ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗರ ಅಭಿಮಾನದ ಸಂಕೇತ ನಮ್ಮಹಂಪಿ

Last Updated 21 ಮೇ 2012, 19:30 IST
ಅಕ್ಷರ ಗಾತ್ರ

ಕಳೆದ ತಿಂಗಳ ಕೊನೆ ವಾರದಲ್ಲಿ ಇದೇ ಅಂಕಣದಲ್ಲಿ ಪ್ರಕಟವಾದ ವಿಶ್ವನಾಥ ಅಡಿಗ ಅವರ `ಇತಿಹಾಸ ಮರೆತವರಿಗೆ ಭವಿಷ್ಯವಿಲ್ಲ~ ಶೀರ್ಷಿಕೆಯ ಲೇಖನಕ್ಕೆ ಪೂರಕವಾದ ನನ್ನ ಅಭಿಪ್ರಾಯಗಳು ಹೀಗಿವೆ.

ಹಂಪಿ(ಪೆ)ಯ ವಿರೂಪಾಕ್ಷ ದೇವಾಲಯದ ಪ್ರಾಂಗಣದಲ್ಲಿ ಹರಿಯುವ ಕಾಲುವೆಗೆ ಅಲ್ಲಿನ ಪಾಕ ಶಾಲೆಗೆ ನೀರೊದಗಿಸುವ ಉದ್ದೇಶವೊಂದೇ ಇಲ್ಲ. ಅದು ದೇವಸ್ಥಾನದ ಎಡ ಬದಿಯಲ್ಲಿರುವ ಪುಷ್ಕರಣಿಗೆ ನೀರೊದಗಿಸುವ ಕಾಲುವೆಯೂ ಆಗಿದೆ. 

 ಹಂಪಿಯನ್ನು ವಿಶ್ವ ಪರಂಪರೆಯ ತಾಣವೆಂದು ಯುನೆಸ್ಕೋ ಪರಿಗಣಿಸಿದ ಮೇಲೆ ಅಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ  ಹೆಚ್ಚಾಗಿದೆ. ಅವರಿಗೆ ಮಾರ್ಗದರ್ಶನ ಮಾಡುವ ತರಬೇತಿ ಪಡೆದ ಗೈಡ್‌ಗಳಿಲ್ಲದೆ ಅನಾನುಕೂಲವಾಗಿದೆ ಎಂಬುದು ನಿಜವಾದರೂ ಅಲ್ಲಿರುವ ಕೆಲವು ಗೈಡ್‌ಗಳು ಉತ್ತಮ ತರಬೇತಿ ಪಡೆದಿದ್ದಾರೆ. ಪ್ರವಾಸಿಗಳಿಗೆ ಮಾರ್ಗದರ್ಶನ ಮಾಡಲು ಅವರು ಕೇಳುವ ಹಣ ಸ್ವಲ್ಪ ದುಬಾರಿ.
 
ಪ್ರವಾಸೋದ್ಯಮ ಇಲಾಖೆ ಒಂದು ಮಾರ್ಗದರ್ಶಿ ಸೂತ್ರ ರಚಿಸಿ ಪ್ರವಾಸಿಗಳಿಂದ ಇಂತಿಷ್ಟೇ ಸಂಭಾವನೆ ಪಡೆಯುವ ಬಗ್ಗೆ ನಿಯಮ ರೂಪಿಸಬೇಕು. ಸ್ಮಾರಕಗಳ ವೀಕ್ಷಣೆಗೆ ಟಿಕೆಟ್ ಪಡೆಯುವ ಸಂದರ್ಭದಲ್ಲೇ ಗೈಡ್‌ಗಳ ಸಂಭಾವನೆಯನ್ನೂ ಪಡೆದು ಅವರ ಸೇವೆ ಒದಗಿಸುವ ಬಗ್ಗೆ ಇಲಾಖೆ ಯೋಚಿಸಬೇಕು.

 ಅಜಂತಾ, ಎಲ್ಲೋರ ಗುಹಾಂತರ ದೇವಾಲಯಗಳಿಗೆ ಹೋದರೆ ಅಲ್ಲಿನ ಗೈಡ್‌ಗಳು ಒಂದು ಗಂಟೆ, ಅರ್ಧ ಗಂಟೆ ಸಮಯಕ್ಕೆ ಇಂತಿಷ್ಟು ಶುಲ್ಕ ನಿಗದಿ ಮಾಡಿಕೊಳ್ಳುತ್ತಾರೆ. ಅಂತಹ ವ್ಯವಸ್ಥೆ ಹಂಪಿಗೂ ಬೇಕು.

 ತುಂಗಭದ್ರಾ ನದಿಯಿಂದ ಕಾಲುವೆ ಮೂಲಕ ದೇವಸ್ಥಾನದೊಳಕ್ಕೆ ನೀರು ತಂದಿರುವ ವ್ಯವಸ್ಥೆಯಂತೂ ಅದ್ಭುತ. ಹಂಪಿಯ ಪೂರ್ಣ ವೀಕ್ಷಣೆ ಮಾಡಿದವರಿಗೆ ಅದರ ಮಹತ್ವ ಅರ್ಥವಾದೀತು.

ವಿರೂಪಾಕ್ಷ ದೇವಾಲಯದ ಪ್ರಾಂಗಣದಲ್ಲಿ ಹರಿದು ಬರುವ ನೀರಿನ ಮಟ್ಟಕ್ಕಿಂತ ರಾಣಿಯರ ಸ್ನಾನ ಗೃಹಕ್ಕೆ ಹರಿದುಬರುವ ನೀರಿನ ಮಟ್ಟ ಸುಮಾರು ಇಪ್ಪತ್ತು ಅಡಿ ಎತ್ತರದಲ್ಲಿದೆ. ಒಂದು ಕಾಲುವೆ ಸ್ನಾನಗೃಹದ ಈಜುಗೊಳದ ಮೂಲಕ ಹರಿದು ಹೋಗುತ್ತದೆ.

ವಿಜಯನಗರಕ್ಕೆ ನೀರು ಸರಬರಾಜು ಮಾಡುವುದಕ್ಕಾಗಿಯೇ ತುಂಗಭದ್ರಾ ನದಿಗೆ ಆ ಕಾಲದಲ್ಲೇ ಒಂದು ಅಣೆಕಟ್ಟೆ ಕಟ್ಟಿದ್ದರು. ಅದು ಈಗಿನ ಅಣೆಕಟ್ಟೆಯ ಹಿಂದೆ ಸುಮಾರು ಒಂದು ಕಿ.ಮೀ ದೂರದ ಕೋರಗಲ್ಲು ಎಂಬ ಗ್ರಾಮದ ಸಮೀಪ  ಇತ್ತು. ಅಲ್ಲಿಂದ ಹಂಪಿಗೆ ನೀರು ಒದಗಿಸುವ ವ್ಯವಸ್ಥೆ ಮಾಡಿದ್ದರು. ಆ ಕಿರು ಅಣೆಕಟ್ಟೆಗೆ `ಕೋರಗಲ್ಲು ದಿಡುಗು~ ಎಂದು ಹೇಳುತ್ತಿದ್ದರು.
 
ನಾನು ಹುಡುಗನಿದ್ದಾಗ ಆ ದಿಡುಗನ್ನು ನೋಡಿದ್ದೇನೆ. ಈಗ ಅದು ತುಂಗಭದ್ರಾ ಹಿನ್ನೀರಿನಲ್ಲಿ ಮುಳುಗಿಹೋಗಿದೆ.  ದೇವಸ್ಥಾನದ ಹಿಂದಿನ ಕೆರೆಯಲ್ಲಿ ನೀರು ಸಂಗ್ರಹಿಸಿ ಕಾಲುವೆಗೆ ಹರಿಸುತ್ತಿದ್ದರು ಎಂಬ ಅಡಿಗರ ವ್ಯಾಖ್ಯಾನ ಸರಿಯಲ್ಲ.

ವಿರುಪಾಕ್ಷ ದೇವಸ್ಥಾನದ ಗೋಪುರದ ಛಾಯೆಯನ್ನು ನೋಡಲು ಗರ್ಭಗುಡಿಯ ಮಾಳಿಗೆಯ ಮೇಲೆ ಹತ್ತಲು ಹಿಂದೆ ಅವಕಾಶವಿತ್ತು ಎನ್ನುವ ಮಾಹಿತಿ ಸರಿಯಾದ ಗ್ರಹಿಕೆ ಅಲ್ಲ. ಗರ್ಭಗುಡಿಯ ಮೇಲೆ ಹತ್ತಲು ಅರ್ಚಕರಿಗೂ ಅವಕಾಶವಿಲ್ಲ.
 
ಮುಖ್ಯ ಗೋಪುರದ ಛಾಯೆ ಕಾಣುವುದು ವಿರೂಪಾಕ್ಷ ದೇವಸ್ಥಾನದ ಹಿಂದಿರುವ ಮಂಟಪದಲ್ಲಿಯೇ ಹೊರತು ಗರ್ಭಗುಡಿಯ ಮಾಳಿಗೆಯ ಮೇಲೆ ಅಲ್ಲ. ಈಗಲೂ ಅದು ನಿರ್ಬಂಧಿತ ಸ್ಥಳವಲ್ಲ. ಸುತ್ತಲಿನ ಒತ್ತುವರಿಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಮಾತ್ರ ಅಲ್ಲಿಗೆ ಹತ್ತಿ ಹೋಗಿ ನೋಡುವ ಅವಕಾಶ ನಿರಾಕರಿಸಲಾಗಿತ್ತು.

 ಇತ್ತೀಚಿನ ದಿನಗಳಲ್ಲಿ ಪುರಾತತ್ವ ಇಲಾಖೆ ಅಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದೆ. ಸ್ಮಾರಕಗಳನ್ನು ರಕ್ಷಿಸಿಕೊಂಡು ಹೋಗುವುದಕ್ಕೆ ಕೆಲವು ನಿರ್ಬಂಧನೆಗಳು ಇರಬೇಕು. ಕಮಲ ಮಹಲನ್ನು ಮೇಲೆ ಹತ್ತಿ ನೋಡುವ ಅವಕಾಶ ನಮ್ಮ ಬಾಲ್ಯದಲ್ಲಿ ಇತ್ತು.

ಆದರೆ ಈಗ ಇಲ್ಲ. ವಿರೂಪಾಕ್ಷ ದೇವಸ್ಥಾನದ ಮುಖ್ಯ ಗೋಪುರವನ್ನು ನಾನು ಸಣ್ಣವನಿದ್ದಾಗ ತುದಿಯವರೆಗೆ ಹತ್ತಿ ಹೋಗಿ ನೋಡಿದ್ದೆ. ಅರವತ್ತು ವರ್ಷಗಳ ಹಿಂದೆಯೇ  ಮೆಟ್ಟಲುಗಳು ಶಿಥಿಲವಾಗಿದ್ದವು. ಸಂರಕ್ಷಣೆ ದೃಷ್ಟಿಯಿಂದ ಗೋಪುರದ ಮೇಲಕ್ಕೆ ಹತ್ತುವುದನ್ನು ನಿರ್ಬಂಧಿಸಿ ಸುಮಾರು 50 ವರ್ಷಗಳಾಗಿವೆ.

ವಿಜಯವಿಠಲ ದೇವಸ್ಥಾನದ ಕಂಬಗಳನ್ನು ಕೈಯಿಂದ ಬಡಿದು ನಾದ ಹೊರಡಿಸಬಹುದಿತ್ತು. ಕೆಲ ಪ್ರವಾಸಿಗಳು  ಕಲ್ಲಿನಿಂದ ಕುಟ್ಟಿ ನಾದ ಹೊರಡಿಸುತ್ತಿದ್ದರು. ಹೀಗೆ ಕುಟ್ಟಿ, ಕುಟ್ಟಿ ಕಂಬಗಳು ಮಧ್ಯ ಭಾಗದಲ್ಲಿ ಸವೆದು ಹೋಗಿರುವುದನ್ನು ಈಗಲೂ ಕಾಣಬಹುದು.

ಈ ಮೊದಲು ವಿಜಯವಿಠಲ ದೇವಸ್ಥಾನದವರೆಗೆ ಖಾಸಗಿ ವಾಹನಗಳು ಹೋಗುತ್ತಿದ್ದವು. ಅವು ಉಗುಳುವ ಹೊಗೆಯಿಂದ ಶಿಲ್ಪಗಳು ವಿರೂಪಗೊಳ್ಳುತ್ತವೆಂದು ಈ ಬ್ಯಾಟರಿ ಚಾಲಿತ ವಾಹನಗಳಲ್ಲಿ ಅಲ್ಲಿಗೆ ಹೋಗುವ ವ್ಯವಸ್ಥೆ ಮಾಡಿದ್ದಾರೆ. 

 ವಿರೂಪಾಕ್ಷ ದೇವಸ್ಥಾನದ ಸುತ್ತ ಸ್ಥಳೀಯರು ಆಕ್ರಮಿಸಿಕೊಂಡ ಪ್ರದೇಶವನ್ನು ತೆರವುಗೊಳಿಸುವ ಕೆಲಸ ಪ್ರಗತಿಯಲ್ಲಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಬೇಕು. ಸುಲಭ ವೀಕ್ಷಣೆ ಅವಕಾಶಗಳನ್ನು ಪ್ರಾಚ್ಯವಸ್ತು ಇಲಾಖೆ ಕಸಿದುಕೊಂಡಿದ್ದರೂ ಅದು ಸ್ಮಾರಕಗಳ ರಕ್ಷಣೆಯ ಸಲುವಾಗಿಯೇ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.
 
ಹಂಪಿಯ ಸ್ಮಾರಕಗಳು ಸುಮಾರು 40-50 ಕಿಲೋಮೀಟರು ವ್ಯಾಪ್ತಿಯಲ್ಲಿವೆ.
ಹಂಪಿ ಕನ್ನಡಿಗರ ಅಭಿಮಾನದ ಸಂಕೇತ. ಅದನ್ನು ರಕ್ಷಿಸುವ, ಮುಂದಿನ ಪೀಳಿಗೆಗೆ ಉಳಿಸುವ ಕರ್ತವ್ಯ ನಮ್ಮೆಲ್ಲರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT