊಟ್ಟರೆ ಕುಳಿತಲ್ಲೇ ದುರಸ್ತಿ ಮಾಡಿಕೊಡುತ್ತೇನೆ. ಇತ್ತೀಚಿನ ದಿನಗಳಲ್ಲಿ ಕೈ ಸಹ ಬೆಂಡಾಗಿದ್ದು, ವೈದ್ಯರು ವೀಲ್‌ಚೇರ್‌ ಬಳಸಿ ಮನೆಯ ಒಳಗೆ ಓಡಾಡಿ ಎಂದಿದ್ದಾರೆ. ವೀಲ್‌ಚೇರ್‌ ಪಡೆಯಲು ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಅನೇಕ ವರ್ಷಗಳು ಕಳೆದಿವೆ’ ಎಂದು ಭಾಸ್ಕರ ಹೇಳಿದರು.

‘ಅಂಗವಿಕಲರ ಬಸ್‌ಪಾಸ್‌ ದೂರವನ್ನು 100 ಕಿ.ಮೀ.ಯಿಂದ 500 ಕಿ.ಮೀ.ಗೆ ಹೆಚ್ಚಿಸಬೇಕು. ಅಂಗವಿಕಲರಿಗೆ ಮಾಸಾಶನ ನೀಡುವ ಆದಾಯ ಮಿತಿ ಸಡಿಲಿಕೆ ಮಾಡಬೇಕು. ಬಹಳಷ್ಟು ಪ್ರಕರಣಗಳಲ್ಲಿ ಅಂಗವಿಕಲರು ಸ್ವತಂತ್ರ ಕೆಲಸ ನಿರ್ವಹಣೆ ಮಾಡಿಕೊಳ್ಳಲಾರದ ಸ್ಥಿತಿಯಲ್ಲಿರುತ್ತಾರೆ. ಅಂಗವಿಕಲರಾದ ಮೊಗಳ್ಳಿಯ ನೇತ್ರಾವತಿ ಪಟೇಲರಮನೆ, ಮತ್ತೀಘಟ್ಟಾದ ಉಷಾ ನಾಯ್ಕ ಇನ್ನೂ ಅನೇಕರಿಗೆ ಆದಾಯ ಮಿತಿಯ ಕಾರಣದಿಂದ ಒಂದು ವರ್ಷದಿಂದ ಮಾಸಾಶನ ಬರುವುದು ನಿಂತಿದೆ’ ಎನ್ನುತ್ತಾರೆ ತಾಲ್ಲೂಕು ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನವಣಗೇರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT