ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡನಾಡಿನ `ಫುಟ್‌ಬಾಲ್ ಅಜ್ಜ' ಷಣ್ಮುಗಂ ಇನ್ನಿಲ್ಲ

Last Updated 14 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವಕಪ್ ಫುಟ್‌ಬಾಲ್ ಪ್ರಧಾನ ಹಂತಕ್ಕೆ ಅರ್ಹತೆ ಗಳಿಸಿದ್ದ ಭಾರತ ತಂಡದ ಆಟಗಾರ, ಒಲಿಂಪಿಕ್ಸ್‌ನಲ್ಲಿ ಬರಿಗಾಲಿನಲ್ಲಿಯೇ ಆಡಿದ ಭಾರತ ತಂಡದ ಸದಸ್ಯ, ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯ ತಂಡದ ನಾಯಕತ್ವ ವಹಿಸಿದ್ದಾಗ ಟ್ರೋಫಿ ಎತ್ತಿಕೊಂಡಿದ್ದಲ್ಲದೆ, ತರಬೇತುದಾರನಾಗಿದ್ದಾಗಲೂ ಟ್ರೋಫಿ ಎತ್ತಿಕೊಂಡ ಹೆಗ್ಗಳಿಕೆ...

ರಾಜ್ಯ ಫುಟ್‌ಬಾಲ್‌ಗೆ ಸಂಬಂಧಿಸಿದಂತೆ ಹೀಗೆ ನಮ್ಮ ಕಲ್ಪನೆಗೂ ನಿಲುಕದಷ್ಟು ಹತ್ತು ಹಲವು ಅಚ್ಚರಿ ಸಾಧನೆಗಳ ಷಣ್ಮುಗಂ ಅವರು ಭಾರತ ಕಂಡ ಅನನ್ಯ ಫುಟ್‌ಬಾಲ್ ಆಟಗಾರ.

ದೆಹಲಿಯಲ್ಲಿ ಸರಿಯಾಗಿ 60ವರ್ಷಗಳ ಹಿಂದೆ ನಡೆದಿದ್ದ ಮೊದಲ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಫುಟ್‌ಬಾಲ್ ತಂಡ ಇಂಡೋನೇಷ್ಯಾ, ಆಫ್ಘಾನಿಸ್ತಾನ, ಇರಾನ್ ವಿರುದ್ಧದ ಪಂದ್ಯಗಳಲ್ಲಿ ಗೆದ್ದು ಚಿನ್ನದ ಪದಕ ಗೆದ್ದಿತ್ತು.

ಅಂದು ಭಾರತದ ಮಿಡ್‌ಫೀಲ್ಡ್‌ನಲ್ಲಿ ಬೆಂಗಳೂರಿನ ಷಣ್ಮಗಂ ಗಮನಾರ್ಹ ಸಾಮರ್ಥ್ಯ ತೋರಿದ್ದರು. ಅದರ ಮರುವರ್ಷವೇ ಹೆಲ್ಸಿಂಕಿಯಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ  ಭಾರತದ ಆಟಗಾರರು ಆ ಕೊರೆಯುವ ಚಳಿಯಲ್ಲಿಯೂ ಬರಿಗಾಲಲ್ಲಿಯೇ ಆಡಿದ್ದು ವಿಶ್ವದ ಗಮನ ಸೆಳೆದಿದ್ದರು. ಅಂದು ಆ ತಂಡದ ಮುಂಚೂಣಿಯಲ್ಲಿ ಪಾದರಸದಂತೆ ಆಡಿದ್ದವರು ಷಣ್ಮುಗಂ.

ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ 1950ರಲ್ಲಿ ನಡೆದಿದ್ದ  ವಿಶ್ವಕಪ್ ಫುಟ್‌ಬಾಲ್ ಕೂಟದ ಪ್ರಧಾನ ಹಂತಕ್ಕೆ ಭಾರತ ತಂಡ ಅರ್ಹತೆ ಪಡೆದಿತ್ತು. ಅದಕ್ಕೆ ಪೂರ್ವ ತಯಾರಿಗಾಗಿ ಷಿಲ್ಲಾಂಗ್‌ನಲ್ಲಿ ವರ್ಷಕ್ಕೆ ಮೊದಲೇ ಕಠಿಣ ತರಬೇತಿ ಶಿಬಿರ ನಡೆದಿತ್ತು.

1949ರ ಕೊನೆಯಲ್ಲಿ ಅಂದಿನ ಬಲಿಷ್ಠ ಭಾರತ ತಂಡ `ವಿಶ್ವಕಪ್ ಸಿದ್ಧತೆ'ಗೆಂದೇ ಆಫ್ಘಾನಿಸ್ತಾನಕ್ಕೆ ಪ್ರವಾಸ ತೆರಳಿ ಆ ದೇಶದ ವಿರುದ್ಧ ಆಡಿದ್ದ ಆರೂ ಪಂದ್ಯಗಳಲ್ಲಿ ಗೆದ್ದಿತ್ತು. ಆಗಿನ ಸಿಲೋನ್ ದೇಶಕ್ಕೂ ಪ್ರವಾಸ ತೆರಳಿ ಆ ದೇಶದ ತಂಡದ ವಿರುದ್ಧ ಆಡಿದ ಎಲ್ಲ ಆರೂ ಪಂದ್ಯಗಳಲ್ಲಿ ಜಯ ಗಳಿಸಿತ್ತು.

1950ರ ಆರಂಭದಲ್ಲಿ ಬರ್ಮಾ, ಹಾಂಕಾಂಗ್‌ಗಳಿಗೆ ತೆರಳಿದ್ದ ಈ ತಂಡ ಅಲ್ಲಿಯೂ ತನ್ನ ಅಪ್ರತಿಮ ಆಟದಿಂದ ಜನಮೆಚ್ಚುಗೆ ಗಳಿಸಿತ್ತು. ರಿಯೋದಲ್ಲಿ ಭಾರತ 10ನೇ ಗುಂಪಿನಲ್ಲಿ  ಆಡಬೇಕಿತ್ತು. ಏಪ್ರಿಲ್ ವೇಳೆಗೆ ಭಾರತ ತಂಡ ಹೊರಟು ನಿಂತಿತ್ತು. ಆಗ `ಫಿಫಾ'ದಿಂದ ಬಂದ ಸಂದೇಶದಲ್ಲಿ `ಬರಿಗಾಲ ಆಟಗಾರರಿಗೆ ಅವಕಾಶವಿಲ್ಲ' ಎಂದು ತಿಳಿಸಲಾಗಿತ್ತು. ಆಗ ಆ ತಂಡದಲ್ಲಿದ್ದ ಷಣ್ಮುಗಂ ತೀವ್ರ ನಿರಾಸೆಯಿಂದ ಬೆಂಗಳೂರಿಗೆ ವಾಪಸಾದರು.

`ಫುಟ್‌ಬಾಲ್ ಅಜ್ಜ'ನ ಜತೆ ಮಾತಿಗಿಳಿದಾಗ ಲೆಲ್ಲಾ ಷಿಲ್ಲಾಂಗ್ ತರಬೇತಿ ಶಿಬಿರದ ನೆನಪುಗಳನ್ನು ಬಿಚ್ಚಿಕೊಳ್ಳುತ್ತಲೇ ಇದ್ದರು.
ಎಳವೆಯಲ್ಲಿ ಆಸ್ಟಿನ್ ಟೌನ್ ಪ್ರಾಥಮಿಕ ಶಾಲೆಯಲ್ಲಿ ಓದುವಾಗಲೇ ಫುಟ್‌ಬಾಲ್ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಇವರು ನಂತರ ಆರ್‌ಬಿಎಎನ್‌ಎಂಎಸ್ ಹೈಸ್ಕೂಲು ತಂಡದಲ್ಲಿ ಸ್ಥಾನ ಪಡೆದಿದ್ದರು.

ಶಿಕ್ಷಣ ಮುಗಿಯುತ್ತಿದ್ದಂತೆಯೇ `ಬೆಂಗಳೂರು ಸ್ಟೂಡೆಂಟ್ಸ್' ಮತ್ತು `ಮಹಾರಾಜ ಸೋಷಿಯಲ್ಸ್' ಕ್ಲಬ್‌ಗಳ ಪರ ಆಡಿದ್ದರು. ಆಟದ ಚಮತ್ಕಾರದಿಂದಾಗಿಯೇ ಇವರಿಗೆ ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಕೆಲಸವೂ ಸಿಕ್ಕಿತ್ತು. ನಂತರ ತಾವು ಎಷ್ಟೇ ಎತ್ತರಕ್ಕೇರಿದರೂ ಸತತ 25 ವರ್ಷಗಳ ಕಾಲ ಇವರು ರಾಜ್ಯ ಪೊಲೀಸ್ ತಂಡದ ಪರ ಆಡಿದ್ದರು.

ಮಿಡ್‌ಫೀಲ್ಡ್‌ನಲ್ಲಿ ಚೆಂಡಿನ ಮೇಲೆ ಇವರು ಹೊಂದುತ್ತಿದ್ದ ನಿಯಂತ್ರಣ, ಎದುರಾಳಿಗಳನ್ನು ತಮ್ಮ ತಂಡದ ಆವರಣದೊಳಗೆ ಪ್ರವೇಶಿಸದಂತೆ ತಡೆಯುತ್ತಿದ್ದ ರೀತಿ ಅಂದಿನ ಫುಟ್‌ಬಾಲ್ ವಲಯದಲ್ಲಿ ಗಮನ ಸೆಳೆದಿತ್ತು. 1944ರಲ್ಲಾಗಲೇ ಇವರು ರಾಜ್ಯ ತಂಡದಲ್ಲಿ ಸ್ಥಾನ ಗಳಿಸಿದ್ದರು.  ಸ್ವಾತಂತ್ರ್ಯ ಬರುವುದಕ್ಕೆ ಒಂದು ವರ್ಷಕ್ಕೆ ಮೊದಲು ಇವರ ನಾಯಕತ್ವದ ಆಗಿನ ಮೈಸೂರು ರಾಜ್ಯ ತಂಡ ಮೊದಲ ಬಾರಿಗೆ ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ `ಸಂತೋಷ್ ಟ್ರೋಫಿ' ಗೆದ್ದು ಕೊಂಡಿತ್ತು.

ನಂತರ 1952ರಲ್ಲಿಯೂ `ಸಂತೋಷ್ ಟ್ರೋಫಿ' ಕನ್ನಡನಾಡಿಗೆ ಬಂದಿತ್ತು. ದಶಕದ ಕಾಲ ಇವರು ರಾಜ್ಯ ತಂಡದ ನೇತೃತ್ವ ವಹಿಸಿದ್ದರು. ಅದೇ ಸಂದರ್ಭದಲ್ಲಿ ಭಾರತ ತಂಡದಲ್ಲಿಯೂ ಸ್ಥಾನ ಗಿಟ್ಟಿಸಿದ್ದು, ಡೆನ್ಮಾರ್ಕ್, ಸ್ವಿಟ್ಜರ್‌ಲೆಂಡ್, ಸ್ವೀಡನ್, ಆಸ್ಟ್ರೀಯ, ಜರ್ಮನಿಯ ನೆಲಗಳಲ್ಲಿ ಆಡಿದ್ದರು.

1960ರಲ್ಲಿ ಇವರು ಪಟಿಯಾಲದ ಎನ್‌ಐಎಸ್‌ನಲ್ಲಿ ತರಬೇತಿಗೆ ಸಂಬಂಧಿಸಿದಂತೆ ಡಿಪ್ಲೊಮಾ ಪಡೆದರು. 1964ರಲ್ಲಿ ಟೋಕಿಯೊದಲ್ಲಿ ನಡೆದಿದ್ದ `ಫಿಫಾ' ವತಿಯ ತರಬೇತಿ ಶಿಬಿರದಲ್ಲಿ ಪಾಲ್ಗೊಂಡರು. ಆ ವರ್ಷದಿಂದ 1978ರವರೆಗೆ ಅಂದರೆ 14 ವರ್ಷಗಳ ಕಾಲ ಕರ್ನಾಟಕ ತಂಡದ `ಕೋಚ್‌ಗಳ ಬಳಗ'ದಲ್ಲಿದ್ದರು. ಭಾಷಾ ಮತ್ತು ಇವರ ಮಾರ್ಗದರ್ಶನದಲ್ಲಿ ರೂಪುಗೊಂಡ ಕರ್ನಾಟಕ ತಂಡ 1967 ಮತ್ತು 68ರಲ್ಲಿ ಎರಡು ಸಲ ರಾಷ್ಟ್ರೀಯ ಚಾಂಪಿಯನ್‌ಷಿಪ್ ಗೆದ್ದಿತ್ತು. ಆಗ ಕರ್ನಾಟಕ ತಂಡದ ನಾಯಕರಾಗಿದ್ದ ಕೃಷ್ಣಾಜಿರಾವ್ ಜತೆ ಮಾತಿಗಿಳಿದಾಗ “ಷಣ್ಮುಗಂ ನೈತಿಕ ಮೌಲ್ಯಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದರು.

ಅತ್ಯಂತ ಶಿಸ್ತಿನ ಮನುಷ್ಯ. ನಮ್ಮಿಂದಲೂ ಅದನ್ನೇ ನಿರೀಕ್ಷಿಸುತ್ತಿದ್ದರು” ಎಂದರು. ಕರ್ನಾಟಕ ಸಂತೋಷ್ ಟ್ರೋಫಿಯನ್ನು ಗೆದ್ದಿದ್ದು ಅದೇ ಕೊನೆ. ಇವತ್ತಿನವರೆಗೂ ಅದನ್ನು ಮತ್ತೆ ಪಡೆಯಲು ಸಾಧ್ಯವಾಗಿಲ್ಲ. ಷಣ್ಮುಗಂ 1977ರಲ್ಲಿ ಇರಾನ್‌ನಲ್ಲಿ ನಡೆದಿದ್ದ ಏಷ್ಯಾ ಯುವ ಫುಟ್‌ಬಾಲ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಭಾರತ ತಂಡಕ್ಕೂ ತರಬೇತು ನೀಡಿದ್ದರು. ಇವರು ಹಲವು ಸಲ ಭಾರತ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಬೆಂಗಳೂರಿನ ಆಟಗಾರರಿಗೆ ಶತಮಾನದ ಹಿಂದಿನಿಂದಲೂ ಕೋಲ್ಕತ್ತದ ಬಗ್ಗೆ ವಿಶೇಷ ಆಕರ್ಷಣೆ. ಈ ನಗರದ ನೂರಾರು ಫುಟ್‌ಬಾಲ್ ಆಟಗಾರರು ಬಂಗಾಳಕ್ಕೆ ತೆರಳಿ ಎತ್ತರದಿಂದ ಎತ್ತರಕ್ಕೇರಿದ್ದಾರೆ. ಆದರೆ ಬಂಗಾಳದ ಶ್ರೀಮಂತ ಕ್ಲಬ್‌ಗಳಿಗೆ ಷಣ್ಮುಗಂ ಅವರನ್ನು ಮಾತ್ರ ಸೆಳೆಯಲಾಗಲಿಲ್ಲ. ಷಣ್ಮುಗಂ ಚಿತ್ತ ಹರಿದದ್ದು ಗೋವಾದತ್ತ ! ಈ `ಕೋಚ್ ಅಜ್ಜ' ಇವತ್ತು ಕರ್ನಾಟಕಕ್ಕಿಂತ ಗೋವಾದಲ್ಲಿಯೇ ಹೆಚ್ಚು  ಜನಪ್ರಿಯ!! 

ಇವರು 1979ರಿಂದ ಗೋವಾದ ಸಲಗಾಂವ್ಕರ್ ಕ್ಲಬ್‌ಗೆ ತರಬೇತುದಾರರಾಗಿದ್ದು, ಆ ತಂಡ ಗೋವಾ ಲೀಗ್ ಅಲ್ಲದೆ, ರೋವರ್ಸ್ ಕಪ್, ಬಂದೋಡ್ಕರ್ ಕಪ್, ಫೆಡರೇಷನ್ ಕಪ್‌ಗಳನ್ನು ಗೆಲ್ಲುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು.  ಗೋವಾ ರಾಜ್ಯ ತಂಡ ರಾಷ್ಟ್ರೀಯ ಚಾಂಪಿಯನ್‌ಷಿಪ್ ಗೆಲ್ಲುವಲ್ಲಿ ಇವರದೇ ಮಾರ್ಗದರ್ಶನ. ಹೀಗಾಗಿ ಅಲ್ಲಿನ ಸರ್ಕಾರ ಇವರಿಗೆ ಆ ರಾಜ್ಯದ ಅತ್ಯುನ್ನತ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು.

ಫುಟ್‌ಬಾಲ್‌ನಲ್ಲಿ ಎತ್ತರದ ಸಾಧನೆ ಮಾಡಿದ್ದ ಇವರು ತಮ್ಮನ್ನು ಕರ್ನಾಟಕ ಪೊಲೀಸ್ ಇಲಾಖೆಯೊಂದಿಗೇ ಹೆಚ್ಚು ಗುರುತಿಸಿಕೊಳ್ಳಲು ಹೆಮ್ಮೆ ಪಡುತ್ತಿದ್ದರು. ಅವರೊಡನೆ ಹಿಂದೆ `ಪ್ರಜಾವಾಣಿ'ಗಾಗಿ ಮಾತಿಗಿಳಿದಿದ್ದಾಗ ತಾವು ಬ್ರಿಟಿಷ್ ಅಧಿಕಾರಿಗಳ ಅಡಿಯಲ್ಲಿ ಕೆಲಸ ಮಾಡಿದ್ದಾಗಿನ ಬಹಳಷ್ಟು ನೆನಪುಗಳನ್ನು ಹಂಚಿಕೊಂಡಿದ್ದರು. ತಮ್ಮ ವೃತ್ತಿ ಬದುಕಿನಲ್ಲಿ ಪ್ರಾಮಾಣಿಕವಾಗಿಯೇ ಉಳಿದ ಬಗ್ಗೆ ಹೆಮ್ಮೆಯಿಂದ ಹೇಳುತ್ತಿದ್ದರು. ತಾವು ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದಾಗ ರಸ್ತೆ ನಿಯಮವನ್ನು ಉಲ್ಲಂಘಿಸಿದ್ದ ಸಚಿವರೊಬ್ಬರನ್ನು ಅಡ್ಡಗಟ್ಟಿದಾಗ, ಆ ಸಚಿವರು ಕಾರಿನಿಂದಿಳಿದು ತಮ್ಮನ್ನು ಶ್ಲಾಘಿಸಿದ್ದ ಘಟನೆಯನ್ನು ನೆನಪಿಸಿಕೊಳ್ಳುತ್ತಿದ್ದರು.

ಈಚೆಗಿನ ದಿನಗಳಲ್ಲಿ ಆಟಗಾರರಿಗೆ ಹೆಚ್ಚು ಹಣ ಸಿಗುತ್ತಿರುವುದರ ಬಗ್ಗೆ ಬಹಳ ಸಂತಸ ಪಡುತ್ತಿದ್ದ ಅವರು, “ಆದರೆ ಹಿಂದಿದ್ದ  ಶಿಸ್ತಿನ ವಾತಾವರಣ ಮತ್ತು ಅರ್ಪಣಾ ಮನೋಭಾವ ಇವತ್ತು ಕಡಿಮೆಯಾಗಿದೆ” ಎನ್ನುತ್ತಿದ್ದರು.

`ಇಳಿವಯಸ್ಸಿನಲ್ಲಿಯೂ  ಕಣ್ಣಿನ ದೃಷ್ಟಿ ಮಸುಕಾಗಿರಲಿಲ್ಲ. ಹಲ್ಲುಗಳು ಗಟ್ಟಿಯಾಗಿದ್ದವು. ಯೂರೋಪ್‌ನ ಫುಟ್‌ಬಾಲ್ ಲೀಗ್ ಪಂದ್ಯಗಳನ್ನು ಟೀವಿಯಲ್ಲಿ ನೋಡುತ್ತಾ  ಎಲ್ಲವನ್ನು ಮರೆತು ಬಿಡುತ್ತಿದ್ದರು' ಎಂದು ಷಣ್ಮುಗಂ ಕುಟುಂಬದ ಸದಸ್ಯರು ನೆನಪಿಸಿಕೊಳ್ಳುತ್ತಾರೆ. ಹೀಗೆ ಸುಮಾರು ಎಂಟು ದಶಕಗಳ ಕಾಲ ಫುಟ್‌ಬಾಲ್ ಆಡುತ್ತಾ, ನೋಡುತ್ತಾ, ಆ ಕ್ರೀಡೆಯನ್ನೇ ಉಸಿರಾಡುತ್ತಾ ಬದುಕಿದ ಷಣ್ಮುಗಂ ಅವರನ್ನು ಕನ್ನಡನಾಡು ಎಂದೆಂದೂ ಮರೆಯುವಂತಿಲ್ಲ.

ಒಲಿಂಪಿಯನ್ ಷಣ್ಮುಗಂ ನಿಧನ
ಬೆಂಗಳೂರು: ಭಾರತದ ಹೆಸರಾಂತ ಮಾಜಿ ಫುಟ್‌ಬಾಲ್ ಆಟಗಾರ ಟಿ.ಷಣ್ಮುಗಂ (93) ಗುರುವಾರ ಮಧ್ಯರಾತ್ರಿ ಇಂದಿರಾನಗರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು.

ಇವರು ಕೆಲವು ದಿನಗಳಿಂದ ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಇವರು ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಶುಕ್ರವಾರ ಮೃತರ ನಿವಾಸಕ್ಕೆ ರಾಜ್ಯ ಸರ್ಕಾರದ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಅಪ್ಪಚ್ಚು ರಂಜನ್ ಸೇರಿದಂತೆ ನೂರಾರು ಮಂದಿ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆಯ ಅಧ್ಯಕ್ಷ ಎ.ಆರ್.ಖಲೀಲ್, ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆಯ ಅಧ್ಯಕ್ಷ ಎಂ.ಪಿ.ಸ್ವಾಮಿ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಜೀವನಹಳ್ಳಿ ಬಳಿಯ ಕಲ್ಲಪಳ್ಳಿ ವಿದ್ಯುತ್ ಚಿತಾಗಾರದಲ್ಲಿ ಸಂಜೆ ಮೃತರ ಅಂತ್ಯಕ್ರಿಯೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT