ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ: ಎಲ್ಲೆಡೆಗೂ ದೇವದೂತರು ಬರುತ್ತಾರೆ

Last Updated 3 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಅಹಮದ್ ಕಬೀರ್ ಇಹಲೋಕ ತ್ಯಜಿಸಿದ ನಂತರ ಅವರ ಶವವನ್ನು ಹೂಳುವ ವಿಚಾರದಲ್ಲಿ ಸಭೆಯಲ್ಲಿ ವಿವಾದವುಂಟಾಯಿತು. ಕಾರಣ, ದಿವಂಗತ ಅಹಮದ್ ಕಬೀರರ ತಂದೆ ಶೇಖ್ ಅಬ್ದುಲ್ಲಾರವರು ಈ ಊರಿನ ನಿವಾಸಿಗಳಾಗಿರದೆ, ಹೊರ ಊರಿನಿಂದ ಬಂದು ಇಲ್ಲಿ ನೆಲೆಸಿದ್ದರು.

ಎರಡು ಬಾರಿ ಸಭೆ ಸೇರಿದ್ದಾಗ್ಯೂ ಯಾವುದೇ ತೀರ್ಮಾನಕ್ಕೆ ಬರಲಾಗಿರಲಿಲ್ಲ. ಸಭೆಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರ ವಿಚಾರಗಳು ಈ ವಿಷಯದಲ್ಲಿ ಪರಸ್ಪರ ವಿರುದ್ಧವಾಗಿದ್ದವು. ಹೀಗಾಗಿ ಸಮಿತಿಯ ಸದಸ್ಯರು ಎರಡು ಗುಂಪುಗಳಲ್ಲಿ ಹಂಚಿಹೋಗಿ ಗಟ್ಟಿ ಧ್ವನಿಯಲ್ಲಿ ವಾದಿಸುತ್ತಾ ಪರಸ್ಪರ ಕಚ್ಚಾಟದಲ್ಲಿ ತೊಡಗಿದ್ದರು.

ಪೂರ್ವಾಹ್ನದ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಆದರೆ ಮಾತುಕತೆ ಮುಂದೊರೆಯದಾಯಿತು. ಅಪರಾಹ್ನದ ನಂತರ ದಿವಂಗತ ಅಹಮದ್ ಕಬೀರರ ಬಗ್ಗೆ ಸಹಾನುಭೂತಿ ಹೊಂದಿದವರ ವಿನಂತಿ ಮೇರೆಗೆ ಸಮಿತಿ ಮತ್ತೊಮ್ಮೆ ಸಭೆ ಸೇರಿತು.

ಎರಡನೆ ಬಾರಿ ನಡೆದ ಈ ಸಭೆಯಲ್ಲಿ ಕೆಲವು ಸದಸ್ಯರು ಪಕ್ಷಾಂತರ ಮಾಡಿದರು. ಹೀಗಾಗಿ ವಾದಕ್ಕೆ ಕಾವು ಬಂದು, ವಿಷಯ ಬಗೆಹರಿಯುವ ಬದಲು ಮತ್ತಷ್ಟು ಕಗ್ಗಂಟಾಯಿತು. ಯಾವುದೇ ನಿರ್ಣಯಕ್ಕೆ ಬರದ ಸಭೆಯನ್ನು ಸ್ಥಗಿತಗೊಳಿಸಲಾಯಿತು.
ದಿವಂಗತ ಅಹಮದ್ ಕಬೀರರ ಅತಿ ಹತ್ತಿರದ ಸಂಬಂಧಿಕರ ವಿನಂತಿಯ ಮೇರೆಗೆ ಹಾಗೂ ಅವರ ಮೂರನೇ ಪುತ್ರನ ಅರ್ಜಿಯನ್ನು ಪರಿಗಣಿಸಿ ಸಂಜೆ ಸಮಿತಿಯ ಸಭೆಯನ್ನು ಮೂರನೆಯ ಬಾರಿಗೆ ಕರೆಯಲಾಯಿತು.

ದೊಡ್ಡ ನಗರದ ಆ ಸಭಾಭವನ ಎರಡಂತಸ್ತಿನದ್ದಾಗಿತ್ತು. ಕೆಳಭಾಗದಲ್ಲಿದ್ದ ಹಾಲ್‌ನಲ್ಲಿ ಸ್ಥಳೀಯ ಜನರೊಂದಿಗೆ ಶವಯಾತ್ರೆಯಲ್ಲಿ ಪಾಲ್ಗೊಳ್ಳಲು ಅಕ್ಕಪಕ್ಕದ ಹಳ್ಳಿ, ಊರುಗಳಿಂದ ಬಂದಿದ್ದ ಸ್ನೇಹಿತರು ಮತ್ತು ಸಂಬಂಧಿಕರು ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಮೇಲಂತಸ್ತಿನಲ್ಲಿ ನಡೆಯುತ್ತಿದ್ದ ವಾದ ವಿವಾದಗಳ ಕರ್ಕಶ ಧ್ವನಿಗಳು ಈ ಜನರಿಗೂ ಕೇಳಿಸುತ್ತಿದ್ದವು. ಬೆಳಿಗ್ಗೆಯಿಂದ ಏನನ್ನೂ ಸೇವಿಸದೆ ಕೂತ ಜನ ತಮ್ಮ ತಾಳ್ಮೆಯನ್ನು ಕಳೆದುಕೊಳ್ಳುತ್ತಿದ್ದರು.

ಅಹಮದ್ ಕಬೀರರ ಸಾವು ಕಳೆದ ರಾತ್ರಿ ಹತ್ತು ಗಂಟೆಗೆ ಸಂಭವಿಸಿತ್ತು, ಹೀಗಾಗಿ ಬೆಳಿಗ್ಗೆ ಶವಯಾತ್ರೆ ಕೈಗೊಳ್ಳಬಹುದೆಂಬ ವಿಚಾರದಿಂದಾಗಿ ಜನ ಬೆಳಿಗ್ಗೆಯೇ ಬಂದಿದ್ದರು. ಹೊರ ಊರಿನಿಂದ ಬಂದವರು ಹೆಚ್ಚು ವ್ಯಗ್ರರಾಗಿರುವಂತೆ ಕಾಣಿಸುತ್ತಿದ್ದರು. ಅವರ ತಲೆಯಲ್ಲಿ ಕೊನೆಯ ಬಸ್‌ನ ಚಿಂತೆ ಕಾಡುತ್ತಿತ್ತು.

ಅತಿ ಸಮೀಪದ ಸಂಬಂಧಿಕರು ಚರ್ಚೆಯ ಕೊನೆಯಲ್ಲಿ ಸರಿಯಾದ ನಿರ್ಣಯ ಕೈಗೊಂಡು ಶವವನ್ನು ಹೂಳಲು ಅನುಮತಿ ಸಿಗುತ್ತದೆಯೆಂಬ ಭರವಸೆಯಿಂದ ಕೂತಿದ್ದರು.

ಸಭೆಯ ಅಧ್ಯಕ್ಷರು ಆಡಳಿತರೂಢ ಪಕ್ಷದ ಜಿಲ್ಲಾ ಸಚಿವರಷ್ಟೆ ಆಗಿರದೆ ನಗರ ಸಭೆಯ ಸದಸ್ಯರೂ ಆಗಿದ್ದರು. ಈ ಕಾರಣದಿಂದ ಹೆಚ್ಚು ಸದಸ್ಯರು ಪ್ರೆಸಿಡೆಂಟರ ಪರವಾಗಿ ಕೂಗು ಹಾಕುತ್ತಿದ್ದರು; ಯಾಕೆಂದರೆ ಅವರೆಲ್ಲಾ ನಗರಸಭೆಯ ವ್ಯಾಪ್ತಿ ಪ್ರದೇಶದಲ್ಲಿ ತಮ್ಮ - ತಮ್ಮ ವ್ಯಾಪಾರ - ವಹಿವಾಟು ನಡೆಸುತ್ತಿದ್ದರು.

ಇಲ್ಲಿ ಹೆಣ ಹೂಳಲು ಅನುಮತಿ ಕೊಡಲಾಗದು- ಪ್ರೆಸಿಡೆಂಟರು, ಅನುಮತಿ ಕೊಡಲಾಗದು ಎಂಬ ಹಟವನ್ನೇ ಹಿಡಿದಿದ್ದರು. ಇದಕ್ಕಾಗಿ ಅವರು ಹೇಳುತ್ತಿದ್ದ ಕಾರಣದಲ್ಲಿ ಯಾವುದೇ ಹುರುಳಿರಲಿಲ್ಲ. ಆದರೆ ಅವರನ್ನು ಸಮರ್ಥಿಸುವವರ ಬಳಿ ಆ ಮಾತನ್ನೇ ಪುನರುಚ್ಚರಿಸದೆ ಅನ್ಯ ತರ್ಕವಿರಲಿಲ್ಲ.

ಸಭೆಗೆ ಹೊಸದಾಗಿ ಚುನಾಯಿತಗೊಂಡ ಸೆಕ್ರೆಟರಿಗೆ ರಾಜಕೀಯದ ಸಂಬಂಧವಿರದಿದ್ದಾಗ್ಯೂ ಅವರಿಗೆ ಆಡಳಿತಾರೂಢ ಪಕ್ಷದ ಕೆಲವು ಸಿದ್ಧಾಂತಗಳು ಹಿಡಿಸುತ್ತಿರಲಿಲ್ಲ. ಅವರು ನಿತ್ಯ ಬೆಳಿಗ್ಗೆ ಚಹಾ ಅಂಗಡಿಯ ಎದುರು ಬೆಂಚಿನ ಮೇಲೆ ಕೂತು ಎರಡು - ಮೂರು ದಿನಪತ್ರಿಕೆಗಳನ್ನು ಓದುತ್ತಿದ್ದರು.

ನಂತರ ಮಸೀದಿ ಎದುರಿನ ಬೇವಿನ ಮರದ ಕೆಳಗೆ ಕೂತ ಜನರನ್ನು ಉದ್ದೇಶಿಸಿ ಆಡಳಿತಾರೂಢ ಮುಖಂಡರ ಭ್ರಷ್ಟಾಚಾರದ ಬಗ್ಗೆ ಹೇಳುತ್ತಾ ವಿರೋಧ ಪಕ್ಷದವರ ಹೇಳಿಕೆಗಳನ್ನು ಸಮರ್ಥಿಸುತ್ತಿದ್ದರು. ಇಂಥ ಚರ್ಚೆಗಳ ಮೂಲಕ ಸಭೆಯ ಪ್ರೆಸಿಡೆಂಟರನ್ನು ಪರೋಕ್ಷವಾಗಿ ಚುಚ್ಚುವುದು ಅವರ ಉದ್ದೇಶವಾಗಿರುತ್ತಿತ್ತು. ಆದರೂ ಪ್ರೆಸಿಡೆಂಟರು ಬಹಿರಂಗವಾಗಿ ಸೆಕ್ರೆಟರಿಗಳ ಬಗ್ಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಿರಲಿಲ್ಲ.

ಜಮಾತ್ ಆಡಳಿತ ಪಕ್ಷದ ರಾಜಕೀಯದಲ್ಲಿ, ವಿಶೇಷವಾಗಿ ಶವಗಳಿಗೆ ಜಾಗ ನಿರ್ಧರಿಸುವ ಪ್ರೆಸಿಡೆಂಟರ ಏಕಾಧಿಕಾರದಲ್ಲಿ, ಇದುವರೆಗೆ ಸೆಕ್ರೆಟರಿಯವರು ಯಾಕೆ ಹಸ್ತಕ್ಷೇಪ ಮಾಡಲಿಲ್ಲವೆಂಬ ಬಗ್ಗೆ ಕಾರಣ ಅರ್ಥವಾಗುತ್ತಿರಲಿಲ್ಲ.

ಆದರೆ ಈ ಶವವನ್ನು ಹೂಳುವ ವಿಚಾರದಲ್ಲಿ ಸೆಕ್ರೆಟರಿಯವರು ತಲೆಹಾಕುತ್ತಿರುವುದು ಪ್ರೆಸಿಡೆಂಟರ ಯಾವುದೋ ಒಂದು ಸ್ವಾರ್ಥ ಪೂರ್ಣಗೊಳ್ಳುವ ದಿಕ್ಕಿನಲ್ಲಿ ವಿಘ್ನವುಂಟು ಮಾಡುತ್ತಿತ್ತು.

ಈ ಶವಕ್ಕೆ ಮಸೀದಿಯ ಉತ್ತರದೆಡೆಯಲ್ಲಿ ಜಾಗ ಸಿಗಬೇಕು ಅಲ್ಲಿ ಉನ್ನತ ಕುಲದವರ ಶವವನ್ನು ಹೂಳಲಾಗುತ್ತದೆ ಎಂದು ಸೆಕ್ರೆಟರಿಯವರು ಹಟ ಹಿಡಿದಿದ್ದರು.

ಸೆಕ್ರೆಟರಿಯವರ ಈ ಹಟ ಪ್ರೆಸಿಡೆಂಟರನ್ನು ಕಳವಳಕ್ಕೀಡು ಮಾಡುತ್ತಿತ್ತು.
ಉತ್ತರದೆಡೆಯಲ್ಲಿ ಜಾಗ ಕೊಡಲು ಒಪ್ಪಿಗೆಯಿಲ್ಲದಿದ್ದಲ್ಲಿ ಮಧ್ಯಮ ವರ್ಗದವರಿಗೆ ಮೀಸಲಾದ ದಕ್ಷಿಣದೆಡೆಯಲ್ಲಿ ಜಾಗ ಕೊಡಬೇಕೆಂದು ಮಧ್ಯಸ್ತಿಕೆಯನ್ನು ಪಾಲಿಸುವವರು ತಮ್ಮ ಅಭಿಪ್ರಾಯವನ್ನು ತಿಳಿಸಿದರು.ಈ ಸದಸ್ಯರು ಸಭೆಯ ಮೂರನೇ ಮೀಟಿಂಗ್‌ನಲ್ಲಿ ಈ ಸಿಫಾರಿಶ್‌ನ್ನು ಪುನರುಚ್ಚರಿಸಿದರು.

ಪ್ರೆಸಿಡೆಂಟರ ಗುಂಪಿಗೆ ಈ ಪ್ರಸ್ತಾಪ ಸುತಾರಾಂ ಹಿಡಿಸಲಿಲ್ಲ. ಆಗ ಓರ್ವ ಹಿರಿಯ ಸದಸ್ಯರು, ಈ ಶವಕ್ಕೆ ಕಡೇಪಕ್ಷ ಪೂರ್ವದೆಡೆ ಸ್ಮಶಾನದಲ್ಲಿ ಜಾಗ ಕೊಡಬೇಕು. ಇಲ್ಲಿ ದೊಡ್ಡಾಸ್ಪತ್ರೆಯಲ್ಲಿ ಸಾಯುವ ಅನಾಥರು, ಭಿಕ್ಷುಕರಂತೆ ಮಸೀದಿಯಲ್ಲುಳಿದು ಇದ್ದಕ್ಕಿದ್ದಂತೆ ಸಾಯುವ ದಾರಿಹೋಕರು ಮತ್ತು ಸಭೆಯ ಪ್ರದೇಶದಲ್ಲಿ ವಾಸಿಸುವ ಕೆಳಸ್ತರದ ಜನರನ್ನು ಹೂಳಲಾಗುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ಹೇಳಿದರು. ಆದರೆ ಸಮಿತಿ ಈ ಪ್ರಸ್ತಾಪವನ್ನು ಬಾಯಿಮುಚ್ಚಿಸಿತು.

ವಾದ - ವಿವಾದದ ಬಾಲ ಉದ್ದವಾಗುತ್ತಾ ಹೋಗಿ ಕಳೆದ ರಾತ್ರಿ ಸಂಭವಿಸಿದ ಸಾವಿನ ಹತ್ತು ಗಂಟೆಯನ್ನು ಸ್ಪರ್ಶಿಸಿತು. ವಿಷಾದ ವ್ಯಕ್ತಪಡಿಸಲು ಪರ ಊರಿನಿಂದ ಬಂದ ಜನ, ಯಾವುದೇ ತೀರ್ಮಾನವಾಗದಿದ್ದನ್ನು ಕಂಡು, ಕೊನೆಯ ಬಸ್ ಹಿಡಿದು ತಮ್ಮ - ತಮ್ಮ ಹಳ್ಳಿಗೆ ಹೊರಟು ಹೋದರು. ಅತಿ ಸಮೀಪದ ಬಂಧುಗಳು ಶೋಕದ ಜೋಲು ಮುಖದೊಂದಿಗೆ ಮನೆ ಮತ್ತು ಸಭೆಯ ಕಾರ್ಯಾಲಯದ ನಡುವೆ ಬೇಸರದಿಂದ ಅಡ್ಡಾಡುತ್ತಿದ್ದರು.

ದಿವಂಗತರನ್ನು ಅವರ ಸ್ವಂತ ಹಳ್ಳಿಗೊಯ್ದು ಹೂಳಬೇಕೆಂದು ಬೆಳಿಗ್ಗೆ ನಡೆದ ಮೊದಲ ಸಭೆಯಲ್ಲಿ ಸಲಹೆ ನೀಡಲಾಯಿತು. ಅದರಂತೆ ದಿವಂಗತ ಅಹಮದ್ ಕಬೀರರ ಪುತ್ರ, ಶವವನ್ನು ಟ್ಯಾಕ್ಸಿಗೆ ಹಾಕಿ ಎಪ್ಪತ್ತು ಮೈಲಿ ದೂರದಲ್ಲಿದ್ದ ಅಜ್ಜನ ಹಳ್ಳಿಗೆ ಹೋದ. ಅದು ಅಪರಿಚಿತ ಹಳ್ಳಿ ಮತ್ತು ಅಪರಿಚಿತ ಮುಖಗಳ ಬೀಡಾಗಿತ್ತು.

ಆ ಹಳ್ಳಿಯಲ್ಲಿ ಅಲ್ಲಿಯ ಜಮಾತ್‌ನ ಸೆಕ್ರೆಟರಿಯ ಪ್ರಭಾವ ಸಾಕಷ್ಟಿತ್ತು. ದಿವಂಗತ ಅಹಮದ್ ಕಬೀರರ ಪುತ್ರ ಅವರೆದುರು ಅರ್ಜಿ ಮಂಡಿಸಿ ಸೆಕ್ರೆಟರಿಗಳಿಂದ ಅನುಕೂಲಕರ ಉತ್ತರದ ಆಸೆ ಹೊತ್ತು, ವಿನೀತವಾಗಿ ಕೈಕಟ್ಟಿ ನಿಂತ.
ಸೆಕ್ರೆಟರಿಗಳು ಮದುವೆ, ಸುನ್ನತ್, ಜನ್ಮ - ಮರಣ ಇತ್ಯಾದಿಗಳ ದಪ್ಪ - ದಪ್ಪ ಪುಸ್ತಕಗಳನ್ನು ತಿರುವಿ ಹಾಕಿದರು. ಅವುಗಳಲ್ಲಿ ಎಲ್ಲಿಯೂ ಶೇಖ್ ಅಬ್ದುಲ್ಲಾರ ಪುತ್ರ ಅಹಮದ್ ಕಬೀರರ ಹೆಸರು ಕಾಣಿಸಲಿಲ್ಲ.

ನೋಡಪ್ಪ, ನಮ್ಮ ಹಳ್ಳಿಯ ಯಾವುದೇ ಪುಸ್ತಕದಲ್ಲಿ ನಿಮ್ಮ ತಂದೆಯವರ ಹೆಸರು ನಮೂದಾಗಿಲ್ಲ! ಕಾರ್ಯದರ್ಶಿಗಳು ಅಸಹಾಯಕತೆಯನ್ನು ವ್ಯಕ್ತಪಡಿಸಿದರು.
ಹಾಜಿ ಸಾಹೇಬ್ರೆ! ಇದೇ ನಮ್ಮ ಅಜ್ಜನ ಹಳ್ಳಿ!
ನಿನ್ನ ಅಜ್ಜ ಸ್ವರ್ಗಸ್ಥರಾಗಿದ್ದಾರ?
ಇಲ್ಲ, ತಂದೆಯವರು ಸ್ವರ್ಗಸ್ಥರಾಗಿದ್ದಾರೆ
ನಿನ್ನ ಅಪ್ಪ ನಮ್ಮ ಜಮಾತ್‌ನಲ್ಲಿ ಸೇರಿಲ್ಲ. ಅವರ ಹೆಸರಿನಲ್ಲಿ ಯಾವುದೇ ರಶೀದಿಗಳೂ ಇಲ್ಲ. ಪೈಗಂಬರರು ಅಥವಾ ನಬಿಗೆ ಚಂದಾ ಕೊಟ್ಟ ಬಗ್ಗೆಯೂ ರಸೀದಿಯಿಲ್ಲ.

ಯಾವುದೇ ಹರಕೆಗೆ ಹಣ ಕೊಟ್ಟ ಬಗ್ಗೆ ಸಾಕ್ಷಿ ಸಿಗುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ನಮ್ಮ ಜಮಾತಿನ ಸಮಾಧಿ ಭೂಮಿಯಲ್ಲಿ ಹೂಳಲು ಜಾಗ ಕೊಡಲು ಹೇಗೆ ಸಾಧ್ಯ? ಸೆಕ್ರೆಟರಿಗಳ ಈ ಉತ್ತರ ಕೇಳಿ, ಮರಳಿ ಬಂದ ನಂತರ ಅವನು ಮತ್ತೊಮ್ಮೆ ಕೆಲವು ಸದಸ್ಯರುಗಳನ್ನು ಸಂಪರ್ಕಿಸಿದ ಆಗಲೇ ಮತ್ತೊಮ್ಮೆ ಜಮಾತ್‌ನ ಸಭೆಯನ್ನು ಕರೆಯಲಾಯಿತು.

ಸಭೆಯ ಎರಡನೆಯ ಹಂತದಲ್ಲಿ ಪ್ರೆಸಿಡೆಂಟರು ಕಮಿಟಿಯ ಸದಸ್ಯರಿಗೆ ದಿವಂಗತ ಅಹಮದ್ ಕಬೀರರ ತಂದೆ ಶೇಖ್ ಅಬ್ದುಲ್ಲಾ ನಮ್ಮ ಹಳ್ಳಿಗೆ ಹೊಸಬರಾಗಿದ್ದರು. ಇಲ್ಲಿ ವ್ಯಾಪಾರಕ್ಕಾಗಿ ನೆಲೆಯೂರಿದ್ದರು ಎಂಬ ವಿಷಯವನ್ನು ತಿಳಿಸಿದರು.

ಪ್ರೆಸಿಡೆಂಟರು ಅಹಮದ್ ಕಬೀರರ ಬಗ್ಗೆ, ಅವರು ತಮ್ಮ ಮಲಬಾರ್ - ಪ್ರವಾಸದ ಸಂದರ್ಭದಲ್ಲಿ ಅಲ್ಲಿ ನಿಕಾಹ್ ಸಹ ಮಾಡಿಕೊಂಡಿದ್ದರೆಂಬ ಮತ್ತೊಂದು ರಹಸ್ಯವನ್ನೂ ಬಹಿರಂಗ ಪಡಿಸಿದರು.

ಪ್ರೆಸಿಡೆಂಟರು ಈ ಸಂಗತಿಯನ್ನು ಒಂದು ಅಪರಾಧವೆಂಬಂತೆ ಮಂಡಿಸಿ, ಅವರ ಶವವನ್ನು ಅವರ ಹೆಂಡತಿಯ ಹಳ್ಳಿ ಮಲಬಾರಿಗೊಯ್ದು ಹೂಳುವಂತೆ ಸಲಹೆಯಿತ್ತರು. ಪ್ರೆಸಿಡೆಂಟರು ಎರಡನೆಯ ಹಂತದಲ್ಲಿ ಮಂಡಿಸಿದ ಈ ಸಲಹೆಯನ್ನು ಸೆಕ್ರೆಟರಿಗಳು ಮತ್ತು ಇನ್ನಿತರ ಕೆಲವು ಸದಸ್ಯರು ಒಪ್ಪಲಿಲ್ಲ.

ಇದು ಅತಿಯಾಯ್ತು. ಆರನೂರು ಕಿ. ಮೀ. ದೂರದ ಮಲಬಾರಿಗೊಯ್ದು ಶವವನ್ನು ಹೂಳುವಂತೆ ವಿವಶಗೊಳಿಸುವುದು ಉಚಿತವಲ್ಲವೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಮೂರನೆಯ ಹಂತದಲ್ಲಿ ಸೆಕ್ರೆಟರಿಗಳು ಒತ್ತುಕೊಟ್ಟು ಹೇಳಿದರು, ದಿವಂಗತ ಅಹಮದ್ ಕಬೀರರು ಕಳೆದ ಐವತ್ತು ವರ್ಷಗಳಿಂದ ಈ ಜಮಾತಿನ ಪ್ರದೇಶದಲ್ಲಿ ವಾಸಿಸುತ್ತಿದ್ದರು.
ಮಸೀದಿಯ ಗೋಪುರ ಸ್ತಂಭಗಳನ್ನು ಎತ್ತರಕ್ಕೇರಿಸಲು ಮತ್ತು ಸಮಾಧಿ - ಭೂಮಿಯ ಜಾಗವನ್ನು ಹೆಚ್ಚಿಸುವ ಉದ್ದೇಶದಿಂದ ಭೂಮಿ ಖರೀದಿಸುವ ಸಲುವಾಗಿ ಕಮಿಟಿಯೊಂದಿಗೆ ಅನೇಕ ಹಳ್ಳಿಗಳಿಗೆ ವಸೂಲಿಗೆ ಹೋಗಿದ್ದರು. ಇದೆಲ್ಲಾ ಹಳ್ಳಿಯವರಿಗೆ ತಿಳಿದಿದೆ. ಹೀಗಾಗಿ ಅವರ ಶವವನ್ನು ಉತ್ತರದೆಡೆಗಿರುವ ಸಮಾಧಿ - ಭೂಮಿಯಲ್ಲಿ ಹೂಳಬೇಕು.

ಪ್ರೆಸಿಡೆಂಟರ ಬಳಿ ಇದಕ್ಕುತ್ತರವಿರಲಿಲ್ಲ. ದಿವಂಗತ ಅಹಮದ್ ಕಬೀರರ ಸಂಬಂಧಿಕರ ಮುಖದಲ್ಲಿ ಭರವಸೆ ಮೂಡಿತು. ಸದ್ಯ, ಇನ್ನು ಅನುಮತಿ ಸಿಗುತ್ತದೆ ಎಂಬ ಆಸೆಯಿಂದಲೇ ಅವರೆಲ್ಲಾ ಕೂತಿದ್ದರು.

ಆಗಲೇ ಪ್ರೆಸಿಡೆಂಟರ ಪರವಾಗಿದ್ದ ಒಬ್ಬ ಎದ್ದು ನಿಂತು ಗಟ್ಟಿಯಾಗಿ ಹೇಳಿದ, ಅಹಮದ್ ಕಬೀರರು ಮಸೀದಿಯ ಸ್ತಂಭಗಳನ್ನು ಎತ್ತರಿಸಲು ದಾನ ಕೊಟ್ಟಿದ್ದು ನಿಜ; ಸಮಾಧಿ - ಭೂಮಿಗೆ ಭೂಮಿ ಖರೀದಿಸಲು ಪರ ಊರಿಗೆ ಹೋಗಿ ಹಣ ಸಂಗ್ರಹಿಸಲೂ ಅವರು ಸಹಾಯ ಮಾಡಿದ್ದರು. ಇದೂ ನಿಜವೇ. ಆದರೆ ಇದಕ್ಕಾಗಿಯೇ ಈ ಪರ ಊರಿನ ವ್ಯಕ್ತಿಯ ಶವವನ್ನು ಹೂಳಲು ಇಲ್ಲಿ ಜಾಗ ಕೊಡಬಹುದೇ? ಈ ಸಮಯದಲ್ಲಿ ದಿವಂಗತರ ಪುತ್ರನ ಅಪರಾಧದ ಬಗ್ಗೆಯೂ ಗಮನ ಹರಿಸುವುದು ಅವಶ್ಯವಾಗಿದೆ.

ಅವನು ಈ ಜಮಾತಿನ ಓರ್ವ ವಿಧವೆ ಹೆಣ್ಣಿನೊಂದಿಗೆ ರಿಜಿಸ್ಟರ್ಡ್ ಮದುವೆ ಮಾಡಿಕೊಂಡು ಈ ಜಮಾತ್ ಮತ್ತು ಶರೀಯತನ್ನು ಅವಮಾನಿಸಿದ್ದಾನೆ!
ಈ ಬಲವಾದ ತರ್ಕ ಕೇಳಿ ಪ್ರೆಸಿಡೆಂಟರ ಮುಖ ಅರಳಿತು. ಇದಕ್ಕೇನು ಉತ್ತರವೆಂಬಂತೆ ಅವರು ತಲೆಯೆತ್ತಿ ಸದಸ್ಯರೆಡೆಗೆ ನೋಡಿದರು. ಆದರೆ ಅವರಿಗೆ ತಕ್ಷಣ ಯಾವುದೇ ಉತ್ತರ ಸಿಗಲಿಲ್ಲ.

ಸ್ವಲ್ಪ ಹೊತ್ತಿನ ಮೌನದ ನಂತರ ಸೆಕ್ರೆಟರಿಗಳು ಮತ್ತೆ ಎದ್ದು ನಿಂತು ಹೇಳಿದರು. ಜಮಾತ್ ಮತ್ತು ಶರೀಯತನ್ನು ದಿವಂಗತರು ಉಲ್ಲಂಘಿಸಿಲ್ಲ. ಒಂದು ವೇಳೆ ಇದನ್ನು ಉಲ್ಲಂಘಿಸಿದ ಅವರ ಪುತ್ರ ಅಬ್ದುಲ್ ನಾಸರ್ ಸತ್ತು ಹೋಗಿದ್ದರೆ ಈ ಪ್ರಶ್ನೆಯನ್ನೆತ್ತುವುದು ಯೋಗ್ಯವೆಂದು ತಿಳಿಯಬಹುದು.
 
ಮಗ ಮಾಡಿದ ಅಪರಾಧಕ್ಕೆ ಈ ಮುಸ್ಲಿಂ ಶವವನ್ನು ಹೀಗೆ ಇರಲು ಬಿಡುವುದು ಶರೀಯತ್ ಪ್ರಕಾರ ಯೋಗ್ಯವೇ? ಸೆಕ್ರೆಟರಿಗಳ ಧ್ವನಿಯಲ್ಲಿ ಕ್ರೋಧವಿತ್ತು.

ಪ್ರೆಸಿಡೆಂಟರು ಮತ್ತು ಉಳಿದ ಸದಸ್ಯರಿಗೆ ಈ ಬಗ್ಗೆ ಉತ್ತರ ಹೊಳೆಯುತ್ತಿರಲಿಲ್ಲ, ಆಗ ಓರ್ವ ಹಿರಿಯ ಸದಸ್ಯರ ತಲೆಗೆ ಒಂದು ವಿಚಾರ ಹೊಳೆಯಿತು. ಅವರು ಮೌಲಾನಾ ಮೌಲ್ವಿ ಅಬ್ದುಲ್ ಹಯ್ ಕಾದರಿಯವರನ್ನು ಕರೆಸಿ, ಈ ವಿಷಯದ ಬಗ್ಗೆ ಫತ್ವಾ ಹೊರಡಿಸುವಂತೆ ಅರಿಕೆ ಮಾಡಿಕೊಳ್ಳೋಣ ಎಂದರು.

ಮಸೀದಿಯ ಇಮಾಮರಾದ ಮೌಲಾನಾ ಮೌಲ್ವಿ ಅಬ್ದುಲ್ ಹಯ್ ಕಾದರಿಯವರು ನಿದ್ರಿಸುತ್ತಿದ್ದರು. ಅವರನ್ನು ಎಬ್ಬಿಸಿ ಕರೆತರಲಾಯಿತು. ಮೌಲಾನಾರು ಕಚೇರಿಗೆ ಬಂದಾಗ ಗೋಡೆಗೆ ಜೋತುಬಿದ್ದು ನಾಲಿಗೆಯಾಡಿಸುತ್ತಿದ್ದ. ಗಡಿಯಾರ ಹನ್ನೆರಡು ಸಾರಿ ಹೊಡೆದು ಸಮಯವನ್ನು ಸಾರಿತು.

ಮೌಲ್ವಿ ಸಾಹೇಬರು ಫತ್ವಾ ಹೊರಡಿಸಲು ಬಂದಿದ್ದರು. ಹೀಗಾಗಿ ಅವರು ಕುರ್ಚಿಯಲ್ಲಿ ಠೀವಿಯಿಂದ ಕುಳಿತು ಸುತ್ತಮುತ್ತ ಠೀವಿಯಿಂದಲೇ ದೃಷ್ಟಿ ಹರಿಸಿದರು.

ನೀವೇನು ಬೇಕೋ ಕೇಳಬಹುದು ಇದಕ್ಕೂ ಮೊದಲು ಅನೇಕ ಬಾರಿ ಫತ್ವಾ ಹೊರಡಿಸಿದ್ದ ಅನುಭವ ಅವರಿಗಿತ್ತು. ಈಗಲೂ ಅದಕ್ಕೆ ಸಿದ್ಧರಾದರು.

ಸೆಕ್ರೆಟರಿಗಳು ಅರಿಕೆ ಮಾಡಿಕೊಂಡರು, ಮೌಲ್ವಿ ಸಾಹೇಬರೇ! ನಮ್ಮೆದರು ಒಂದು ಸೂಕ್ಷ್ಮ ಸಮಸ್ಯೆಯಿದೆ. ಇದರ ಬಗ್ಗೆ ನಿಮ್ಮ ಫತ್ವಾ ಖಂಡಿತ ಬೇಕು.

ಮಗ ಏನೋ ತಪ್ಪು ಮಾಡಿದ. ಅದಕ್ಕಾಗಿ ನಿನ್ನೆ ರಾತ್ರಿ ಹತ್ತು ಗಂಟೆಗೆ ಇಹಲೋಕ ತ್ಯಜಿಸಿದ ಓರ್ವ ಮುಸ್ಲಿಂ ತಂದೆಯ ಶವವನ್ನು, ಪರ ಊರಿನ ವ್ಯಕ್ತಿಯೆಂದು ಬಗೆದು, ಇಂದು ರಾತ್ರಿ ಹನ್ನೆರಡು ಗಂಟೆಯಾದರೂ ಹೀಗೆ ಇಟ್ಟುಕೊಳ್ಳೋದು ಶರೀಯತ್ ಪ್ರಕಾರ ಉಚಿತವೇ?

ಮೌಲಾನಾ ಮೌಲ್ವಿಯವರು ತಮ್ಮ ಗಡ್ಡವನ್ನು ನೀವಿಕೊಂಡರು. ಟೋಪಿ ತೆಗೆದು ತಲೆಯನ್ನು ತುರಿಸಿಕೊಂಡರು. ಉಚಿತವೆಂದು ಹೇಳುವುದೋ ಅಥವಾ ಅನುಚಿತವೆಂದು ಹೇಳುವುದೋ? ಏನೂ ಹೊಳೆಯುತ್ತಿರಲಿಲ್ಲ. ಪ್ರೆಸಿಡೆಂಟರ ಪರವಾಗಿ ಮಾತನಾಡುವುದೋ ಅಥವಾ ಸೆಕ್ರೆಟರಿಗಳ ಪರ ವಹಿಸುವುದೋ? ಮೌಲ್ವಿಯವರು ಭಯದಿಂದ ಕಂಪಿಸಿದರು.

ಸರಿ, ಆದರೆ ನಮ್ಮ ಪ್ರಶ್ನೆಯೇನೆಂದರೆ, ಮಸೀದಿಯ ಪುಸ್ತಕದಲ್ಲಿ ಬರೆಸದೆ, ಇಬ್ಬರು ಮುಸ್ಲಿಂ ಸಾಕ್ಷಿಗಳೆದುರು ಮೌಲ್ವಿಗಳಿಂದ ನಿಕಾಹ್ ಮಾಡಿಸಿಕೊಳ್ಳದೆ ದಿವಂಗತರ ಪುತ್ರ ವಿವಾಹ ಮಾಡಿಕೊಂಡನಲ್ಲ, ಅದನ್ನು ಶರೀಯತ್‌ನ ನಿಯಮಕ್ಕನುಸಾರವಾಗಿ ಒಪ್ಪಿಕೊಳ್ಳಬಹುದೋ, ಇಲ್ವೋ?

ಪ್ರೆಸಿಡೆಂಟರು ಈ ಪ್ರಶ್ನೆಯನ್ನು ಎತ್ತಿದಾಗ ಸೆಕ್ರೆಟರಿಗಳ ಗುಂಪಿನ ಸದಸ್ಯನೊಬ್ಬ ಎದ್ದುನಿಂತು ಕೇಳಿದ, ರಿಜಿಸ್ಟರ್ಡ್ ಮದುವೆ ಮಾಡಿಕೊಂಡ ಮೇಲೆ ಪ್ರತ್ಯೇಕವಾಗಿ ಮೌಲ್ವಿಗಳೆದುರು ನಿಕಾಹ್‌ವನ್ನು ಪಠಿಸಿದರೆ ಅದನ್ನು ಶರೀಯತ್‌ಗೆ ಅನುಸಾರವಾಗಿ ಒಪ್ಪಿಕೊಳ್ಳಬಹುದಲ್ಲ?

ಸದಸ್ಯರು ಯಾವ ನಿಕಾಹ್ ಬಗ್ಗೆ ಹೇಳುತ್ತಿದ್ದಾರೋ, ಅದು ಈ ಜಮಾತ್‌ನಲ್ಲಿ ದಾಖಲಾಗಿಲ್ಲ. ಈ ಜಮಾತ್‌ನಲ್ಲಿ ದಿವಂಗತರ ನಿಕಾಹ್‌ವೂ ದಾಖಲಾಗಿಲ್ಲ. ಅವರ ಪುತ್ರನ ನಿಕಾಹ್‌ವೂ ದಾಖಲಾಗಿಲ್ಲ. ಯಾವ ಜಮಾತ್‌ನಲ್ಲಿ ನಿಕಾಹ್ ದಾಖಲಾಗಿದೆಯೋ, ಅಲ್ಲಿಂದ ಪತ್ರ ತಂದರೆ, ಆ ಬಗ್ಗೆ ವಿಚಾರ ಮಾಡಲಾಗುವುದು ಪ್ರೆಸಿಡೆಂಟರ ಈ ತರ್ಕ ಸೆಕ್ರೆಟರಿಗಳ ಬಾಯಿಯನ್ನು ಮುಚ್ಚಿಸಿತು.

ಮೌಲ್ವಿ ಸಾಹೇಬರೇ, ಈ ಬಗ್ಗೆ ನಿಮ್ಮ ಫತ್ವಾ ಏನು?
ಮೌಲಾನಾ ಮೌಲ್ವಿ ಅಬ್ದುಲ್ ಹಯ್ ಕಾದರಿಯವರು ಯಾವುದೇ ಫತ್ವಾ ಕೊಡುವುದಕ್ಕೂ ಮೊದಲು ಸ್ವಲ್ಪ ಹೊತ್ತು ಮೌನ ವಹಿಸುತ್ತಿದ್ದರು. ಅವರು ಸ್ವಲ್ಪ ಹೊತ್ತು ಮೌನ ತಾಳಿದ ನಂತರ ತಲೆಯೆತ್ತಿ ಕಮಿಟಿಯ ಸದಸ್ಯರನ್ನು ನೋಡಿದರು.

ಜಮಾತ್‌ನ ಪದಾಧಿಕಾರಿಗಳು, ಬೆಳಿಗ್ಗೆಯಿಂದ ಕಾಯುತ್ತಿದ್ದ ಜನ ಮತ್ತು ದಿವಂಗತ ಅಹಮದ್ ಕಬೀರರ ಪುತ್ರ ಅಬ್ದುಲ್ ನಾಸರ್ - ಎಲ್ಲರೂ ಫತ್ವಾ ಕೇಳಲು ವ್ಯಗ್ರರಾಗಿ ಮೌಲಾನಾ ಮೌಲ್ವಿಯವರ ಮುಖವನ್ನೇ ದೃಷ್ಟಿಸುತ್ತಾ ನಿಂತಿದ್ದರು.

ಶವವನ್ನು ಕೊಳೆಯಲು ಬಿಡುವುದು ಮತ್ತು ಹೂಳಲು ಜಾಗಕೊಡದಿರುವುದು - ಎರಡೂ ತಪ್ಪಾಗುತ್ತದೆಯೆಂಬುದು ಮೌಲಾನಾ ಮೌಲ್ವಿಯವರಿಗೆ ತಿಳಿದಿತ್ತು. ಆದಾಗ್ಯೂ ಮೌಲ್ವಿ ಸಾಹೇಬರು ಇಷ್ಟನ್ನೇ ಹೇಳಿದರು, ಇದೊಂದು ಜಟಿಲ ಸಮಸ್ಯೆ. ಪುಸ್ತಕ ನೋಡದೆ ಫತ್ವಾ ಹೊರಡಿಸುವುದು ಸಾಧ್ಯವಿಲ್ಲ.

ಹಾಗಾದ್ರೆ ಹೋಗಿ ಪುಸ್ತಕ ತನ್ನಿ! ಸದಸ್ಯರು ಹೇಳಿದರು.
ಕ್ಷಮಿಸಿ, ಪುಸ್ತಕ ನನ್ನ ಬಳಿ ಇಲ್ಲ. ತಲಾಕ್ ಕೊಟ್ಟ ನನ್ನ ಮೊದಲ ಹೆಂಡತಿಯ ಮನೆಯಲ್ಲಿ ಸಿಕ್ಕಿಕೊಂಡಿದೆ ಹೀಗೆಂದು ಹೇಳಿ ಮೌಲ್ವಿ ಸಾಹೇಬರು ಒರಳುಕಲ್ಲಿನಲ್ಲಿ ಸಿಕ್ಕಿಕೊಂಡ ತಮ್ಮ ತಲೆಯನ್ನು ಹೊರ ತೆಗೆಯಲು ಪ್ರಯತ್ನಿಸಿದರು.

ಮೌಲ್ವಿ ಸಾಹೇಬರೇ, ನನ್ನ ಪ್ರಶ್ನೆಗೆ ಫತ್ವಾ ಕೊಡಿ ಪ್ರೆಸಿಡೆಂಟರು ಹೇಳಿದರು.
ನಿಮ್ಮ ಪ್ರಶ್ನೆಗೆ ಸಂಬಂಧಿಸಿದಂತೆ, ಆ ಪುಸ್ತಕವನ್ನು ನನ್ನ ಎರಡನೇ ದಿವಂಗತ ಹೆಂಡತಿ ಯಾರಿಗೋ ಎರವಲು ಕೊಟ್ಟಿದ್ದಾಳೆ.

ಹಾಗಾದ್ರೆ ಈ ಶವವನ್ನು ಏನು  ಮಾಡೋದು? ಹಿರಿಯ ಸದಸ್ಯರ ಈ ಪ್ರಶ್ನೆಗೆ ಮೌಲ್ವಿಯವರು ಸಂಕ್ಷಿಪ್ತವಾಗಿ ಉತ್ತರಿಸಿದರು. ಜಮಾತ್ ಈ ಬಗ್ಗೆ ತೀರ್ಮಾನಿಸಲಿ ಹೀಗೆಂದು ಅವರು ಎದ್ದು ನಿಂತರು.

ಅಲ್ಲಿ ಕಲೆತಿದ್ದ ಜನರಲ್ಲಿ ಗುಲ್ಲು ಪ್ರಾರಂಭವಾಯಿತು. ಗುಂಪನ್ನು ಸೀಳಿ ಬಂದ ದಿವಂಗತರ ಪುತ್ರ ಕಿರುಚಿದ. ಮೌಲ್ವಿ ಸಾಹೇಬರೇ! ಪುಸ್ತಕ ನೋಡದೆ ನೀವು ಯಾವುದೇ ಫತ್ವಾ ಕೊಡಲಾರಿರಿ! ಸರಿ, ನನ್ನದೊಂದು ಪ್ರಶ್ನೆಗೆ ಮಾತ್ರ ಫತ್ವಾ ಕೊಡಿ - ಮಸೀದಿಯ ಕಾಂಪೌಂಡಿನ ಹೊರಗೆ ಹೂಳಲಾದ ವ್ಯಕ್ತಿಯ ಸಮಾಧಿಯ ಬಳಿ ವಿಚಾರಣೆಯ ದಿನ ಲೆಕ್ಕ ಚುಕ್ತ ಮಾಡಲು ಮುನಕರ್ ಮತ್ತು ನಶೀರರು ಬರ‌್ತಾರೋ, ಇಲ್ಲವೋ?

ಟಾರ್ಚ್ ಹಿಡಿದು ರಸ್ತೆಯಲ್ಲಿ ಬೆಳಕು ಚೆಲ್ಲುತ್ತ ಸಾಗುತ್ತಿದ್ದ ವ್ಯಕ್ತಿಯನ್ನು ಹಿಂಬಾಲಿಸಲು ಮುಂದಾದ ಮೌಲಾನಾ ಮೌಲ್ವಿಯವರು ಮೆಲು ಧ್ವನಿಯಲ್ಲಿ ಹೇಳಿದರು. ಎಲ್ಲರೂ ಬರ‌್ತಾರಾ?

ಈ ಅನಿರೀಕ್ಷಿತ ಉತ್ತರ ಪ್ರೆಸಿಡೆಂಟರ ಬೆನ್ನ ಮೇಲೆ ಚಾಕುವಿನಂತೆ ತಿವಿಯಿತು. ಅವರು ತಕ್ಷಣ ತಮ್ಮ ಕುರ್ಚಿಯಿಂದ ಎದ್ದು ನಿಂತರು.

ಕಡೆಗೆ, ತೀರ್ಮಾನವೇನು? ಹಿರಿಯ ಸದಸ್ಯರು ಪ್ರಶ್ನಿಸಿದರು.
ನಮ್ಮ ಸಮಾಧಿ ಭೂಮಿಯಲ್ಲಿ ಪರದೇಶಿಗಳ ಶವವನ್ನು ಹೂಳಲು ಸಾಧ್ಯವಿಲ್ಲ
ಬೇರೆ ದ್ವೀಪಗಳಿಂದ ಚಿಕಿತ್ಸೆಗಾಗಿ ಇಲ್ಲಿಗೆ ಬರುವ ಜನ ಸತ್ತರೆ ಅವರ ಶವವನ್ನು ಇಲ್ಲಿ ಹೂಳಲು ನೀವು ಜಾಗ ಕೊಡ್ತೀರ.

ಇಂಥ ಪರಿಸ್ಥಿತಿಯಲ್ಲಿ ಐವತ್ತು ವರ್ಷಗಳ ಕಾಲ ಇದೇ ಜಮಾತ್‌ನಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರ ಶವಕ್ಕೆ ಜಾಗ ಕೊಡಲು ಯಾಕೆ ಒಪ್ಪುತ್ತಿಲ್ಲ? ಹೀಗೆ ಪ್ರಶ್ನೆ ಮಾಡಿದ್ದು ಓರ್ವ ಯುವಕ. ಇವನು ಯಾವುದೇ ಗುಂಪಿಗೆ ಸೇರಿರಲಿಲ್ಲ. ಯುವಕನ ಈ ಪ್ರಶ್ನೆ, ಪ್ರೆಸಿಡೆಂಟರ ಗಲ್ಲದ ಮೇಲೆ ರಭಸವಾಗಿ ಬಾರಿಸಿದಂತಿತ್ತು.

ಇಂಥ ಪ್ರಶ್ನೆಗಳಿಗೆ ಇಲ್ಲಿ ಸ್ಪಷ್ಟನೆ ನೀಡುವುದು ಸಾಧ್ಯವಿಲ್ಲ. ರಾತ್ರಿ ಒಂದು ಗಂಟೆ ಸಮೀಪಿಸುತ್ತಿದೆ. ಈಗ ಹೋಗಿ ಮಲಗಿದರೆ ಬೆಳಿಗ್ಗೆ ನಮಾಜಿಗೆ ಮೊದಲು ಏಳಬಹುದು. ಈ ಸಭೆಯನ್ನು ಸಮಾಪ್ತಿಗೊಳಿಸಲಾಗುತ್ತದೆ.

ಪ್ರೆಸಿಡೆಂಟರು ಕೂಡಲೇ ಹೊರಟರು. ಅಬ್ಬಾಜಾನರ ಶವವನ್ನು ಎಲ್ಲಿ ಹೂಳುವುದೆಂದು ಅಬ್ದುಲ್ ನಾಸರನಿಗೆ ಅರ್ಥವಾಗುತ್ತಿರಲಿಲ್ಲ! ಅವನು ಇದೇ ಚಿಂತೆಯಲ್ಲಿ ಮನೆಯೆಡೆಗೆ ಹೋಗುತ್ತಿದ್ದ. ತಲೆಯಲ್ಲಿ ನೂರಾರು ಪ್ರಶ್ನೆಗಳು ಚೇಳಿನಂತೆ ಕುಟುಕುತ್ತಿದ್ದವು.

ಮಸೀದಿಯ ಸ್ತಂಭಗಳನ್ನು ಎತ್ತರಿಸುವ ಸಲುವಾಗಿ ಮತ್ತು ಉತ್ತರದೆಡೆಗಿನ ಸಮಾಧಿ - ಭೂಮಿಯಲ್ಲಿ ಸ್ಥಳಾವಕಾಶದ ಕೊರತೆಯಾದಾಗ ಪಕ್ಕದ ತೋಟದ ಮಾಲೀಕನ ಭೂಮಿ ಖರೀದಿಸಲು ಹಗಲು - ರಾತ್ರಿಯೆನ್ನದೆ ಓಡಾಡಿ ಅಬ್ಬಾಜಾನರ ಪಾದಗಳಲ್ಲಿ ಗುಳ್ಳೆಗಳೆದಿದ್ದವು. ಜಮಾತ್‌ಗಾಗಿ ಇಷ್ಟೊಂದು ಜೀವತೆತ್ತ ನನ್ನ ಅಬ್ಬಾಜಾನರ ಶರೀರವನ್ನು ಎಲ್ಲಿ ಮತ್ತು ಹೇಗೆ ಹೂಳಲಿ?

ಅಕಸ್ಮಾತ್ ತನ್ನ ಹೆಗಲ ಮೇಲೆ ಯಾರೋ ಕೈಯಿಟ್ಟು ಸ್ಪರ್ಶಿಸಿದಂತಾಯಿತು. ಅಬ್ದುಲ್ ನಾಸರ್ ಹೊರಳಿ ನೋಡಿದ. ರೈಲ್ವೆ ಹಳಿಗಳ ಬಳಿ ಚಪ್ಪಲಿ ಮಾರುವ ತನ್ನ ಪರಿಚಿತ ವ್ಯಕ್ತಿಯೇ!

ಬೇಟಾ! ನೀನೆಷ್ಟು ಮುಗ್ಧ! ನಮ್ಮ ಜಮಾತ್‌ನ ರಾಜಕೀಯ ನಿನಗೆ ತಿಳಿದಿಲ್ಲವೇ? ನೀನಿನ್ನು ತಡ ಮಾಡಿದರೆ ಶವ ಕೊಳೆಯುತ್ತೆ. ನೀನೀಗ್ಲೆ ಪ್ರೆಸಿಡೆಂಟರ ಮನೆಗೆ ಹೋಗಿ ಅವರನ್ನು ಏಕಾಂತದಲ್ಲಿ ಭೇಟಿ ಮಾಡು. ಬೆಳಿಗ್ಗೆ ಎಂಟು ಗಂಟೆಯೊಳಗೆ ಉತ್ತರದೆಡೆಗಿರುವ ಸಮಾಧಿ - ಭೂಮಿಯಲ್ಲಿ ಅಬ್ಬಾಜಾನರ ಶವವನ್ನು ಹೂಳುವ ವ್ಯವಸ್ಥೆಯಾಗುತ್ತೆ. ದ್ವೀಪದ ಜನ ಪ್ರೆಸಿಡೆಂಟರನ್ನು ಏಕಾಂತದಲ್ಲಿ ಭೇಟಿ ಮಾಡ್ತಾರೆ, ಹಾಂ!

ಸರಿ, ಏಕಾಂತದಲ್ಲಿ ಭೇಟಿಯಾಗ್ತೀನಿ” ಹೀಗೆಂದು ಅಬ್ದುಲ್ ನಾಸರ್ ತನ್ನ ಮನೆಯೆಡೆಗೆ ಹೆಜ್ಜೆ ಹಾಕಿದ.

ಏಕಾಂತದಲ್ಲಿ ಭೇಟಿಯಾಗಲು ಬರುವ ಅಬ್ದುಲ್ ನಾಸರನನ್ನು ನಿರೀಕ್ಷಿಸುತ್ತ ಪ್ರೆಸಿಡೆಂಟರು ಕೋಳಿ ಕೂಗುವವರೆಗೆ ತಮ್ಮ ಮನೆಯ ಬಾಗಿಲನ್ನು ತೆರೆದು ಎಚ್ಚರವಾಗಿದ್ದರು.

ಮುನಕರ್ ಮತ್ತು ನಶೀರರು ಸಮಾಧಿಯ ಬಳಿ ಇಹಲೋಕ ತ್ಯಜಿಸಿದ ವ್ಯಕ್ತಿಯೊಂದಿಗೆ ಪ್ರಶ್ನೋತ್ತರ ನಡೆಸುವ ಇಬ್ಬರು ದೇವದೂತರು. ಎಲ್ಲೆಡೆಗೂ ಬರುತ್ತಾರೆ ಮನೆಯೆಡೆಗೆ ಸಾಗುವಾಗ ಅಬ್ದುಲ್ ನಾಸರನ ಮನಸ್ಸಿನಲ್ಲಿ ಮೌಲ್ವಿಯವರ ಈ ಮಾತು ಪ್ರತಿಧ್ವನಿಸುತ್ತಿತ್ತು.

ಒಂದು ವೇಳೆ ಅವರು ಎಲ್ಲೇ ಆದರೂ ಬರುವಂತಿದ್ದರೆ ಅಲ್ಲಿಗೂ ಅವಶ್ಯವಾಗಿ ಬರುತ್ತಾರೆ.

ಬೆಳಿಗ್ಗೆ ಮಸೀದಿಯಲ್ಲಿ ಜನ ನಮಾಜಿಗೆ ಕಲೆತಾಗ ಜಮಾತ್‌ನ ಕೆಲವರು ಪ್ರೆಸಿಡೆಂಟರಿಗೆ ಸಮುದ್ರ ತೀರದಲ್ಲಿರುವ ಬಂಜರು ಭೂಮಿಯಲ್ಲಿ ನಾವೆಲ್ಲಾ ಒಂದು ಮಣ್ಣಿನ ಗುಡ್ಡೆಯನ್ನು ನೋಡಿದೆವು. ಅದರ ತಲೆ ಮತ್ತು ಕಾಲಿನ ಬಳಿ `ಮೀಸಾನ್~ ಹಲಗೆಗಳನ್ನು ಹೂಳಲಾಗಿತ್ತು ಎಂದರು.

ಅಂದು ಬೆಳಿಗ್ಗೆ ನಮಾಜನ್ನು ಇಮಾಮರ ಬದಲು ಮೌಲ್ವಿ ಅಬ್ದುಲ್ ಜಬ್ಬಾರ್ ಉಲವಿ ಪಠಿಸಿದರು. ಇವರನ್ನು ಪ್ರೆಸಿಡೆಂಟರು ರಾತ್ರೋರಾತ್ರಿ ಇಮಾಮರನ್ನಾಗಿ ನೇಮಿಸಿದ್ದರು.

 ತಮಿಳು ಮೂಲ: ತೊಪ್ಪಿಲ್ ಮುಹಮ್ಮದ್ ಮೀರಾನ್
ಕನ್ನಡಕ್ಕೆ: ಡಿ. ಎನ್. ಶ್ರೀನಾಥ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT