ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡವೇ ಬದುಕಾಗಬೇಕು: ಚಂಪಾ

Last Updated 16 ಅಕ್ಟೋಬರ್ 2011, 8:50 IST
ಅಕ್ಷರ ಗಾತ್ರ

ಚಿತ್ರದುರ್ಗ: ಕನ್ನಡ ನಮ್ಮ ಅಸ್ಮಿತೆಯ ಸಂಕೇತ. ಕನ್ನಡದ ಮೂಲಕ ನಮ್ಮನ್ನು ಗುರುತಿಸಿಕೊಳ್ಳಬೇಕು. ಇಂಗ್ಲಿಷ್ ನನ್ನ ಉಪಜೀವನ. ಕನ್ನಡ ನನ್ನ ಜೀವನ ಎಂದು ಸಾಹಿತಿ, ಪಂಪ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಪಾಟೀಲ ಪ್ರತಿಪಾದಿಸಿದರು.

ಗೆಳೆಯರ ಬಳಗ, ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಿಂತನ ಪ್ರಕಾಶನ ಆಶ್ರಯದಲ್ಲಿ ಶನಿವಾರ ತರಾಸು ರಂಗಮಂದಿರದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಹಾಗೂ ವಿಚಾರ ಸಂಕಿರಣದ್ಲ್ಲಲಿ ಅವರು ಮಾತನಾಡಿದರು.

ಈ ನಾಡಿನಲ್ಲಿ ಕನ್ನಡಕ್ಕೆ ಮೊದಲ ಪ್ರಾತಿನಿಧ್ಯ ದೊರೆಯಬೇಕು. ಕನ್ನಡ, ಕನ್ನಡ ಬರ‌್ರಿ ನಮ್ಮ ಸಂಗಡ ಎಂದು ಎಲ್ಲರನ್ನು ಕರೆದೊಯ್ಯಬೇಕು ಎಂದರು.

ಚಳವಳಿಗೂ ನನಗೂ ನಿರಂತರವಾಗಿ ನಂಟು ಬೆಳೆದು ಬಂದಿದೆ. ಅದೇ ರೀತಿ ಪ್ರಶ್ನೆ ಕೇಳುವ ಸ್ವಭಾವ ನನ್ನದು. ಧೈರ್ಯ ಎನ್ನುವ ಶಬ್ದ ಹೇಡಿಗಳ ನಿಘಂಟಿನಲ್ಲಿ ಸಿಗುವ ಶಬ್ದ. ಸಹಜವಾಗಿರುವವರಿಗೆ ಒಂದು ಸಣ್ಣ ಪ್ರಶ್ನೆ ಕೇಳಲು ಧೈರ್ಯ ಯಾಕೆ ಬೇಕು ಎಂದು ತಾವು ನಡೆದು ದಾರಿಯನ್ನು ಸಂಕ್ಷಿಪ್ತವಾಗಿ ವಿವರಿಸಿದರು.

ಕವಿ ಮುಂದೆ ಇರುವುದು ವರ್ತಮಾನದ ವಾಸ್ತವ. ಜನರ ಬದುಕಿಗಾಗಿ ಕಾವ್ಯ ರಚಿಸಬೇಕು. ವ್ಯಕ್ತಿಯಾಗಿ, ಸಮಷ್ಟಿಯಾಗಿ ಬದುಕಬೇಕು ಎಂದರು.

ಇತ್ತೀಚೆಗೆ ಸ್ವಾಮೀಜಿಯೊಬ್ಬರು ಉಚಿತವಲ್ಲದ ಮಾತು ಹೇಳಿದರು. ಅವರ ವ್ಯಕ್ತಿತ್ವಕ್ಕೆ ಯೋಗವಾಗಿರಲಿಲ್ಲ. ಇದು ಸದಭಿರುಚಿ ಮಾತು ಅಲ್ಲ ಎಂದು ಆ ಸ್ವಾಮೀಜಿಗೆ ತಿಳಿಸಿದೆ. ನೀವು ಹೇಳಿದ್ದು ಸತ್ಯ ಇರಬಹುದು ಆದರೆ, ಅದು ಅಲ್ಲ ಎಂದು ನಿಡುಮಾಮಿಡಿ ಸ್ವಾಮೀಜಿ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದರು.

ನನ್ನದು ಹೇಳಬೇಕಾದ್ದನ್ನು ಹೇಳಿಯೇ ತೀರುತ್ತೇನೆ. ಇದರಿಂದ ಯಾವುದೇ ಸ್ಥಾನ ಮತ್ತು ಪ್ರಶಸ್ತಿಯಿಂದ ವಂಚಿತನಾಗುತ್ತೇನೆ ಎನ್ನುವ ಭಾವನೆ ನನ್ನಲ್ಲಿ ಇಲ್ಲ. ನಮ್ಮ ನಂಬಿಕೆಗಳು ಗಟ್ಟಿಯಾಗಿದ್ದರೆ ಯಾವುದಕ್ಕೆ ತಲೆಕೆಡಿಸಿಕೊಳ್ಳದೆ ಬದುಕಬೇಕು. ನಂಬಿರುವ ತತ್ವಗಳ ಬಗ್ಗೆ ವಿಶ್ವಾಸ ಕಳೆದುಕೊಂಡಾಗ ಟೊಳ್ಳು ಮನುಷ್ಯನಾಗುತ್ತಾನೆ ಎಂದು ನುಡಿದರು.

ಚಂಪಾ ಅವರ ಕಾವ್ಯ ಹಾಗೂ ನಾಟಕಗಳು ಕುರಿತು ಮಾತನಾಡಿದ ಕವಿ ಚಂದ್ರಶೇಖರ್ ತಾಳ್ಯ, ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರೂ ಚಂಪಾ ಅವರ ಮೇಲೆ ಇಂಗ್ಲಿಷ್ ಪ್ರಭಾವ ಬೀರಿಲ್ಲ. ತಮ್ಮದೇ ಆದ ಅನನ್ಯ ದಾರಿಯಲ್ಲಿ ಕವಿತೆಗಳನ್ನು ರಚಿಸಿಕೊಂಡು ಬಂದಿದ್ದಾರೆ ಎಂದು ನುಡಿದರು.

ತುರ್ತು ಪರಿಸ್ಥಿತಿ ಕಾಲದಲ್ಲಿ `ಜೈಲಿನ ಲಹರಿ~ ಕೃತಿ ರಚಿಸಿದ ಚಂಪಾ ಜೈಲಿಗೆ ಹೋದರು. ಚಂಪಾ ವರ್ತಮಾನದ ಕವಿ. ಕಾವ್ಯ ಸರಳವಾದ ಅಭಿವ್ಯಕ್ತಿಯಾಗಿದ್ದರೂ ಜವಾಬ್ದಾರಿಯಿಂದ ಕೂಡಿರುತ್ತವೆ ಎಂದು ತಾಳ್ಯ ನುಡಿದರು.

ಜನಪರ ಕವಿ ಹಾಗೂ ಹೋರಾಟಗಾರ ಡಾ. ಬಂಜಗರೆ ಜಯಪ್ರಕಾಶ್ ಮಾತನಾಡಿ, ಆದಿಕವಿ ಪಂಪನಾದರೆ ಹಾದಿ ಕವಿ ಚಂಪಾ. ನಿಜವಾದ ಕವಿಗೆ ಚೈತನ್ಯ ಮೂಡುವುದೇ ಹಾದಿಬೀದಿಗಳಲ್ಲಿ. ಪಂಪ ಕೇವಲ ಕವಿ ಮಾತ್ರವಲ್ಲ, ಕಲಿಯೂ ಹೌದು. ಶ್ರೇಷ್ಠ ಕವಿ ಪಂಪ ನಮಗೆ ಹಾದಿ ತೋರಿಸಿಕೊಟ್ಟ ಕವಿ. ಕವಿಗೆ ಅಂಕುಶಗಳನ್ನು ಧಿಕ್ಕರಿಸುವ ಗುಣ ತನ್ನೊಳಗೆ ಹುಟ್ಟಬೇಕು ಎಂದು ನುಡಿದರು.

ಸಮಾಜವನ್ನು ಸಾಹಿತ್ಯದ ಅಂಗವನ್ನಾಗಿ ಮಾಡಿಕೊಂಡು ಗುಣಮಟ್ಟದಲ್ಲಿ ರಾಜಿಯಾಗದೆ ಬರೆದವರು ಚಂಪಾ. ಕನ್ನಡದಲ್ಲಿ ಭೈರಪ್ಪ ಸೇರಿದಂತೆ ಹಲವರು ಸುಂದರ ಕೃತಿ ರಚಿಸುತ್ತಾರೆ. ಆದರೆ, ಸೌಂದರ್ಯ ಒಂದೇ ಮಾನದಂಡವಾಗಬಾರದು. ಭೈರಪ್ಪನವರು ಸುಂದರವಾಗಿ ರಚಿಸಿರುವುದನ್ನು ಓದಿದರೆ ಮತಿಗೆಟ್ಟು ಹುಚ್ಚಾಸ್ಪತ್ರೆಗೆ ಸೇರಬೇಕಾಗುತ್ತದೆ ಎಂದು ಟೀಕಿಸಿದರು.

ಚಂಪಾ ಅವರಲ್ಲಿ ಪ್ರಜಾಪ್ರಭುತ್ವದ ಗುಣಗಳಿವೆ. `ಹೌದಪ್ಪ~ಗಳಿಂದ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ತಮ್ಮ ಅಭಿಪ್ರಾಯಗಳನ್ನು ನಿಷ್ಠುರವಾಗಿ ಹೇಳುತ್ತಾ ಬಂದಿದ್ದಾರೆ ಎಂದು ನುಡಿದರು.

ಸಾಹಿತಿ ಹರಿಹರಪ್ರಿಯ ಮಾತನಾಡಿ, ಚಂಪಾ ಅವರಿಗೆ ಜನಸಮುದಾಯದ ಪಂಪ ಪ್ರಶಸ್ತಿ ದೊರೆತಿದೆ ಎಂದು ಶ್ಲಾಘಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ. ವೀರೇಶ್, ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಎಂ. ಜಯಣ್ಣ ಉಪಸ್ಥಿತರಿದ್ದರು. ರೈತ ಸಂಘದ ಮುಖಂಡ ಟಿ. ನುಲೇನೂರು ಶಂಕರಪ್ಪ ಕಾರ್ಯಕ್ರಮ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT