ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಮನ ತಣಿಸಿದ ನೃತ್ಯ

Last Updated 8 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಲಯ-ಲಾಸ್ಯ

ಕಳೆದ ಶನಿವಾರ ಅಲಾಯನ್ಸ್ ಫ್ರಾನ್ಸೆಯ ಸಭಾಂಗಣದಲ್ಲಿ ಘನವಾದ ಒಡಿಸ್ಸಿ ನೃತ್ಯದ ಸೊಬಗನ್ನು ನೃತ್ಯ ಪ್ರೇಮಿಗಳು ಆನಂದಿಸುವಂತಹ `ಡಾನ್ಸ್ ಡಿಸ್ಕೋರ್ಸ್~ ಎಂಬ ಕಾರ್ಯಕ್ರಮ ನಡೆಯಿತು.
 
ಲೇಖಕ ಹಾಗೂ ವಿದ್ವಾಂಸ ಆಶಿಷ್ ಮೋಹನ್ ಖೋಕರ್ ಅವರ ನೇತೃತ್ವದಲ್ಲಿ ಆ ನೃತ್ಯದ ಬಗೆಗೆ ನಡೆದ ಚಿಂತನ-ಮಂಥನದಲ್ಲಿ ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿಸಿಂಗ್, ಉತ್ಕಲ್ ಮೊಹಂತಿ ಮುಂತಾದವರು ಭಾಗವಹಿಸಿದ್ದರು. 

ನಗರದಲ್ಲಿ ನೆಲೆಸಿ ಒಡಿಸ್ಸಿ ನೃತ್ಯದ ಕಂಪನ್ನು ಹರಡುತ್ತಿರುವ ಮಧುಲಿತಾ ಮೊಹಾಪಾತ್ರ ಮತ್ತು ಶರ್ಮಿಳಾ ಮುಖರ್ಜಿ ಅವರು ಅಂದಿನ ಸಂಜೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗವಹಿಸಿದರು. ಮಧುಲಿತಾ ಅವರು ಸ್ವಯಂ ನರ್ತಿಸುವುದರ ಜೊತೆಗೆ ತಮ್ಮ ಶಿಷ್ಯೆಯರನ್ನೂ ಬಿಂಬಿಸಿದರೆ ಶರ್ಮಿಳಾ ಮುಖರ್ಜಿ ಅವರ ಶಿಷ್ಯೆಯರು ಸೈ ಎನಿಸಿಕೊಂಡ ಪ್ರದರ್ಶನ ನೀಡಿದರು. ಒಡಿಸ್ಸಿ ನೃತ್ಯದ ಸಾಂಪ್ರದಾಯಿಕ ರಚನೆಗಳನ್ನು ಪ್ರದರ್ಶಿಸಿದರು.

 ಸುಂದರ ಹಾಗೂ ಸುಗಮದ ಒಡಿಸ್ಸಿ ನೃತ್ಯ ಯಾತ್ರೆಯು ಸಾಂಪ್ರದಾಯಿಕ ಮಂಗಳಾಚರಣ್‌ನೊಂದಿಗೆ ಆರಂಭವಾಯಿತು. ಮಧುಲಿತಾ ಅವರ ಶಿಷ್ಯೆಯರಾದ ವಿವೇಕಿನಿ ದಾಸ್, ಆಸ್ಮಾ ಮೊಹಮ್ಮದ್ ನವೀದ್, ದೇವಿಕಾ, ಅದಿತಿ ವರ್ಮ ಮತ್ತು ಕೃಷ್ಣ ಢಗ ಅವರು ಶಿವನ ಸ್ತುತಿಯನ್ನು ಮಂಗಳಾಚರಣ್‌ನಲ್ಲಿ ಮಾಡಿದರು.

ಆದಿ ಶಂಕರಾಚಾರ್ಯರ ಶಿವಪಂಚಾಕ್ಷರಿ ಸ್ತೋತ್ರವನ್ನು ಆಧರಿಸಿ ನಾಗೇಂದ್ರ ಹಾರಾಯ ತೆರೆದುಕೊಂಡಿತು. ಶಿವನು ಗಂಗೆಯನ್ನು ತನ್ನ ಜಟೆಯಲ್ಲಿ ಧರಿಸಿದ್ದು, ಆತ್ಮಲಿಂಗ ಪ್ರಕರಣ ಇತ್ಯಾದಿಗಳನ್ನು ಪುಟ್ಟ ನರ್ತಕಿಯರು ಸೊಗಸಾಗಿ ನಿರೂಪಿಸಿದರು.

ಅದಕ್ಕೆ ಸಂಬಂಧಪಟ್ಟ ನೃತ್ತದ ವಿಕಸನದಲ್ಲೂ ಅವರು ಮೆರೆದರು. ವಂದನಾ ಸುಪ್ರಿಯ ಮತ್ತು ಶ್ವೇತಾ ಕೃಷ್ಣಅವರು ಶಿವನ ಬಟುಕ ಭೈರವ ರೂಪವನ್ನು ತೋರಿದರು. ಶುದ್ಧ ನೃತ್ತದ ಬೆಡಗು ಒರಿಸ್ಸಾದ ದೇವಾಲಯಗಳ ಶಿಲ್ಪಗಳ ಭಂಗಿಗಳನ್ನು ಪುನಃ ಕಡೆದು ಪ್ರದರ್ಶಿಸಿದ ಪರಿ ಇಷ್ಟವಾಯಿತು.

ಆರಭಿ ಪಲ್ಲವಿಯ ವಿಸ್ತೃತ ನಿರೂಪಣೆ ಪ್ರಧಾನಾಂಶವಾಗಿ ಪ್ರಕಟಗೊಂಡಿತು. ಆರಭಿ ರಾಗದ ವಿಸ್ತಾರದೊಂದಿಗೆ ನೃತ್ತವೂ ಅರಳುತ್ತಾ ಹೋಯಿತು.  ಸುಂದರ ಜತಿ ಮಾದರಿಗಳನ್ನು ಅರ್ಘ ಚಟರ್ಜಿ ಮತ್ತು ಮಾಯಾ ಕೃಷ್ಣಮೂರ್ತಿ (ಶರ್ಮಿಳಾ ಮುಖರ್ಜಿ ಅವರ ಶಿಷ್ಯೆಯರು) ಪ್ರದರ್ಶಿಸುವಲ್ಲಿ ಯಶ ಕಂಡರು.

 ಮಧುಲಿತಾ ಅವರು ನಮೂದಿಸಿದ ಜಯದೇವನ ಗೀತ ಗೋವಿಂದದ ಯಾಹಿ ಮಾಧವ ಅಷ್ಟಪದಿ ಆಕರ್ಷಕವಾಗಿತ್ತು. ಕೃಷ್ಣನಿಗಾಗಿ ಕಾಯುತ್ತಿರುವ ರಾಧೆಯು ಅವನು ಬಂದಾಗ ಅವನಲ್ಲಿ ಪರಸ್ತ್ರೀ ಸಹವಾಸದ ಲಕ್ಷಣ ನೋಡಿ ರೋಸಿ ಅವನನ್ನು  ಹೊರ ದೂಡುತ್ತಾಳೆ. ಆದರೆ ನಂತರ ಅವಳು ತನ್ನ ಕೃತ್ಯಕ್ಕಾಗಿ ಪರಿತಪಿಸುತ್ತಾಳೆ.

ನಾಯಕಿಯಾಗಿ ರಾಧೆಯ ಚಿತ್ರಣದಲ್ಲಿ ಮಧುಲಿತಾ ಮಿಂಚಿದರು. ಪದ್ಧತಿಯಂತೆ ಆಧ್ಯಾತ್ಮಿಕ ಮುಕ್ತಿಯ ತತ್ವವನ್ನು ಸಾರುವ ಮೋಕ್ಷವನ್ನು ಮಧುಲಿತಾ ಅವರ ಶಿಷ್ಯೆಯರಾದ ಮಧುರಾ ಸರ್ಕಾರ್, ಸೊನಾಲಿಕಾ ಪಢಿ, ಮೇಘನಾ ದಾಸ್, ಅಂಜಲಿ ರಾಜ ಅರಸ್ ಮತ್ತು ಸೌಮ್ಯ ಸಿಕ್ತ ಸಾಹೂ ನಿರೂಪಿಸಿದರು. 

ಅಭಿನಂದನೀಯ ಪ್ರತಿಭೆ
ಬಹು ಅಪರೂಪಕ್ಕೆ ಕೂಚಿಪುಡಿ ನಾಟ್ಯದ ರಂಗಪ್ರವೇಶವನ್ನು ಶುಕ್ರವಾರ ಆಸ್ವಾದಿಸುವಂತಾಯಿತು. ಎಡಿಎ ರಂಗಮಂದಿರದಲ್ಲಿ ಯುವ ನರ್ತಕಿ ಅಂಜನಾ ಪರಾಶರ್ ಅವರು ತಮ್ಮ ಗುರು ಲಕ್ಷ್ಮೀ ರಾಜಾಮಣಿ ಅವರ ಹೆಸರನ್ನು ಎತ್ತಿ ಹಿಡಿಯುವಂತಹ ಪ್ರದರ್ಶನ ನೀಡಿದರು.


ಮೋಹಕ ದೃಷ್ಟಿ, ಲಯ ಬಿಗುವು ಮತ್ತು ಪಾದರಸದಂತಹ ದೇಹ ಚಲನೆಗಳು ಗಮನ ಸೆಳೆದವು. ವೇದಿಕೆಯ ಪ್ರವೇಶ, ನಿರ್ಗಮನ ಮತ್ತು ವೇದಿಕೆಯ ಸಂಪೂರ್ಣ ಬಳಕೆ ಗಮನಾರ್ಹವಾಗಿತ್ತು. 


ಗುರು ಲಕ್ಷ್ಮಿ ರಾಜಾಮಣಿ ಅವರ ಪ್ರೇರಕ ನಟುವಾಂಗದ ಮುಂದಾಳತ್ವದಲ್ಲಿ ಚೆನ್ನಕೇಶವ (ಗಾಯನ), ಮರಗತವಲ್ಲಿ (ಗಾಯನ), ಸೋಮಣ್ಣ (ಪಿಟೀಲು), ತಂಗವೇಲು (ಮೃದಂಗ) ಮತ್ತಿತರರು ಉತ್ತಮವಾದ ಸಹಕಾರ ನೀಡಿದರು. ಕೂಚಿಪುಡಿ ನಾಟ್ಯದ ಅಧಿದೇವತೆಯಾದ ಬಾಲಾ ತ್ರಿಪುರ ಸುಂದರಿ ನಮನದ ಅಂಬಾ ಪರಾಕು ರಚನೆಯನ್ನು ಚುರುಕಾದ ಲಯದಲ್ಲಿ ಮಂಡಿಸಿ ಗಣೇಶನ ವಿವಿಧ ನಾಮಗಳ ಅನುಸಾರವಾಗಿ ಅವನ ರೂಪಗಳನ್ನು ಚಿತ್ರಿಸಿ ವಂದಿಸಲಾಯಿತು. ಶ್ರೀರಾಮ ಜನ್ಮದಿಂದ ಪಟ್ಟಾಭಿಷೇಕದವರೆಗಿನ ಕೆಲವು ಪ್ರಸಂಗಗಳನ್ನು ಅಂಜನಾ ಅರ್ಥಪೂರ್ಣವಾಗಿ ಅಭಿನಯಿಸಿದರು.

ತರಂಗದಲ್ಲಿ ಅವರ ಆಸ್ಥೆ-ಕೌಶಲ್ಯಗಳನ್ನು ಕಾಣಬಹುದಿತ್ತು. ನಾರಾಯಣ ತೀರ್ಥರ ರಚನೆಗೆ ತಲೆಯ ಮೇಲೆ ನೀರಿನ ಚೆಂಬನ್ನು ಇಟ್ಟು ಹಿತ್ತಾಳೆ ತಟ್ಟೆಯ ಮೇಲೆ ನಿಂತು ತಮ್ಮ ದೈಹಿಕ ಚಲನೆಗಳನ್ನು ಲೀಲಾಜಾಲವಾಗಿ ತೋರಿಸಿದರು. ಪುರಂದರದಾಸರ ಯಾರೇ ರಂಗನ (ಹಿಂದೋಳ) ಕ್ಕೆ ಅನುಗುಣವಾಗಿ ಬಾಲಕೃಷ್ಣನ ಗುಣ ವಿಶೇಷಗಳು ಅವರ ಅಭಿನಯದಲ್ಲಿ ರಾರಾಜಿಸಿದವು. ಅಂದಿನ ಕಾರ್ಯಕ್ರಮದ ಬೋನಸ್ ಎಂಬಂತೆ ಗುರು ಲಕ್ಷ್ಮಿ ರಾಜಾಮಣಿ ಸ್ವತಃ ಕನಕದಾಸರ `ಬಾರೋ ಕೃಷ್ಣಯ್ಯ~ ಪದಾಭಿನಯ ಸಾತ್ವಿಕ ಅಭಿನಯದ ಒಳನೋಟಗಳನ್ನು ಸೆರೆಹಿಡಿಯಿತು.

ಭರತನಾಟ್ಯದ ಮಿಂಚು
ನುರಿತ ಹಾಗೂ ಪರಿಣತ ನರ್ತಕ-ಗುರು ಸತ್ಯನಾರಾಯಣರಾಜು ಅವರ ಶಿಷ್ಯೆಯರಾದ ಅದಿತಿ ಸದಾಶಿವ, ಗೌರಿ ಸಾಗರ್, ಪೃಥ್ವಿ ಶರ್ಮ ಮತ್ತು ಅಂಜು ನಾಯರ್ ಅವರ ಅನನ್ಯ ಭರತನಾಟ್ಯ ಕೌಶಲ್ಯದ ಮಿಂಚು ನೋಟಗಳು ಬೆರಗುಗೊಳಿಸಿದವು.

ಹಿರಿಯ ಕೂಚಿಪುಡಿ ನರ್ತಕಿ ವೀಣಾ ಮೂರ್ತಿ ವಿಜಯ್ ಅವರ `ಶ್ರೀರಾಜರಾಜೇಶ್ವರಿ ಕಲಾ ನಿಕೇತನ~ದ ಮೂವತ್ತೊಂದನೆಯ ವಾರ್ಷಿಕೋತ್ಸವದ ನಿಮಿತ್ತ ಅಕಾಡೆಮಿ ಆಫ್ ಮ್ಯೂಸಿಕ್ ಮತ್ತು ಬೆಂಗಳೂರು ಕಥಕ್ಕಳಿ ಕ್ಲಬ್‌ನ ಜಂಟಿ ಆಶ್ರಯದಲ್ಲಿ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆದ ಚತುರಗಮನಿ ಕಾರ್ಯಕ್ರಮದಲ್ಲಿ ಆ ನಾಲ್ಕೂ ನರ್ತಕಿಯರು ವಿಜೃಂಭಿಸಿದರು. ಸತ್ಯನಾರಾಯಣರಾಜು ಅವರ ಕಟ್ಟುನಿಟ್ಟಿನ ತರಬೇತಿಯ ಸತ್ಫಲಗಳನ್ನು ಅಲ್ಲಿ ಕಾಣಬಹುದಿತ್ತು.

ಪರಸ್ಪರ ಹೊಂದಾಣಿಕೆ, ಸಮೂಹ ಘಟನ-ವಿಘಟನಗಳು, ಏಕರೂಪದ ನೈಪುಣ್ಯ ಮತ್ತು ಉತ್ತಮ ಪ್ರದರ್ಶನದ ಆಕಾಂಕ್ಷೆಗಳಿಂದ ಅವರ ಸರಸ್ವತಿ ವಂದನೆ(ಸರಸ್ವತಿ) ಕಲಾತ್ಮಕ ಪ್ರಸ್ತಾವನೆಯಾಯಿತು. ಪದ್ಮಚರಣರ ಪ್ರದೋಷ ಸಮಯದಿ(ಪೂರ್ವಿಕಲ್ಯಾಣಿ) ಕೀರ್ತನೆಯಲ್ಲಿ ಕಣ್ಣು ಕಟ್ಟುವಂತಹ ಶಿವನ ವರ್ಣನೆ ಬೆರಗುಗೊಳಿಸಿತು. ವೇಗದ ಲಯದಲ್ಲಿ ನಿಖರವಾಗಿದ್ದ ಲಯಾತ್ಮಕ ನೃತ್ತ ಮತ್ತು ಶಿವನ ಕೆಲವು ಭಂಗಿಗಳು ಮನಸೆಳೆದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT