ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತೆಯೊಳಗಿನ ಡೈನೊಸಾರ್ ಕವಿತೆಯಾದದ್ದು

ಪ್ರತಿಕ್ರಿಯೆ
Last Updated 5 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ನನಗೊಂದು ಕೆಟ್ಟ ಅಭ್ಯಾಸವಿದೆ. ಯಾವುದೇ ಪತ್ರಿಕೆಯಲ್ಲಿ ಪ್ರಕಟವಾದ ಅತ್ಯುತ್ತಮ, ಗಂಭೀರ ಲೇಖನಗಳನ್ನು, ಕತೆಗಳನ್ನು, ಕವಿತೆಗಳನ್ನು ತತ್‌ಕ್ಷಣಕ್ಕೆ ಓದುವುದಿಲ್ಲ. ತೆಗೆದಿಟ್ಟಿರುತ್ತೇನೆ ಕಪಾಟಿನಲ್ಲಿ. ಹಾಗೆಯೇ ಓದಬೇಕೆಂದು ಆಸೆ ಪಟ್ಟು ಕೊಂಡುಕೊಂಡ ಅನೇಕ ಪುಸ್ತಕಗಳನ್ನೂ ಸಹ. ನನಗೆ ಮೂಡ್ ಬಂದಾಗ, ಓದಬೇಕೆನಿಸಿದಾಗ ನಿಧಾನವಾಗಿ, ಗಂಭೀರವಾಗಿ ಅವುಗಳನ್ನು ಓದುತ್ತೇನೆ.
೦೧.೦೯.೨೦೧೩ರ ಪ್ರಜಾವಾಣಿ ಸಾಹಿತ್ಯ ಪುರವಣಿಯಲ್ಲಿ ಪ್ರಕಟವಾದ ಎಸ್. ದಿವಾಕರ್ ಅವರ “ಡೈನೊಸಾರ್: ಒಂದು ಅತಿ ಸಣ್ಣಕತೆಯ ಪತ್ತೇದಾರಿ” ಎಂಬ ವಿಶಿಷ್ಟ ಲೇಖನವನ್ನೂ ಸಹ ಹಾಗೆಯೇ ತೆಗೆದಿಟ್ಟವನು ಈಗ ಒಂದೈದಾರು ದಿನಗಳ ಹಿಂದೆ ಕುಳಿತು ಓದಿದೆ.

ಎಸ್. ದಿವಾಕರ್ ಒಬ್ಬ ಅತ್ಯುತ್ಕೃಷ್ಟ ಕತೆಗಾರ ಮಾತ್ರವಲ್ಲ, ಒಳ್ಳೆಯ ಕವಿ, ವಿಮರ್ಶಕ ಮತ್ತು ಅದ್ಭುತ ಅನುವಾದಕ ಕೂಡ. ಪ್ರಪಂಚದ ಅತ್ಯುತ್ಕೃಷ್ಟ ಸಾಹಿತ್ಯವನ್ನೆಲ್ಲ ಅಧ್ಯಯನ ಮಾಡಿರುವ ಅವರ ಅರಿವಿನ ಆಳ ಮತ್ತು ವಿಸ್ತಾರ ಊಹೆಗೆ ನಿಲುಕದ್ದು. ಅಪರೂಪದ, ವಿಶಿಷ್ಟ ಸಾಹಿತ್ಯ ಕೃತಿಗಳನ್ನು ಕುರಿತು ಅವರು ಅನೇಕ ವಿಶ್ಲೇಷಣಾತ್ಮಕ ಬರೆಹಗಳನ್ನು ಬರೆದಿದ್ದಾರೆ. ಹಾಗೆಯೇ ಪ್ರಪಂಚದ ಅತಿ ಸಣ್ಣಕತೆಯೊಂದನ್ನು ಕುರಿತು ಬರೆದ ಅವರ ಈ ವಿಶ್ಲೇಷಣಾತ್ಮಕ ಲೇಖನ ಹೊಸತೊಂದು ಅನುಭವ ಲೋಕಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ.

ಪ್ರಪಂಚದಲ್ಲೇ ಅತೀ ಚಿಕ್ಕದಾದ ಈ ಕಥೆಯನ್ನು ಬರೆದವನು ಗ್ವಾಟೆಮಾಲಾದ ಕತೆಗಾರ ಅಗೊಸ್ತೊ ಮೊಂತೆರ್ರೋಸೊ. ಸ್ಪ್ಯಾನಿಶ್ ಮೂಲದ ಈ ಕಥೆಯ ಇಂಗ್ಲಿಷ್‌ ಅನುವಾದ ಹೀಗಿದೆ : “When I awoke, the dinosaur was still there”. ದಿವಾಕರ್ ಕನ್ನಡದಲ್ಲಿ ಹೀಗೆ ಹೇಳುತ್ತಾರೆ: “ನನಗೆ ಎಚ್ಚರವಾದಾಗ, ಡೈನೊಸಾರ್ ಇನ್ನೂ ಅಲ್ಲಿಯೇ ಇತ್ತು”.

ಅರೆ ಹುಚ್ಚನೊಬ್ಬನ ಅರ್ಥವಿಲ್ಲದ ಬಡಬಡಿಕೆಯಂತಿರುವ ಈ ಅತಿ ಸಣ್ಣಕತೆಯನ್ನು ಬಗೆದು ಒಳಗಿನ ಹೂರಣವನ್ನು ಬಡಿಸಿದ್ದಾರೆ ದಿವಾಕರ್ ತಮ್ಮ ಲೇಖನದಲ್ಲಿ. ಕತೆಯ ವಿವಿಧ ಮಗ್ಗುಲುಗಳನ್ನು ವಿವಿಧ ಕೋನಗಳಲ್ಲಿ ವಿಶ್ಲೇಷಿಸುತ್ತಾ ಅದು ಧ್ವನಿಸಬಹುದಾದ ಹಲವು ಅರ್ಥಗಳ ಸಾಧ್ಯತೆಯನ್ನು ಎಳೆ ಎಳೆಯಾಗಿ ಬಿಡಿಸಿಡುತ್ತಾ, ಸುಪ್ರಸಿದ್ಧ ಪಾಶ್ಚಾತ್ಯ ವಿಮರ್ಶಕರುಗಳ ಅಭಿಪ್ರಾಯಗಳನ್ನು ಬಿಚ್ಚಿಡುತ್ತಾ, ಕನ್ನಡದ ಕತೆಗಾರರಿಗೆ, ವಿಮರ್ಶಕರಿಗೆ ಒಳನೋಟಗಳ ಒಂದು ಹೊಸ ಹಾದಿಯನ್ನು ನಿರ್ಮಿಸಿ ಕೊಟ್ಟಿದ್ದಾರೆ.

ದಿವಾಕರ್ ಅವರ ವಿಶ್ಲೇಷಣೆಯಿಂದ ಹೊರಬಂದು ಈ ಅತಿ ಸಣ್ಣಕತೆಯನ್ನು ನಾನು ಓದಿದಾಗ ಅದು ನನ್ನ ಗ್ರಹಿಕೆಗೆ ದಕ್ಕಿದ್ದು ಹೀಗೆ: ಈ ಕತೆಯಲ್ಲಿ ನಿದ್ದೆ, ಎಚ್ಚರ, ಮತ್ತು ಡೈನೊಸಾರ್ ಈ ಮೂರೂ ವಿಷಯಗಳು ಪ್ರಸ್ತಾಪಿಸಲ್ಪಟ್ಟಿವೆ. ನಿದ್ದೆ ಅಜ್ಞಾನದ, ಕತ್ತಲಿನ ಸಂಕೇತವಾದರೆ ಎಚ್ಚರ ಜ್ಞಾನದ, ಬೆಳಕಿನ ಸಂಕೇತವಾಗುತ್ತದೆ.

ಡೈನೊಸಾರ್ ವಿಕಾಸವಾದದ ಮೂಲ ತಳಿ. ಮನುಷ್ಯನೊಳಗಿನ ಆದಿಮತೆಯನ್ನು, ಮೃಗೀಯತೆಯನ್ನು ಅದು ಸಂಕೇತಿಸುತ್ತದೆ. ವಿಕಾಸದ ಸುದೀರ್ಘ ಪಯಣದ ನಂತರ ರೂಪುಗೊಂಡ ಮನುಷ್ಯ ಅಜ್ಞಾನದ ಕತ್ತಲಿಂದ ಹೊರಬಂದು ಜ್ಞಾನದ ಬೆಳಕಿನಲ್ಲಿ ನಾಗರಿಕತೆಯನ್ನು ರೂಢಿಸಿಕೊಳ್ಳುತ್ತಾನೆ. ತಾನು ನಾಗರಿಕ ಎಂದುಕೊಳ್ಳುವ ಮನುಷ್ಯನ ಮೂಲ ಡೈನೊಸಾರ್ ಅವನ ಜತೆಗೆ ಅವನ ಒಳಗೇ ಇರುತ್ತದೆ. ಇದು ಅವನ ಈ ಆದಿಮತೆ, ಮೃಗೀಯತೆ ಇನ್ನೂ ಅವನಲ್ಲಿರುವುದನ್ನು ಸೂಚಿಸುತ್ತದೆ.

ಇದು ಈ ಸಣ್ಣ ಕತೆಯನ್ನು ನಾನು ಗ್ರಹಿಸಿದ ಪರಿ. ಅದೇನೇ ಇರಲಿ, ದಿವಾಕರ್ ಅವರ ಲೇಖನವನ್ನು ಓದಿದಾಗಿನಿಂದ ಈ ಡೈನೊಸಾರ್ ನನ್ನ ತಲೆಯನ್ನು ಹೊಕ್ಕು ಕಾಡುತ್ತಿತ್ತು. ಅದನ್ನು ಕತೆಗಳ ಮೂಲಕ ಹೊರಗಟ್ಟಲು ನಾನು ಕತೆಗಾರನಲ್ಲ. ನನ್ನ ಅಭಿವ್ಯಕ್ತಿಯ ಮಾಧ್ಯಮ ಕಾವ್ಯ. ಈ ಡೈನೊಸಾರನ್ನು ಒಂದು ಕವಿತೆಯೊಳಗೆ ತುಂಬಿ ಹೊರಹಾಕಿದ ಮೇಲಷ್ಟೇ ನನಗೆ ಸಮಾಧಾನವಾದದ್ದು. ನನ್ನ ಈ ಕವನ ಕಾವ್ಯವಾಗಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ನನ್ನ ತಲೆ ಹೊಕ್ಕು ಕೂತುಬಿಟ್ಟಿದ್ದ ಈ ಡೈನೊಸಾರನ್ನು ಹೊರಹಾಕಿದ ಹಗುರ ಭಾವ, ನಿರಾಳತೆ ನನ್ನದಾಗಿದೆ ಈಗ.

ಡೈನೊಸಾರ್
ಅವನೊಬ್ಬ ಸುಸಂಸ್ಕೃತ
ಬ್ಯಾಂಕ್ ಅಧಿಕಾರಿ.
ಎಲ್ಲದರಲ್ಲೂ ಕಡು ಶಿಸ್ತು
ಅಚ್ಚುಕಟ್ಟು.

ಒಂದು ಬೆಳಗಿನ ಜಾವ
ಅವನಿಗೊಂದು ಕನಸು ಬಿತ್ತು.
ಕನಸಿನಲ್ಲಿ?
ಟೈ, ಸೂಟುಬೂಟು, ಹ್ಯಾಟು, ಗಾಗಲ್ಸ್‌ಗಳಲ್ಲಿ
ಜೀನ್ಸ್, ಟಾಪ್, ಟಾಪ್ಲೆಸ್ಸ್, ಮಿಡಿ
ಸೀರೆ ಬ್ಲೌಸು ಚೂಡಿಗಳಲ್ಲಿ
ಡೈನೊಸಾರ್ಗಳು
ಅದೇ, ವಿಕಾಸವಾದದ ಮೂಲ ತಳಿಗಳು
ಪೆಡಂಭೂತಗಳು
ಸಿಟಿಯ ರಸ್ತೆಯ ತುಂಬಾ ಓಡಾದುತ್ತಿದ್ದವು.
ಅಂಗಡಿ ಮುಂಗಟ್ಟುಗಳಲ್ಲಿ
ಹೋಟೆಲ್ಲು ಬಾರುಗಳಲ್ಲಿ
ಬೈಕುಗಳಲ್ಲಿ ಕಾರುಗಳಲ್ಲಿ
ಶಾಲೆ, ಕಾಲೇಜು, ಬ್ಯಾಂಕುಗಳಲ್ಲೂ ಸಹ
ಗಿಜಿಗುಡುತ್ತಿದ್ದವು.

ಅಲಾರಾಂ ಬಡಿತಕ್ಕೆ
ಧಿಗ್ಗನೆಚ್ಚರಗೊಂಡ ಅವನು,
ಆ ಶಿಸ್ತಿನ ಸಿಪಾಯಿ,
ಕನಸಿನ ಕಸಿವಿಸಿಯಲ್ಲಿ
ಕಣ್ಣುಜ್ಜುತ್ತಾ ಲೈಟ್ ಹಾಕಿ
ಕನ್ನಡಿಯೆದುರು ನಿಂತ.
ಎದುರಿನಲ್ಲೊಂದು ಡೈನೊಸಾರ್
ಫೂತ್ಕರಿಸುತ್ತಾ ನಿಂತಿತ್ತು,
ಅಥವಾ ಅವನಿಗೆ ಹಾಗನಿಸಿತು.

ಕನಸು ವಾಸ್ತವಗಳ
ಗೊಂದಲದಲ್ಲಿ
ತಾನು ಡೈನೊಸಾರ್ ಆಗಿಬಿಟ್ಟಿದ್ದೇನೆಂಬ
ಹೆದರಿಕೆಯಿಂದ ಹೈರಾಣಾ
=ಮೇಗರವಳ್ಳಿ ರಮೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT