ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಕ್ಕಿದೆ ಶಕ್ತಿ, ಸಾಹಿತ್ಯಕ್ಕಿದೆ ಮಹಾ ಯುಕ್ತಿ

Last Updated 20 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಇಂದು `ವಿಶ್ವ ಮಾತೃಭಾಷಾ ದಿನ~. ಯುನೆಸ್ಕೋ ಘೋಷಿಸಿದ ಈ ದಿನವನ್ನು ಕನ್ನಡಿಗರು ನೆನಪಿನಿಂದ ಮತ್ತು ಎಚ್ಚರಿಕೆಯಿಂದ ಆಚರಿಸಬೇಕಾಗಿದೆ. `ಪ್ರಜಾವಾಣಿ~ಯ `ಅಂತರಾಳ~(ಫೆ.18) `ವಿಶ್ವ ತಾಯಿನುಡಿ ದಿನ~ಕ್ಕೆ ಮೂರು ದಿನ ಮೊದಲು ಬಂದುದು ಕನ್ನಡದ ಪುನರೋದಯಕ್ಕೆ ಒಂದು ಶುಭಶಕುನ.

ಕುವೆಂಪು ಅವರ ಸೊಸೆ ರಾಜೇಶ್ವರಿ ತೇಜಸ್ವಿಯವರು ತಮ್ಮ ಇಬ್ಬರು ಹೆಣ್ಣು ಮಕ್ಕಳ ಕನ್ನಡ ಕಲಿಕೆಯ ಕತೆಯನ್ನು ಹೇಳುವ ಮೂಲಕ, ಶಾಲೆಯಲ್ಲಿ ಏಳನೇ ತರಗತಿ ತನಕ, ಒಂದು ಭಾಷೆಯಾಗಿ ಮತ್ತು ಮಾಧ್ಯಮವಾಗಿ ಕನ್ನಡ ಓದು-ಬರೆಹ ಮಾಡುವುದರ ಸಹಜ ಅನಿವಾರ್ಯತೆಯನ್ನೂ ಪ್ರಭಾವದ ಉದಾಹರಣೆಯನ್ನೂ ಮನಂಬುಗುವಂತೆ ನೀಡಿದ್ದಾರೆ.

ನಾಡಿನ ಬೇರೆ ಬೇರೆ ಕಡೆಯಲ್ಲಿ ನೆಲೆಸಿರುವ, ಐ.ಟಿ ಬಿ.ಟಿ ಉದ್ಯೋಗದಲ್ಲಿರುವ ಏಳು ಜನ ಯುವಕರು ಕನ್ನಡತನವನ್ನು ಉಳಿಸಿ-ಬೆಳೆಸಿಕೊಂಡೂ ಇಂಗ್ಲಿಷನ್ನು ಕಲಿತು-ಬಳಸುವ ಶಕ್ತಿ ತಮಗೆ ಹೇಗೆ ಬಂತೆಂಬುದನ್ನು ಸೊಗಸಾಗಿ ವಿವರಿಸಿದ್ದಾರೆ. `ಇಂಗ್ಲಿಷ್~ಗಾಗಿ ಕನ್ನಡವನ್ನು ಕಡೆಗಣಿಸಬೇಕಾಗಿಲ್ಲ ಅಥವಾ ಇಂಗ್ಲಿಷ್ ಮಾಧ್ಯಮವನ್ನೇ ನೆಚ್ಚಿ ಮೆಚ್ಚಿ ಉದ್ಯೋಗಾರ್ಥಿಯಾಗಬೇಕಾಗಿಲ್ಲ ಎಂಬ ವಾಸ್ತವಾಂಶವನ್ನು ಇವರೆಲ್ಲ ಒಕ್ಕೊರಲಿನಿಂದ ಸಾರಿದ್ದಾರೆ.  

ನಮ್ಮದು ಕ್ಲಾಸಿಕಲ್ ಕನ್ನಡ ಎಂಬ ಹೆಮ್ಮೆಯು ಮುಂದಿನ ದಿನಗಳಲ್ಲಿ ಹಸಿರಾಗಿ, ಫಲಪ್ರದವಾಗಿ ಉಳಿಯಬೇಕೆಂದರೆ, ಆಧುನಿಕ ಮನೋಧರ್ಮದ ಸಲ್ಲಕ್ಷಣವುಳ್ಳ ಕನ್ನಡವನ್ನು ಮೊದಲನೆಯ ತರಗತಿಯಿಂದಲೇ ಓದುವ, ಬರೆಯುವ, ಅಭಿವ್ಯಕ್ತಿಗಾಗಿ ಬಳಸಿಕೊಳ್ಳುವ ಸೊಗಸಾದ ಶ್ರಮವನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳಬೇಕು. ಕನ್ನಡ ನಮ್ಮ ದೇಹಶಕ್ತಿಯನ್ನು ಪೊರೆಯುವ ಮೂಲ ಆಹಾರ.  ಇಂಗ್ಲಿಷ್ ಒಂದು ಸಾಂದರ್ಭಿಕ ತ್ರಾಣಕ ಮಾತ್ರ.  ಕನ್ನಡದ ಶಕ್ತಿಯನ್ನು ಮಕ್ಕಳು ಬಳಸಿಕೊಂಡರೆ ಅಕ್ಷರ ರೂಪದ ಸಾಹಿತ್ಯ ಅರ್ಥಪೂರ್ಣವಾದ ಜೀವನ ಯುಕ್ತಿಯನ್ನು ನಮಗೆ ಕೊಡುತ್ತದೆ. 
- ಸರ್ವಜಿತ್, ನವನಗರ, ಹುಬ್ಬಳ್ಳಿ
***
ಮೊದಲು ನಮ್ಮ ಮಾತೃಭಾಷೆ ಚೆನ್ನಾಗಿ ತಿಳಿದರೆ ಉಳಿದೆಲ್ಲ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಸಿದ್ಧಿಸುತ್ತದೆ. ರಾಜೇಶ್ವರಿ ಅವರ ಲೇಖನ ತುಂಬಾ ಚೆನ್ನಾಗಿದೆ. `ಕನ್ನಡ ಮಕ್ಕಳ ಹೆಮ್ಮೆಯ ಕ್ಷಣಗಳು~ ಪ್ರತಿಯೊಬ್ಬ ಪೋಷಕರಿಗೂ ದಾರಿದೀಪವಾಗಲಿ. ಹಾಗೆಯೇ ಕನ್ನಡ ಮಾಧ್ಯಮದಲ್ಲಿ ಓದಿ ಸಾಧನೆ ಮಾಡಿರುವ ಇನ್ನಿತರ ಮಕ್ಕಳ ಯಶೋಗಾಥೆಯೂ ಎಲ್ಲರಿಗೂ ಮಾರ್ಗದರ್ಶನ ನೀಡುತ್ತದೆ.

ಹಣಕ್ಕಾಗಿ ಶಿಕ್ಷಣವಲ್ಲ, ಸರ್ಕಾರ ಕೂಡ ನಮ್ಮ ಭಾಷೆ ವಿಚಾರದಲ್ಲಿ ಅಬದ್ಧವಾಗಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ವ್ಯಾಪಾರೀಕರಣ ಆಗುತ್ತಿರುವುದು ದೊಡ್ಡ ದುರಂತ. ಇಂತಹ ಕಾಲಘಟ್ಟದಲ್ಲಿ  `ಪ್ರಜಾವಾಣಿ~ ಸದುದ್ದೇಶದಿಂದ ಕನ್ನಡದ ಮಕ್ಕಳ ಸಾಧನೆಯನ್ನು ಗುರುತಿಸಿ ನಾಡಿನ ಜನರ ಮುಂದಿಟ್ಟಿರುವುದು ಶ್ಲಾಘನೀಯ.
-ಮೀರಾ ನಾಯಕ್, ಕನ್ನಡ ಕ್ರಿಯಾ ಸಮಿತಿ ಸದಸ್ಯರು, ಮೈಸೂರು
***
`ಕನ್ನಡ ಮಕ್ಕಳ ಹೆಮ್ಮೆಯ ಕ್ಷಣಗಳು~ ತುಂಬಾ ಸೊಗಸಾಗಿದೆ (ಪ್ರವಾ. ಫೆ.18). ಕನ್ನಡ ಮಾಧ್ಯಮದಲ್ಲಿ ಓದಿ, ವಿಷಯಗಳನ್ನು ಚೆನ್ನಾಗಿ ಅರಿತುಕೊಂಡು, ಬೆಳೆದು ದೊಡ್ಡವರಾದ ಮೇಲೆ ದೊಡ್ಡ ದೊಡ್ಡ ಹುದ್ದೆಗಳನ್ನು ನಿಭಾಯಿಸಿದ ಸುಸ್ಮಿತಾ ಅವರ ಬಗ್ಗೆ ತಿಳಿದು ನಲಿವಾಯಿತು. ಕನ್ನಡ ಮಾಧ್ಯಮದಲ್ಲಿಯೇ ಓದಿ, ಸಾಫ್ಟ್‌ವೇರ್ ಇಂಜಿನಿಯರ್ ಕೆಲಸ ನಿಭಾಯಿಸುತ್ತಿರುವ ನಾನು, ರಾಜೇಶ್ವರಿ ತೇಜಸ್ವಿ ಅವರು ಹೇಳಿದ ಪ್ರತಿಯೊಂದು ಮಾತನ್ನೂ ಒಪ್ಪುತ್ತೇನೆ.

`ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯದಿದ್ದರೆ, ಮಕ್ಕಳು ತಮ್ಮ ಬದುಕಿನಲ್ಲಿ ಮುಂದೆ ಬರುವುದೇ ಇಲ್ಲ~ ಎಂಬ ಹೆದರಿಕೆಯಿಂದ, ಎಷ್ಟೋ ತಂದೆ ತಾಯಂದಿರು ಹೆಚ್ಚು ಹಣ ತೆತ್ತು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಅಂತಹ ತಂದೆ ತಾಯಂದಿರಿಗೆ ಧೈರ್ಯ ತುಂಬುವ ಲೇಖನ ರಾಜೇಶ್ವರಿ ತೇಜಸ್ವಿ ಅವರದಾಗಿತ್ತು. ಶಾಲೆಗಳಿಗೆ ಪ್ರವೇಶ ಶುರುವಾಗಿರುವ ಈ ಸಮಯದಲ್ಲಿ  `ಮೊದಲ ಹಂತದ ಕಲಿಕೆ ತಾಯ್ನುಡಿಯಲ್ಲೇ ನಡೆದರೆ ಮಕ್ಕಳ ಬುದ್ಧಿಶಕ್ತಿಗೆ ಪೂರಕ~ ಎಂದು ಸಾರುವ ಲೇಖನಗುಚ್ಛ ಪ್ರಕಟಿಸಿ ಪ್ರಜಾವಾಣಿಯು ತುಂಬ ಒಳ್ಳೆಯ ಕೆಲಸ ಮಾಡಿದೆ.

ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳು, ಹೆಚ್ಚು ಹೆಚ್ಚು ಸಾಧಿಸಬಲ್ಲರು ಎಂಬುದಕ್ಕೆ ನಿದರ್ಶನ ಸಾಮಾಜಿಕ ಸಂಪರ್ಕ ತಾಣ `ಫೇಸ್ ಬುಕ್~ ನಲ್ಲಿರುವ `ಕನ್ನಡ ಮಾಧ್ಯಮ ವಿದ್ಯಾರ್ಥಿಗಳು~ ಗುಂಪು ಒಂದು ನಿದರ್ಶನ. ಬೆಂಗಳೂರು ಮತ್ತು ಹೊರದೇಶಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 650 ಮಂದಿ ಈ ಗುಂಪಿನ ಸದಸ್ಯರಾಗಿದ್ದಾರೆ. ಇವರೆಲ್ಲರೂ ಕನ್ನಡ ಮಾಧ್ಯಮದಲ್ಲೇ ಓದಿ ಬೆಳೆದವರು.
- ಪ್ರಿಯಾಂಕ್ ಕತ್ತಲಗಿರಿ, ಬೆಂಗಳೂರು
***
ಇಡೀ ಲೇಖನ ಮಾಲೆ ಹೆತ್ತವರು, ಪೋಷಕರ ಮನೋಧರ್ಮ ಬದಲಿಸಬೇಕು. ಲೇಖನ ಸಕಾರಾತ್ಮಕವಾಗಿ ಚಿಂತಿಸಲು ಪ್ರತಿಯೊಬ್ಬ ಪೋಷಕರಿಗೆ ಪ್ರೇರಣೆ ನೀಡಿದೆ. ಇಂದು ಎಲ್ಲ ರಂಗದಲ್ಲಿ ಮಾದರಿ ಕೊರತೆ ಇದೆ. ತೆರೆಮರೆಯಲ್ಲಿ ಉಳಿದಿರುವಂತಹವರನ್ನು ಮುನ್ನೆಲೆಗೆ ತರುವುದು, ಮುನ್ನೆಲೆಯಲ್ಲಿ ನಿಂತು ಯೋಚಿಸುವಂತೆ ಇಡೀ ಲೇಖನ ಮಾಡಿದೆ.

ಇದು ಅಗತ್ಯವಾಗಿ ಆಗಬೇಕಿದ್ದ ದೊಡ್ಡ ಕೆಲಸ. ರಾಜೇಶ್ವರಿ ಅವರ ಲೇಖನದ ಜತೆಗೆ ಬೇರೆ ಬೇರೆ ರಂಗದಲ್ಲಿರುವವರು ದಾಖಲಿಸಿರುವ ತಮ್ಮ  ಅನುಭವ, ಚಿಂತನೆಗಳು ಪರಿಣಾಮಕಾರಿಯಾಗಿವೆ. ಸದಾಶಯವಿಟ್ಟುಕೊಂಡು ಪತ್ರಿಕೆ ಉತ್ತಮ ಕೆಲಸ ಮಾಡಿದೆ. ಇಂಗ್ಲಿಷ್ ಮಾಧ್ಯಮದ ವ್ಯಾಮೋಹಕ್ಕೆ ಸಿಲುಕಿರುವವರನ್ನು ಕನ್ನಡ ಮಾಧ್ಯಮದತ್ತ ಸೆಳೆಯಲು ಲೇಖನ ಸ್ಫೂರ್ತಿಯ ಸೆಲೆಯಾಗಿದೆ.
- ಡಾ. ಸಬಿಹಾ ಭೂಮಿಗೌಡ, ಕನ್ನಡ ಪ್ರಾಧ್ಯಾಪಕರು. ಮಂಗಳೂರು ವಿವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT