ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ: ಮುಗ್ಧರು

Last Updated 19 ಮೇ 2012, 19:30 IST
ಅಕ್ಷರ ಗಾತ್ರ

`ಹೊರ ರೋಗಿಗಳಿಗೆ~- ಸಣ್ಣ ಬೋರ್ಡು...
ಬಿಳೀ ಕೋಟು, ಕಿಸೆಯೊಳಗೆ ಸ್ಟೆತೋಸ್ಕೋಪು, ಕಾಲಿಗೆ ಮೆತ್ತನೆಯ ಚಪ್ಪಲಿ.... ನಿಧಾನವಾಗಿ ಆವರಣ ಪ್ರವೇಶಿಸಿದೆ.ಇಂದಿನಿಂದ ಎರಡು ತಿಂಗಳು ಇಲ್ಲಿ ಕೆಲಸ. ನಿನ್ನೆಯವರೆಗೆ ಇದ್ದಿದ್ದು ಓ.ಟಿ.- ಅಂದರೆ ಆಪರೇಷನ್ ಥಿಯೇಟರಿನಲ್ಲಿ.

`ಆರ‌್ಥೊಪೆಡಿಕ್ ಸರ್ಜರಿ~ಯಲ್ಲಿ ಎಂ.ಡಿ. ಮಾಡಲು ಬಂದು ಸೇರಿರುವುದು ಇಲ್ಲಿ. ಈ ಸರಕಾರಿ ಕಾಲೇಜಿಗೆ, ಅದಕ್ಕೆ ಸೇರಿದಂತಿರುವ ಈ ಆಸ್ಪತ್ರೆಗೆ.ಸೇರಿರುವುದು ಓದಿಗಾಗಿ ಅಂತಾದರೂ ದಿನಕ್ಕೆ ಹದಿನಾಲ್ಕು ಗಂಟೆ ಕತ್ತೆ ದುಡಿತ. ಮೊದಲನೇ ವರ್ಷ ಹೀಗೇ ಅಂತೆ. ಮುಂದಿನ ವರ್ಷ ಹೊಸ ವಿದ್ಯಾರ್ಥಿಗಳು ಬಂದಾಗ, ನಾವು ಎರಡನೇ ವರ್ಷಕ್ಕೆ ಕಾಲಿಟ್ಟಾಗ ಓದಲು ಸಮಯವಿರುತ್ತಂತೆ.
 
ಅಲ್ಲಾ... ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವಾಗ ಸಿಗುವ ಸಂತೋಷ ಓದುತ್ತಿರುವಾಗ ಸಿಗುತ್ತದೆಯೇ? ಕತ್ತೆ ದುಡಿತದ ಬಗ್ಗೆ ನನಗೆ ಬೇಸರವಿಲ್ಲ. ಖುಷಿಯೇ... `ಡಾಕ್ಟ್ರು ಚಿಕ್ಕ ಹುಡುಗ. ಆದ್ರೂ ಪರ್ವಾಗಿಲ್ಲ...~ ಎಂದು ರೋಗಿಗಳು ಹೇಳಿದಾಗ, `ಗುಡ್. ಒಮ್ಮೆ ತೋರಿಸಿಕೊಟ್ರೆ ಸಾಕು ತಿಳಿದುಕೊಂಡು ಬಿಡ್ತೀರಲ್ರೀ~ ಎಂದು ನಮ್ಮ ಹೆಚ್.ಓ.ಡಿ. ಬೆನ್ನು ತಟ್ಟಿದಾಗ ಸಿಗುವ ತೃಪ್ತಿ ಇನ್ಯಾವುದರಲ್ಲಿ ಇದೆ...

ದೂರದ ಬೆಂಗಳೂರಿನಲ್ಲಿ ಇರುವ ಡಾ. ವಿರೂಪಾಕ್ಷ ಅವರೊಂದಿಗೆ ಮೊಬೈಲಿನಲ್ಲಿ ಆಪರೇಷನ್ನಿನ ವಿಧಾನ ಕೇಳುತ್ತಾ ಮೊನ್ನೆ ಮಾಡಿದ ಆಪರೇಷನ್ನು! ವ್ಹಾವ್... ಕೆಲಸ ಅಂದರೆ ಇದು... ಇಂದು ಡ್ಯೂಟಿ ಇಲ್ಲದಿದ್ದರೂ ಆ ಪೇಷಂಟನ್ನು ಒಮ್ಮೆ ನೋಡಿಬರಬೇಕು.

ಜವಾಬ್ದಾರಿ ಹಿರಿಯ ಡಾಕ್ಟರ‌್ರುಗಳದ್ದೇ. ಆದರೆ ಕೆಲಸ ನಮ್ಮದು. ಒಂದೆರೆಡು ಬಾರಿ ನೋಡುವ ಹೊತ್ತಿಗೆ ನಮ್ಮ ಯೋಗ್ಯತೆ, ನಿಪುಣತೆ ಗೊತ್ತಾಗಿ ಹೋಗತ್ತೆ ಸೀನಿಯರ್ ಡಾಕ್ಟರ‌್ರುಗಳಿಗೆ. ಅವರು ನಮಗೆ ಧೈರ್ಯ ತುಂಬಿ ಆಪರೇಷನ್ ಮಾಡಲು ಬಿಡುತ್ತಾರೆ. ಜವಾಬ್ದಾರಿ ಹೊರುತ್ತಾರೆ. ನನಗೆ ಕೆಲಸ ಕಲಿಯುವ, ಮಾಡುವ ಉತ್ಸಾಹ. ಅವರಿಗೆ ಮಾಡಿ ಮಾಡಿ ಸಾಕಾದ ಭಾವ.

ಹೊರ ರೋಗಿಗಳಿಂದ ತುಂಬಿದ್ದ ಆವರಣದಲ್ಲಿ ಜಾಗ ಮಾಡಿಕೊಂಡು ಕೋಣೆಯತ್ತ ನಡೆದೆ. ಇನ್ನೂ ಈಗ ಎಂಟುಗಂಟೆ. ಆಗಲೇ ಎಷ್ಟೊಂದು ಜನ! ಗಿರಿಧರ್ ಹೇಳಿದ್ದು ನಿಜ. ಅವನ ಮಾತು ಕೇಳಿ ತಿಂಡಿ ತಿಂದು ಬಂದಿದ್ದು ಸರಿಯಾಯ್ತು. ಇಲ್ಲದಿದ್ದರೆ ಎರಡು ಗಂಟೆಯವರೆಗೂ ಉಪವಾಸವೇ. ಓ.ಟಿ. ಯಲ್ಲಾದರೆ ಆಪರೇಷನ್ನುಗಳ ಮಧ್ಯೆ ತಿನ್ನಲು ಸಮಯ ಸಿಗುತ್ತದೆ.

ಸಿಸ್ಟರ್ ಮಂಗಳಾ ನನ್ನ ನೋಡಿದರೂ ನೋಡದಂತೆ ಮುಖ ತಿರುಗಿಸಿ ಎಕ್ಸಾಮಿನೇಷನ್ ಕೋಣೆಯೊಳಗೆ ನಡೆದರು. ನಾನು ಸುಮ್ಮನೆ ಒಳನಡೆದೆ.ಈ ಹಳೇ ಆಸ್ಪತ್ರೆಗಳಲ್ಲಿ ಸಿಸ್ಟರ್, ಆಯಾ, ವಾರ್ಡ್‌ಬಾಯ್ಗಳದ್ದೇ ದರ್ಬಾರು, ಸೀನಿಯರ್ ಡಾಕ್ಟರ‌್ರುಗಳನ್ನೇ ಲೆಕ್ಕಕ್ಕೆ ಇಡಲ್ಲ ಅವರುಗಳು.

ಇನ್ನು ನನ್ನಂಥ ಪಿ.ಜಿ. ಡಾಕ್ಟರ‌್ರುಗಳು ಒಂದು ಲೆಕ್ಕವೇ? ಯಾವ ಕೆಲಸವೂ ಮಾಡದೆ ಬರೀ ಮಾತಾಡಿಕೊಂಡು ರಾಜಾರೋಷವಾಗಿ ಓಡಾಡಿಕೊಂಡು ಇರುತ್ತಾರೆ. ದುಡ್ಡು ಕೊಡುವ ಪೇಷಂಟುಗಳನ್ನು ನೋಡಲು ನಮಗೆ ಹೇಳುತ್ತಾರೆ. ವಾರ್ಡ್‌ಗಳಲ್ಲಿ ಅವರ ದರ್ಬಾರು ನೋಡಿದ್ದೆ. `ಓಪಿಡಿ - ಹೊರರೋಗಿಗಳ ಡಿಪಾರ್ಟ್‌ಮೆಂಟಿನ್ಲ್ಲಲಂತೂ ಅಕ್ಷರಶಃ ಅವರು ಹೇಳಿದಂತೇ~ ಎಂದು ಗೆಳೆಯ ಗಿರಿಧರ್ ಹೇಳಿದ್ದ.

ಎಕ್ಸಾಮಿನ್ ಮಾಡಿಸಿಕೊಳ್ಳಲು ಒಳ ಬರಲು ಅವಳ ಕೈ ಬೆಚ್ಚಗೆ ಮಾಡಬೇಕು ರೋಗಿಗಳು. ಸೀನಿಯರ್ ಡಾಕ್ಟರ‌್ರುಗಳು ಕೂಡ ಇಂತಹ ಕೆಲವು ನರ್ಸುಗಳನ್ನು ಎದುರುಹಾಕಿಕೊಳ್ಳಲು ಹಿಂಜರಿಯುತ್ತಾರೆ. ಪಿ.ಜಿ. ಸ್ಟೂಡೆಂಟ್ ಆದ ನೀನು ಬಾಯಿ ಬಿಡಬೇಡ... ಎಂಬ ಸಲಹೆಯೊಂದಿಗೆ ಬಂದವನು ನಾನು. ಮೂರು ವರ್ಷ... ತಪಸ್ಸಿನಂತೆ ಓದು ಮುಗಿಸಬೇಕು... ಯಾರನ್ನೂ...

ಹೊರಗೆ ಗಲಾಟೆ. ಕುರ್ಚಿಯಲ್ಲಿ ಕೂತವನು ಮೇಲೆದ್ದೆ.`ಎಮರ್ಜೆನ್ಸಿ ಡಿಪಾರ್ಟ್‌ಮೆಂಟಲ್ಲಿ ಗಲಾಟೆ. ನೀವು ಹೋಗಿ ಏನ್ಮಾಡ್ತೀರಿ? ತುಂಬಾ ಪೇಷಂಟ್ಸ್ ಕಾಯ್ತಾ ಇದ್ದಾರೆ ಇಲ್ಲಿ. ಮೈನರ್ ಕೇಸೆಲ್ಲಾ ಕಳಿಸ್ತೀನಿ. ನೋಡಿ, ಕಳಿಸಿಬಿಡಿ~.

ಸಿಸ್ಟರ್ ಮಂಗಳಾ ಹೇಳಿದಾಗ ತಲೆಯಾಡಿಸಿದೆ.`ಐದು ನಿಮಿಷ... ಯಾಕೆ ಗಲಾಟೆ ನೋಡಿ ಬರುತ್ತೇನೆ~.ಅಲ್ಲಿ ಏನು ನಡೆಯುತ್ತಿದೆ ಎಂದು ನೋಡಬೇಕು ಎನ್ನುವುದಕ್ಕಿಂತ ಈ ಸಿಸ್ಟರ್ ಹೇಳಿದಂತೆ ಕೇಳಬಾರದು ಎಂಬ ತವಕ.

`ಏನಿಲ್ಲ ಡಾಕ್ಟರ್, ಆತ್ಮಹತ್ಯೆ ಕೇಸು. ಹುಡುಗಿ ಸತ್ತು ಹೋಗಿದ್ದಾಳೆ. ಬೆಳಗ್ಗೆ ಆರೂವರೆಗೇ ಕರ‌್ಕೊಂಡು ಬಂದಿದ್ದಾರೆ. ಬರೋ ಹೊತ್ತಿಗೆ ಹೋಗಿಬಿಟ್ಟಿದೆ ಹುಡುಗಿ. ಏನಾದರೂ ಮಾಡಿ ಬದುಕಿಸಿ ಅಂತ ಗೋಳಾಡುತ್ತಿದ್ದರು.

ಈಗ ನೋಡಿದ್ರೆ ಇಡೀ ಹಳ್ಳಿಯ ಜನ ಎಲ್ಲಾ ಬಂದ ಹಾಗಿದೆ. ಏನಾದರೂ ಮಾಡಿ ಬದುಕಿಸಿ ಅಂತ ಹೆಣಾ ತೊಗೊಂಡು ಬಂದ್ರೆ ಏನು ಮಾಡೋದು? ಗಲಾಟೆ... ಪೊಲೀಸ್ಸಿನವರಿಗೆ ಕಂಪ್ಲೇಂಟ್ ಮಾಡಾಗಿದೆಯಂತೆ. ಗುಂಪು ದೊಡ್ಡದಿದ್ರೆ ಪೊಲೀಸಿನವರಿಗೂ ಬರಲು ಹೆದರಿಕೆ.

ಬಿಳೀ ಕೋಟು ಹಾಕ್ಕೊಂಡಿರೋ ಡಾಕ್ಟರ‌್ರನ್ನು ನೋಡಿದ್ರೆ ಹಿಡಿದು ಜಗ್ಗಿಸಿಬಿಡ್ತಾರೆ. ಏನಾದ್ರೂ ಮಾಡಿ, ಏನಾದ್ರೂ ಮಾಡಿ ಅಂತ ಕೈಕಾಲು ಹಿಡಿದುಕೊಳ್ತಾರೆ. ಆದ್ರೆ ಡಾಕ್ಟರ‌್ರುಗಳೇನು ದೇವರಾ? ಕಲಿಗಾಲ! ದೇವರೂ ಬದುಕಿಸೊಲ್ಲ... ಭೂ ಭಾರ ಕಳೆಯಬೇಡವೇ?~

`ಪಾಪ... ಆ ಹುಡುಗಿಗೆ ಏನಾಗಿತ್ತೋ ಏನೋ...~
`ಇನ್ನೇನು? ಕದ್ದು ಬಸುರಾಗಿರುತ್ತೆ... ಹೆದರಿ ಪ್ರಾಣ ಕಳೆದುಕೊಂಡಿರುತ್ತೆ. ಮದುವೆ ಎಂದು ಮೂರು ಗಂಟು ಬೀಳುವವರೆಗೂ ಭದ್ರವಾಗಿರಿ ಅಂತ ಹೇಳಿದ್ರೆ ಕೇಳಲ್ಲ. ಮಾರ್ಕೆಟ್ಟಿನಲ್ಲಿ ಚೀಪಾಗಿ ಕಾಂಡೋಮ್ ಸಿಗುತ್ತೆ ಬಳಸಿ ಅಂತ ರೇಡಿಯೋದಲ್ಲಿ, ಟೀವಿಯಲ್ಲಿ ತಲೆಚಿಟ್ಟು ಬರೋ ಅಷ್ಟು ಸಾರಿ ಜಾಹೀರಾತು ಹಾಕ್ತಾರೆ.

ಬಳಸಲ್ಲ... ಹೀಗೆ ಆದಾಗ ಗಂಡು ಹೇಳಹೆಸರಿಲ್ಲದೆ ತಪ್ಪಿಸಿಕೊಂಡು ಬಿಡ್ತಾನೆ. ಪರಿಣಾಮವನ್ನು ಹೊಟ್ಟೆಯಲ್ಲಿ ಹೊರುವ ಹೆಣ್ಣು ಸಮಾಜದ - ಮನೆಯವರ ನಿಂದನೆಗೆ ಹೆದರಿ ಪ್ರಾಣ ಕಳೆದುಕೊಳ್ಳುವ ಮಟ್ಟ ಮುಟ್ಟುತ್ತಾಳೆ~.

ನಿರ್ಭಾವುಕಳಾಗಿ ಹೇಳುತ್ತಾ ಹೋದರು, ಸಿಸ್ಟರ್ ಮಂಗಳಾ.`ನೀವು ಹೋಗಿ ಮಾಡುವುದೇನು ಇಲ್ಲ. ಎಮರ್ಜೆನ್ಸಿಯಲ್ಲಿ ಇರುವ ಡಾಕ್ಟರ್ಸ್‌, ಸಿಸ್ಟರ್ಸ್‌ ಒಳಬಾಗಿಲಿನಿಂದ ಬಂದುಬಿಟ್ಟಿದ್ದಾರೆ.

ಅಲ್ಲಿದ್ದರೆ ತುಂಬಾ ಅಪಾಯ. ಜನ ಹೀಗೆ ಗುಂಪು ಕಟ್ಟಿಕೊಂಡು ಬಂದರೆ ಏನು ಬೇಕಾದರೂ ಮಾಡ್ತಾರೆ. ಕಳೆದ ತಿಂಗಳು ಆ ಆರು ವರ್ಷದ ಹುಡುಗ ಸತ್ತಾಗ ಗುಂಪಿನ ಗಲಾಟೆಗೆ ಹೆದರಿ ಸರ್ಜರಿ ಡಿಪಾರ್ಟ್‌ಮೆಂಟಿನಿಂದ ಡಾ. ರಮಾಕಾಂತ್ ಅವರ‌್ನ ಪೊಲೀಸರು ಅರೆಸ್ಟ್ ಮಾಡಿದ್ರಲ್ಲ.
 
ಗುಂಪು ಅಂದ್ರೆ ಪೊಲೀಸ್ಸಿನವರಿಗೂ ಹೆದರಿಕೆ~.ಕುರ್ಚಿಯಲ್ಲಿ ಕುಳಿತು ತಲೆಕೂದಲಲ್ಲಿ ಕೈಯಾಡಿಸಿಕೊಂಡೆ. ನಿಜ, ಆ ಹುಡುಗನಿಗೆ ಎಪಿಲೆಪ್ಸಿಯಿತ್ತು. ಹೃದಯ ವೀಕಾಗಿತ್ತು. ಎಲ್ಲವನ್ನು ಮುಚ್ಚಿಟ್ಟು ಮೈನರ್ ಸರ್ಜರಿಗೆ ಬಂದಿದ್ದು. ಎಪಿಲೆಪ್ಸಿಗೆ ಕೊಡಬೇಕಾದ ಮಾತ್ರೆಯನ್ನೂ ಸುಮ್ಮನೆ ನಿಲ್ಲಿಸಿಬಿಟ್ಟಿದ್ದರು.

ಒಂದು ದಿನ ಜೈಲಿನಲ್ಲಿದ್ದಿದ್ದಕ್ಕೆ ಇನ್ನೂ ಸುಧಾರಿಸಿಕೊಳ್ಳುತ್ತಾ ಇದ್ದಾನೆ ರಮಾಕಾಂತ್.
`ನಾವು ಅರೆಸ್ಟು ಅಂತ ಮಾಡಿ ಕರೆದುಕೊಂಡು ಹೋಗಿದ್ದಕ್ಕೆ ಗುಂಪು ಚದುರಿದ್ದು. ಡಾಕ್ಟರ್ ಉಳಿದಿದ್ದು, ಇಲ್ಲದಿದ್ದರೆ ಹೊಡೆದು ಬಡಿದು ಕೈ ಕಾಲು ಮುರಿದುಬಿಡ್ತಿದ್ರು. ಶುಡ್ ಬಿ ಥ್ಯಾಂಕ್‌ಫುಲ್ ಟು ಅಸ್~ ಅಂತ ಹೇಳಿದ್ರು ಇನ್ಸ್‌ಪೆಕ್ಟರ್, ನಾವೆಲ್ಲಾ ಅವನನ್ನು ಬಿಡಿಸಿಕೊಂಡು ಬರಲು ಸ್ಟೇಷನ್ನಿಗೆ ಹೋದಾಗ.
 
`ನೆಗ್ಲಿಜೆನ್ಸ್ ಕೇಸು, ಕೋರ್ಟು, ಕಂಪ್ಲೇಂಟು ಏನೂ ಇಲ್ಲ. ಆ ಜನಕ್ಕೆ ಅದೆಲ್ಲಾ ಏನೂ ಬೇಡ. ನಾವು ಅರೆಸ್ಟ್ ಮಾಡಿದ್ವಲ್ಲ... ಅಷ್ಟು ಸಾಕು. ಪಾಪ, ಗೊತ್ತಾಗೊಲ್ಲ. ಮುಗ್ಧ ಜನ...~

ಮುಗ್ಧಜನ ನಿಜ. ಆದರೆ ಡಾಕ್ಟರ್ ಬಳಿ ಮುಚ್ಚಿಡಬಾರದು. ಅದು ಅವರಿಗೇ ಕುತ್ತು ಅಂತ ತಿಳಿಯಬೇಡವೇ? ಇನ್ನೇನು... ಇನ್ನೇನಾದರೂ ಇದೆಯೇ... ಎಂದು ಕೇಳಿದರೂ ಹೇಳುವುದಿಲ್ಲ. ಮುಗ್ಧತೆಗೆ ಅನುಕಂಪವಿದೆ. ಆದರೆ ಮುಚ್ಚಿಡುವುದರಿಂದ ಎಲ್ಲರಿಗೂ ತೊಂದರೆ. ಹೆಚ್ಚಾಗಿ ಅವರಿಗೇ...

ತಲೆ ಕೊಡವಿಕೊಂಡು ಸಿಸ್ಟರ್ ಒಳಗೆ ಕಳುಹಿಸುತ್ತಿದ್ದ ರೋಗಿಗಳನ್ನು ನೋಡಲಾರಂಭಿಸಿದೆ. ಹತ್ತೂವರೆ ಹೊತ್ತಿಗೆ ಹೊರಗೆ ಗಲಾಟೆ. ಎದ್ದು ಹೊರಬಂದೆ. ಏಳೆಂಟು ವರ್ಷದ ಹುಡುಗನನ್ನು ಎತ್ತಿಕೊಂಡಿದ್ದವನೊಬ್ಬ ಸಿಸ್ಟರ್ ಮಂಗಳಾ ಅವರೊಂದಿಗೆ ಏರುದನಿಯಲ್ಲಿ ಮಾತಾಡುತ್ತಿದ್ದ.

`ಏನಾಯ್ತು? ಮಗೂಗೆ ಏನಾಗಿದೆ?~ ಬಾಗಿಲ ಬಳಿಯೇ ನಿಂತು ಪ್ರಶ್ನಿಸಿದೆ.
`ಬಿಡಿ ಡಾಕ್ಟರ್. ಇವರಿಗೆ ಒಂದು ಪೇಪರ‌್ಗೆ ಸಹಿ ಆಗಬೇಕು... ಅದಕ್ಕೆ ಡಿಪಾರ್ಟ್‌ಮೆಂಟ್ ಚೀಫೇ ಬರಬೇಕು. ಹೇಳಿದ್ರೆ ಅರ್ಥಮಾಡಿಕೊಳ್ತಿಲ್ಲ.

ಬೇರೆಯವರನ್ನೆಲ್ಲಾ ಒಳಗೆ ಕಳಿಸ್ತಿದ್ದೀರಿ, ನಾವು ಏಳು ಗಂಟೆಯಿಂದ ಕೂತಿದ್ದೀವಿ ಅಂತ ಗಲಾಟೆ ಮಾಡ್ತಿದ್ದಾರೆ. ಇವರನ್ನ ಏಳು ಗಂಟೆಗೇ ಬರೋದಕ್ಕೆ ಹೇಳಿದವರ‌್ಯಾರು?~.
ಸಿಸ್ಟರ್ ಆತನತ್ತ ತಿರುಗಿದರು.

`ತಿಂಡಿ ತಿಂದುಕೊಂಡು ಬರೋಹಾಗಿದ್ರೆ ಹೋಗಿ ತಿಂದುಕೊಂಡು ಬನ್ನಿ. ದೊಡ್ಡ ಡಾಕ್ಟರ್ ಬರೋದು ಹನ್ನೆರಡು ಗಂಟೆಗೆ. ಕಳೆದ ಬಾರಿ ನಿಮ್ಮ ಜೊತೆ ಬಂದಿದ್ರಲ್ಲ, ನಿಮ್ಮ ಏರಿಯಾ ಕಾರ್ಪೊರೇಟರ‌್ರೊ ಲೀಡರ‌್ರೋ... ಅವ್ರ ಬಂದಿಲ್ವಾ?~`ಇಲ್ಲ ಸಿಸ್ಟರ‌್ರಮ್ಮ. ಈ ಕಾಗದ ಎಲ್ಲಾ ಕೊಟ್ಟು, ನೀವು ಹೋಗಿ ಸಹಿ ಮಾಡಿ ಕೊಡ್ತಾರೆ. ನಾನು ಅಲ್ಲಿಗೇ ಬರ‌್ತೀನಿ ಅಂದ್ರು~.

ಆತನ ಕಂಗಳಲ್ಲಿ ಅಸಹಾಯಕತೆ. ಏಳೆಂಟು ವರ್ಷದ ಹುಡುಗನನ್ನು ಎತ್ತಿಕೊಂಡು ನಿಂತಿದ್ದರಿಂದ ಏದುಸಿರು ಬರುತ್ತಿತ್ತು.ಅವರ ಬಳಿ ಸಾಗಿ ಸೊಟ್ಟಗೆ ತಿರುಚಿಕೊಂಡಿದ್ದ ಆ ಹುಡುಗನ ಕಾಲು ಮುಟ್ಟಿದೆ.

`ಏನಾಗಿದೆ? ಕಾಲು ಸರಿ ಇಲ್ಲವೇ? ಇಳಿಸಿ ಕೆಳಗೆ. ಇಷ್ಟು ದೊಡ್ಡ ಹುಡುಗನನ್ನು ಯಾಕೆ ಎತ್ತಿಕೊಂಡಿದ್ದೀರಿ?~`ನೋಡ್ತಾ ಇದೀರಲ್ಲ ಡಾಕ್ಟ್ರೇ... ಏಳುವರ್ಷ ಇವನಿಗೆ. ಎರಡು ವರ್ಷದ ಹಿಂದೆ ಬೈಕಿನಲ್ಲಿ ಸ್ಪೀಡಾಗಿ ಹೋಗ್ತಾ ಇದ್ದ ಬೋಸುಡಿ ಮಗ ನನ್ನ ಮಗನ್ನ ಹೊಡೆದು ಹೋಗಿಬಿಟ್ಟ.

ಕಾಲು ಮುರಿದುಹೋಯ್ತು. ನಮ್ಮ ಹಫೀಸ್ ಸಾಹೇಬರು ಕಾಲು ಜೋಡಿಸಿದ್ರು. ಆದ್ರೆ... ನಿಂತುಕೊಳ್ಳೋಕ್ಕೆ ನಡೆಯೋಕ್ಕೆ ಆಗೊಲ್ಲ ನಮ್ಮ...~`ಈ ಬೆಂಚಿನ ಮೇಲೆ ಕೂಡಿಸಿ~. ಕಚ್ಚಿಕೊಳ್ಳುತ್ತಿದ್ದ ಹುಡುಗನನ್ನು ಅವನಿಂದ ಬಿಡಿಸಿ ಜಾಗಮಾಡಿ ಬೆಂಚಿನ ಮೇಲೆ ಕಾಲು ಚಾಚಿಸಿ ಕೈಯಿಂದ ಕಾಲು ನೀವಿದೆ.

`ನೋವಾಗುತ್ತಾ?~
ಗಾಬರಿಯಿಂದ ಕಣ್ಣರಳಿಸಿ ನನ್ನತ್ತ ನೋಡುತ್ತಿದ್ದ ಹುಡುಗನತ್ತ ನೋಡಿದೆ.
ಇಲ್ಲ ಎನ್ನುವಂತೆ ತಲೆಯಾಡಿಸಿದ.

`ಎಷ್ಟು ವರ್ಷ ಆಯ್ತು ಹೀಗಾಗಿ?~
`ಎರಡು ವರ್ಷ. ಆ ಸುವ್ವರ್...~`ಕಾಲು ಮರಿದಿದೆ. ಆ್ಯಕ್ಸಿಡೆಂಟ್ ಆದಾಗ ಆಸ್ಪತ್ರೆಗೆ ಕರೆದುಕೊಂಡು ಬರಲಿಲ್ಲವೇ?~

`ಆಸ್ಪತ್ರೆಗೆ ಬಂದ್ರೆ ತುಂಬಾ ದುಡ್ಡು ಖರ್ಚಾಗುತ್ತೆ. ನಮ್ಮ ಹಫೀಸ್ ಸಾಹೇಬರು ಮೂಳೆ ಕೂಡಿಸಿದ್ರು. ಆದ್ರೂ ಪಾದ ತಿರುಚಿಕೊಂಡು, ಮಂಡಿ ಮೆತ್ತಗಾಗಿ ನಡೆಯೋಕ್ಕೆ ಆಗಲ್ಲ. ಸ್ವಲ್ಪ ನಡೀತಾನೆ. ಆದ್ರೆ ನೋವು ಅಂತ ಬೊಂಬ್ಡಿ ಬಜಾಯಿಸ್ತಾನೆ~.

`ಏನು ದುಡ್ಡು ಖರ್ಚಾಗೋದು? ಆ ಮೋಟಾರ್‌ಬೈಕ್ ಸವಾರನ ಹತ್ತಿರ ದುಡ್ಡು ವಸೂಲು ಮಾಡಲಿಲ್ಲವೇ?~ ಎಂದು ಸಿಸ್ಟರ್ ಪ್ರಶ್ನಿಸಿದಾಗ ಕಿರುನಗೆ ನಕ್ಕ ಆತ.
`ಮತ್ತೆ ಬಿಟ್ಟುಬಿಡ್ತೀನಾ? ನಾಲ್ಕು ಏಟು ಹಾಕಿ, ಪರ್ಸಿನಲ್ಲಿದ್ದ ದುಡ್ಡು, ಕೈಯಲ್ಲಿದ್ದ ವಾಚು, ಕೊರಳಲ್ಲಿ ಇದ್ದ ಸರ, ಬೆರಳಲ್ಲಿ ಇದ್ದ ಉಂಗುರ ಎಲ್ಲಾ ತೊಗೊಂಡ್ವಿ.

ಆಸ್ಪತ್ರೆ ಬೇಡ, ನಾನೇ ಸರಿ ಮಾಡ್ತೀನಿ ಅಂದ್ರು ಹಫೀಸ್ ಸಾಹೇಬ್ರು. ಕಾಲು ಕುಂಟಾಯ್ತು. ಏನು ಮಾಡೋಕಾಗುತ್ತೆ? ಈಗ ನಮ್ಮ ಏರಿಯಾ ಲೀಡರ್ ಹೇಳಿದ್ದಾರೆ. ಈ ಆಸ್ಪತ್ರೆಯಿಂದ ಒಂದು ಕಾಗದ ಕೊಟ್ರೆ ಅದ್ಯಾವುದೋ ಫಂಡಿನಿಂದ ತಿಂಗಳಿಗೆ ಎಂಟುನೂರು ರೂಪಾಯಿ ಕೊಡ್ತಾರಂತೆ ಸರ್ಕಾರದವ್ರ. ಇದು ನಾಲ್ಕನೇ ಬಾರಿ ಬರ‌್ತಾ ಇರೋದು ನಾವು~.

`ಹೂಂ ಮತ್ತೆ! ಸಾಯೋವರೆಗೂ ತಿಂಗಳಿಗೆ ಎಂಟುನೂರು ರೂಪಾಯಿ ಅಂದ್ರೆ ಸುಮ್ನೆ ಸಲೀಸಾಗಿ ಆಗಿಬಿಡುತ್ತಾ? ಓಡಾಡಬೇಕು ಒಂದೆಂಟು ಸಲ. ಅದು ಎಂಟು ನೂರಲ್ಲ... ಸಾವಿರವೇನೋ...~- ಸಿಸ್ಟರ್ ಹೇಳಿದಾಗ ಆತನ ಮುಖದ ಮೇಲೆ ಹೆಚ್ಚಿನ ಬದಲಾವಣೆ ಕಾಣಲಿಲ್ಲ.

`ಇರ‌್ಲಿ ಬಿಡಿ. ಇಷ್ಟೆಲ್ಲಾ ಮಾಡ್ತಾ ಇರೋ ನಮ್ಮ ನಾಯಕರು...~`ಈಗ ಅದೆಲ್ಲಾ ಮಾತು ಬೇಡ. ಒಂದು ಎಕ್ಸ್‌ರೇ ತೆಗೆಸೋಣ. ನಂಗನ್ನಿಸುತ್ತೆ, ಒಂದು ಆಪರೇಷನ್ ಮಾಡಿದ್ರೆ ಕಾಲು ಸರಿಹೋಗಬಹುದು ಅಂತ. ಬನ್ನಿ, ಬರ‌್ಕೊಡ್ತೀನಿ. ಎಕ್ಸ್‌ರೆ ಡಿಪಾರ್ಟ್‌ಮೆಂಟ್ಗೆ ಹೋಗಿ ತೆಗೆಸಿ. ಆಮೇಲೆ ಮಾತಾಡೋಣ.

ಅವನ ಮಾತು, ಅವನ ನಾಯಕರು, ದುಡ್ಡು... ಅದೆಲ್ಲಾ ಕೇಳುವ ಮನಸ್ಸಿರಲಿಲ್ಲ ನನಗೆ. ಈ ಪುಟ್ಟ ಹುಡುಗ ತನ್ನ ಕಾಲ ಮೇಲೆ ತಾನು ನಿಲ್ಲಬೇಕು, ನೆಟ್ಟಗೆ ಹೆಜ್ಜೆಯಿಟ್ಟು ನಡೆಯಬೇಕು. ಮುಟ್ಟಿ ನೋಡಿದರೆ... ಸರ್ಜರಿ ಮಾಡಿ ಸರಿಪಡಿಸಬಲ್ಲೆ ಅನ್ನಿಸುತ್ತದೆ.
ಬೆಂಚಿನ ಕೆಳಗೆ ಬಿದ್ದಿದ್ದ ಪ್ಲಾಸ್ಟಿಕ್ ಕವರ‌್ರಿನಿಂದ ಎಕ್ಸ್‌ರೇ ಫೋಟೋವೊಂದನ್ನು ಹೊರತೆಗೆದರು ಆತ.

`ಹದಿನೈದು ದಿನದ ಹಿಂದೆ ಬಂದಾಗ ಈ ಫೋಟೋ ಹಿಡಿಸಿದ್ವಿ. ಆವಯ್ಯ ಈ ಫೋಟೋ ಕೊಡೋ ಹೊತ್ತಿಗೆ ದೊಡ್ಡ ಡಾಕ್ಟರ‌್ರು ವೋಗಿಬಿಟ್ಟಿದ್ರು. ಇದನ್ನೇನು ತೋರಿಸೋದು ಬೇಡ. ಏನು ಪ್ರಯೋಜನವಿಲ್ಲ ಅಂದ್ರು ಹಫೀಸ್ ಸಾಹೇಬ್ರು~.ಅವನ ಕೈಯಿಂದ ಎಕ್ಸ್‌ರೇ ಫೋಟೋ ಇಸಿದುಕೊಂಡು ಕೋಣೆಯೊಳಗೆ ನಡೆದೆ.

`ಬನ್ನಿ ಒಳಗೆ...~
ಕೋಣೆಯೊಳಗೆ ಯಾರೂ ಬರಲಿಲ್ಲ. ನಾನು ಎಕ್ಸ್‌ರೇ ನೋಡಿ, ನೋಟ್ ಮಾಡುವವರೆಗೆ.`ಸಿಸ್ಟರ್~ ಎಂದು ದನಿಯೆತ್ತರಿಸಿ ಕೂಗಿದ ಮೇಲೆ ಸಿಸ್ಟರ್, ಅವಳ ಹಿಂದೆ ಆತ, ಆತನ ಹಿಂದೆ ಕುಂಟುತ್ತಾ, ಕಾಲೆಳೆಯುತ್ತಾ ಹುಡುಗ ಒಳಗೆ ಬಂದರು.
`ನೋಡಿ, ಆಪರೇಷನ್ ಮಾಡಿ ಕಾಲು ಸರಿಮಾಡಬಹುದು ಅಂತ ನನಗನ್ನಿಸುತ್ತೆ.

ಅಬ್ಬಬ್ಬ ಅಂದ್ರೆ... ಈ ಕಾಲಿಗಿಂಥ ಕೊಂಚ ಗಿಡ್ಡವಾಗಬಹುದು. ಬೆಳೆಯುವ ವಯಸ್ಸು. ಬೇಗ ಸರಿಹೋಗುತ್ತೆ. ಊರುಗೋಲು, ಗೋಡೆ... ಯಾವುದರ ಸಹಾಯವಿಲ್ಲದೆ ನಡೆಯುವಂತಾಗುತ್ತಾನೆ ನಿಮ್ಮ ಮಗ. ಇದು ಸರ್ಕಾರಿ ಆಸ್ಪತ್ರೆಯಾದ್ದರಿಂದ ಖರ್ಚು ಹೆಚ್ಚು ಬರಲ್ಲ. ತಿಂಡಿ ತಿಂದ್ಕೊಂಡು ಬನ್ನಿ. ಪ್ರೊಫೆಸರ್ ಬಂದ ಮೇಲೆ ಅವರ ಜೊತೆ ನಾನು ಮಾತಾಡ್ತೀನಿ. ಇದು ಖಂಡಿತಾ ಸರಿಹೋಗುತ್ತೆ~.

ಖುಷಿಯಿಂದ ಹೇಳಿದೆ. ಆ ಪುಟ್ಟ ಹುಡುಗನ ಮುಖವರಳಿತು. ಆದರೆ ಆತನ ಮುಖ ಗಂಟಾಯಿತು. ಬಾಗಿಲ ಬಳಿ ನಿಂತಿದ್ದ ಸಿಸ್ಟರ್ ಮಂಜುಳ ಮುಖ ತಿರುವಿದರು.
`ಆಪರೇಷನ್ನೆಲ್ಲಾ ಬೇಡ. ಆಪರೇಷನ್ನು ಅಂತ ಕರ‌್ಕೊಂಡು ಹೋಗಿ, ಜ್ಞಾನ ತಪ್ಪಿಸಿ, ಆಮೇಲೆ ಜ್ಞಾನವೇ ಬರ‌್ದೆ ಇದ್ರೆ? ಜೀವಕ್ಕೇ ಅಪಾಯವಾದ್ರೆ? ಕುಂಟೋ ಕುರುಡೋ... ನನ್ನ ಮಗ ನನ್ನ ಕಣ್ಣ ಮುಂದೆ ಇರ‌್ಲಿ~.

`ಹಾಗೆಲ್ಲಾ ಏನೂ ಆಗೊಲ್ಲ... ನೀವು...~
`ಬೇಡ... ನೀವು ಬಲವಂತವಾಗಿ ಆಪರೇಷನ್ ಮಾಡಕ್ಕಾಗ್ದು. ಈಗ್ತಾನೆ ಓದು ಮುಗಿಸಿ ಬಂದಿದ್ದೀರಿ. ನಿಮಗೆ ಕೊಯ್ಬೇಕಾ? ಆಗಕ್ಕಿಲ್ಲ. ದೊಡ್ಡ ಡಾಕ್ಟರ‌್ರು ಬರ‌್ಲಿ. ಅವರ ಹತ್ತಿರ ಕಾಗದ ಸಹಿ ಮಾಡಿಸಿಕೊಂಡು ಹೋಗ್ತೀವಿ. ಆ ಫೋಟೋ ಇತ್ಲಾಗೆ ಕೊಡಿ. ನೀವು ಅವರ‌್ಹತ್ರ ಏನೂ ಹೇಳೋದು ಬೇಡ~.

ಅಚ್ಚರಿಯಿಂದ ಆತನತ್ತ ನೋಡಿದೆ. ಎರಡು ವರ್ಷದಿಂದ ಕುಂಟುತ್ತಿದ್ದ ಮಗ! ಇವನು ಎತ್ತಿಕೊಂಡು ಓಡಾಡಬೇಕಾಗಿದ್ದ ಮಗ, ಒಂದು ಆಪರೇಷನ್ನಿನಿಂದ ನಡೆಯುತ್ತಾರೆ ಎಂದು ಖುಷಿಪಡುತ್ತಾನೆ ಎಂದುಕೊಂಡೆ. ಖರ್ಚಿಗಿಂತ ಗಾಬರಿ, ಅಸಹನೆ ಅವನ ಮುಖದ ಮೇಲೆ! ಇನ್ನೂ ಚಿಕ್ಕ ಹುಡುಗ ಎಂದು ನನ್ನ ಮೇಲೆ ಅಪನಂಬಿಕೆಯೇ....

`ನಿಮಗೆ ಅರ್ಥವಾಗ್ತಿಲ್ವಾ? ನಿಮ್ಮ ಮಗ ಮಾಮೂಲಾಗಿ ನಡೆದಾಡಬಹುದು... ಖರ್ಚೂ ಆಗಲ್ಲ...~`ಅರ್ಥವಾಯ್ತು. ನೀವು ತಿರುಗಿ ಹೇಳಬೇಕಿಲ್ಲ. ನಡಿ ಮಗಾ ಹೋಗೋಣ. ಕಾಲು ಇಂಗಾಕಿರೋದಕ್ಕೆ ತಿಂಗ್ಳಾ ತಿಂಗ್ಳಾ ಸಾಯೋಗಂಟ ಎಂಟ್ನೂರು ರೂಪಾಯಿ ಬರೋ ಹಂಗೆ ಮಾಡ್ತಾರೆ ನಮ್ಮ ಲೀಡರ‌್ರು.
 
ನೀವು ಕಾಲು ಸರಿಮಾಡಿಬಿಟ್ರೆ ಲಾಸಲ್ವಾ? ದುಡ್ಡು ಯಾರು ಕೊಡ್ತಾರೆ? ಪ್ರಪಂಚ ಯೆಂಗದೆ ಅಂತ ಗೊತ್ತಿಲ್ಲ, ಡಾಕ್ಟರ‌್ರಾಗಿ ಬಂದುಬಿಟ್ರು. ಕಾಲು ಸರಿ ಮಾಡಿಬಿಡ್ತಾರಂತೆ ಕಾಲು! ನೀವು ಹೇಳಿದ್ದು ದಿಟ ಸಿಸ್ಟ್ರಮ್ಮ... ಎಳಸು... ನಾವು ಆಮ್ಯಾಕೆ ಬರ‌್ತೀವಿ. ದೊಡ್ಡ ಡಾಕ್ಟ್ರತಾವ ಒಂದು ಸಹಿ ಹಾಕಿಸಿ ಕೊಟ್ಟುಬಿಡಿ ಸಾಕು. ನಿಮ್ಗೆ ಪುಣ್ಯ ಬತ್ತದೆ~.
ಟೇಬಲ್ ಮೇಲಿದ್ದ ಎಕ್ಸ್‌ರೇ ಫೋಟೋ ತೆಗೆದುಕೊಂಡು, ಮಗನ ಭುಜ ಹಿಡಿದು ಎಳೆಯುತ್ತಾ ಆಚೆ ಧಾವಿಸಿದ ಆತನ ಬೆನ್ನನ್ನು ದಿಟ್ಟಿಸಿದೆ.

`ನೆಕ್ಸ್ಟ್ ಪೇಷಂಟ್ ಕಳಿಸ್ಲಾ...~
ಏನೂ ನಡೆಯಲೇ ಇಲ್ಲವೇನೋ ಎಂಬಂತೆ ವಿಚಾರಿಸಿದ ಸಿಸ್ಟರ‌್ರತ್ತ ಕಣ್ಣರಳಿಸಿದೆ. ಇವಳೆಷ್ಟು ಶಾಮೀಲು ಇದರಲ್ಲಿ?ಆತನದು ಮುಗ್ಧತೆಯೋ, ಹಣದಾಹವೋ....
`ನೀವೊಮ್ಮೆ ಹೇಳ್ತಿರೇನೋ ನೋಡಿ... ಆ ಹುಡುಗ...~

`ಯಾಕೆ ಅಷ್ಟೊಂದು ಹಚ್ಚಿಕೊಳ್ತೀರಾ? ಆ ಹುಡುಗನಂತಹವರು ಸಾವಿರಾರು ಜನ ಇದ್ದಾರೆ. ನಿಮಗಲ್ಲದಿರಬಹುದು. ಆದರೆ ಅವರಿಗೆ ಎಂಟುನೂರು ರೂಪಾಯಿ, ತಿಂಗಳಿಗೆ ಎಂಟುನೂರು ರೂಪಾಯಿ ದೊಡ್ಡ ಮೊತ್ತ. ಅದಕ್ಕೆ ಕಲ್ಲು ಹಾಕಬೇಡಿ. ನೀವು ದೊಡ್ಡ ಡಾಕ್ಟರ‌್ರಿಗೆ ಹೇಳಿ, ಅವರು ಸಹಿ ಹಾಕದಂತೆ ಮಾಡಿದರೆ ಕಷ್ಟ.

ನಮ್ಮ ಲೀಡರ‌್ರು ಅಂತ ಆತ ಹೇಳಿದ್ನಲ್ಲ, ಅವ್ನ ಮಹಾರೌಡಿ. ಆ ಏರಿಯಾ ಜನರನ್ನೆಲ್ಲಾ ಕರೆದುಕೊಂಡು ಬಂದು ಗಲಾಟೆ ಎಬ್ಬಿಸುತ್ತಾನೆ. ನಿಮಗ್ಯಾಕೆ ಬೇಕು? ಇನ್ನೆರಡು ವರ್ಷ! ಎಂ.ಡಿ. ಮುಗಿಸಿ, ಸಿಟಿಯಲ್ಲಿ ದೊಡ್ಡ ಆಸ್ಪತ್ರೆಗೆ ಸೇರಿದರೆ ತಿಂಗಳಿಗೆ ಲಕ್ಷ ರೂಪಾಯಿಗೆ ಮೋಸವಿಲ್ಲ. ವಿದೇಶಕ್ಕೆ ಹಾರಿದರಂತೂ ಕೇಳಬೇಕಾಗೇ ಇಲ್ಲ. ಬಿಡಿ. ಮುಂದೆ ಬಾಳಿ ಬದುಕೋದು ನೋಡಿ. ನಿಮ್ಮಬ್ಬರಿಂದ ಏನೂ ಬದಲಾಗೊಲ್ಲ... ನೆಕ್ಸ್ಟ್ ಪೇಷಂಟ್ ಕಳಿಸ್ತೀನಿ...~ಬಾಗಿಲು ಮುಂದೆ ಮಾಡಿ ಹೊರ ನಡೆದರು ಸಿಸ್ಟರ್.

ಈ ಕೋಣೆ ಒಂದು ಓವನ್ನಿದ್ದ ಹಾಗೆ. ಮೂರು ದಿಕ್ಕುಗಳಿಗೂ ಗೋಡೆ. ಒಂದು ಕಡೆಯಷ್ಟೇ ಬಾಗಿಲು. ತೆರೆದರೆ ಬರೀ ರೋಗಿಗಳು. ಪಶ್ಚಿಮ ದಿಕ್ಕಿಗಿದ್ದ ಒಂಟಿ ಕಿಟಕಿ ಮುಚ್ಚಿತ್ತು. ಎದ್ದು ಹೋಗಿ ಚಿಲಕ ತೆಗೆದು ಕಿಟಕಿಯ ಬಾಗಿಲನ್ನು ದೂಡಿ ತೆರೆದೆ. ಕೆಟ್ಟ ವಾಸನೆ.

ತಿಪ್ಪೇಗುಂಡಿ. ಕಚ್ಚಾಡುತ್ತಿರುವ ನಾಯಿಗಳು, ಹಂದಿಗಳು... ಕೈ ಹೊರಚಾಚಿ ಕಿಟಕಿ ಹಾಕಿದೆ. ಉಸಿರುಕಟ್ಟುತ್ತಿದೆ ಎನ್ನಿಸಿತು. ನೆತ್ತಿಯ ಮೇಲೆ ಒಂದಾನೊಂದು ಕಾಲದಲ್ಲಿ ಬಿಳಿ ಬಣ್ಣದ್ದಾಗಿದ್ದ ಫ್ಯಾನು. ದೂಳು! ಸ್ವಿಚ್ ಅದುಮಿದೆ.

ತಿರುಗಲಿಲ್ಲ... ಕರೆಂಟಿಲ್ಲ. ಫ್ಯಾನು ತಿರುಗುವುದಿಲ್ಲ. ಇಲ್ಲೇ, ಈ ಕೋಣೆಯಲ್ಲೇ ಬೇಯಬೇಕು. ಬೇಗೆ ತಡೆಯಲಾರದೆ ಹೊರಬಂದರೆ ಹಿಟ್ಹಿಟ್ಟು! ಸರಿ ಮಾಡುತ್ತೇನೆ ಎಂದು ಇಲ್ಲೇ ಉಳಿದರೆ ಸುಟ್ಟು ಸೀಕಲು! ಜಾಣತನ ಬೇಕು. ಸರಿಯಾದ ಸಮಯಕ್ಕೆ ಹೊರಬರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT