ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸೋದರರ ಅಪೂರ್ವ ಸಾಧನೆ

Last Updated 24 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಇವರು ಅಪೂರ್ವ ಸಹೋದರರು. ಈ ನಾಲ್ಕು ಜನರೂ ಎಸ್ಸೆಸ್ಸೆಲ್ಸಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರು. ಹಲವು ಪರೀಕ್ಷೆಗಳಲ್ಲಿ ರ‌್ಯಾಂಕ್ ಪಡೆದವರು; ಚಿನ್ನದ ಪದಕ ಗಳಿಸಿದವರು. ಹಿರಿಯಣ್ಣ ಐಎನ್‌ಜಿ ವೈಶ್ಯ ಬ್ಯಾಂಕ್‌ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಈಗ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಎರಡನೆಯವರು ಇಸ್ರೋದಲ್ಲಿ ಹಿರಿಯ ವಿಜ್ಞಾನಿ. ನಂತರದವರು ಹಿರಿಯ ಪ್ರೊಫೆಸರ್. ಕೊನೆಯವರು ಸಾಫ್ಟ್‌ವೇರ್ ಎಂಜಿನಿಯರ್.
 

 ಎಂ. ಮುರಳೀಧರ್,       ಡಾ.ಎಂ.ರವೀಂದ್ರ,              ಎಂ. ಶ್ರೀಪಾದ್,                       ಎಂ.ಸತೀಶ್


ಇವರೆಲ್ಲ ತಮ್ಮ ವೃತ್ತಿಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದವರು; ಮಾಡುತ್ತಿರುವವರು. ತಮ್ಮ ಸಾಮರ್ಥ್ಯದಿಂದಾಗಿಯೇ ವೃತ್ತಿಯಲ್ಲಿ ಬಹುಬೇಗನೆ ಬಡ್ತಿ, ಸವಲತ್ತು ಪಡೆದವರು. ಎಲ್ಲದಕ್ಕೂ ಮಿಗಿಲಾಗಿ ಸಂಸ್ಕಾರವಂತರು; ಸಹೃದಯಿಗಳು. ಕನ್ನಡದಷ್ಟೇ ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡ ಬಲ್ಲರು; ಸಂಶೋಧನಾ ಲೇಖನಗಳನ್ನು ಬರೆಯಬಲ್ಲವರು.

ಇದಕ್ಕೆಲ್ಲಾ ಕಾರಣವಾಗಿದ್ದು, ಅವರೇ ಹೇಳುವಂತೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಮಾತೃಭಾಷೆಯಲ್ಲಿ ಪಡೆದ ಶಿಕ್ಷಣ.

ಊರು ಶಿವಮೊಗ್ಗ ನಗರವಾದರೂ ಇವರ ತಂದೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರಿಂದ ಇವರೆಲ್ಲರ ಪ್ರಾಥಮಿಕ ಶಿಕ್ಷಣ ದಾವಣಗೆರೆಯ ಹೊನ್ನಾಳಿ, ಹೊಸನಗರ ತಾಲ್ಲೂಕಿನ ಹುಂಚಗಳಲ್ಲಿ ನಡೆದಿದೆ. ಇದರಲ್ಲಿ ಕೆಲವರ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಶಿವಮೊಗ್ಗ ನಗರದ ಕೆ.ಆರ್. ಪುರಂ ಸರ್ಕಾರಿ ಶಾಲೆಯಲ್ಲಿ ಮುಗಿದಿದೆ.

ಹಿರಿಯಣ್ಣ ಎಂ. ಮುರಳೀಧರ್ ಮೈಸೂರು ವಿಶ್ವವಿದ್ಯಾಲಯದಲ್ಲಿ ಏಳನೇ ರ‌್ಯಾಂಕ್‌ನೊಂದಿಗೆ ಎಂ.ಎಡ್ ಪದವಿ ಪಡೆದವರು. ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಯಲ್ಲೂ ಪ್ರಾವೀಣ್ಯತೆ ಸಾಧಿಸಿದ್ದಾರೆ. ವಿದ್ಯಾರ್ಥಿದೆಸೆಯಲ್ಲಿ ಹಲವು ಸಂಶೋಧನಾ ಲೇಖನಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಸ್ತುತ ಪಡಿಸಿದ್ದಾರೆ.

ಇಸ್ರೋ ಹಿರಿಯ ವಿಜ್ಞಾನಿ ಡಾ.ಎಂ.ರವೀಂದ್ರ ಪಿಯುಸಿ ವಿಜ್ಞಾನದಲ್ಲಿ ಅತ್ಯುತ್ತಮ ಅಂಕಗಳನ್ನು ತೆಗೆದಿದ್ದರೂ ಮೂಲ ವಿಜ್ಞಾನದ ಬಗ್ಗೆ ತೀವ್ರ ಆಸಕ್ತಿ ಇದ್ದುದರಿಂದ ಓದಿದ್ದು ಬಿಎಸ್ಸಿ. ಬಿಎಸ್ಸಿಯನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪ್ರಥಮ ರ‌್ಯಾಂಕ್‌ನೊಂದಿಗೆ ಪಡೆದರು. ಜತೆಗೆ ಮೂರು ಚಿನ್ನದ ಪದಕಗಳನ್ನು ತಮ್ಮ ಮುಡಿಲಿಗೆ ಏರಿಸಿಕೊಂಡವರು. ಇವರ ಕೀರ್ತಿಯ ನೆನಪಿಗೆ ಶಿವಮೊಗ್ಗ ನಗರದ ಡಿವಿಎಸ್ ಕಾಲೇಜಿನಲ್ಲಿ ರವೀಂದ್ರ ಅವರ ಭಾವಚಿತ್ರ ಇಂದಿಗೂ ಕಂಗೊಳಿಸುತ್ತಿದೆ.

ನಂತರ ರವೀಂದ್ರ ಅವರು ಮೈಸೂರಿನಲ್ಲಿ ಎಂಎಸ್ಸಿ ಮುಗಿಸಿದರು. ಅಲ್ಲಿ ಪ್ರಥಮ ರ‌್ಯಾಂಕ್ ಜತೆಗೆ ಎರಡು ಚಿನ್ನದ ಪದಕ. ಮುಂದೆ ಬೆಂಗಳೂರಿನ ಭಾರತೀಯ ವಿಜ್ಞಾನ ಕೇಂದ್ರದಲ್ಲಿ ಎಂ.ಟೆಕ್‌ಅನ್ನು ಅತ್ಯುನ್ನತ ಶ್ರೇಣಿಯಲ್ಲಿ ಮಾಡಿದರು. 1981ರಲ್ಲಿ ಇಸ್ರೋದಲ್ಲಿ ಎಂಜಿನಿಯರ್ ಆಗಿ ಸೇರ್ಪಡೆಗೊಂಡರು. 1989ರಲ್ಲಿ ಕಾಮನ್‌ವೆಲ್ತ್ ಸ್ಕಾಲರ್‌ಶಿಪ್ ಪಡೆದು ಎಡಿನ್‌ಬರೋದಲ್ಲಿ ನಾಲ್ಕು ವರ್ಷದ ಅವಧಿಯ ಪಿ.ಎಚ್‌ಡಿಯನ್ನು ಮೂರೂವರೆ ವರ್ಷದಲ್ಲೇ ಮುಗಿಸಿ, ಹಿಂತಿರುಗಿದರು.

ಎಂ. ಶ್ರೀಪಾದ್ ಎಂ.ಕಾಂ. ಮುಗಿಸಿ ಉಡುಪಿಯ ಎಸ್‌ಎಂಎಸ್ ಕಾಲೇಜಿನಲ್ಲಿ ಹಿರಿಯ ಪ್ರೊಫೆಸರ್. ಉತ್ತಮ ಸಂವಹನ ಕಲೆ ಕರಗತ ಮಾಡಿಕೊಂಡಿರುವ ಶ್ರೀಪಾದ್ ವಿದ್ಯಾರ್ಥಿಗಳ ಮೆಚ್ಚಿನ ಪ್ರಾಧ್ಯಾಪಕರು.

ಕಾನ್ಪುರ ಐಐಟಿಗೆ ಪ್ರವೇಶ ಪಡೆದ ಎಂ.ಸತೀಶ್ ನಂತರ ಎಂಟೆಕ್ ಮಾಡಿ ಸದ್ಯ ಬೆಂಗಳೂರಿನಲ್ಲಿ ಪ್ರಸಿದ್ಧ ಕಂಪೆನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾರೆ.
ಇವರೆಲ್ಲರದ್ದು ಒಂದೇ ಮಾತು; ಮಾತೃಭಾಷೆಯಲ್ಲಿ ಶಿಕ್ಷಣ ಕಲಿತವರಿಗೆ ಗ್ರಹಿಕೆ ಜಾಸ್ತಿ. ಯಾವುದೇ ಒಂದು ವಿಷಯವನ್ನು ಹೇಳುತ್ತಿದ್ದಂತೆ ಅದನ್ನು ತಮ್ಮದೇ ರೀತಿಯಲ್ಲಿ ಚಿಂತನೆ ನಡೆಸಿ, ಪರಿಹಾರ ನೀಡಲು ಸಾಧ್ಯವಾಗುತ್ತದೆ. ಇದರಿಂದ ಜೀವನದಲ್ಲೂ ಸ್ವಂತಿಕೆ. ಸ್ವತಂತ್ರ ಆಲೋಚನೆಗಳು ಬೆಳೆಯುತ್ತಿವೆ.

ಪಿಯುಸಿಗೆ ಬಂದ ತಕ್ಷಣ ಒಂದೆರಡು ತಿಂಗಳು ಭಾಷೆ ಸಮಸ್ಯೆ ಎದುರಾಗುವುದು ಸಹಜ. ಆದರೆ, ಅದನ್ನು ಸಮಸ್ಯೆಯಾಗದಂತೆ ಪರಿಹರಿಸುವ ಶಕ್ತಿ, ಸಹನೆ ಶಿಕ್ಷಕರು, ಪೋಷಕರಲ್ಲಿ ಇರಬೇಕು. ಸ್ವತಃ ವಿದ್ಯಾರ್ಥಿಯಲ್ಲೇ ಈ ರೀತಿಯ ಮನಸ್ಸು ಬೇಕು. ಈ ಹಂತದಲ್ಲಿ ಈ ಮೂರೂ ಶಕ್ತಿಗಳು ಪರಸ್ಪರ ಪೂರಕವಾಗಿ ನೆರವಾಗಬೇಕು.

ಮುಖ್ಯವಾಗಿ ವಿದ್ಯಾರ್ಥಿಯಲ್ಲಿ ಓದುವ ಛಲ, ಮನಸ್ಸು ಇರಬೇಕು ಎನ್ನುತ್ತಾರೆ ಈ ಅಣ್ಣ-ತಮ್ಮಂದಿರು.

`ಪ್ರಾಥಮಿಕ ಶಿಕ್ಷಣ ಹಂತದಿಂದಲೇ ಇಂಗ್ಲಿಷ್ ಕಲಿತಿದ್ದರೆ ಉರುಹೊಡೆಯುವ ಅಭ್ಯಾಸ ಕರಗತವಾಗುತ್ತಿತ್ತು. ಮುಂದೆ ಜೀವನದಲ್ಲೂ ಎಲ್ಲವನ್ನು ಅನುಕರಣ ಮಾಡಲು ತೊಡಗುತ್ತಿದ್ದೆವು ಅಂತ ಕಾಣುತ್ತೆ. ಮಾತೃಭಾಷೆಯಲ್ಲಿ ಶಿಕ್ಷಣ ಪಡೆದಿದ್ದರಿಂದ ಎಲ್ಲವನ್ನೂ ಅರ್ಥಮಾಡಿಕೊಂಡು, ನಾವೇ ಸ್ವಂತ ನಿರ್ಧಾರ ಕೈಗೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಲು ಸಾಧ್ಯವಾಗಿದೆ~ ಎಂದು ಹೆಮ್ಮೆಯಿಂದ ಹೇಳುತ್ತಾರೆ ಎಂ. ಮುರಳೀಧರ್. 

`ನನಗೆ ಯಾವುದೇ ಹಂತದಲ್ಲಿ ಇಂಗ್ಲಿಷ್ ಭಾಷೆ ತೊಡಕು ಎನಿಸಲೇ ಇಲ್ಲ. ಜ್ಞಾನವನ್ನು ಪಡೆದುಕೊಳ್ಳಬೇಕೆಂಬ ಹಸಿವು ಇದ್ದದ್ದರಿಂದ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯ ಪುಸ್ತಕಗಳನ್ನು ಓದುತ್ತಿದ್ದೆ. ಓದುವಿಕೆ ಗ್ರಹಿಕೆಗಳನ್ನು ಗಟ್ಟಿಗೊಳಿಸುತ್ತದೆ. ವಿದೇಶಕ್ಕೆ ಹೋಗಿ ಸಂಶೋಧನೆ ನಡೆಸುವಾಗಲೂ ನನಗೆ ಇಂಗ್ಲಿಷ್ ತೊಂದರೆ ಎನಿಸಲಿಲ್ಲ~ ಎನ್ನುತ್ತಾರೆ ಇಸ್ರೋ ಹಿರಿಯ ವಿಜ್ಞಾನಿ ಡಾ.ಎಂ.ರವೀಂದ್ರ.

ಡಾ.ಎಂ.ರವೀಂದ್ರ ಅವರ ಇರುವಿಕೆಯಿಂದಾಗಿ ಇಸ್ರೋದಲ್ಲಿ ಕನ್ನಡದ ಕಂಪು ಪಸರಿಸಿದೆ. ಕನ್ನಡ ರಾಜ್ಯೋತ್ಸವ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇವರು ಅಲ್ಲಿ ಸಂಘಟಿಸುತ್ತಾ ಬಂದಿದ್ದಾರೆ. ಅಲ್ಲದೆ, ಕನ್ನಡದಲ್ಲಿ ತಾಂತ್ರಿಕ ಕಮ್ಮಟಗಳನ್ನು ನಡೆಸಿ, ಕನ್ನಡದ ವಿಜ್ಞಾನ ಲೇಖಕರನ್ನು ಕರೆಸಿ ಉಪನ್ಯಾಸ, ಸಂವಾದಗಳನ್ನು ಏರ್ಪಡಿಸಿದ್ದಾರೆ.

ಈ ನಾಲ್ಕೂ ಜನ ಅಣ್ಣ-ತಮ್ಮಂದಿರ ಮಧ್ಯೆ ಇಂದಿಗೂ ಪರಸ್ಪರ ಪ್ರೀತಿ-ವಿಶ್ವಾಸಗಳ ಒಡನಾಟವಿದೆ. ಅಂಗೈ ಅಗಲ ಆಸ್ತಿಗಾಗಿ ಕಿತ್ತಾಡುವ ಅಣ್ಣ-ತಮ್ಮಂದಿರೇ ನಮ್ಮೆದುರಿರುವಾಗ `ವಿದ್ಯೆ ನಮಗೆ ಸಾಕಷ್ಟು ನೀಡಿದೆ; ಆಸ್ತಿ ಯಾರಿಗೂ ಬೇಡ~ ಎಂದು ಕೋಟ್ಯಂತರ ರೂಪಾಯಿ ಮೌಲ್ಯದ ತೋಟ, ಭೂಮಿಯನ್ನು ಧಾರ್ಮಿಕ ಸಂಸ್ಥೆಯೊಂದಕ್ಕೆ ದಾನ ಮಾಡಿದ ಕುಟುಂಬವಿದು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT