ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣೊರೆಸುವ ತಂತ್ರವಾಗದಿರಲಿ

Last Updated 3 ಫೆಬ್ರುವರಿ 2011, 16:00 IST
ಅಕ್ಷರ ಗಾತ್ರ


ದೂರ ಸಂಪರ್ಕ ಇಲಾಖೆಯಲ್ಲಿನ 2 ಜಿ ತರಂಗಾಂತರ ಹಂಚಿಕೆಯ ಭ್ರಷ್ಟಾಚಾರದ ಸಂಬಂಧ  ಸಿಬಿಐ ಸುಪ್ರೀಂ ಕೋರ್ಟ್‌ಗೆ ತನಿಖೆಯ ವಿವರ ಸಲ್ಲಿಸಲು ಇನ್ನೊಂದು ವಾರ ಇದೆ ಎನ್ನುವಾಗ ಪ್ರಕರಣದ ಪ್ರಮುಖ ಆರೋಪಿ ಮಾಜಿ ಸಚಿವ ಎ.ರಾಜಾ ಮತ್ತು ಇಲಾಖೆಯ ಆಗಿನ ಇಬ್ಬರು ಪ್ರಮುಖ ಅಧಿಕಾರಿಗಳು ಮತ್ತು ಆಪ್ತ ಸಿಬ್ಬಂದಿಯನ್ನು ಬಂಧಿಸಿರುವುದು ಜನರ ಕಣ್ಣೊರೆಸುವ ನಾಟಕ ಎಂದೇ ಹೇಳಲಾಗುತ್ತಿದೆ. 2ಜಿ ತರಂಗಾಂತರ ಹಂಚಿಕೆಯಲ್ಲಿ ಸರ್ಕಾರಕ್ಕೆ 1.76 ಲಕ್ಷ ಕೋಟಿ ಆದಾಯ ನಷ್ಟವಾಗಿರುವ ಸಂಗತಿ ಸರ್ಕಾರಕ್ಕೆ ತಿಳಿದೇ ಇತ್ತು ಎನ್ನುವುದು ಈಗಾಗಲೇ ಸಾಬೀತಾಗಿದೆ.

ಆದರೂ, ರಾಜಾ ಸಚಿವರಾಗಿ ನಡೆಸುತ್ತಿದ್ದ ಎಲ್ಲ ವ್ಯವಹಾರಗಳ ಬಗೆಗೆ ಯುಪಿಎ ಸರ್ಕಾರ ಕಣ್ಣುಮುಚ್ಚಿ ಕುಳಿತಿದ್ದುದು ಅಕ್ಷಮ್ಯ. ಸಿಎಜಿ ವರದಿ ಬಂದ ಹಿನ್ನೆಲೆಯಲ್ಲಿ ಜನತಾ ಪಕ್ಷದ ಅಧ್ಯಕ್ಷ ಡಾ. ಸುಬ್ರಮಣಿಯನ್ ಸ್ವಾಮಿ, ಪ್ರಕರಣದ ಬಗೆಗೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ ಮೇಲೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿರುವುದು ಇಡೀ ದೇಶಕ್ಕೇ ಗೊತ್ತಿರುವ ಸಂಗತಿ. ನ್ಯಾಯಾಲಯದ ಸೂಚನೆಯಂತೆ ರಾಜಾ ವಿರುದ್ಧ ಸಿಬಿಐ ತನಿಖೆ ನಡೆಸುತ್ತಿದೆ. ಆದರೆ ರಾಜಾ ಅವರನ್ನು ಬಂಧಿಸಿದ ಕ್ರಮ ತೀರಾ ತಡವಾಗಿದೆ. ಆದ್ದರಿಂದ ಇದು ಒಂದು ರಾಜಕೀಯ ನಾಟಕವಾಗಿರಲಿಕ್ಕೂ ಸಾಕು. ದೇಶದಲ್ಲಿಯೇ ಅತ್ಯಂತ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿರುವ ಪ್ರಕರಣ ಇದು. ಆದ್ದರಿಂದ ಜನರಲ್ಲಿ ಯಾವುದೇ ಶಂಕೆ ಮೂಡದಂತೆ ಸಿಬಿಐ ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ತನಿಖೆ ನಡೆಸಬೇಕಿದೆ.

ಈ ಮಧ್ಯೆ ಕಪ್ಪುಹಣ ಮತ್ತು ದೂರಸಂಪರ್ಕ ಇಲಾಖೆಯಲ್ಲಿ ನಡೆದ 2ಜಿ ತರಂಗಾಂತರ ಹಂಚಿಕೆಯಲ್ಲಿನ ಹಗರಣದ ವಿರುದ್ಧ ಸಮರ ಸಾರಿರುವ ಬಿಜೆಪಿ ನೇತೃತ್ವದ ರಾಷ್ಟ್ರೀಯ ಜನತಾಂತ್ರಿಕ ಮೈತ್ರಿ ಕೂಟ (ಎನ್‌ಡಿಎ) ತನ್ನ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳು, ಸಂಸದರು ಮತ್ತು ನಾಯಕರು ತಮ್ಮ ಆಸ್ತಿಪಾಸ್ತಿಯ ವಿವರಗಳನ್ನು ಘೋಷಿಸಿಕೊಳ್ಳುವಂತೆ ನೀಡಿರುವ ಕರೆ ಸ್ವಾಗತಾರ್ಹ. ಆಸ್ತಿಪಾಸ್ತಿಯ ವಿವರದ ಘೋಷಣೆ ಹೊಸ ಬೆಳವಣಿಗೆಯೇನಲ್ಲ. ಹಲವಾರು ವರ್ಷಗಳಿಂದ ಎಡ ಪಕ್ಷಗಳು ತಮ್ಮ ಪಕ್ಷದ ಮಟ್ಟದಲ್ಲಿ ಈ ಪದ್ಧತಿಯನ್ನು ಪಾಲಿಸಿಕೊಂಡು ಬರುತ್ತಿವೆ.

ದೇಶದ ಶೇ 60ರಷ್ಟು ರಾಜಕಾರಣಿಗಳು ಅಕ್ರಮವಾಗಿ ಆಸ್ತಿಪಾಸ್ತಿ ಮಾಡಿಕೊಂಡು ಭ್ರಷ್ಟರಾಗಿದ್ದಾರೆ ಎಂಬ ಸಮೀಕ್ಷೆಯೊಂದರ ಹಿನ್ನೆಲೆಯಲ್ಲಿ ಎನ್‌ಡಿಎ ಈ ನಿರ್ಧಾರಕ್ಕೆ ಬಂದಿದೆ. ರಾಜಕೀಯ ರಂಗದಲ್ಲಿ ಭ್ರಷ್ಟಾಚಾರವನ್ನು ಕಡಿಮೆ ಮಾಡುವ ಪ್ರಯತ್ನ ಇದು ಎಂಬುದು ಎನ್‌ಡಿಎ ನಾಯಕ ಅಡ್ವಾಣಿ ಅವರ ಆಶಯ. ನಾಯಕರು ತಮ್ಮ ಆಸ್ತಿಪಾಸ್ತಿಯ ವಿವರವನ್ನು ಘೋಷಣೆ ಮಾಡಿದರೆ ಸಾಲದು, ಆ ಸಂಪತ್ತಿನ ಮೂಲಗಳು ಯಾವುವು ಮತ್ತು ಘೋಷಣೆಯಲ್ಲಿ ಲೋಪಗಳಾಗಿದ್ದರೆ ಅಂತಹವರ ವಿರುದ್ಧ ಏನು ಕ್ರಮಕೈಗೊಳ್ಳಲಾಗುತ್ತದೆ ಎನ್ನುವ ಬಗೆಗೂ ಎನ್‌ಡಿಎ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಬೇಕು. ಇಲ್ಲವಾದರೆ ಇದೆಲ್ಲ ಜನರನ್ನು ಮರಳುಗೊಳಿಸುವ ನಾಟಕ ಎನ್ನುವಂತಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT