ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಮರೆಯಾದ ಐಸಾನ್ ಧೂಮಕೇತು: ಕೊಟ್ಟೂರು

Last Updated 14 ಡಿಸೆಂಬರ್ 2013, 5:48 IST
ಅಕ್ಷರ ಗಾತ್ರ

ಹೊಸಪೇಟೆ: ‘ವರ್ಷಾಂತ್ಯದ ಎರಡು ತಿಂಗಳ ಕಾಲ ಆಕಾಶದಲ್ಲಿ ಐಸಾನ್‌ ಧೂಮಕೇತು ಗೋಚರಿಸ­ಬೇಕಿತ್ತು. ಆದರೆ ಅಪರೂಪದ ಈ ಧೂಮಕೇತು ಇತ್ತೀಚೆಗೆ ಶಾಶ್ವತವಾಗಿ  ಕಣ್ಮರೆಯಾಗಿದ್ದು, ಖಗೋಳ ವೀಕ್ಷಕರಿಗೆ ನಿರಾಶೆ ಮೂಡಿಸಿದೆ’ ಎಂದು ಉಪನ್ಯಾಸಕ ಸಮದ್‌ ಕೊಟ್ಟೂರು ಕಳವಳ ವ್ಯಕ್ತಪಡಿಸಿದರು. 

ಇಲ್ಲಿನ ಟಿ.ಬಿ.ಡ್ಯಾಂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸರ್ ಸಿ.ವಿ.ರಾಮನ್ ವಿಜ್ಞಾನ ಸಂಘದ ವತಿಯಿಂದ ಆಯೋಜಿಸಿದ್ದ ಐಸಾನ್ ಧೂಮಕೇತು ಕುರಿತು ಅವರು ಮಾತನಾಡಿದರು.

‘ರಷ್ಯಾದ ಯುವ ಹವ್ಯಾಸಿ ಖಗೋಳ ತಜ್ಞ ಆರ್ಟ್‌ಯೋಮ್‌ ನೋವಿಚೋನೋಕ್ ಹಾಗೂ ವೈಟಾಲಿ ನೆವಸ್ಕಿ ಅವರು 2012ರ ಸೆಪ್ಟಂಬರ್ 21ರಂದು ಪತ್ತೆಯಾದ ಧೂಮಕೇತುವಿಗೆ ಐಸಾನ್ ಎಂದು ನಾಮಕರಣ ಮಾಡಿ ಜಗತ್ತಿಗೆ ಪರಿಚಯಿಸಿದ್ದರು. ಅಂದಿನಿಂದ ಜಗತ್ತಿನಾದ್ಯಂತ ಈ ಧೂಮಕೇತುವಿನ ವೀಕ್ಷಣೆಗಾಗಿ ಖಗೋಳ ಪ್ರೀಯರು ಕಾತುರದಿಂದ ಕಾಯುತ್ತಿದ್ದರು. ಕಳೆದ ನವೆಂಬರ್ ತಿಂಗಳಲ್ಲಿ ಇದರ ಅನೇಕ ಛಾಯಾ ಚಿತ್ರಗಳನ್ನು ತೆಗೆಯಲಾಗಿತ್ತು.

ನವೆಂಬರ್ 28ರಂದು ಸೂರ್ಯನಿಗೆ ಕೇವಲ 6.84 ಲಕ್ಷ ಮೈಲು ಹತ್ತಿರದಿಂದ ಈ ಧೂಮಕೇತು ಹಾದು ಹೋಗಿತ್ತು. ಸೂರ್ಯನ ಶಾಖದ ಪರಿಣಾಮದಿಂದಲೋ ಅಥವಾ ಇನ್ನಾ­ವುದೋ ಕಾರಣದಿಂದಲೋ ಒಂದು ಕಿ.ಮೀ.ವ್ಯಾಸದ ಈ ಧೂಮಕೇತು ನಿಧಾನವಾಗಿ ಅಘೋಚರವಾಗುತ್ತಿದೆ’ ಎಂದು ತಿಳಿಸಿದರು.

‘ಕಳೆದ ಒಂದು ವಾರದಿಂದ ಖಗೋಳ ಶಾಸ್ತ್ರಜ್ಞರಿಗೆ ಇದು ಸ್ಪಷ್ಟವಾಗಿ ಗೋಚರಿಸುತ್ತಿಲ್ಲ. ಇದು ಜಗತ್ತಿನಾದ್ಯಂತ ನಿರಾಶೆ ಉಂಟು ಮಾಡಿದೆ’ ಎಂದು ಸಮದ್ ವಿಷಾದಿಸಿದರು.

ಉಪ ಪ್ರಾಚಾರ್ಯ ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು.  ಬಸವರಾಜ್ ಬಾಣದ, ಅಡಿವೆಪ್ಪ, ದೇವದಾಸ್ ಮುಂತಾದ ಶಿಕ್ಷಕರು ಉಪಸ್ಥಿತರಿದ್ದರು. ವಿಜ್ಞಾನ ಶಿಕ್ಷಕಿ ಮೋನ್ಸಿ ಥಾಮಸ್ ಸ್ವಾಗತಿಸಿದರು. ಶಿಕ್ಷಕ ಮೋಹನ್ ರೆಡ್ಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT