ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣದಲ್ಲಿ ರಂಗೇರಿದ ಪಕ್ಷಗಳ ಪ್ರಚಾರ

Last Updated 26 ಏಪ್ರಿಲ್ 2013, 9:40 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ವಿಧಾನಸಭಾ ಚುನಾವಣೆಯ ಕಾವು ಏರತೊಡಗಿದೆ. ವಿವಿಧ ಪಕ್ಷಗಳೂ ಸಹ ಬಿರುಸಿನಿಂದ ಪ್ರಚಾರದಲ್ಲಿ ಭಾಗಿಯಾಗಿದ್ದು, ಆರೋಪ ಪ್ರತ್ಯಾರೋಪದಲ್ಲಿ ತೊಡಗಿವೆ.

`ಕೇಂದ್ರದ ಅನುದಾನ ಬಳಕೆಯಲ್ಲಿ ವಿಫಲ'
ಮೂಡಿಗೆರೆ: ಕೇಂದ್ರ ಸರ್ಕಾರ ರಾಜ್ಯ ಅಭಿವೃದ್ಧಿಗಾಗಿ ಜಾರಿಗೊಳಿಸಿದ ಶೇ  90 ರಷ್ಟು ಯೋಜನೆಗಳನ್ನು ರಾಜ್ಯದ ಬಿಜೆಪಿ ಸರ್ಕಾರವು ಜನತೆಗೆ ತಲುಪಿಸಲು ವಿಫಲವಾಗಿದೆ ಎಂದು ಸಂಸದ ಜಯಪ್ರಕಾಶ್ ಹೆಗ್ಡೆ ಆರೋಪಿಸಿದರು.

ತಾಲ್ಲೂಕಿನ ಕಿರುಗುಂದ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ, ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರಕ್ಕೆ ಸೂಕ್ತ ಬೇಡಿಕೆಯನ್ನು ಸಲ್ಲಿಸದೇ, ಕೇವಲ ಕುರ್ಚಿಗಾಗಿ ಕಿತ್ತಾಟದಲ್ಲಿಯೇ ಕಾಲ ಕಳೆದಿದೆ, ಆಲ್ಲದೇ ಕೇಂದ್ರ ಸರ್ಕಾರವೇ ಮನಗಂಡು ಬಿಡುಗಡೆ ಮಾಡಿದ ಅನುದಾನವನ್ನು ಬಳಸಿಕೊಳ್ಳುವಲ್ಲಿಯೂ ವಿಫಲವಾಗಿದ್ದು, ರಾಜ್ಯವನ್ನು ಅಭಿವೃದ್ಧಿ ಪಥದಿಂದ ವಂಚಿತವಾಗುವಂತೆ ಮಾಡಲಾಗಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರವು ಗ್ರಾಮೀಣ ಅಭಿವೃದ್ಧಿಗೆ ಒತ್ತು ನೀಡಿದ್ದು, 13 ನೇ ಹಣಕಾಸು ಯೋಜನೆಯಿಂದ ರಾಜ್ಯಕ್ಕೆ ಸಾಕಷ್ಟು ಲಾಭವಿದೆ. ಉದ್ಯೋಗಖಾತ್ರಿ ಯೋಜನೆ, ಆರೋಗ್ಯ, ಶಿಕ್ಷಣ, ಆಹಾರ ಸೌಲಭ್ಯವನ್ನು ಕೇಂದ್ರ ಸರ್ಕಾರ ಸಮರ್ಪಕವಾಗಿ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಆಹಾರ ಭದ್ರತೆ ಕಾಯ್ದೆಯನ್ನು ಜಾರಿಗೆ ತರಲಿದೆ ಎಂದರು.

ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಮಾತನಾಡಿ, ಕ್ಷೇತ್ರದಲ್ಲಿ ನಿವೇಶನ ಸಮಸ್ಯೆ, ಒತ್ತುವರಿ ಸಮಸ್ಯೆ, ಉತ್ತಮ ಸಾರ್ವಜನಿಕ ಆಸ್ಪತ್ರೆ ಕೊರತೆ, ಕುಡಿಯುವ ನೀರು, ವಿದ್ಯುತ್ ಸೌಲಭ್ಯದ ಕೊರತೆಯಿದ್ದು, ಸಮಸ್ಯೆ ಪರಿಹಾರಕ್ಕೆ ಕಾರ್ಯಕ್ರಮ ರೂಪಿಸಲಾಗುವುದು ಕ್ಷೇತ್ರದಲ್ಲಿ ಆಡಳಿತ ಜನ ಸಾಮಾನ್ಯರಿಗೆ ಸಿಗಬೇಕೆಂದರೆ ಕಾಂಗ್ರೆಸ್ ಬೆಂಬಲಿಸಿ ಎಂದು ಮನವಿ ಮಾಡಿದರು.

ಸಭೆಯಲ್ಲಿ ಗೃಹಮಂಡಳಿ ಮಾಜಿ ಅಧ್ಯಕ್ಷ ಹಾಲಪ್ಪಗೌಡ, ಯು.ಎಚ್. ಹೇಮಶೇಖರ್, ಕಿರುಗುಂದ ನಝೀರ್, ಅಗ್ರಹಾರ ಮಹೇಶ್, ರಾಜಮ್ಮ, ಸುಶೀಲಮ್ಮ, ಕಮ ಲಾಕ್ಷಮ್ಮ, ವಸಂತಮ್ಮ , ಸಬ್ಲಿ ದೇವರಾಜು ಮುಂತಾ ದವರಿದ್ದರು.

ಬಂಡಾಯ ಅಭ್ಯರ್ಥಿ ಮತಯಾಚನೆ
ತರೀಕೆರೆ:  ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್.ನೀಲಕಂಠಪ್ಪ ಪಟ್ಟಣದಲ್ಲಿ ತಮ್ಮ ಬೆಂಬಲಿಗರೊಂದಿಗೆ ಗುರುವಾರ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, `ನಾನು ಚುನಾವಣಾ ಕಣದಿಂದ ಹಿಂದೆ ಸರಿದಿದ್ದೇನೆ ಎನ್ನುವುದು ಕೇವಲ ಊಹಾಪೋಹ. ಈ ಹಿಂದೆ ಕ್ಷೇತ್ರದ ಜನತೆ ನನ್ನನ್ನು ಎರಡು ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ನನ್ನ ಆಡಳಿತ ವೈಖರಿಯನ್ನು ಜನತೆ ನೋಡಿದ್ದಾರೆ. ಹಣ ಬಲ ಹಾಗೂ ಜಾತಿ ರಾಜಕಾರಣ ಮಾಡುವ ನಾಯಕರನ್ನು ಜನತೆ ಈ ಚುನಾವಣೆಯಲ್ಲಿ ತಿರಸ್ಕರಿಸಲಿದ್ದಾರೆ  ಎನ್ನುವ ನಂಬಿಕೆ ನನಗಿದೆ' ಎಂದರು.

`ಮತದಾರರು ನನಗೆ ಬೆಂಬಲ ವ್ಯಕ್ತಪಡಿಸಿ ಶಾಸಕನಾಗಿ ಆಯ್ಕೆ ಮಾಡಿ ಅಧಿಕಾರ ನೀಡಿದರೆ ಜಾತ್ಯತೀತವಾಗಿ ಆಡಳಿತ ನಡೆಸುವುದರ ಜೊತೆಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮವಹಿಸುತ್ತೇನೆ' ಎಂದು ತಿಳಿಸಿದರು.  ಎ.ಆರ್.ಕೆ.ಶ್ರಿನಿವಾಸ್, ಅಮ್ಜದ್, ವಿಜಯಕುಮಾರ್, ಮಲ್ಲೇಶ್, ಬೋಜರಾಜ್ ಇತರರು ಇದ್ದರು.

ಭ್ರಷ್ಟಾಚಾರಕ್ಕೆ ಮುಕ್ತಿ ಸನ್ನಿಹಿತ: ನಿಂಗಯ್ಯ
ಮೂಡಿಗೆರೆ:
ರಾಜ್ಯವನ್ನು ಐದು ವರ್ಷಗಳಲ್ಲಿ ಬರಿದು ಮಾಡಿದ ಬಿಜೆಪಿ ಸರ್ಕಾರಕ್ಕೆ ರಾಜ್ಯದ ಜನತೆ ಈ ಚುನಾ ವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ  ಬಿ.ಬಿ. ನಿಂಗಯ್ಯ ಅಭಿಪ್ರಾಯ ಪಟ್ಟರು.

ತಾಲ್ಲೂಕಿನ ಗೋಣಿಬೀಡಿನಲ್ಲಿ ಗುರುವಾರ ನಡೆದ  ಸಮಾವೇಶದಲ್ಲಿ ಅವರು ಮಾತನಾಡಿದರು.ಅಧಿಕಾರವಿಲ್ಲದೇ ಹಂಬಲಿಸುತ್ತಿದ್ದ ಬಿಜೆಪಿಗೆ ಒಮ್ಮೆ ಅವಕಾಶ ಕಲ್ಪಿಸಿದ ರಾಜ್ಯದ ಜನತೆಗೆ ಸರ್ಕಾರ ದ್ರೋಹ ಬಗೆದಿದೆ. ಜನರು ನಂಬಿಕೆಯಿಟ್ಟು ಚುನಾಯಿತರನ್ನಾಗಿ ಮಾಡಿದರೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಶ್ಲೀಲ ದೃಶ್ಯ ವೀಕ್ಷಣೆಯಲ್ಲಿ ಕಾಲ ಕಳೆದು ಮತ ನೀಡಿದ ಜನತೆಗೆ ಅಪಚಾರವೆಸಗಿದ್ದಾರೆ ಎಂದು ದೂರಿದ ಅವರು ಅಂತಹ ವ್ಯಕ್ತಿಗಳಿಗೆ, ಅಂತಹ ಪಕ್ಷಕ್ಕೆ ರಾಜ್ಯದ ಜನತೆ ಈ ಬಾರಿ ಚುನಾವಣೆಯ ಮೂಲಕ ಉತ್ತರ ನೀಡಲಿದ್ದಾರೆ ಎಂದರು.

ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಆರ್. ಉಮಾಪತಿ ಮಾತನಾಡಿ, ಆಳುವ ವರ್ಗದ ಜನಪ್ರತಿನಿಧಿಗಳ ಭ್ರಷ್ಟಾಚಾರಕ್ಕೆ ಸಿಲುಕಿ ನೊಂದಿರುವ ರಾಜ್ಯದ ಜನತೆಗೆ ಭ್ರಷ್ಟಾಚಾರದಿಂದ ಮುಕ್ತಿ ದೊರೆಯುವ ಕಾಲ ಸನಿಹವಾಗಿದ್ದು, ಸಾಮಾನ್ಯ ಜನರ ಆಶಯದಂತೆ ಆಡಳಿತ ನಡೆಸುವ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದರು.

ಕಾರ್ಯಕ್ರಮದಲ್ಲಿ ಪಕ್ಷದ ಪದಾಧಿಕಾ ರಿಗಳಾದ ಎಚ್.ಎಚ್. ದೇವರಾಜು, ಬಾಲಕೃಷ್ಣೇಗೌಡ, ರಂಜನ್ ಅಜಿತ್ ಕುಮಾರ್, ಲೋಹಿತ್, ಜಗದೀಶ್, ಮನೋಜ್, ಜಯರಾಮಗೌಡ ಮುಂತಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT