ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬಿನ ಬಾಕಿ ಹಣ : ನೇರ ಕಾರ್ಯಾಚರಣೆಯ ಎಚ್ಚರಿಕೆ

Last Updated 14 ಸೆಪ್ಟೆಂಬರ್ 2011, 6:20 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯ ಕಬ್ಬು ಬೆಳೆಗಾರರಿಗೆ ನೀಡಬೇಕಿರುವ ಬಾಕಿ ಹಣವನ್ನು ಈ ತಿಂಗಳ ಅಂತ್ಯದೊಳಗೆ ಸಕ್ಕರೆ ಕಾರ್ಖಾನೆ ಮಾಲೀಕರು ಸಂದಾಯ ಮಾಡದಿದ್ದರೆ ಕಬ್ಬು ಬೆಳೆಗಾರರು ನೇರ ಕಾರ್ಯಾಚರಣೆಗೆ ಇಳಿಯಲಿದ್ದಾರೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡ ಮುತ್ತಪ್ಪ ಕೋಮಾರ್ ಎಚ್ಚರಿಕೆ ನೀಡಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 10 ಸಕ್ಕರೆ ಕಾರ್ಖಾನೆಗಳಲ್ಲಿ  ಆರು ಕಾರ್ಖಾನೆಗಳು ಮಾತ್ರ 2010-11ನೇ ಸಾಲಿನ ಕಬ್ಬಿನ ಮೊದಲ ಕಂತಾಗಿ ಪ್ರತಿಟನ್‌ಗೆ ರೂ. 1800 ಪಾವತಿಸಿವೆ, ಆದರೆ ಉಳಿದ ನಾಲ್ಕು ಕಾರ್ಖಾನೆಗಳು ರೂ. 64.8 ಕೋಟಿ ನೀಡದೇ ಬಾಕಿ ಉಳಿಸಿಕೊಂಡಿವೆ ಎಂದರು.

ಬೆಳಗಾವಿ ಜಿಲ್ಲೆಯ ಎಲ್ಲ ಕಾರ್ಖಾನೆಯವರು ಮತ್ತು ನಂದಿ ಸಕ್ಕರೆ ಕಾರ್ಖಾನೆ 2010-11ನೇ ಸಾಲಿಗೆ ಪ್ರತಿ ಟನ್‌ಗೆ ರೂ. 200ರಂತೆ 2ನೇ ಕಂತಿನ ಹಣವನ್ನು  ಪಾವತಿಸಿದ್ದಾರೆ. ಆದರೆ ನಮ್ಮ ಜಿಲ್ಲೆಯ ಕಾರ್ಖಾನೆಗಳಿಂದ ರೂ. 156.58 ಕೋಟಿ ಬಾಕಿ ಉಳಿದಿದೆ. ಈ ಹಣ ಈ ತಿಂಗಳ 30ರೊಳಗೆ ಪಾವತಿಯಾಗದಿದ್ದರೆ ಹೋರಾಟ ನಡೆಸುವುದಾಗಿ ಅವರು ತಿಳಿಸಿದರು.

ಇನ್ನು ಮುಂದೆ ಕಬ್ಬು ಪೂರೈಕೆಯಾದ 15 ದಿನದ ಒಳಗಾಗಿ ಮೊದಲ ಕಂತಿನ ಹಣ ಸಂದಾಯವಾಗಲೇ ಬೇಕು, ಇಲ್ಲದಿದ್ದರೆ ಕಬ್ಬು ಬೆಳೆಗಾರರು ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕಬ್ಬು ನಿಯಂತ್ರಣ ಕಾಯ್ದೆಯನ್ನು ಕಾರ್ಖಾನೆಗಳು ಪದೇಪದೇ ಉಲ್ಲಂಘಿಸುವ ಪ್ರಕರಣ ಹೆಚ್ಚುತ್ತಿದೆ ಎಂದ ಅವರು  ಮುಂಬರುವ ಹಂಗಾಮಿನ 2011-12ನೇ ಸಾಲಿಗೆ ಪ್ರತಿ ಟನ್‌ಗೆ ರೂ. 2200 ಮೊದಲ ಕಂತಿನ ಹಣ ಘೋಷಣೆಯಾಗಬೇಕು ಎಂದು ಆಗ್ರಹಿಸಿದರು.

ಬೆಳೆಗಾರರ ಕಬ್ಬಿನ ಬಾಕಿ ಹಣ ಪಾವತಿ ಸಂಬಂಧ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಕಾರ್ಖಾನೆ ಮಾಲೀಕರು ಮತ್ತು ಕಬ್ಬು ಬೆಳೆಗಾರರ ಸಭೆ ನಡೆಸಿ, ಹಣ ನೀಡಲು ಸಮಯಾವಕಾಶ ನೀಡಿದ್ದರೂ ಸಹ ಇನ್ನೂ ನೀಡಿಲ್ಲ ಎಂದು ದೂರಿದರು.

ನಿರಾಣಿ ರಾಜೀನಾಮೆಗೆ ಒತ್ತಾಯ
ಸಚಿವ ಮುರುಗೇಶ ನಿರಾಣಿ ಅವರ ಸಕ್ಕರೆ ಕಾರ್ಖಾನೆಯೊಂದೇ ರೂ. 35 ಕೋಟಿ ಹಣವನ್ನು ಕಬ್ಬು ಬೆಳೆಗಾರರಿಗೆ ಪಾವತಿಸದಿರುವುದು ಖಂಡನೀಯ, ಸಚಿವರಾಗಿದ್ದುಕೊಂಡು ರೈತರ ಹಣವನ್ನು ಪಾವತಿಸದೇ ಇರುವ ನಿರಾಣಿ ಅವರು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಅವರು ತಕ್ಷಣ ಮಧ್ಯ ಪ್ರವೇಶಿಸಿ 2011-12ನೇ ಸಾಲಿನ ಕಬ್ಬಿಗೆ ದರನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ಕಾರ್ಖಾನೆ ಮಾಲೀಕರು ಕಬ್ಬು ಬೆಳೆಗಾರರನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಕಬ್ಬಿನ ಬಾಕಿ ಹಣ ಬಾರದಿರುವುದರಿಂದ ರೈತರು ಮಾಡಿದ ಸಾಲವನ್ನು ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವ ಹಂತ ತಲುಪಿದ್ದಾರೆ ಎಂದು ತಿಳಿಸಿದರು.

ಕಾರ್ಖಾನೆಗಳು ಇದೇ ರೀತಿ ವಿಳಂಬ ಧೋರಣೆ ಅನುಸರಿಸಿ ರೈತರಿಗೆ ತೊಂದರೆ ಮಾಡುವುದನ್ನು ಮುಂದುವರಿಸಿದರೆ ಮುಂದಿನ ವರ್ಷದಿಂದ ರೈತರು ಕಬ್ಬು ಬೆಳೆಯುವುದನ್ನು ನಿಲ್ಲಿಸಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗೇಶ ಸೊರಗಾವಿ, ಜಿಲ್ಲಾ ಸಂಚಾಲಕ ದುಂಡಪ್ಪ ಯರಗಟ್ಟಿ, ಮುಖಂಡರಾದ ಬಂಡು ಘಾಟಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT