ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚೇರಿ ಮುಂದೆ ಕುಟುಂಬಸ್ಥರ ಪ್ರತಿಭಟನೆ

ಶಿಕ್ಷಕನ ಸಾವಿಗೆ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ಕಾರಣ: ಆರೋಪ
Last Updated 5 ಡಿಸೆಂಬರ್ 2013, 7:02 IST
ಅಕ್ಷರ ಗಾತ್ರ

ಸಕಲೇಶಪುರ: ‘ತಾಲ್ಲೂಕಿನ ವಳಲಹಳ್ಳಿ ಸಮೀಪದ ಚಿನ್ನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಮಹೇಶ್‌ (32) ಅವರ ಸಾವಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ನಿರ್ಲಕ್ಷ್ಯವೇ ಕಾರಣ’ ಎಂದು ಆರೋಪಿಸಿ ಬುಧವಾರ ಇಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಮಹೇಶ್‌ ಅವರ ಮೃತದೇಹವನ್ನು ಇಟ್ಟು ಕುಟುಂಬದ ಸದಸ್ಯರು ಪ್ರತಿಭಟನೆ ನಡೆಸಿದರು.

‘ಮೂರು ವರ್ಷ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದ ಮಹೇಶ್‌ 2007ರಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.

ಅಂದಿನಿಂದ ಅವರು ಸೇವೆಗೆ ಹಾಜರಾಗಿರಲಿಲ್ಲ. ಕಳೆದ ಜನವರಿ ತಿಂಗಳಲ್ಲಿ ಅವರು ಸಂಪೂರ್ಣ ಗುಣಮುಖರಾಗಿದ್ದು, ಕರ್ತವ್ಯಕ್ಕೆ ಹಾಜರಾಗಬಹುದು ಎಂದು ವೈದ್ಯರು ದೃಢೀಕರಣ ಪತ್ರ ನೀಡಿದ್ದರು. ಇದರ ಹಿನ್ನೆಲೆಯಲ್ಲಿ ಅವರಿಗೆ ಪುನಃ ಸೇವೆಗೆ ಹಾಜರಾಗಲು ಅವಕಾಶ ನೀಡುವಂತೆ ಮನವಿ ಸಲ್ಲಿಸಿದ್ದರು. ಮನವಿಯನ್ನು ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷಿಸಿದ್ದರು. ಇದರಿಂದ ಮನನೊಂದ ಮಹೇಶ್‌ 6 ದಿನಗಳಿಂದ ಉಪವಾಸವಿದ್ದು, ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಮೃತಪಟ್ಟ ಶಿಕ್ಷಕರ ಕುಟುಂಬಕ್ಕೆ ಎಲ್ಲ ಸೌಲಭ್ಯಗಳನ್ನು ನೀಡುವುದರ ಜತೆಗೆ ಕುಟುಂಬದ ಸದಸ್ಯರೊಬ್ಬರಿಗೆ ಶಿಕ್ಷಣ ಇಲಾಖೆಯಲ್ಲಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಬಂದ ಪೊಲೀಸ್‌ ಇನ್‌ಸ್ಪೆಕ್ಟರ್‌ ಗುರುರಾಜ್‌, ಪಿಎಸ್‌ಐ ಜೀವನ್‌ ಹಾಗೂ ಸಿಬ್ಬಂದಿ ಪ್ರತಿಭಟನಾಕಾರರ ಮನವೊಲಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಿಬ್ಬಂದಿ 5 ಸಾವಿರ ಹಣ ಸಂಗ್ರಹಣೆ ಮಾಡಿ ಅಂತ್ಯಸಂಸ್ಕಾರದ ಖರ್ಚಿಗೆ ಬಳಸಿಕೊಳ್ಳುವಂತೆ ಮೃತರ ಕುಟುಂಬಕ್ಕೆ ನೀಡಿದರು.

ಪುರಸಭೆ ಉಪಾಧ್ಯಕ್ಷ ಮುಖೇಶ್‌ ಶೆಟ್ಟಿ, ಸದಸ್ಯ ನಿರ್ವಾಣಯ್ಯ ಅಗ್ರಹಾರ ಬಡಾವಣೆ ನಿವಾಸಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸಾವಿಗೆ ಡಿಡಿಪಿಐ ಕಾರಣ: ‘ಮಹೇಶ್‌ ಮಾನಸಿಕ ಅಸ್ವಸ್ಥರಾಗಿದ್ದ ಕಾರಣ ಶಿವಮೊಗ್ಗದ ಮಾನಸಿಕ ತಜ್ಞ ಡಾ.ಅಶೋಕ್‌ಪೈ ಅವರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಹೇಶ್‌ ಸಂಪೂರ್ಣ ಗುಣಮುಖರಾಗಿರುವುದರಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಲು ಅರ್ಹರಾಗಿದ್ದಾರೆ ಎಂದು ವೈದ್ಯರು ದೃಢೀಕರಣ ಪತ್ರ ನೀಡಿದ್ದರೂ, ಆ ಪತ್ರವನ್ನು ಇಲಾಖೆ ನಿರ್ಲಕ್ಷಿಸಿದ್ದರಿಂದ ಮಹೇಶ್‌ ಸಾವಿಗೆ ಡಿಡಿಪಿಐ ನೇರ ಹೊಣೆ’ ಎಂದು ನಿವೃತ್ತ ಶಿಕ್ಷಕ ಹಾಗೂ ಪುರಸಭಾ ಸದಸ್ಯ ನಿರ್ವಾಣಯ್ಯ ಹೇಳಿದರು.

ಇಲಾಖೆ ಕಾರಣವಲ್ಲ: ಬಿಇಒ
‘ತಾಲ್ಲೂಕಿನ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿನ್ನಹಳ್ಳಿಯಲ್ಲಿ ಈ ಹಿಂದೆ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಮಹೇಶ್‌ ಸಾವಿಗೆ ಶಿಕ್ಷಣ ಇಲಾಖೆ ಕಾರಣವಲ್ಲ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್‌ ಹೇಳಿದರು.

ಶಿಕ್ಷಕ ಮಹೇಶ್‌ ಮೃತದೇಹವನ್ನು ಬಿಇಒ ಕಚೇರಿ ಮುಂದೆ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೃತ ಶಿಕ್ಷಕ ಮಹೇಶ್‌ 2007ರಿಂದ ಇಲ್ಲಿಯವರೆಗೂ ಅನಧಿಕೃತ ಗೈರು ಹಾಜರಾಗಿದ್ದಾರೆ. ಅವರಿಗೆ ಈಗಾಗಲೇ 3 ಬಾರಿ ನೋಟಿಸ್‌ ನೀಡಲಾಗಿದ್ದು, ಯಾವ ನೋಟಿಸ್‌ಗೂ  ಉತ್ತರ ನೀಡಿಲ್ಲ. ಇಲಾಖಾ ವಿಚಾರಣೆ ನಡೆಸಿ ವರದಿಯನ್ನು ಜುಲೈ ತಿಂಗಳಿನಲ್ಲಿ ಡಿಡಿಪಿಐ ಅವರಿಗೆ ಸಲ್ಲಿಸಲಾಗಿದೆ. ವರದಿಯನ್ನು ಪರಿಶೀಲಿಸಿ ನ. 29ರಂದು ನೀಡಿರುವ ಆದೇಶದಲ್ಲಿ ಸೇವೆಯಿಂದ ವಜಾಗೊಳಿಸಲಾಗಿದೆ’ ಎಂದರು. 
 
‘ಅನಧಿಕೃತ ಗೈರು ಹಾಜರಿ ಎಂದು ಪರಿಗಣಿಸಿ ಸೇವೆಯಿಂದ ವಜಾಗೊಳಿಸಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ  ಪ್ರಕಾರ ಸತತವಾಗಿ 4 ತಿಂಗಳು ಗೈರು ಹಾಜರಾದರೆ ಇಲಾಖಾ ವಿಚಾರಣೆ ನಡೆಸಿ ಸೇವೆಯಿಂದ ವಜಾ ಗೊಳಿಸಬೇಕಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT