ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಯೊಳಗಿನ ಗಂಟು

Last Updated 5 ಮೇ 2013, 19:59 IST
ಅಕ್ಷರ ಗಾತ್ರ

ಬಾರಿಯ ಚುನಾವಣಾ ಪ್ರಚಾರದ ಸಂದರ್ಭ ಟೈಮ್ಸ ಆಫ್ ಇಂಡಿಯಾ ಪತ್ರಿಕೆ ನಡೆಸಿದ ಸಮೀಕ್ಷೆಯಲ್ಲಿ ಪಾಲ್ಗೊಂಡ ಮತದಾರರು ಭ್ರಷ್ಟಾಚಾರವನ್ನು ಅತೀ ದೊಡ್ಡ ಸಮಸ್ಯೆ ಅಂತ ಗುರುತಿಸಿದರು. ಅದಾದ ನಂತರ ಅದೇ ಸಮೀಕ್ಷೆಯ ಮುಂದುವರಿದ ಭಾಗದಲ್ಲಿ ಒಂದಂಶ ಗಮನ ಸೆಳೆಯಿತು. ಆ ಭಾಗದಲ್ಲಿ ಕೇಳಲಾದ ಪ್ರಶ್ನೆ ಮತ ಚಲಾಯಿಸುವಾಗ ನೀವು ಪರಿಗಣಿಸುವ ಅತೀ ಮುಖ್ಯ ವಿಚಾರ ಯಾವುದು ಎಂದು. ಇದಕ್ಕೆ ಶೇಕಡಾ 50ರಷ್ಟು ಮತದಾರರ ಉತ್ತರ `ಜಾತಿ'.

ಸಾಮಾನ್ಯವಾಗಿ ಜಾತಿಯನ್ನು ರಾಜಕೀಯಕ್ಕೆ ಎಳೆದು ತಂದದ್ದಕ್ಕೆ ರಾಜಕಾರಣಿಗಳನ್ನು ಟೀಕಿಸಲಾಗುತ್ತದೆ. ಚುನಾವಣಾ ಸಮೀಕ್ಷೆಯಲ್ಲಿ ಜಾತಿಯ ವಿಚಾರ ಪ್ರಸ್ತಾಪಿಸುವುದಕ್ಕೆ `ನಿಜ ಸೆಕ್ಯುಲರ್'ವಾದಿ ಬರಹಗಾರರು ಮಾಧ್ಯಮಗಳನ್ನು ಟೀಕಿಸುತ್ತಾರೆ. ಜನ ಜಾತಿ ನೋಡಿ ಓಟು ಹಾಕುವುದಾದರೆ, ರಾಜಕೀಯ ಮಾಡಿ ಬದುಕುವ ರಾಜಕಾರಣಿ ಜಾತಿಯನ್ನು ರಾಜಕೀಯಕ್ಕೆ ಯಾಕೆ ಕರೆತರಬಾರದು.

ಜಾತಿ ಎಂದರೆ ನಮ್ಮವರು ಮತ್ತು ಇತರರು ಎಂದು ಗುರುತಿಸಲು ಇರುವ ಒಂದು ಸಾಧನ, ಒಂದು ಮಾಪನ. ಪ್ರಜಾತಾಂತ್ರಿಕ ರಾಜಕೀಯ  ಜಾತಿಯನ್ನು ಮೀರಿ ಅಧಿಕಾರವನ್ನು ಪಡೆಯುವ ಮತ್ತು ಚಲಾಯಿಸುವುದಕ್ಕೆ ಸಂವಿಧಾನ ಹಾಕಿಕೊಟ್ಟ ಹಾದಿ. ಜಾತಿಯನ್ನು ಸಾಮಾಜಿಕ ಶ್ರೇಣಿಕರಣಕ್ಕೆ ಮೂಲವಾಗಿ ಇರಿಸಿಕೊಂಡರೂ ಸರಿ, ಅಥವಾ ಕೇವಲ ಅಸ್ಮಿತೆಗೆ ಆಧಾರವಾಗಿ ಉಳಿಸಿಕೊಂಡರು ಸರಿ. ಅದು ನಮ್ಮವರು ಮತ್ತು ಇತರರು ಎನ್ನುವ ತತ್ವದಲ್ಲೆೀ ಪ್ರವರ್ತಿಸುವುದು. ಅದಕ್ಕಾಗಿಯೇ ಮತ ಹಾಕುವಾಗ ಜಾತಿ ಮುಖ್ಯವಾಗುವುದು. ಅಂದರೆ ಜಾತಿ  ಸೃಷ್ಟಿಸಿದ `ನಮ್ಮವರು' ಮತ್ತು `ಇತರರು' ಎನ್ನುವ ಪ್ರಜ್ಞೆ ನಮ್ಮ ರಾಜಕೀಯ ನಿರ್ಧಾರಗಳ ಮೇಲೆ ಇಲ್ಲಿ ಪ್ರಭಾವ ಬೀರಿದ ಹಾಗಾಯಿತು.

ಒಂದು ಜಾತಿಗೆ ತಮ್ಮವರ ಹಿತ ಮೊದಲ ಆದ್ಯತೆಯಾದಾಗ, ಅದು ಇತರ ಜಾತಿಯವರಿಗೆ ಅನಾದರ ತೋರಿದಂತೆ ಅಲ್ಲ ಅಂತ ವಾದಿಸಬಹುದು. ಆದರೆ ಪರಿಣಾಮ ಮಾತ್ರ ಅದೇ ಆಗಿರುತ್ತದೆ. ಯಾಕೆಂದರೆ ಜಾತಿಗಳಲ್ಲಿ ಕೆಲವು ಪ್ರಬಲ ಕೆಲವು ದುರ್ಬಲ ಎಂದಾದಾಗ ಪ್ರಬಲ ಜಾತಿಗಳು ತಮ್ಮವರಿಗೆ ಮೊದಲ ಆದ್ಯತೆ ನೀಡುವುದು ಪ್ರಬಲರಲ್ಲದ ಜಾತಿಯವರ ಬಲಹೀನತೆಯ ಅರಿವನ್ನು ಹೆಚ್ಚು ಹೆಚ್ಚು ಜಾಗೃತಗೊಳಿಸುತ್ತದೆ. ಎಂಬತ್ತು-ತೊಂಬತ್ತರ ದಶಕದಲ್ಲಿ ಹಿಂದುಳಿದ ವರ್ಗಗಳ ರಾಜಕಾರಣ ಹುಟ್ಟಿಕೊಂಡದ್ದು ಈ ಜಾಗೃತಿಯಿಂದಲೇ ಅಲ್ಲವೇ. ಬಹುಶಃ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ನೀಡಲಾದ ರಾಜಕೀಯ ಮೀಸಲಾತಿ ಅವರಿಗೆ ರಾಜಕೀಯ ಪ್ರಾತಿನಿಧ್ಯವನ್ನು ಒದಗಿಸಿದೆ. ಆದರೆ ಅವರ ರಾಜಕೀಯ ಜಾಗೃತಿಗೆ ಅಡ್ಡಬಂದಿದೆ. ಕೇವಲ ಪ್ರಾತಿನಿಧ್ಯ ಸಬಲೀಕರಣದ ಅಸ್ತ್ರವಲ್ಲ. ಪ್ರಾತಿನಿಧ್ಯ ಇದ್ದಷ್ಟು ಕಾಲ ಒಂದು ವರ್ಗ ತನ್ನ ಸಬಲೀಕರಣಕ್ಕೆ ಬೇಕಾದಂತಹ ಜಾಗೃತಿಯನ್ನು ಬೆಳೆಸಿಕೊಳ್ಳುವುದಿಲ್ಲ. ಅಂಬೇಡ್ಕರ್ ರಾಜಕೀಯ ಮೀಸಲಾತಿಯನ್ನು ಹತ್ತು ವರ್ಷಗಳಿಗೆ ಸೀಮಿತಗೊಳಿಸುವಂತೆ ವಾದಿಸಿದ್ದನ್ನು ಈ ದೃಷ್ಟಿಯಿಂದ ಕೂಡಾ ಅರ್ಥಮಾಡಿಕೊಳ್ಳುವ ಅಗತ್ಯವಿದೆ.

2008ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗುರ್ಮಿಠ್ಕಲ್ ಕ್ಷೇತ್ರದ ಮೀಸಲು ಸ್ಥಾನ ಬದಲಾಗಿ ಅದು ಸಾಮಾನ್ಯ ಕ್ಷೇತ್ರ ಎಂದು ಘೋಷಣೆಯಾದಾಗ ಆ ಕ್ಷೇತ್ರವನ್ನು ಎಂಟು ಬಾರಿ ಪ್ರತಿನಿಧಿಸಿದ್ದ ಮಲ್ಲಿಕಾರ್ಜುನ ಖರ್ಗೆಯವರಂತಹ ಪರಿಶಿಷ್ಟ ವರ್ಗದ ನಾಯಕ ಅಲ್ಲಿಂದ ಕಾಲು ಕೀಳುತ್ತಾರೆ. ಇನ್ನೊಂದು ಮೀಸಲು ಕ್ಷೇತ್ರವನ್ನು ಅರಸಿ ಹೋಗಿ ಚಿತ್ತಾಪುರದಲ್ಲಿ ಸ್ಪರ್ಧಿಸಿ ಗೆಲ್ಲುತ್ತಾರೆ. ಅದಕ್ಕೆ ಅವರು ನೀಡಿದ ಕಾರಣ ತಾನು ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದರೆ ಒಬ್ಬ ಸಾಮಾನ್ಯ ಅಭ್ಯರ್ಥಿಗೆ ಅವಕಾಶ ವಂಚಿಸಿದ ಹಾಗಾಗುತ್ತದೆ ಎನ್ನುವುದು. ವಾಸ್ತವ ಕಾರಣ ಏನೇ ಇರಲಿ, ಅವರು ನೀಡಿದ ಈ ಸಮರ್ಥನೆಯನ್ನು ಯಥಾವತ್ತಾಗಿ ಸ್ವೀಕರಿಸಿದರೆ ಅದರ ಅರ್ಥ ಏನು? ಪರಿಶಿಷ್ಟ ವರ್ಗದವರು ಮೀಸಲು ಕ್ಷೇತ್ರಗಳಿಂದಾಚೆಗೆ ಬೆಳೆಯಬಾರದೆಂದೇ?

ಬೆಂಗಳೂರಿನ ಬಸವನ ಗುಡಿ ಸಾಮಾನ್ಯ ಕ್ಷೇತ್ರದಲ್ಲಿ ಪರಿಶಿಷ್ಟವರ್ಗಕ್ಕೆ ಸೇರಿದ ಅಭ್ಯರ್ಥಿಯೊಬ್ಬರು ತಮ್ಮ ಸ್ವಸಾಮರ್ಥ್ಯದಿಂದ ಗೆದ್ದು ಬರುತ್ತಾರೆ. ಬ್ರಾಹ್ಮಣ ಪ್ರಾಬಲ್ಯವಿರುವಲ್ಲಿ ಒಬ್ಬ ಪರಿಶಿಷ್ಟ ಜಾತಿಯ ಅಭ್ಯರ್ಥಿ ಜನಪ್ರಿಯ ನಾಯಕನ ಮಟ್ಟಕ್ಕೆ ಏರುತ್ತಾನೆ. ಆದರೂ ಕಾಂಗ್ರೆಸ್ ಅದನ್ನು ಎತ್ತಿ ಹೇಳುವುದಿಲ್ಲ. ಅದನ್ನು `ಸೆಲೆಬ್ರೇಟ್' ಮಾಡುವುದಿಲ್ಲ. ಈ ಬಾರಿ ಅಲ್ಲಿ ಒಬ್ಬ ಸಾಮಾನ್ಯ ಅಭ್ಯರ್ಥಿಯನ್ನೇ ಬಸವನಗುಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಹೇರುತ್ತದೆ. ಪರಿಶಿಷ್ಟರಿಗೆ ಹೇಗೂ ಮೀಸಲಾತಿ ಇದೆಯಲ್ಲ ಎನ್ನುವ ದೃಷ್ಟಿಕೋನವೇ ಇಲ್ಲಿ ಕೆಲಸ ಮಾಡಿರಬೇಕು. ರಾಜಕೀಯ ಮೀಸಲಾತಿಯ ಮಿತಿ ಇದು. ಅದು ರಾಜಕೀಯವಾಗಿ ಬೆಳೆಯಲು ಒಂದು ಅಸ್ತ್ರವಲ್ಲ. ರಾಜಕೀಯ ಮೀಸಲಾತಿ ಒಂದು ರೀತಿಯ ರಾಜಕೀಯ ಸಂತೃಪ್ತಿಯನ್ನಷ್ಟೇ ನೀಡಬಲ್ಲದು. ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಇರಲಿಲ್ಲ.

ಆದುದರಿಂದ ರಾಜಕೀಯ ಸಂತೃಪ್ತಿಯೂ ಬರಲಿಲ್ಲ. ಅವರ ರಾಜಕೀಯ ಅನಾಥ ಪ್ರಜ್ಞೆ ಅವರನ್ನು ಬೆಳೆಸಿತು. ಹಿಂದುಳಿದವರ ರಾಜಕೀಯ ಹಿಂದುಳಿದ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರಗಳಲ್ಲಿ ಬಹಳ ಮುಂದುವರಿಯಿತು. ಅಧಿಕಾರ ಪಡೆಯಲು ಜಾತಿ ಒಂದು ಸಾಧನವಾದಾಗ ಜಾತಿಯ ರಾಜಕೀಯ ಪ್ರಾಶಸ್ತ್ಯ ಉಳಿಯಿತು. ಅಂತೆಯೇ ಜಾತಿ ಆಧಾರಿತ ಮೀಸಲಾತಿಯಿಂದಲೂ ಜಾತಿಯ ರಾಜಕೀಯ ಪ್ರಾಶಸ್ತ್ಯ ಉಳಿಯಿತು. ಪರಿಶಿಷ್ಟ ಜಾತಿಯವರ ರಾಜಕೀಯ ಪ್ರಾತಿನಿಧ್ಯಕ್ಕೆ ಜಾತಿ ಮುಖ್ಯವಾಗುತ್ತದೆ, ಹಿಂದುಳಿದ ವರ್ಗಗಳ ರಾಜಕೀಯಕ್ಕೆ `ಜಾತಿಯ ಜನ' ಮುಖ್ಯವಾಗುತ್ತಾರೆ. ರಾಜಕೀಯ ಮೀಸಲಾತಿಯಲ್ಲಿ ಜಾತಿ ಒಂದು ನಾಮಪದ, ಹಿಂದುಳಿದ ವರ್ಗಗಳ ರಾಜಕೀಯದಲ್ಲಿ ಅದೊಂದು ವಿಶೇಷಣ ಪದ(adjective). ಎರಡೂ ಜಾತಿಯನ್ನು ಬೇರೆ ಬೇರೆ ಸ್ವರೂಪದಲ್ಲಿ ಅವಲಂಬಿಸಿವೆ ಎನ್ನುವ ಕಾರಣಕ್ಕೆ ಅವು ಜಾತಿಯನ್ನು ಬೆಂಬಲಿಸುತ್ತವೆ.

ಜಾತಿ ವಿನಾಶಕ್ಕೆ ಬೇಕಾದ ಹೋರಾಟ ಅದು ಕೆಳವರ್ಗದಿಂದ ಬರಬೇಕಿತ್ತು. ಯಾವತ್ತು ಜಾತಿಯೇ ಅವರಿಗೂ ಮೇಲೇರುವ ಅಸ್ತ್ರವಾಗುತ್ತದೋ, ಆಗ ಅವರು ಜಾತಿಯ ವಿರುದ್ಧ ಹೋರಾಡುವ ಅವಕಾಶವೇ ಇರುವುದಿಲ್ಲ. ಅಧಿಕಾರ ಪಡೆಯುವುದಕ್ಕೆ ಜಾತಿ ಬೇಕಾದಷ್ಟು ಕಾಲ ರಾಜಕೀಯ ಜಾತಿಯನ್ನು ನಿರ್ಮೂಲನೆಗೊಳಿಸುವ ಸಾಧನವಾಗಲಾರದು. ಅಧಿಕಾರ ಪಡೆಯುವುದಕ್ಕೆ ಜಾತಿಯನ್ನು ಮೀರುವುದು ಅವಶ್ಯಕ ಎಂಬ ಪರಿಸ್ಥಿತಿ ಬಂದಾಗ ಜಾತಿ ಶಿಥಿಲಗೊಳ್ಳುವುದಕ್ಕೆ ಪ್ರಾರಂಭವಾಗುತ್ತದೆ.

ರಾಜಕೀಯ ಮೀಸಲಾತಿಗೆ ಸಂಬಂಧಿಸಿದಂತೆ ಇನ್ನೊಂದು ಪ್ರಮುಖ ವಿಚಾರವಿದೆ. ಒಂದು ಮೀಸಲು ಕ್ಷೇತ್ರದಲ್ಲಿರುವ ದಲಿತ ಮತದಾರರು ಎಂದಿಗೂ ಮೀಸಲಲ್ಲದ ಕ್ಷೇತ್ರಗಳ ದಲಿತ ಮತದಾರರಷ್ಟು ರಾಜಕೀಯ ಪ್ರಾಧಾನ್ಯ ಪಡೆಯಲು ಸಾಧ್ಯವಾಗಲಾರದು. ಯಾಕೆಂದರೆ ಮೀಸಲು ಕ್ಷೇತ್ರದಲ್ಲಿ ದಲಿತರ  ಓಟಿಗಾಗಿ ಹಾತೊರೆಯುವವನೂ ಒಬ್ಬ ದಲಿತ ನಾಯಕನೇ ಆಗಿರುತ್ತಾನೆ. ಆದರೆ ಮೀಸಲಲ್ಲದ ಕ್ಷೇತ್ರದಲ್ಲಿ ದಲಿತರು ಗಣನೀಯ ಸಂಖ್ಯೆಯಲ್ಲಿದ್ದಾರೆ ಎಂದಾಗ ಅವರನ್ನು ಗಂಭೀರವಾಗಿ ಪರಿಗಣಿಸುವುದು ಒಬ್ಬ ಮೇಲ್ವರ್ಗದ ರಾಜಕಾರಣಿಗೆ ಅನಿವಾರ್ಯವಾಗುತ್ತದೆ. ಅಥವಾ ಇಲ್ಲಿ ಒಬ್ಬ ಮೇಲ್ವರ್ಗದ ರಾಜಕೀಯ ನಾಯಕ ದಲಿತರನ್ನು ಅವಲಂಬಿಸಿರಬೇಕಾದ ಪರಿಸ್ಥಿತಿ ಬರುತ್ತದೆ. ಅಂದರೆ ದಲಿತರ ರಾಜಕೀಯ bargaining power ಇಲ್ಲಿ ಮೀಸಲು ಕ್ಷೇತ್ರದಲ್ಲಿ ಇರುವುದಕ್ಕಿಂತ ಹೆಚ್ಚಿರುತ್ತದೆ. ಹೀಗಾದಾಗಲೇ ಅಲ್ಲವೇ ದಲಿತರಿಗೆ ಸಂವಿಧಾನ ನೀಡಿದ ಮತದಾನದ ಅಧಿಕಾರ ಅವರ ನಿಜವಾದ ರಾಜಕೀಯ ಅಧಿಕಾರವಾಗಿ ಮಾರ್ಪಡುವುದು.

ಕೊನೆಯದಾಗಿ ನಾವು ಬಹಳಷ್ಟು ನಿರೀಕ್ಷೆ ಇರಿಸಿಕೊಂಡಿರುವ ಸ್ಥಳೀಯ ಸಂಸ್ಥೆಗಳ ರಾಜಕೀಯ ಮೀಸಲಾತಿಯ ಬಗ್ಗೆ ಒಂದು ಮಾತು ಹೇಳಬೇಕು. ಈ ಹಂತದಲ್ಲಿ ಮೀಸಲಾತಿ ದಲಿತರಿಗೆ ಮಾತ್ರವಲ್ಲ, ಹಿಂದುಳಿದ ವರ್ಗಗಳಿಗೂ ನೀಡಲಾಗಿದೆ. ಆದರೆ ಇದನ್ನು ಈ ವರ್ಗಗಳ ರಾಜಕೀಯ ಸಬಲೀಕರಣಕ್ಕೆ ಯಾವ ರೀತಿಯಲ್ಲೂ ನೆರವಾಗದ ರೀತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತದೆ. ಇದಕ್ಕೆ ಕಾರಣ ಮೀಸಲು ಕ್ಷೇತ್ರಗಳ ರೊಟೇಶನ್. ಈ ಬಾರಿ ಮೀಸಲು ಕ್ಷೇತ್ರದಿಂದ ಆಯ್ಕೆಯಾದ ಅಭ್ಯರ್ಥಿಗೆ ಮುಂದಿನ ಬಾರಿ ಅಲ್ಲಿ ಸ್ಪರ್ಧಿಸುವ ಅವಕಾಶ ಕಡಿಮೆ. ಯಾಕೆಂದರೆ ಮುಂದಿನ ಬಾರಿ ಅದು ಇನ್ನೊಂದು ವರ್ಗಕ್ಕೆ ಅಥವಾ ಸಾಮಾನ್ಯ ವರ್ಗಕ್ಕೆ ಸೇರಿದ ಕ್ಷೇತ್ರವಾಗಿ ಬಿಡುತ್ತದೆ. ಒಮ್ಮೆ ಮಾತ್ರ ಒಂದು ಕ್ಷೇತ್ರವನ್ನು ಯಾರೋ ಪ್ರತಿನಿಧಿಸುವುದು ಎಂದರೆ ಅಲ್ಲಿ ಆಯ್ಕೆಯಾದ ವ್ಯಕ್ತಿಗೆ ತನ್ನ ಕ್ಷೇತ್ರಕ್ಕಾಗಿ ಕೆಲಸ ಮಾಡಬೇಕು ಎಂಬ ಹುಮ್ಮಸ್ಸಾದರೂ ಹೇಗೆ ಬಂದೀತು. ಕ್ಷೇತ್ರಕ್ಕಾಗಿ ದುಡಿಯದೇ ಹೋದರೆ ರಾಜಕೀಯ ನಾಯಕತ್ವ ರೂಪುಗೊಳ್ಳಲು ಅವಕಾಶ ಎಲ್ಲಿದೆ.
ಜಾತಿ ಮತ್ತು ರಾಜಕೀಯದ ಸಂಬಂಧ ಮತ್ತು ರಾಜಕೀಯ ಮೀಸಲಾತಿಯ ಪ್ರಸ್ತುತತೆ ರಾಜಕೀಯ rhetoric ನಲ್ಲಿ ಮಾತ್ರ ಸರಳ ಹಾಗೂ ಸುಂದರವಾಗಿ ತೋರುವುದು. ಈ ವಿಚಾರಗಳ ಬಹುಮುಖೀ ಆಯಾಮಗಳನ್ನು ಅರ್ಥಮಾಡಿಕೊಳ್ಳದೇ ಅವುಗಳನ್ನು ಆರಾಧಿಸುವ ಪ್ರವೃತ್ತಿ ನಿಲ್ಲಬೇಕು.
-ಅನಿರುದ್ಧ ಕೃಷ್ಣ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT