ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಠಿಣ ತಾಲೀಮು; ಅಚ್ಚಳಿಯದ ಅನುಭವ

Last Updated 4 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಪ್ರತಿದಿನ ಬೆಳಗಿನ ಜಾವ 2 ಗಂಟೆಗೇ ಏಳುತ್ತಿದ್ದೆವು. 2.45ರ ಹೊತ್ತಿಗೆ ಮೈದಾನದಲ್ಲಿ ನಾವೆಲ್ಲ ಒಟ್ಟು ಸೇರುತ್ತಿದ್ದೆವು. ಆಗ ಆರಂಭವಾಗುತ್ತಿದ್ದ ಪಥಸಂಚಲನದ ತಾಲೀಮು ಬೆಳಕು ಹರಿಯುವವರೆಗೂ ಮುಂದುವರೆಯುತ್ತಿತ್ತು...~

ಈ ಬಾರಿಯ ಗಣರಾಜ್ಯೋತ್ಸವ ದಿನ ನವದೆಹಲಿಯ ರಾಜಪಥ್‌ನಲ್ಲಿ ನಡೆದ ಪಥಸಂಚಲನದಲ್ಲಿ ದ್ವಿತೀಯ ಪ್ರಶಸ್ತಿ ಪಡೆದ ಕರ್ನಾಟಕ - ಗೋವಾ ಎನ್‌ಸಿಸಿ ನಿರ್ದೇಶನಾಲಯದ ಕೆಡೆಟ್‌ಗಳ ಪೈಕಿ ಒಬ್ಬರಾದ ಕಾರ್ಕಳದ ಭುವನೇಂದ್ರ ಕಾಲೇಜಿನ ಅಕ್ಷತಾ ಶೆಟ್ಟಿ `ಪ್ರಜಾವಾಣಿ~ ಜೊತೆ ಹಂಚಿಕೊಂಡ ಅನುಭವ ಇದು.

ಗಣರಾಜ್ಯೋತ್ಸವದ ದಿನ ನಡೆದ ಪಥಸಂಚಲನ, `ಗಾರ್ಡ್ ಆಫ್ ಆನರ್~, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಒಟ್ಟು 125 ಕೆಡೆಟ್‌ಗಳಿಗೆ ರಾಜಭವನದ ಗಾಜಿನ ಮನೆಯಲ್ಲಿ ಶನಿವಾರ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಪ್ರಧಾನಿ ಡಾ. ಮನಮೋಹನ್ ಸಿಂಗ್, ದೇಶದ ಸಶಸ್ತ್ರ ಪಡೆಗಳ ಮುಖ್ಯಸ್ಥರ ಎದುರು ಗಣರಾಜ್ಯೋತ್ಸವದ ದಿನ ಪಥಸಂಚಲನದಲ್ಲಿ ಪಾಲ್ಗೊಂಡ ಅನುಭವ ಹೇಗಿತ್ತು ಎಂದು ಪ್ರಶ್ನಿಸಿದಾಗ, `ರಾಜಪಥ್‌ನ ಪಥಸಂಚಲನದಲ್ಲಿ ಪಾಲ್ಗೊಳ್ಳುವುದು ಎನ್‌ಸಿಸಿ ಕೆಡೆಟ್‌ಗಳ ಪಾಲಿಗೆ ಅಭಿಮಾನದ ಸಂಗತಿ. ಅಂಥದೊಂದು ಅವಕಾಶಕ್ಕಾಗಿ ಕೆಡೆಟ್‌ಗಳು ಹಂಬಲಿಸುತ್ತಾರೆ. ನನಗೆ ಅಂಥ ಅವಕಾಶ ದೊರೆತಿತ್ತು, ಆ ಅನುಭವವನ್ನು ಮಾತಿನಲ್ಲಿ ಹೇಳುವುದು ಹೇಗೆ ಸಾಧ್ಯ?~ ಎಂದು ಮರುಪ್ರಶ್ನೆ ಎಸೆದರು.

`ದ್ವಿತೀಯ ಪ್ರಶಸ್ತಿ ಈ ಬಾರಿ ಕರ್ನಾಟಕ-ಗೋವಾ ಎನ್‌ಸಿಸಿ ನಿರ್ದೇಶನಾಲಯದ ಪಾಲಿಗೆ ಲಭಿಸಿದ್ದು ಯಾವ ಅಂಶಗಳ ಆಧಾರದಲ್ಲಿ?~ ಎಂಬ ಪ್ರಶ್ನೆಗೆ ಉತ್ತರಿಸಿದ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನ ಪಿಯುಸಿ ವಿದ್ಯಾರ್ಥಿ ಪ್ರೀತಂ, `ಪ್ರಶಸ್ತಿಗೆ ಆಯ್ಕೆ ಮಾಡುವಾಗ ಕೇವಲ ಪಥಸಂಚಲನದಲ್ಲಿ ಕಾಣುವ ಶಿಸ್ತನ್ನು ಮಾತ್ರ ಪರಿಗಣಿಸುವುದಿಲ್ಲ. ಅಲ್ಲಿ ಇದ್ದಷ್ಟು ದಿನ ನಾವು ತೋರಿದ ಶಿಸ್ತು, ವಾಸ್ತವ್ಯಕ್ಕೆ ನೀಡಿದ್ದ ಕೊಠಡಿಗಳಲ್ಲಿ ನಾವು ಪಾಲಿಸುವ ಸ್ವಚ್ಛತೆ, ನಮ್ಮ ನಿತ್ಯದ ಚಟುವಟಿಕೆಗಳಲ್ಲಿ ಕಂಡುಬಂದ ಶಿಸ್ತು ಕೂಡ ಪ್ರಮುಖ ಅಂಶವಾಗುತ್ತದೆ~ ಎಂದರು.

`ದೇಶದ ಸಶಸ್ತ್ರ ಪಡೆಗಳ ಮುಖ್ಯಸ್ಥರಾದ ರಾಷ್ಟ್ರಪತಿ, ಪ್ರಧಾನಿ, ದೇಶವಿದೇಶಗಳ ಗಣ್ಯರು... ಹೀಗೆ ಅಸಂಖ್ಯ ಅತಿಥಿ, ಮುಖಂಡರ ಎದುರು ಕವಾಯತು ಪ್ರದರ್ಶಿಸುವ ಅವಕಾಶ ನನಗೆ ಲಭಿಸಲು ಎನ್‌ಸಿಸಿಯೇ ಕಾರಣ. ನಾನೊಬ್ಬ ಕೆಡೆಟ್ ಅಲ್ಲದಿದ್ದರೆ ಈ ಅವಕಾಶ ಖಂಡಿತ ಲಭಿಸುತ್ತಿರಲಿಲ್ಲ~ ಎಂದು ಗೋವಾದ ಶ್ರವಣ್ ಹಲಂಕರ್ ಅಭಿಮಾನ ವ್ಯಕ್ತಪಡಿಸಿದರು.

`ಅಷ್ಟೇ ಅಲ್ಲ, ಎನ್‌ಸಿಸಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ನಮ್ಮ ಆತ್ಮವಿಶ್ವಾಸವೂ ವೃದ್ಧಿಯಾಗುತ್ತದೆ. ಶಿಸ್ತು ಮತ್ತು ದೇಶಪ್ರೇಮದ ಅಭಿವ್ಯಕ್ತಿಗೆ ಎನ್‌ಸಿಸಿ ಉತ್ತಮ ವೇದಿಕೆ~ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯಪಾಲ ಎಚ್.ಆರ್. ಭಾರದ್ವಾಜ್, `ದೇಶದಲ್ಲಿ ಸಶಸ್ತ್ರ ಪಡೆಗಳಿಗೆ ಅತ್ಯುನ್ನತ ಗೌರವವಿದೆ. ನಾನೂ ಹಿಂದೆ ಸೈನ್ಯಕ್ಕೆ ಸೇರುವ ಪ್ರಯತ್ನ ಮಾಡಿದ್ದೆ. ಆದರೆ ವೈದ್ಯಕೀಯ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ಕಾರಣ ಸೇನೆಗೆ ಸೇರಲಾಗಿಲ್ಲ~ ಎಂದರು. ಕರ್ನಾಟಕ-ಗೋವಾ ಎನ್‌ಸಿಸಿ ನಿರ್ದೇಶನಾಲಯದ ಉಪಪ್ರಧಾನ ನಿರ್ದೇಶಕ ಎಸ್.ಎಸ್. ದೇಶಪಾಂಡೆ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT