ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬಿನ ಎಫ್‌ಆರ್‌ಪಿ ಹೆಚ್ಚಳಕ್ಕೆ ಕೋಡಿಹಳ್ಳಿ ಒತ್ತಾಯ

Last Updated 2 ಡಿಸೆಂಬರ್ 2013, 8:31 IST
ಅಕ್ಷರ ಗಾತ್ರ

ಬೆಳಗಾವಿ: ‘ಕೇಂದ್ರ ಸರ್ಕಾರವು ಕಬ್ಬಿಗೆ ನಿಗದಿ­ಗೊಳಿಸಿರುವ ನ್ಯಾಯಬದ್ಧ ಲಾಭ­ದಾ­ಯಕ ಬೆಲೆ (ಎಫ್‌ಆರ್‌ಪಿ)ಯನ್ನು ಹೆಚ್ಚಿಸಬೇಕು. ರಾಜ್ಯ ಸರ್ಕಾರವು ರಾಜ್ಯ ಸಲಹಾ ಬೆಲೆ ನಿಗದಿಗೊಳಿಸುವಾಗ ಇತಿಮಿತಿಯನ್ನು ಹಾಕಿಕೊಳ್ಳುವುದನ್ನು ಕೈಬಿಡಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ಪತ್ರಿಕಾ­ಗೋಷ್ಠಿ­ಯಲ್ಲಿ ಈ ವಿಷಯ ತಿಳಿಸಿದ ಅವರು, ‘ರಾಜ್ಯ ಸರ್ಕಾರವು ಕಬ್ಬಿನ ಬೆಲೆ ಪರಿ­ಷ್ಕರಿಸುವಂತೆ ಒತ್ತಾಯಿಸಿ ಇದೇ  4ರಂದು ಸುವರ್ಣ ವಿಧಾನಸೌಧದ ಎದುರು ರೈತರ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗುವುದು. ಇದರಲ್ಲಿ ಪಾಲ್ಗೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್‌ ಅವರನ್ನು ಆಹ್ವಾನಿಸಲಾ­ಗುತ್ತಿದೆ. ಅದರಂತೆ ಬಿಜೆಪಿ, ಜೆಡಿಎಸ್‌, ಕೆಜೆಪಿ ಪಕ್ಷದ ಅಧ್ಯಕ್ಷರನ್ನೂ ಕರೆಯಲಾ­ಗುತ್ತಿದ್ದು, ಅವರ ಪಕ್ಷದ ನಿಲುವನ್ನು ಸ್ಪಷ್ಟಪಡಿಸುವಂತೆ ಕೋರಲಾಗಿದೆ. ಸರ್ಕಾರ ನ್ಯಾಯಸಮ್ಮತ ತೀರ್ಮಾನ­ವನ್ನು ಕೈಗೊಳ್ಳಬೇಕು’ ಎಂದು ಆಗ್ರಹಿ­ಸಿದರು.

‘ರೈತ ವಿಠ್ಠಲ ಅರಭಾವಿ ಸಾವಿನ ಸುತ್ತ ಅನೇಕ ಪ್ರಶ್ನೆಗಳು ಉದ್ಭವಿಸಿವೆ. ಅನು­ಮಾನ ವ್ಯಕ್ತಪಡಿಸಲು ಪ್ರತಿ­ಯೊಬ್ಬರಿಗೂ ಅಧಿಕಾರ ಇದೆ. ನಮ್ಮಲ್ಲಿ ನ್ಯಾಯಾಂಗ ತನಿಖೆ ಕಳೆದ 35 ವರ್ಷಗಳಿಂದಲೂ ನಡೆಯುತ್ತಿದ್ದು ಯಾವುದೇ ಫಲಿತಾಂಶ ಮಾತ್ರ ಲಭಿಸುತ್ತಿಲ್ಲ. ಅದರ ಸಾಲಿಗೆ ಇದೂ ಸೇರಿಕೊಳ್ಳಲಿದೆ. ತನಿಖೆ ನಡೆಸಲಿ. ಸತ್ಯ ಹೊರಗೆ ಬರಲಿ. ಆದರೆ, ಕೇವಲ ಒಂದು ಜಾತಿಗೆ ಗುರುತಿಸಿಕೊಂಡು ಆರೋಪ ಮಾಡು­ವುದು ಸರಿಯಲ್ಲ. ರೈತರಲ್ಲಿ ಎಲ್ಲ ಜಾತಿಯವರು ಇದ್ದಾರೆ’ ಎಂದು ಹೇಳಿದರು.

‘ಕಾರ್ಖಾನೆಯವರು ಕೇವಲ ಎಫ್‌ಆರ್‌­ಪಿ ನೀಡು­ವು­ದಾಗಿ ಹೇಳು­ತ್ತಿ­ದ್ದಾರೆ. ಉಳಿದ ಹಣವನ್ನು ಸರ್ಕಾ­ರವೇ ಕೊಡಲಿ ಎಂದು ಕೇಳುತ್ತಿದ್ದಾರೆ. ಹೀಗಾಗಿ ಈ ವಿಷಯದಲ್ಲಿ ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಪ್ರೋತ್ಸಾಹ ಧನವನ್ನು ಹೆಚ್ಚಿಸಬೇಕು’ ಎಂದರು. 
‘ಸಕ್ಕರೆ ಕಾರ್ಖಾನೆಯವರು ಇನ್ನೊಂದು ಕಾರ್ಖಾನೆ ಆರಂಭಿಸಿ, ಅದ­ರಲ್ಲಿ ಹಾನಿಯಾದರೆ ರೈತರು ಜವಾಬ್ದಾ­ರ­­ರಲ್ಲ. ಹೀಗಾಗಿ ಇನ್ನೊಂದು ಕಾರ್ಖಾನೆ ಹಾನಿ ಸಂಭವಿಸಿದೆ ಎಂದು ಸಬೂಬು ಹೇಳುವುದು ಸರಿಯಲ್ಲ’ ಎಂದರು.

‘ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 519.6 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸಲು ಕೃಷ್ಣಾ ನ್ಯಾಯ­ಮಂಡಳಿ ಹಸಿರು ನಿಶಾನೆ ತೋರಿಸಿ­ರುವುದು ರಾಜ್ಯಕ್ಕೆ ನ್ಯಾಯ ಸಿಕ್ಕಂತಾಗಿದೆ. ಅಧಿವೇಶನದಲ್ಲಿ ಈ ಕುರಿತು ಚರ್ಚಿಸಿ, ತ್ವರಿತಗತಿಯಲ್ಲಿ ಕೆಲಸ ಕೈಗೊಳ್ಳಲು ಮುಂದಾಗಬೇಕು. ಬಜೆಟ್‌ನಲ್ಲಿ ಶೇ. 25ರಷ್ಟು ಭಾಗವನ್ನು ನೀರಾವರಿಗೆ ಮೀಸಲಿಡಬೇಕು. ರಾಜ್ಯದ ನೀರಾವರಿ ಕೆಲಸಗಳನ್ನು ಸಂಪೂರ್ಣಗೊಳಿಸಬೇಕು’ ಎಂದು ಆಗ್ರಹಿಸಿದರು.

ಮಾಜಿ ಸಚಿವ ಶಶಿಕಾಂತ ನಾಯಿಕ, ಭಾರತೀಯ ಕೃಷಿಕ ಸಮಾಜದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶಶಿಕಾಂತ ನಾಯಿಕ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಪೂಜಾರಿ, ಬಸವರಾಜ ಮಳಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT