ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬಿನ ಬಾಕಿ ಬಿಲ್‌ ಹಣ ವಿತರಿಸಿದ ಸಂಸದೆ ರಮ್ಯಾ

Last Updated 23 ಸೆಪ್ಟೆಂಬರ್ 2013, 5:27 IST
ಅಕ್ಷರ ಗಾತ್ರ

ಮಂಡ್ಯ: ರಾಜ್ಯ ಸರ್ಕಾರವು ಮೈಷುಗರ್‌ ಕಾರ್ಖಾನೆಗೆ ನೀಡಿರುವ ಹಣದ ಬಳಕೆ ಬಗ್ಗೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತೆ ಜಯಂತಿ ಅವರು ತನಿಖೆ ನಡೆಸಲಿದ್ದಾರೆ ಎಂದು ಸಂಸದೆ ರಮ್ಯಾ ಹೇಳಿದರು.

ಮೈಷುಗರ್‌ ಕಾರ್ಖಾನೆಯಲ್ಲಿ ಶನಿವಾರ ರೈತರಿಗೆ ಕಳೆದ ವರ್ಷದ ಕಬ್ಬಿನ ಬಾಕಿ ಬಿಲ್‌ ಹಣ ವಿತರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾರ್ಖಾನೆಯ ಉನ್ನತೀಕರಣಕ್ಕೆ 49 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಅಷ್ಟೊಂದು ಹಣ ಬೇಕಾಗಿರಲಿಲ್ಲ. ಈ ಬಗ್ಗೆ ತನಿಖೆ ನಡೆಯಲಿದೆ ಎಂದರು.

ರಾಜ್ಯ ಸರ್ಕಾರವು ಕಾರ್ಖಾನೆಯ ಸಮಸ್ಯೆಗೆ ಸ್ಪಂದಿಸಿ 15 ಕೋಟಿ ರೂಪಾಯಿಯನ್ನು ಹಿಂತಿರುಗಿಸುವ ಷರತ್ತಿಗೆ ಒಳಪಟ್ಟು ನೀಡಲು ಒಪ್ಪಿದೆ. ಅದರಲ್ಲಿ ಈಗಾಗಲೇ 14 ಕೋಟಿ ರೂಪಾಯಿ ಬಿಡುಗಡೆ ಆಗಿದೆ ಎಂದು ಹೇಳಿದರು.

ಮೈಷುಗರ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಅಯ್ಯಪ್ಪ ಮಾತನಾಡಿ, 3.6 ಕೋಟಿ ರೂಪಾಯಿ ಬಿಲ್‌ ಬಾಕಿ ಇದ್ದು, ಎರಡು ದಿನಗಳಲ್ಲಿ ಅದನ್ನು ರೈತರಿಗೆ ಪಾವತಿಸಲಾಗುವುದು. 12 ಕೋಟಿ ರೂಪಾಯಿ ಬೆಲೆ ಬಾಳುವ ಸಕ್ಕರೆ ಸಂಗ್ರಹವಿದೆ ಎಂದರು.

ಈ ವರ್ಷ ಪ್ರತಿ ಟನ್‌ ಕಬ್ಬಿಗೆ ಸರ್ಕಾರ 2,400 ರೂಪಾಯಿ ಮುಂಗಡವಾಗಿ ನಿಗದಿಪಡಿಸಿದೆ. ಅದರಲ್ಲಿ ಒಂದು ಸಾವಿರ ರೂಪಾಯಿಯನ್ನು ಕಬ್ಬು ಪೂರೈಸಿದ ಕೂಡಲೇ ರೈತರಿಗೆ ಪಾವತಿ ಸಲಾಗುವುದು ಎಂದರು.

2008ರಲ್ಲಿಯೇ 30 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಕಾಮಗಾರಿ ಆರಂಭಿಸಲಾಗಿದೆ. 8 ಲಕ್ಷ ಟನ್‌ ಅರೆದರೆ ಮಾತ್ರ ವಿದ್ಯುತ್‌ ಉತ್ಪಾದಿಸಲು ಸಾಧ್ಯ. ಅದಾಗದ ಕಾರಣ ಕಲ್ಲಿದ್ದಲಿನಿಂದಲೂ ವಿದ್ಯುತ್‌ ಉತ್ಪಾದನೆ ಮಾಡುವಂತೆ ಪರಿವರ್ತಿಸಲಾಗುತ್ತಿದೆ ಎಂದರು.

ಉನ್ನತೀಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 49 ಕೋಟಿ ರೂಪಾಯಿ ಪಾವತಿಸಲಾಗಿದೆ. ಇನ್ನೂ ಶೇ 15 ರಷ್ಟು ಕಾಮಗಾರಿ ಬಾಕಿ ಇದೆ. ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಬಿಲ್‌ ಪಾವತಿಗೂ ಸಮಾರಂಭ
ಕಾರ್ಖಾನೆಗೆ ಕಬ್ಬು ಪೂರೈಸಿದ್ದಕ್ಕೆ ಬಿಲ್‌ ಪಾವತಿಯ ಹಣ ವಿತರಣೆಗೂ ಸಮಾರಂಭ ಏರ್ಪಡಿಸಲಾಗಿತ್ತು.
ಸರ್ಕಾರ ನೀಡುವ ಸಬ್ಸಿಡಿ ಅಥವಾ ಪರಿಹಾರ ಧನದ ಹಣವಲ್ಲ. ನಾವು ಪೂರೈಸಿದ ಕಬ್ಬಿಗೆ ನೀಡಬೇಕಾದ ಹಣ.

ಅದಕ್ಕೂ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅರ್ಧ ಗಂಟೆಯಿಂದ ಕಾಯುತ್ತಿದ್ದೇವೆ ಎಂದು ಚೆಕ್‌್ ಪಡೆಯಲು ಬಂದಿದ್ದ ರೈತರೊಬ್ಬರು ’ಪ್ರಜಾವಾಣಿ’ಗೆ ದೂರಿದರು.

ಕಬ್ಬು ಪೂರೈಸಿದ್ದಕ್ಕೆ ಹಣವನ್ನು ಹದಿನೈದು ದಿನಗಳಲ್ಲಿ ಪಾವತಿಸಬೇಕಿತ್ತು. ಅದನ್ನೂ ವರ್ಷ ವಿಳಂಬವಾಗಿ ನೀಡಲಾಗುತ್ತಿದೆ. ನಮ್ಮ ಹಣ ನಮಗೆ ನೀಡಲು ಪರಿಹಾರ ನೀಡಿದಂತೆ ಮಾಡುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT